ಮೈಸೂರು(ಡಿ.04): ಹುಣಸೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪ್ರಚಾರದಲ್ಲಿ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಹೆಚ್ಚು ಸದ್ದು ಮಾಡಿವೆ. ಆದರೆ ಬಿಎಸ್ಪಿ, ಎಸ್‌ಡಿಪಿಐ, ಕೆಎಸ್‌ಆರ್‌ ಸೇರಿದಂತೆ ಇನ್ನೂ ಏಳು ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಎಚ್‌. ವಿಶ್ವನಾಥ್‌ (ಬಿಜೆಪಿ), ಎಚ್‌.ಪಿ. ಮಂಜುನಾಥ್‌ (ಕಾಂಗ್ರೆಸ್‌), ದೇವರಹಳ್ಳಿ ಸೋಮಶೇಖರ್‌ (ಜೆಡಿಎಸ್‌), ಹುಣಸೂರು ಟೌನ್‌ ಮುಸ್ಲಿಂ ಬ್ಲಾಕ್‌ನ ಇಮ್ತಿಯಾಜ್‌ ಅಹಮದ್‌ (ಬಿಎಸ್ಪಿ), ಬೆಂಗಳೂರು ನಂದಿನಿ ಬಡಾವಣೆಯ ಎಸ್‌. ಜಗದೀಶ (ಕೆಜೆಪಿ), ಹುಣಸೂರು ತಾಲೂಕು ಎಮ್ಮೆಕೊಪ್ಪಲಿನ ತಿಮ್ಮಭೋವಿ (ಕೆಆರ್‌ಎಸ್‌), ಮೈಸೂರಿನ ಮಧುವನ ಬಡಾವಣೆಯ ದಿವಾಕರ್‌ಗೌಡ (ಉತ್ತಮಪ್ರಜಾಕೀಯ ಪಾರ್ಟಿ), ಮೈಸೂರಿನ ಮಧುವನ ಬಡಾವಣೆಯ ದೇವನೂರು ಪುಟ್ಟನಂಜಯ್ಯ (ಎಸ್‌ಡಿಪಿಐ), ಹುಣಸೂರು ಟೌನ್‌ ಕಲ್ಕುಣಿಕೆ ರಂಗನಾಥ ಬಡಾವಣೆಯ ಉಮೇಶ (ಪಕ್ಷೇತರ), ಹುಣಸೂರು ತಾ. ಉಯಿಗೌಡನಹಳ್ಳಿಯ ರೇವಣ್ಣ (ಪಕ್ಷೇತರ)- ಕಣದಲ್ಲಿರುವವರು.

ಮಂಡ್ಯ: ಮಾಜಿ ಸಚಿವ ರೇವಣ್ಣ ಪುತ್ರನ ವಿರುದ್ಧ FIR

ಈ ಪೈಕಿ ವಿಶ್ವನಾಥ್‌ ಪಕ್ಕದ ಕೆ.ಆರ್‌. ನಗರ ಕ್ಷೇತ್ರದಿಂದ ಮೂರು ಬಾರಿ ಹಾಗೂ ಹುಣಸೂರಿನಿಂದ ಒಂದು ಬಾರಿ ವಿಧಾನಸಭೆಗೆ, ಮೈಸೂರಿನಿಂದ ಒಂದು ಬಾರಿ ಲೋಕಸಭೆಗೆ ಆಯ್ಕೆಯಾದವರು. ಎರಡು ಬಾರಿ ಸಚಿವರಾಗಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. ಎಚ್‌.ಪಿ. ಮಂಜುನಾಥ್‌ ಎರಡು ಬಾರಿ ಹುಣಸೂರಿನಿಂದ ಶಾಸಕರಾಗಿ, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ದೇವರಹಳ್ಳಿ ಸೋಮಶೇಖರ್‌ಗೆ ಇದೇ ಮೊದಲ ಚುನಾವಣೆ. ಎಸ್‌ಡಿಪಿಐನ ಪುಟ್ಟನಂಜಯ್ಯ 2013ರಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಉಳಿದವರೆಲ್ಲರಿಗೆ ಬಹುತೇಕ ಇದೇ ಪ್ರಥಮ ಚುನಾವಣೆ.

ಇಂದಿರಾಗಾಂಧಿ ವಸತಿ ಶಾಲೆಯ ವಿದ್ಯಾರ್ಥಿ ಅನುಮಾನಾಸ್ಪದ ಸಾವು

ಈ ಕ್ಷೇತ್ರದಲ್ಲಿ ಎಸ್‌ಡಿಪಿಐ ಹಾಗೂ ಬಿಎಸ್ಪಿ ಹಿಂದೆ ಸ್ಪರ್ಧೆ ಮಾಡಿದ್ದರೂ ಮತಗಳಿಕೆ ಹೆಚ್ಚಿರಲಿಲ್ಲ. ಆದರೆ ಪಕ್ಕದ ಎಚ್‌.ಡಿ. ಕೋಟೆ ಹಾಗೂ ಪಿರಿಯಾಪಟ್ಟಣ ಕ್ಷೇತ್ರಗಳಲ್ಲಿ ಕೆಲ ಚುನಾವಣೆಗಳಲ್ಲಿ ಬಿಎಸ್ಪಿ ಅಭ್ಯರ್ಥಿಗಳು ಹೆಚ್ಚು ಮತ ಪಡೆದಿದ್ದರು. ಪುಟ್ಟನಂಜಯ್ಯ ಅವರು ಕಳೆದ ಬಾರಿ ಸ್ಪರ್ಧಿಸಿದಾಗಲೂ ಹೆಚ್ಚು ಮತ ಪಡೆದಿರಲಿಲ್ಲ.

2013 ರಲ್ಲಿ ಕೆಜೆಪಿ ಹೆಚ್ಚಿನ ಮತ ಪಡೆಯಲು ಆಗ ಅಭ್ಯರ್ಥಿಯಾಗಿದ್ದ ಡಿ. ದೇವರಾಜ ಅರಸರ ಮೊಮ್ಮಗ ಎಂ.ಸಿ. ಮಂಜುನಾಥ ಅರಸು ಕಾರಣ. ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್‌) ಅಭ್ಯರ್ಥಿ ತಿಮ್ಮಭೋವಿ ಅವರ ಪರ ರವಿಕೃಷ್ಣಾರೆಡ್ಡಿ, ವೇಣುಗೋಪಾಲ್‌, ಜೋಗನಹಳ್ಳಿ ಗುರಮೂರ್ತಿ ಮೊದಲಾದವರು ತೀವ್ರ ಪ್ರಚಾರ ನಡೆಸಿ, ಮತದಾರರ ಗಮನ ಸೆಳೆದಿದ್ದಾರೆ. ಬಿಎಸ್ಪಿ ಪರ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಮತ್ತಿತರ ಮುಖಂಡರು ಪ್ರಚಾರ ನಡೆಸಿದ್ದಾರೆ. ಎಸ್‌ಡಿಪಿಐ ಮುಖಂಡರು ಕೂಡ ಪ್ರಚಾರ ಮಾಡಿದ್ದಾರೆ.

ಹಿಂದೆ ಬಿಎಸ್ಪಿ ಪಡೆದಿದ್ದ ಮತಗಳು

1994- ಹರಿಹರ ಆನಂದಸ್ವಾಮಿ- 1,484

2008- ಎಚ್‌.ಡಿ. ಮಹದೇವನಾಯಕ- 1,986

ಹಿಂದೆ ಎಸ್‌ಡಿಪಿಐ ಪಡೆದ ಮತಗಳು

2013- ಪುಟ್ಟನಂಜಯ್ಯ- 1,745

ಹಿಂದೆ ಕೆಜೆಪಿ ಪಡೆದಿದ್ದ ಮತಗಳು

2013- ಎಂ.ಸಿ. ಮಂಜುನಾಥ ಅರಸು- 9,011

ಅರಸು, ಚಂದ್ರಪ್ರಭ, ಜಿಟಿಡಿ. ಎಚ್‌ಪಿಎಂ ಮಾತ್ರ ಪುನಾರಾಯ್ಕೆ

ಹುಣಸೂರು ಕ್ಷೇತ್ರದಲ್ಲಿ ಅರಸು ಸತತ ಆರು ಬಾರಿ ಆಯ್ಕೆಯಾಗಿದ್ದರು. ಈ ಪೈಕಿ ಒಮ್ಮೆ ಅವಿರೋಧ, ಮತ್ತೊಮ್ಮೆ ಉಪ ಚುನಾವಣೆ. ಚಂದ್ರಪ್ರಭ ಅರಸು ಹಾಗೂ ಜಿ,ಟಿ. ದೇವೇಗೌಡರು ತಲಾ ಎರಡು ಬಾರಿ ಆಯ್ಕೆಯಾಗಿ, ಎರಡು ಬಾರಿ ಸೋತಿದ್ದಾರೆ. ಎಚ್‌.ಪಿ. ಮಂಜುನಾಥ್‌ ಅರಸು ನಂತರ ಸತತ ಎರಡು ಬಾರಿ ಆಯ್ಕೆಯಾಗಿದ್ದವರು. ಅವರು ಕೂಡ ಒಂದು ಬಾರಿ ಸೋತಿದ್ದಾರೆ. ಈ ಬಾರಿ ಮತ್ತೆ ಅಭ್ಯರ್ಥಿ. ಡಿ. ಕರಿಯಪ್ಪಗೌಡ‚, ಸಿ.ಎಚ್‌. ವಿಜಯಶಂಕರ್‌ ತಲಾ ಒಮ್ಮೆ ಆಯ್ಕೆ, ಮತ್ತೊಮ್ಮೆ ಸೋಲು. ಎಚ್‌.ಎಲ್‌. ತಿಮ್ಮೇಗೌಡ, ವಿ. ಪಾಪಣ್ಣ ತಲಾ ಒಮ್ಮೆ ಆಯ್ಕೆ, ಎರಡು ಬಾರಿ ಸೋಲು. ಎಸ್‌. ಚಿಕ್ಕಮಾದು ಒಮ್ಮೆ ಆಯ್ಕೆ, ಐದು ಬಾರಿ ಸೋಲು.

ಸಾವಿನಂಚಿನಿಂದ ವ್ಯಕ್ತಿಯನ್ನು ಕಾಪಾಡಿದ ಅಪೋಲೊ ಆಸ್ಪತ್ರೆ

ಈ ಬಾರಿ ಮಂಜುನಾಥ್‌ ಗೆದ್ದರೆ ಕ್ಷೇತ್ರದಲ್ಲಿ ಅರಸು ನಂತರ ಮೂರನೇ ಬಾರಿ ಗೆದ್ದ ಹೆಗ್ಗಳಿಕೆ. ಎಚ್‌. ವಿಶ್ವನಾಥ್‌ ಗೆದ್ದರೆ ಚಂದ್ರಪ್ರಭ ಹಾಗೂ ಜಿಟಿಡಿ ಸಾಲಿಗೆ ಸೇರುತ್ತಾರೆ. ಅಲ್ಲದೇ ತಮ್ಮ ನಾಲ್ಕು ದರಕಗಳ ರಾಜಕೀಯ ಜೀವನದಲ್ಲಿ ಸತತ ಎರಡು ಚುನಾವಣೆಯಲ್ಲಿ ಗೆದ್ದಿಲ್ಲ ಎಂಬ ಅಪವಾದದಿಂದ ಮುಕ್ತರಾಗುತ್ತಾರೆ. ಜೆಡಿಎಸ್‌ನ ದೇವರಹಳ್ಳಿ ಸೋಮಶೇಖರ್‌ ಸೇರಿದಂತೆ ಇತರೆ ಯಾರೇ ಗೆದ್ದರೂ ಪ್ರಥಮ ಜಯವಾಗುತ್ತದೆ.

ಒಬ್ಬರು ಸಿಎಂ, ಮೂವರು ಸಚಿವರಾಗಿದ್ದರು

ಹುಣಸೂರು ಕ್ಷೇತ್ರದ ಡಿ. ದೇವರಾಜ ಅರಸು ಅವರು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಚಂದ್ರಪ್ರಭ ಅರಸು, ಡಾ.ಎಚ್‌.ಎಲ್‌. ತಿಮ್ಮೇಗೌಡ, ಜಿ.ಟಿ. ದೇವೇಗೌಡ ಸಚಿವರಾಗಿದ್ದರು. ಈಗ ವಿಶ್ವನಾಥ್‌ ಗೆದ್ದು ಸಚಿವರಾದಲ್ಲಿ ನಾಲ್ಕನೇಯವರಾಗುತ್ತಾರೆ.

- ಅಂಶಿ ಪ್ರಸನ್ನಕುಮಾರ್‌