ಶಿರಾ ಸೋಲಿನ ಹಿಂದೆ ಪರಮೇಶ್ವರ್ : ಗಂಭೀರ ಆರೋಪ
ಈಗಾಗಲೇ ಶಿರಾ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುಂಡಿದ್ದು ಇದಕ್ಕೆ ಕಾರಣ ಪರಮೇಶ್ವರ್ ಎನ್ನಲಾಗಿದೆ.
ಬೆಂಗಳೂರು (ನ.13): ಪಕ್ಷ ಮಾಜಿ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಶಿರಾ ಉಪ ಚುನಾವಣಾ ಉಸ್ತುವಾರಿ ವಹಿಸಿದ್ದರೂ ಅವರು ಚುನಾವಣಾ ಕೆಲಸದಲ್ಲಿ ಹೆಚ್ಚು ತೊಡಗಿಸಿಕೊಳ್ಳಲಿಲ್ಲ, ಜೊತೆಗೆ ನಮ್ಮ ಬಳಿ ಬಿಜೆಪಿಯವರಷ್ಟುಸಂಪನ್ಮೂಲ ಕೂಡ ಇರಲಿಲ್ಲ.
- ಇದು ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲಿಗೆ ಚುನಾವಣಾ ಉಸ್ತುವಾರಿ ವಹಿಸಿದ್ದ ಮಾಜಿ ಶಾಸಕ ಕೆ.ಎನ್. ರಾಜಣ್ಣ ನೀಡಿರುವ ಸಮಜಾಯಿಷಿ. ಇದರೊಂದಿಗೆ ಸೋಲಿನ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಕೆಸರೆರಚಾಟ ಆರಂಭವಾದಂತಾಗಿದೆ.
ನಾನು ಹಿರಿಯ, ಸಚಿವ ಸ್ಥಾನ ಬೇಕು : ಬಿಜೆಪಿ ಮುಖಂಡ ...
ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಶಿರಾ ಉಸ್ತುವಾರಿ ಹೊತ್ತಿದ್ದ ಕೆ.ಎನ್.ರಾಜಣ್ಣ ಅವರನ್ನು ಗುರುವಾರ ನಗರದ ತಮ್ಮ ಸರ್ಕಾರಿ ನಿವಾಸಕ್ಕೆ ಕರೆಸಿಕೊಂಡು ಸೋಲಿಗೆ ಕಾರಣ ಕೇಳಿದರು. ಆಗ ರಾಜಣ್ಣ ಈ ಸಮಜಾಯಿಷಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
‘ಪಕ್ಷದ ನಾಯಕತ್ವ ಶಿರಾ ಉಪಚುನಾವಣೆ ಉಸ್ತುವಾರಿಯನ್ನು ನನಗೆ ಮತ್ತು ಡಾ.ಜಿ.ಪರಮೇಶ್ವರ್ ಇಬ್ಬರಿಗೂ ವಹಿಸಿತ್ತು. ಆದರೆ, ಪರಮೇಶ್ವರ್ ಅವರು ಚುನಾವಣಾ ಕೆಲಸದಲ್ಲಿ ಹೆಚ್ಚು ತೊಡಗಿಸಿಕೊಳ್ಳಲಿಲ್ಲ. ಬಿಜೆಪಿಯವರಷ್ಟುಸಂಪನ್ಮೂಲ ನಮ್ಮಲ್ಲಿ ಇರಲಿಲ್ಲ. ಇದೇ ಸೋಲಿಗೆ ಕಾರಣ’ ಎಂದು ಹೇಳಿದರು ಎನ್ನಲಾಗಿದೆ.
ಇದಕ್ಕೆ ಸಿದ್ದರಾಮಯ್ಯ ಅವರು, ‘ಸ್ಥಳೀಯ ಕಾಂಗ್ರೆಸ್ ಮುಖಂಡರು ಮತ್ತು ಉಸ್ತುವಾರಿ ಹೊತ್ತವರು ಇನ್ನು ಸ್ವಲ್ಪ ಪ್ರಯತ್ನ ಪಟ್ಟಿದ್ದರೂ ಸಲೀಸಾಗಿ ನಮ್ಮ ಪಕ್ಷದ ಅಭ್ಯರ್ಥಿ ಟಿ.ಬಿ.ಜಯಚಂದ್ರ ಗೆಲ್ಲುತ್ತಿದ್ದರು. ಆದರೆ, ಕಾಂಗ್ರೆಸ್ ಪಕ್ಷದ ಮುಖಂಡರೇ ಜಯಚಂದ್ರ ಸೋಲಿಗೆ ಕಾರಣರಾದರಾ ಎಂದು ಬೇಸರ ವ್ಯಕ್ತಪಡಿಸಿದರು’ ಎಂದು ಮೂಲಗಳು ತಿಳಿಸಿವೆ.
ರಾಜಣ್ಣ ಅವರ ಭೇಟಿ ಬಳಿಕ ಉಪಚುನಾವಣೆ ಸೋಲಿನ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, :ಹಿಂದೆ ನಾವು ಉಪಚುನಾವಣೆ ಗೆದ್ದಿದ್ದೆವಲ್ಲ ಆಗ ಬಿಜೆಪಿ ಏನಾದ್ರೂ ಮುಳುಗಿ ಹೋಗಿತ್ತಾ? ಉಪ ಚುನಾವಣೆಗಳಲ್ಲಿ ಯಾವಾಗಲು ಅಧಿಕಾರದಲ್ಲಿರುವ ಪಕ್ಷವೇ ಹೆಚ್ಚಾಗಿ ಗೆಲ್ಲುತ್ತೆ. ನಮಗೆ ಯಶವಂತಪುರದಲ್ಲಿ ರೌಡಿ ಅಡ್ಡ ಹಾಕಲಿಲ್ವಾ? ಪೊಲೀಸರು ಸುಮ್ಮನೆ ನೋಡ್ತಾ ಇರಲಿಲ್ವಾ? ಇದೆಲ್ಲವೂ ಚುನಾವಣಾ ಸೋಲಿಗೆ ಕಾರಣ’ ಎಂದರು.