Asianet Suvarna News Asianet Suvarna News

ಹುಬ್ಬಳ್ಳಿ-ಧಾರವಾಡದಲ್ಲಿ ಎಲ್‌ಇಡಿ ಬೀದಿ ದೀಪ ಬೆಳಗೊದು ಯಾವಾಗ?

ಎರಡನೇ ಬಾರಿ ಟೆಂಡರ್‌ ಕರೆದ ಎಚ್‌ಡಿಎಸ್‌ಸಿಎಲ್‌| 54 ಕೋಟಿ ವೆಚ್ಚದ ಯೋಜನೆ| ಅನುಷ್ಠಾನವಾದರೆ 54 ಸಾವಿರ ಬೀದಿದೀಪಗಳು ಎಲ್‌ಇಡಿ|ವಾರ್ಷಿಕ 6 ಕೋಟಿ ಮಹಾನಗರ ಪಾಲಿಕೆಗೆ ಉಳಿತಾಯ|

When LED Street Bulb Install in Hubballi-Dharwad City
Author
Bengaluru, First Published Nov 23, 2019, 7:26 AM IST

ಮಯೂರ ಹೆಗಡೆ

ಹುಬ್ಬಳ್ಳಿ(ನ.23): ಸ್ಮಾರ್ಟ್‌ ಸಿಟಿಯ ಮಹತ್ವದ ಯೋಜನೆಯಾದ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಸಂಪೂರ್ಣ ಎಲ್‌ಇಡಿ ಬೀದಿದೀಪಗಳನ್ನು ಅಳವಡಿಕೆ ಯೋಜನೆಗೆ ಈ ಬಾರಿಯಾದರೂ ಮುಹೂರ್ತ ಕೂಡಿ ಬರಲಿದೆಯೆ ಎಂಬ ಪ್ರಶ್ನೆಗೆ ನ. 30ರಂದು ಉತ್ತರ ದೊರಕಲಿದೆ.

ಎಲ್‌ಇಡಿ ಬಲ್ಬುಗಳನ್ನು ಅಳವಡಿಸುವ ಕುರಿತಾದ ಯೋಜನೆಗೆ ಮೊದಲ ಬಾರಿ ಟೆಂಡರ್‌ ಕರೆದಾಗ ತಾಂತ್ರಿಕ ಸಮಸ್ಯೆ ಹಾಗೂ ಹಣಕಾಸಿನ ವಿಚಾರದಿಂದಾಗಿ ಬಿಡ್‌ದಾರರು ಮುಂದೆ ಬಂದಿರಲಿಲ್ಲ. ಹೀಗಾಗಿ ಎರಡನೇ ಬಾರಿ ಈ ಯೋಜನೆಗೆ ಟೆಂಡರ್‌ ಕರೆಯಲಾಗಿದ್ದು, ನ. 30ರಂದು ತೆರೆಯಲಿದೆ. 54 ಕೋಟಿ ವೆಚ್ಚದ ಈ ಯೋಜನೆ ಅನುಷ್ಠಾನಗೊಂಡಲ್ಲಿ ಹುಬ್ಬಳ್ಳಿ ಧಾರವಾಡ ಮಧ್ಯದ ಮಹಾನಗರದ 56 ಸಾವಿರ ಬೀದಿ ದೀಪಗಳು ಎಲ್‌ಇಡಿ ಬಲ್ಬುಗಳಾಗಿ ಬದಲಾಗಲಿವೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪಿಪಿಪಿ ಮಾದರಿಯ ಯೋಜನೆ ಇದಾಗಿದ್ದು, ಮೊದಲ ಬಾರಿಯ ಟೆಂಡರ್‌ ಕರೆದಾಗ ಬಿಡ್‌ದಾರರು ಕೆಲ ಸಂದೇಹ ವ್ಯಕ್ತಪಡಿಸಿ ಮುಂದೆ ಬಂದಿರಲಿಲ್ಲ. ಹೀಗಾಗಿ ಟೆಂಡರ್‌ನ ಕೆಲ ಅಂಶವನ್ನು ಸರಳೀಕರಣ ಮಾಡಿದ್ದು, ಈ ಬಾರಿ ಟೆಂಡರ್‌ ಆಗುವ ನಿರೀಕ್ಷೆಯಿದೆ. ಪ್ರಸ್ತುತ ಮಹಾನಗರ ಪಾಲಿಕೆಯು 12 ಕೋಟಿಗೂ ಹೆಚ್ಚು ಮೊತ್ತವನ್ನು ಹೆಸ್ಕಾಂಗೆ ಭರಿಸುತ್ತಿದೆ. ಈ ಯೋಜನೆ ಜಾರಿಯಾದಲ್ಲಿ ವಾರ್ಷಿಕ 6 ಕೋಟಿ ಮಹಾನಗರ ಪಾಲಿಕೆಗೆ ಉಳಿತಾಯವಾಗಲಿದೆ ಎಂದು ಸ್ಮಾರ್ಟ್‌ಸಿಟಿ ಲಿ. ವಿಶೇಷಾಧಿಕಾರಿ ಎಸ್‌.ಎಚ್‌.ನರೇಗಲ್‌ ತಿಳಿಸಿದರು.

ಸ್ಮಾರ್ಟ್‌ ಟೈಮರ್‌:

ಕೇವಲ ಎಲ್‌ಇಡಿ ಬಲ್ಬಗಳನ್ನು ಮಾತ್ರ ಅಳವಡಿಸುವುದಲ್ಲ. ಇವುಗಳಿಗೆ ಸ್ಮಾರ್ಟ್‌ ಟೈಮರ್‌ಗಳನ್ನು ಕೂಡ ಅಳವಡಿಸಲಾಗುವುದು. ಸಂಜೆಯಾಗುತ್ತಿದ್ದಂತೆ ಈ ಲೈಟ್‌ಗಳು ತನ್ನಿಂದ ತಾನೆ ಹೊತ್ತಿಕೊಳ್ಳುತ್ತವೆ, ಬೆಳಗಾಗುತ್ತಿದ್ದಂತೆ ನಂದಲಿವೆ. ಇದರಿಂದ ಬೆಳಗಿನ ವೇಳೆಯೂ ಬೀದಿ ದೀಪ ಬೆಳಗಿ ವಿದ್ಯುತ್‌ ವ್ಯರ್ಥವಾಗುವುದು ತಡೆಯಲಿದೆ. ಅಲ್ಲದೆ, ಇಲ್ಲಿನ ಕನ್ನಡ ಭವನದಲ್ಲಿ ನಿರ್ಮಾಣವಾಗುತ್ತಿರುವ ಕಂಟ್ರೋಲ್‌ ಕಮಾಂಡ್‌ ಸೆಂಟರ್‌ಗೆ ಇದರ ನೇರವಾದ ಸಂಪರ್ಕ ಇರಲಿದ್ದು, ಎಲ್ಲಾದರೂ ಬಲ್ಬುಗಳು ಕೆಟ್ಟರೆ, ವೈರ್‌ ಹಾಳಾದರೆ ಅಲ್ಲಿಂದಲೆ ಪತ್ತೆ ಹಚ್ಚಬಹುದು ಎಂದರು.

ಅಂದುಕೊಂಡಂತೆ ನಡೆದರೆ ಇನ್ನೆರಡು ತಿಂಗಳಲ್ಲಿ ಕಾಮಗಾರಿ ಆರಂಭವಾಗಬೇಕಿದೆ. ಟೆಂಡರ್‌ ಪಡೆದವರು 10 ವರ್ಷಗಳ ಕಾಲ ಈ ಬೀದಿದೀಪಗಳನ್ನು ನಿರ್ವಹಣೆ ಮಾಡಲಿದ್ದಾರೆ. ಈಗಾಗಲೆ ಮಹಾನಗರ ಪಾಲಿಕೆಯು ಹಲವೆಡೆ ಎಲ್‌ಇಡಿ ಬಲ್ಬನ್ನು ಅಳವಡಿಸಿದ್ದು, ಅವುಗಳನ್ನು ಕೂಡ ಈ ಯೋಜನೆ ಗುತ್ತಿಗೆದಾರರೆ ನಿರ್ವಹಣೆ ಮಾಡಬೇಕಿದೆ. ಆದರೆ ಇದಕ್ಕೆ ಕೊಂಚ ಸರಳೀಕರಣವಿದೆ ಎನ್ನುತ್ತಾರೆ ನರೇಗಲ್‌.

ದೊಡ್ಡ ತಲೆನೋವು

ಮಹಾನಗರ ಪಾಲಿಕೆ ಕಂಟ್ರೋಲ್‌ ರೂಮಿಗೆ ಪ್ರತಿದಿನ ಬೀದಿದೀಪ ಬೆಳಗುತ್ತಿಲ್ಲ, ಸ್ಪಾರ್ಕ್ ಆಗುತ್ತಿದೆ, ಬೆಳಗ್ಗೆ ಉರಿಯುತ್ತಿದೆ ಎಂಬುದು ಸೇರಿ 100-150 ದೂರುಗಳು ಬರುತ್ತವೆ. ಇದನ್ನು ಪಾಲಿಕೆ ಅಧಿಕಾರಿಗಳು ಮೂರು ದಿನದಲ್ಲಿ ಬಗೆಹರಿಸಲು ಕಾಲಾವಕಾಶವಿದೆ. ಆದರೆ, ಇಷ್ಟರಲ್ಲಿ ಬಗೆಹರಿಸದಿದ್ದರೆ ಇದೆ ದೂರುಗಳು ಪುನರಾವರ್ತನೆ ಆಗುತ್ತವೆ. ಸ್ಮಾರ್ಟ್‌ಸಿಟಿಯ ಈ ಯೋಜನೆ ಜಾರಿಯಾದ ಬಳಿಕ ಸಮಸ್ಯೆ ನಿವಾರಣೆಯಾಗುವ ನಿರೀಕ್ಷೆಯಿದೆ ಎನ್ನುತ್ತಾರೆ ಇಲ್ಲಿನ ವಿದ್ಯಾನಗರದ ನಿವಾಸಿ ದಾವಲಸಾಬ್‌.

4800 ಎಲ್‌ಇಡಿ ಇದೆ

ಈ ಬಗ್ಗೆ ಮಾತನಾಡಿದ ಎಚ್‌ಡಿಎಂಸಿ ಎಲೆಕ್ಟ್ರಿಕಲ್‌ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಎ.ಆರ್‌. ದೇಶಪಾಂಡೆ, ಈಗಾಗಲೆ ಮಹಾನಗರ ಪಾಲಿಕೆಯಿಂದ ಹು-ಧಾ ನಗರದಲ್ಲಿ 4800 ಎಲ್‌ಇಡಿ ಬಲ್ಬ್ ಬಗಳನ್ನು ಅಳವಡಿಸಲಾಗಿದೆ. ಇದರಿಂದ ವಿದ್ಯುತ್‌ ಬಿಲ್‌ ಕಡಿಮೆಯಾಗಿದೆ. ಮಹಾನಗರದಲ್ಲಿ ಸಂಪೂರ್ಣವಾಗಿ ಎಲ್‌ಇಡಿ ಬಲ್ಬ್ ಬಗಳನ್ನು ಅಳವಡಿಕೆ ಮಾಡುವುದರಿಂದ ಶೇ. 50 ರಷ್ಟುವಿದ್ಯುತ್‌ ಬಿಲ್‌ ಹೊರೆ ಕಡಿಮೆಯಾಗಲಿದೆ ಎಂದರು.

ಎಲ್‌ಇಡಿ ಬಲ್ಬುಗಳನ್ನು ಅಳವಡಿಸುವ ಯೋಜನೆಯಿಂದ ಮಹಾನಗರ ಪಾಲಿಕೆಗೆ ವಾರ್ಷಿಕ . 6 ಕೋಟಿಯಷ್ಟು ಉಳಿತಾಯವಾಗಲಿದೆ. ಹುಬ್ಬಳ್ಳಿ-ಧಾರವಾಡದ ನಡುವಿನ 56 ಸಾವಿರ ಬಲ್ಬ್ ಗಳನ್ನು ಬದಲಿಸುವ ಯೋಜನೆಯಿದು ಎಂದು ಸ್ಮಾರ್ಟ್‌ಸಿಟಿ ವಿಶೇಷಾಧಿಕಾರಿ ಎಸ್‌.ಎಚ್‌. ನರೇಗಲ್‌ ಅವರು ಹೇಳಿದ್ದಾರೆ. 
 

Follow Us:
Download App:
  • android
  • ios