Asianet Suvarna News Asianet Suvarna News

ಗದಗ: ಕಪ್ಪತ್ತಗುಡ್ಡದಿಂದ ಹರಿಯುತ್ತಿರುವ ಬಿಳಿದ್ರವ, ಆತಂಕ

ಶಿರಹಟ್ಟಿ ತಾಲೂಕಿನ ಕಡಕೋಳದ ಬಳಿ ಗುಡ್ಡದಲ್ಲಿ ಹುದುಗಿಕೊಂಡಿದ್ದ ಬಿಳಿದ್ರವ ನೊರೆಯಾಗಿ ಗುಡ್ಡದ ತುದಿಯಿಂದ ಅಡಿವರೆಗೆ ಹರಿಯುತ್ತಿದ್ದು, ಆಶ್ಚರ್ಯದ ಜೊತೆಗೆ ಭಯಗೊಂಡ ಗ್ರಾಮಸ್ಥರು 

White Liquid Flowing from Kappatagudda in Gadag grg
Author
First Published Sep 6, 2022, 10:01 PM IST

ಶಿರಹಟ್ಟಿ/ಗದಗ(ಸೆ.06):  ಉತ್ತರ ಕರ್ನಾಟಕದ ಸಸ್ಯಕಾಶಿ ಕಪ್ಪತ್ತಗುಡ್ಡದಲ್ಲಿ ಕಳೆದ ಹಲವು ದಿನಗಳಿಂದ ರಭಸವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಒಂದೆಡೆ ಗುಡ್ಡ ಕುಸಿತಗೊಂಡರೆ, ಮತ್ತೊಂದೆಡೆ ಶಿರಹಟ್ಟಿ ತಾಲೂಕಿನ ಕಡಕೋಳದ ಬಳಿ ಗುಡ್ಡದಲ್ಲಿ ಹುದುಗಿಕೊಂಡಿದ್ದ ಬಿಳಿದ್ರವ ನೊರೆಯಾಗಿ ಗುಡ್ಡದ ತುದಿಯಿಂದ ಅಡಿವರೆಗೆ ಹರಿಯುತ್ತಿದ್ದು, ಗ್ರಾಮಸ್ಥರಿಗೆ ಆಶ್ಚರ್ಯದ ಜೊತೆಗೆ ಭಯಗೊಂಡಿದ್ದಾರೆ.

ಕಪ್ಪತ್ತಗುಡ್ಡದಲ್ಲಿ ಬಂಗಾರದ ನಿಕ್ಷೇಪಗಳಿವೆ ಎನ್ನುವ ಕಾರಣಕ್ಕೆ ಬ್ರಿಟಿಷರ ಕಾಲದಿಂದಲೂ ಗುಡ್ಡವನ್ನು ಅಗೆಯುವ ಕಾರ್ಯಗಳು ನಿರಂತರವಾಗಿ ನಡೆಯುತ್ತ ಬಂದಿವೆ. ಗುಡ್ಡದಲ್ಲಿ ಬ್ರಿಟಿಷರು ಅಗೆದ ಬಾವಿಗಳನ್ನು ಇಂದಿಗೂ ಕಾಣಬಹುದು. ನಂತರ ಕಾಲಘಟ್ಟದಲ್ಲಿ ಕಳೆದ ಎರಡು ದಶಕಗಳ ಹಿಂದೆ ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ಕೆಲವು ಅಕ್ಕಪಕ್ಕದ ಪ್ರದೇಶಗಳಲ್ಲಿ ಜರುಗಿದ ಗೋಲ್ಡ್‌ ಮೈನಿಂಗ್‌ ಪರಿಣಾಮ ಗುಡ್ಡದಲ್ಲಿ ಕೆಲ ಕುರುಹುಗಳು ಇಂದಿಗೂ ಸಾಕ್ಷಿಯಾಗಿ ನಿಂತಿವೆ.
ಆಶ್ಚರ್ಯಕರ ಸಂಗತಿ ಎಂದರೆ ಇಲ್ಲಿಯವರೆಗೂ ಬಿಳಿದ್ರವ ಗುಡ್ಡದಲ್ಲಿ ಕಾಣಿಸಿಕೊಂಡಿಲ್ಲ. ಕಳೆದ ತಿಂಗಳಿನಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆ ಪರಿಣಾಮ ಗುಡ್ಡದ ನೆತ್ತಿಯ ಮೇಲ್ಭಾಗದಲ್ಲಿ ಬಂಗಾರದ ನಿಕ್ಷೇಪ ಮಾಡುವ ಸಂದರ್ಭದಲ್ಲಿ ಕಾರ್ಮಿಕರು ರಾಸಾಯನಿಕ ಅಂಶಗಳನ್ನು ಉಪಯೋಗಿಸಿ ಅದಿರನ್ನು ತೆಗೆದ ಕಾರಣ ಇಂದು ಬಿಳಿದ್ರವ ನೊರೆಯಾಗಿ ಗುಡ್ಡದ ತುದಿಯಿಂದ ಹರಿದು ಬಂದಿದೆ ಎಂದು ಗುಡ್ಡದ ಅಕ್ಕಪಕ್ಕದ ನಿವಾಸಿಗಳು ಹೇಳುತ್ತಾರೆ.

'ಕಪ್ಪತಗುಡ್ಡವ ಆಯುರ್ವೇದ ಔಷಧಿಗಳ ತಾಣ'

ಸಾವಿರಾರು ವರ್ಷಗಳ ಇತಿಹಾಸವಿರುವ ಕಪ್ಪತ್ತಗುಡ್ಡ ಯಾವುದೇ ಸಂದರ್ಭದಲ್ಲಿ ಕುಸಿತ ಅಥವಾ ಬಿಳಿ ದ್ರವ ನೊರೆಯಂತಹ ಘಟನೆಗಳು ನಡೆದಿಲ್ಲ. ಕುಸಿತ ಹಾಗೂ ನೊರೆ ಇದೇ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು, ಜನರಲ್ಲಿ ಒಂದು ಬಗೆಯ ಆತಂಕಕ್ಕೆ ಕಾರಣವಾಗಿದೆ.

ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಮಹಜರು ಪಡೆದು ಸತ್ಯಾಸತ್ಯತೆಯನ್ನು ಅರಿಯುವುದು ಅಗತ್ಯವಾಗಿದೆ. ಗುಡ್ಡ ಕುಸಿತದ ಮೂಲ ಕಾರಣ ಹಾಗೂ ಬಿಳಿದ್ರವ ಸಂಗ್ರಹಿಸಿ ಲ್ಯಾಬ್‌ ಟೆಸ್ಟ್‌ಗೆ ಕಳುಹಿಸಿ ಪರೀಕ್ಷೆ ಮಾಡಬೇಕು. ಅದರ ಮೂಲ ಕಾರಣ ಅಥವಾ ಅದರಿಂದಾಗುವ ಪರಿಣಾಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂಬುದು ಕಡಕೋಳ ಗ್ರಾಮಸ್ಥರ ಪ್ರಮುಖ ಬೇಡಿಕೆಯಾಗಿದೆ. 
ಗುಡ್ಡದಲ್ಲಿ ಬಿಳಿದ್ರವ ನೊರೆಯಾಗಿ ಹರಿಯುತ್ತಿದೆ ಎಂಬ ಸಂಗತಿ ನನ್ನ ಗಮನಕ್ಕೆ ಬಂದಿದೆ. ಆದರೆ ಸತ್ಯಾಂಶವನ್ನು ತಿಳಿಯಲು ಸ್ಥಳಕ್ಕೆ ಹೋಗಿ ಪರಿಶಿಲನೆ ಮಾಡಿ ಕಪ್ಪತ್ತಗುಡ್ಡದ ಹಲವೆಡೆ ಹರಿಯುತ್ತಿರುವ ನೀರನ್ನು ಟೆಸ್ಟ್‌ ಲ್ಯಾಬ್‌ಗೆ ಕಳುಹಿಸಿ ವರದಿ ಪಡೆಯುತ್ತೇವೆ ಅಂತ ಗದಗ ಡಿಎಫ್‌ಓ ದೀಪಿಕಾ ಬಾಜಪೇಯಿ ತಿಳಿಸಿದ್ದಾರೆ. 

ಕಾರಣ ಪತ್ತೆಗೆ ಆಗ್ರಹ

ವನ್ಯಜೀವಿ ಮತ್ತು ಅಮೂಲ್ಯ ವನಸ್ಪತಿಯನ್ನೊಳಗೊಂಡ ಕಪ್ಪತ್ತಗುಡ್ಡ ತಪ್ಪಲು ಪ್ರದೇಶ ಆತಂಕದಲ್ಲಿದೆ. ಈ ಹಿಂದೆ ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಚ್‌ ರಾಮಘಡ ಮೈನಿಂಗ್‌ ಪ್ರೈ.ಲಿ. ಅಭೇರಾಜ ಬಲ್ಡೋಟಾ ಕಂಪನಿಗೆ (ಸಂಸ್ಥೆಗೆ) ಗುಡ್ಡದ ವ್ಯಾಪ್ತಿಯ ಸರ್ಕಾರಿ ಜಮೀನಿನಲ್ಲಿ ಬಂಗಾರದ ನಿಕ್ಷೇಪದ ಪದರು ತೆಗೆಯಲು ಅನುಮತಿ ನೀಡಿದ್ದಾಗಿ ಹೇಳಿ, ಅಂದು ಅಕ್ರಮ ನಿಕ್ಷೇಪ ತೆಗೆಯುವ ಕಾರ್ಯ ನಡೆದಿತ್ತು ಎಂದು ಗ್ರಾಮಸ್ಥರು ದೂರುತ್ತಿದ್ದು, ಅದರ ಪರಿಣಾಮವೇ ಇಂದು ಗುಡ್ಡಕ್ಕೆ ಆತಂಕ ಬಂದೊದಗಿದೆ. ಅಧಿಕಾರಿಗಳು ಮಾತ್ರ ಯಾವುದೇ ಕುಂಟು ನೆಪ ಹೇಳದೇ ಗುಡ್ಡ ಕುಸಿತಕ್ಕೆ ಮೂಲ ಕಾರಣ ಪತ್ತೆ ಮಾಡಿ ಈ ಭಾಗದ ಪರಿಸರ ಪ್ರೇಮಿಗಳು ಮತ್ತು ರೈತರ ಆತಂಕ ದೂರ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
 

Follow Us:
Download App:
  • android
  • ios