ಬೆಂಗಳೂರು[ಮಾ.21]: ಕೊರೋನಾ ಸೋಂಕು ಹರಡುವುದನ್ನು ತಡೆಯಲು ಹಾಗೂ ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ ಭಾನುವಾರದ ‘ಜನತಾ ಕರ್ಫ್ಯೂ’ಗೆ ನಗರದಲ್ಲಿ ಭರ್ಜರಿ ಬೆಂಬಲ ವ್ಯಕ್ತವಾಗುವ ನಿರೀಕ್ಷೆಯಿದ್ದು, ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಚಟುವಟಿಕೆಗಳು ಬಹುತೇಕ ಸ್ತಬ್ಧವಾಗುವುದು ಬಹುತೇಕ ಖಚಿತವಾಗಿದೆ.

"

ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ಭಾನುವಾರ (ಮಾ.22) ಒಂದು ದಿನ ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆ ವರೆಗೆ ನಾಗರಿಕರು ಮನೆಯಲ್ಲೇ ಇರುವಂತೆ ಮನವಿ ಮಾಡಿದ್ದಾರೆ. ಈ ಮನವಿಗೆ ಸರಕು ಸಾಗಣೆ ವಾಹನ, ಮೆಟ್ರೋ ರೈಲು, ಜ್ಯುವೆಲ್ಲರಿ, ಆಟೋ, ಟ್ಯಾಕ್ಸಿ, ಕ್ಯಾಬ್‌ ಚಾಲಕರ ಮತ್ತು ಮಾಲೀಕರ ಸಂಘಗಳು, ಹೋಟೆಲ್‌, ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳು, ರಸ್ತೆ ಬದಿ ವ್ಯಾಪಾರಿಗಳ ಸಂಘಗಳು, ಮಾರುಕಟ್ಟೆ ವ್ಯಾಪಾರಿಗಳ ಸಂಘಟನೆಗಳು ಸೇವೆ ಸ್ಥಗಿತಗೊಳಿಸಿ ಬೆಂಬಲ ಸೂಚಿಸುವುದಾಗಿ ತಿಳಿಸಿವೆ.

ಜನತಾ ಕರ್ಫ್ಯೂ: ಪ್ರಧಾನಿ ಮೋದಿ ಕರೆಗೆ ದೇವೇಗೌಡ ಬೆಂಬಲ

ಈಗಾಗಲೇ ಚಿತ್ರಮಂದಿರ, ಮಾಲ್‌, ಶಾಲಾ-ಕಾಲೇಜುಗಳು ಸೇರದಂತೆ ಹೆಚ್ಚು ಜನ ಸೇರುವ ಸ್ಥಗಳನ್ನು ಬಂದ್‌ ಮಾಡಲಾಗಿದೆ. ಇದೀಗ ಈ ಸಂಘಟನೆಗಳು ಬೆಂಬಲ ನೀಡುವುದರೊಂದಿಗೆ ಜನತಾ ಕರ್ಫ್ಯೂ ಭರ್ಜರಿ ಸ್ಪಂದನೆ ದೊರೆಯುವ ನಿರೀಕ್ಷೆಯಿದೆ.

ಪ್ರಯಾಣಿಕರ ನೋಡಿಕೊಂಡು ಸಾರಿಗೆ ಸೇವೆ:

ಅಗತ್ಯ ಸೇವೆಗಳ ವ್ಯಾಪ್ತಿಗೆ ಬರುವ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ನಿಗಮಗಳು ಸಾರಿಗೆ ಅಗತ್ಯ ಸೇವೆಗಳ ವ್ಯಾಪ್ತಿಗೆ ಬರುವುದರಿಂದ ಸಂಪೂರ್ಣವಾಗಿ ಸ್ಥಗಿತಗೊಳಿಸಲು ಸಾಧ್ಯವಿಲ್ಲ. ಈಗಾಗಲೇ ಪ್ರಯಾಣಿರಕ ಕೊರತೆಯಿಂದ ಬಸ್‌ಗಳ ಸಂಖ್ಯೆ ಕಡಿತಗೊಳಿಸಲಾಗಿದೆ. ಭಾನುವಾರ ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಬಸ್‌ ಸೇವೆ ನೀಡುವುದಾಗಿ ತಿಳಿಸಿವೆ. ಕೊರೋನಾ ವೈರಸ್‌ ಭೀತಿಯಲ್ಲಿ ಮನೆಗಳಿಂದ ಆಚೆ ಬರಲು ಹಿಂದೇಟು ಹಾಕುತ್ತಿರುವ ಜನರು, ಅಂದು ಕೂಡ ರಸ್ತೆಗಳಿಗೆ ಇಳಿಯುವುದು ಅನುಮಾನ ಎನ್ನಲಾಗಿದೆ.

ಎಫ್‌ಕೆಸಿಸಿಐ ಕಚೇರಿ ಬಂದ್‌

ಕೊರೋನಾ ವೈರಸ್‌ ನಿಯಂತ್ರಣದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಕರೆ ನೀಡಿರುವ ಜನತಾ ಕರ್ಫ್ಯೂಗೆ ಎಫ್‌ಕೆಸಿಸಿಐ ಸಂಪೂರ್ಣ ಬೆಂಬಲವಿದೆ. ಮಾ.22ರಂದು ಎಫ್‌ಕೆಸಿಸಿಐ ಕಚೇರಿ ಮುಚ್ಚಲು ನಿರ್ಧರಿಸಲಾಗಿದೆ. ಅಂದು ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆ ವರೆಗೆ ಮನೆಯಲ್ಲೇ ಉಳಿದು ಸ್ವಯಂ ಜನತಾ ಕರ್ಫ್ಯೂ ಆಚರಿಸುವಂತೆ ಒಕ್ಕೂಟದ ಸದಸ್ಯರಿಗೆ ಮನವಿ ಮಾಡುತ್ತೇನೆ. ಸಾರ್ವಜನಿಕರ ಆರೋಗ್ಯ ಮತ್ತು ಸುರಕ್ಷತೆ ದೃಷ್ಟಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡಿರುವ ಸೂಚನೆಗಳನ್ನು ಅನುಸರಿಸುವಂತೆ ಕೋರುತ್ತೇನೆ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಸಿ.ಆರ್‌.ಜನಾರ್ಧನ ತಿಳಿಸಿದ್ದಾರೆ.

8 ಲಕ್ಷ ವಾಹನ ಸಂಚಾರ ಸ್ಥಗಿತ

ಮೋದಿ ಅವರು ಭಾನುವಾರ ಕರೆ ನೀಡಿರುವ ಜನತಾ ಕರ್ಫ್ಯೂಗೆ ನಮ್ಮ ಸಂಘಟನೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಲಿದೆ. ಈಗಾಗಲೇ ರಾಜ್ಯದಲ್ಲಿ ಶೇ.60ರಷ್ಟು ಲಾರಿಗಳು ಸರಕುಗಳಿಲ್ಲದೆ ಸಂಚಾರ ಸ್ಥಗಿತಗೊಳಿಸಿವೆ. ಅಂದು ಅಗತ್ಯ ಸರಕುಗಳ ಸಾಗಣೆ ವಾಹನ ಸಂಚರಿಸಲಿವೆ. ಉಳಿದ ಲಾರಿ, ಟೆಂಪೋ, ಮ್ಯಾಕ್ಸಿಕ್ಯಾಬ್‌, ಟೂರಿಸ್ಟ್‌ ಟ್ಯಾಕ್ಸಿ ಸೇರಿದಂತೆ ಎಲ್ಲ ವಾಣಿಜ್ಯ ವಾಹನಗಳೂ ಸೇರಿದಂತೆ ರಾಜ್ಯದಲ್ಲಿ 8 ಲಕ್ಷ ವಾಹನಗಳ ಸಂಚಾರ ಸ್ಥಗಿತಗೊಳ್ಳಲಿದೆ ಎಂದು ಫೆರಡೇಶನ್‌ ಆಫ್‌ ಕರ್ನಾಟಕ ಸ್ಟೇಟ್‌ ಲಾರಿ ಓನ​ರ್ಸ್ ಅಂಡ್‌ ಏಜೆಂಟ್ಸ್‌ ಅಸೋಸಿಯೇಷನ್‌ ಅಧ್ಯಕ್ಷ ಜಿ.ಆರ್‌.ಷಣ್ಮುಗಪ್ಪ ತಿಳಿಸಿದರು.

ಏನು ಇರಲ್ಲ?

ಮೆಟ್ರೋ, ಆಟೋ, ಓಲಾ, ಉಬರ್‌ ಸೇರಿದಂತೆ ಟ್ಯಾಕ್ಸಿ, ಕ್ಯಾಬ್‌, ಮಾರುಕಟ್ಟೆ, ಎಪಿಎಂಸಿ, ಜ್ಯುವೆಲ್ಲರಿ ಶಾಪ್‌

ಏನು ಇರುತ್ತೆ?

ಆಸ್ಪತ್ರೆ, ಔಷಧಿ ಅಂಗಡಿ, ಹಾಲು, ಅಗತ್ಯ ವಸ್ತುಗಳ ಸಾಗಣೆ ವಾಹನ, ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌, ರೈಲು, ವಿಮಾನ, ದಿನಪತ್ರಿಕೆ, ಪೆಟ್ರೋಲ್‌ ಬಂಕ್‌ ಸೇರಿದಂತೆ ಅಗತ್ಯ ವಸ್ತುಗಳ ಸೇವೆ

ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ಭಾನುವಾರ ಕರೆ ನೀಡಿರುವ ದೇಶವ್ಯಾಪಿ ಜನತಾ ಕರ್ಫ್ಯೂಗೆ ಸಂಪೂರ್ಣ ಬೆಂಬಲವಿದೆ. ಈಗಾಗಲೇ ರಸ್ತೆ ಬದಿಯ ಊಟ-ಉಪಹಾರ ಸ್ಥಗಿತಗೊಳಿಸಲಾಗಿದೆ. ಭಾನುವಾರ ಹೂವು-ಹಣ್ಣು, ತರಕಾರಿ, ಬಟ್ಟೆಸೇರಿದಂತೆ ರಸ್ತೆ ಬದಿ ಯಾವುದೇ ವಸ್ತುಗಳ ಮಾರಾಟ ಇರುವುದಿಲ್ಲ ಎಂದು ರಾಜ್ಯ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ರಂಗಸ್ವಾಮಿ ಹೇಳಿದ್ದಾರೆ. 

ಭಾನುವಾರ ಪ್ಯಾಸೆಂಜರ್‌, ಮೇಲ್‌, ಎಕ್ಸ್‌ಪ್ರೆಸ್‌ ರೈಲು ಸೇವೆ ಪೂರ್ಣ ಬಂದ್‌

ಕೊರೋನಾ ವೈರಸ್‌ ಬಗ್ಗೆ ಜಾಗೃತರಾಗುವ ಉದ್ದೇಶದಿಂದ ಹೋಟೆಲ್‌ ಮಾಲೀಕರು, ಕಾರ್ಮಿಕರು ನಾವೆಲ್ಲರೂ ಭಾನುವಾರ ಒಂದು ದಿನ ಸಂಪೂರ್ಣವಾಗಿ ಮನೆಯಲ್ಲೇ ಉಳಿಯಲು ನಿರ್ಧರಿಸಿದ್ದೇವೆ ಎಂದು ಬೃಹತ್‌ ಬೆಂಗಳೂರು ಹೋಟೆಲುಗಳ ಸಂಘದ ಅಧ್ಯಕ್ಷ ಪಿ.ಸಿ.ರಾವ್‌ ತಿಳಿಸಿದ್ದಾರೆ

ಪೆಟ್ರೋಲ್‌ ಹಾಗೂ ಡೀಸೆಲ್‌ ಅಗತ್ಯ ಸೇವೆಗಳ ಅಡಿಯಲ್ಲಿ ಬರಲಿದೆ. ಹೀಗಾಗಿ ಭಾನುವಾರ ಎಂದಿನಂತೆ ನಗರದಲ್ಲಿ ಪೆಟ್ರೋಲ್‌ ಬಂಕ್‌ಗಳು ಕಾರ್ಯ ನಿರ್ವಹಸಲಿವೆ. ಸಾರ್ವಜನಿಕರು ಅತಂಕ ಪಡುವ ಅಗತ್ಯವಿಲ್ಲ ಎಂದು ಬೆಂಗಳೂರು ಪೆಟ್ರೋಲ್‌ ಡೀಲ​ರ್ಸ ಅಸೋಸಿಯೇಷನ್‌ ಅಧ್ಯಕ್ಷ ಡಾ.ಬಾಲಾಜಿ ಹೇಳಿದ್ದಾರೆ. 

ಪ್ರಧಾನಿ ಕರೆ ನೀಡಿರುವ ಜನತಾ ಅಧ್ಯಕ್ಷ, ಗೆ ಸಂಪೂರ್ಣ ಬೆಂಬಲವಿದೆ. ಭಾನುವಾರ ಓಲಾ, ಊಬರ್‌, ಏರ್‌ಪೋರ್ಟ್‌ ಟ್ಯಾಕ್ಸಿ, ಆಟೋ, ಕ್ಯಾಬ್‌ ಈ ಎಲ್ಲ ಸೇವೆಗಳನ್ನು ಸ್ಥಗಿತಗೊಳಸಲು ನಿರ್ಧರಿಸಲಾಗಿದೆ ಎಂದು ಓಲಾ-ಉಬರ್‌ ಚಾಲಕ ಮತ್ತು ಮಾಲೀಕರ ಸಂಘದ  ಸ್ಥಾಪಕ ಅಧ್ಯಕ್ಷ ತನ್ವೀರ್‌ ಪಾಷಾ ಹೇಳಿದ್ದಾರೆ. 

ಜನತಾ ಕರ್ಫ್ಯೂ; ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ವಿಶೇಷ ಮನವಿ!

ಪ್ರಧಾನಿ ಮೋದಿ ಅವರ ಕರೆ ಮೇರೆಗೆ ಭಾನುವಾರ ಪೀಣ್ಯದ ಕೈಗಾರಿಕಾ ಪ್ರದೇಶಗಳಲ್ಲಿರುವ ಎಂಟು ಸಾವಿರ ಕೈಗಾರಿಕೆಗಳನ್ನು ಬಂದ್‌ ಮಾಡಲು ನಿರ್ಧರಿಸಲಾಗಿದೆ. ಇದರಿಂದ ಒಂಬತ್ತು ಲಕ್ಷ ಕಾರ್ಮಿಕರು ಮನೆಗಳಲ್ಲೇ ಉಳಿಯಲಿದ್ದಾರೆ ಎಂದು ಪೀಣ್ಯ ಕೈಗಾರಿಕೆಗಳ ಸಂಘದ ಅಧ್ಯಕ್ಷ  ಶ್ರೀನಿವಾಸ್‌ ತಿಳಿಸಿದ್ದಾರೆ.