ಕೊಪ್ಪಳ: ನುಡಿಜಾತ್ರೆಗೂ ‘ಗ್ರಹಣ’; ಜಿಲ್ಲಾ ಸಾಹಿತ್ಯ ಸಮ್ಮೇಳನ ಯಾವಾಗ?
- ಜಿಲ್ಲಾ ನುಡಿಜಾತ್ರೆಗೂ ‘ಗ್ರಹಣ’
- 3 ವರ್ಷದ ಹಿಂದೆ ನಿಗದಿಯಾಗಿದ್ದ ಕಾರ್ಯಕ್ರಮ ಇನ್ನೂ ಆಯೋಜನೆಯಾಗಿಲ್ಲ
ಸೋಮರಡ್ಡಿ ಅಳವಂಡಿ
ಕೊಪ್ಪಳ (ನ.9) : ಕಳೆದ ಮೂರು ವರ್ಷಗಳ ಹಿಂದೆ ಕೋವಿಡ್ ಹಿನ್ನೆಲೆ ಹನುಮಸಾಗರದಲ್ಲಿ ನಿಗದಿಯಾಗಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡಲಾಗಿದ್ದು, ಇದುವರೆಗೂ ಆಯೋಜಿಸುವ ಲಕ್ಷಣ ಕಾಣುತ್ತಿಲ್ಲ. ಈಗ ಕೋವಿಡ್ ಅಡ್ಡಿ ಇಲ್ಲವಾದರೂ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಲು ಮುಂದಾಗದೆ ಇರುವುದು ಕನ್ನಡಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಚಿಕ್ಕಮಗಳೂರು: ಸಾಹಿತ್ಯ ಸಮ್ಮೇಳನ ಜಾಗದಲ್ಲಿ ಪೆಟ್ರೋಲ್ ಬಾಂಬ್
ಏನಾಗಿತ್ತು?:
3 ವರ್ಷಗಳ ಹಿಂದೆ ಹನುಮಸಾಗರ ಗ್ರಾಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಿಗದಿಯಾಗಿತ್ತು. ಇದಕ್ಕಾಗಿ ಬೃಹತ್ ವೇದಿಕೆ ಹಾಕಲಾಗಿತ್ತು. ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಸಮ್ಮೇಳನಾಧ್ಯಕ್ಷರ ಆಯ್ಕೆ, ಅಹ್ವಾನ ಪತ್ರಿಕೆ ಮುದ್ರಣ ಸೇರಿದಂತೆ ಎಲ್ಲವೂ ತಯಾರಾಗಿತ್ತು. ಇನ್ನೇನು ಕಾರ್ಯಕ್ರಮ ನಡೆಯಬೇಕು ಎನ್ನುವಾಗ ಕೋವಿಡ್ ತೀವ್ರಗೊಂಡಿದ್ದರಿಂದ ಜಿಲ್ಲಾಡಳಿತದ ಸೂಚನೆ ಮೇರೆಗೆ ಕಾರ್ಯಕ್ರಮ ರದ್ದು ಮಾಡಲಾಯಿತು.
ಮುಂದುವರಿಸಲು ಆಗ್ರಹ:
ಹನುಮಸಾಗರದಲ್ಲಿ ನಿಗದಿಯಾಗಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಿಗದಿತ ಸ್ಥಳದಲ್ಲೇ ನಡೆಯಬೇಕು. ಸಮ್ಮೇಳನಾಧ್ಯಕ್ಷರು ಸೇರಿದಂತೆ ಅತಿಥಿಗಳು, ಉಪನ್ಯಾಸಕರು ಎಲ್ಲವೂ ನಿಗದಿಯಾಗಿರುವುದರಿಂದ ಪುನಃ ಅವರನ್ನೇ ಮುಂದುವರಿಸುವುದು ಸೂಕ್ತ ಎನ್ನುವ ಮಾತು ಸಾಹಿತಿಗಳ ವಲಯದಲ್ಲಿ ಕೇಳಿ ಬರುತ್ತಿದೆ.
ಡಾ. ಉದಯ ಶಂಕರ್ ಅವರು ಸಮ್ಮೇಳನಾಧ್ಯಕ್ಷರಾಗಿದ್ದಾರೆ. ಅವರಿಗೆ ಅಧಿಕೃತ ಅಹ್ವಾನವನ್ನು ನೀಡಲಾಗಿದೆ. ಹೀಗಾಗಿ ಅವರನ್ನೇ ಮುಂದುವರಿಸಬೇಕು ಎನ್ನುವ ಕೂಗು ಬಲವಾಗಿದೆ.
ಆದರೆ, ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಬದಲಾಗಿದ್ದಾರೆ. ಜಿಲ್ಲಾಧ್ಯಕ್ಷರ ಚುನಾವಣೆ ನಡೆದಿರುವ ಹಿನ್ನೆಲೆ ಅಧ್ಯಕ್ಷರು ಹೊಸಬರು ಬಂದಿದ್ದಾರೆ. ಹೀಗಾಗಿ ಹೊಸದಾಗಿ ಕಾರ್ಯಕ್ರಮ ಆಯೋಜನೆ ಮಾಡುತ್ತಾರೆಯೇ ಎನ್ನುವ ಪ್ರಶ್ನೆಯೂ ಎದ್ದು ನಿಂತಿದೆ.
ಸಮ್ಮೇಳನ ಬಳಿಕ:
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬಳಿಕವೇ ಜಿಲ್ಲಾ ಸಮ್ಮೇಳನ ಆಯೋಜನೆಗೆ ರಾಜ್ಯ ಸಮಿತಿ ತೀರ್ಮಾನ ಮಾಡಿದೆ ಎನ್ನಲಾಗಿದೆ. ನವೆಂಬರ್‌ನಲ್ಲಿ ನಡೆಯಬೇಕಾಗಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತೆ ಜನವರಿಗೆ ಮುಂದೂಡಿರುವುದರಿಂದ ಈ ಮಧ್ಯೆಯಾದರೂ ಜಿಲ್ಲಾ ಸಮ್ಮೇಳನ ಪೂರ್ಣಗೊಳಿಸಲು ಅವಕಾಶ ನೀಡುವಂತೆ ಕೋರಲಾಗಿದೆ. ಆದರೂ ರಾಜ್ಯ ಸಮಿತಿಯಿಂದ ಇದುವರೆಗೂ ಯಾವುದೇ ಸೂಚನೆ ಬಂದಿಲ್ಲ.
ಕೊಪ್ಪಳ: ಬಸವೇಶ್ವರ ವೃತ್ತದಲ್ಲಿ ಟ್ರಾಫಿಕ್ ಜಾಮ್: ವಾಹನ ಸವಾರರ ಪರದಾಟ
ಹನುಮಸಾಗರದಲ್ಲಿ ನಿಯೋಜನೆಯಾಗಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಶೀಘ್ರ ಆಯೋಜಿಸುವುದು ಸೂಕ್ತ. ಸಾಹಿತ್ಯ ಸಮ್ಮೇಳನಕ್ಕೆ ನಿಗದಿಯಾಗಿದ್ದ ಅಧ್ಯಕ್ಷರು, ಅತಿಥಿಗಳನ್ನು ಮುಂದುವರಿಸುವುದು ಸೂಕ್ತ.
ಮಹಾಂತೇಶ ಮಲ್ಲನಗೌಡ್ರ, ಸಾಹಿತಿ
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಬಳಿಕವೇ ಜಿಲ್ಲಾ ಸಮ್ಮೇಳನಗಳನ್ನು ಆಯೋಜನೆ ಮಾಡಲು ಸೂಚಿಸಲಾಗಿದೆ. ನಂತರವೇ ಹನುಮಸಾಗರದಲ್ಲಿ ಸಮ್ಮೇಳನ ನಡೆಸಲಾಗುವುದು.
ಶರಣೇಗೌಡ, ಜಿಲ್ಲಾಧ್ಯಕ್ಷರು ಕಸಾಪ