Asianet Suvarna News Asianet Suvarna News

Karwar: ಯಾವ ಪ್ರೈವೇಟ್‌ ಹಾಸ್ಪಿಟಲ್‌ಗೂ ಕಮ್ಮಿ ಇಲ್ಲ ಭಟ್ಕಳದ‌ ಸರ್ಕಾರಿ ಆಸ್ಪತ್ರೆ..!

*   ಜನಸಾಮಾನ್ಯರಿಗೂ ಅತ್ಯುತ್ತಮ ಸ್ಪಂದನೆ ನೀಡುತ್ತಿರುವ ಸರ್ಕಾರಿ ಆಸ್ಪತ್ರೆ
*   ಸುಸಜ್ಜಿತ ಆಸ್ಪತ್ರೆ ನಿರ್ಮಿಸುವ ಮೂಲಕ ರಾಜ್ಯಕ್ಕೆ ಮಾದರಿ
*   ಇನ್ಫೋಸಿಸ್ ಫೌಂಡೇಶನ್ ಹಾಗೂ ಸ್ಥಳೀಯ ದಾನಿಗಳ ಸಹಕಾರದಿಂದ ಆಸ್ಪತ್ರೆ ನಿರ್ಮಾಣ  
 

Well Equipped Government Hospital at Bhatkal in Uttara Kannada grg
Author
Bengaluru, First Published Jun 1, 2022, 10:36 AM IST | Last Updated Jun 1, 2022, 10:36 AM IST

ಕಾರವಾರ(ಜೂ.01): ಸರ್ಕಾರಿ ಆಸ್ಪತ್ರೆಗಳನ್ನು ಕಂಡ್ರೆ ಮೂಗು ಮುರಿಯುವರೇ ಜಾಸ್ತಿ. ಆಸ್ಪತ್ರೆಯ ಕಟ್ಟಡಗಳ‌ ದುಸ್ಥಿತಿ, ಸರಿಯಾಗಿ ಸ್ಪಂದಿಸದ ಡಾಕ್ಟರ್ಸ್ ಹಾಗೂ ಸಿಬ್ಬಂದಿ, ಔಷಧಿಗಳಿಲ್ಲದ ಮಳಿಗೆ ಹೀಗೆ ಹತ್ತು ಹಲವು ರೀತಿಯ ಸಮಸ್ಯೆಗಳಿಂದ ಜನರು ಅತ್ತ ಕಾಲಿಡೋದೇ ಕಡಿಮೆ. ಆದರೆ, ಇಂತಹ ಆಸ್ಪತ್ರೆಗಳ ಮಧ್ಯೆ ಇಲ್ಲೊಂದು ಸರ್ಕಾರಿ ಆಸ್ಪತ್ರೆ ಮಾತ್ರ ಖಾಸಗಿ ಆಸ್ಪತ್ರೆಗಳನ್ನು ಕೂಡಾ ಮೀರಿಸುವಂತಿದ್ದು, ಜನಸಾಮಾನ್ಯರಿಗೂ ಅತ್ಯುತ್ತಮ ಸ್ಪಂದನೆ ನೀಡುತ್ತಿದೆ. 

ಕಳೆದ ಮೂರು ವರ್ಷಗಳ ಹಿಂದೆ ಈ ಆಸ್ಪತ್ರೆಗೆ ಬಂದಿದ್ದರೆ ಖಂಡಿತ ನಿಮಗೆ ನರಕ ದರ್ಶನವೇ ಆಗಿರುತ್ತಿತ್ತು. ಮಳೆಗೆ ಎಲ್ಲೆಂದರಲ್ಲಿ ಸುರಿಯುವ ಕೊಠಡಿಗಳು, ಗಬ್ಬು ವಾಸನೆ, ಸರಿಯಾದ ಬೆಡ್ ವ್ಯವಸ್ಥೆಯ ಕೊರತೆ, ಅಸಮರ್ಪಕ ಔಷಧ ಮಳಿಗೆ, ಸಿಬ್ಬಂದಿ ಕೊರತೆ. ಹೀಗೆ ಹತ್ತು ಹಲವು ರೀತಿಯಲ್ಲಿ ಅವ್ಯವಸ್ಥೆ ಆಗರ ಆಗಿತ್ತು ಈ ಆಸ್ಪತ್ರೆ. ಅದ್ರೆ, ಪ್ರಸ್ತುತ ಈ ಆಸ್ಪತ್ರೆಯನ್ನು ನೋಡಿದ್ರೆ ನೀವು ದಂಗಾಗೋದು ಖಂಡಿತಾ. ಇದು ಉತ್ತರ ಕ‌ನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಸರ್ಕಾರಿ ಆಸ್ಪತ್ರೆಯ ದೃಶ್ಯ. ಈ ಆಸ್ಪತ್ರೆಯಲ್ಲಿ ಇಷ್ಟೊಂದು ಪ್ರಮಾಣದ ಅಭಿವೃದ್ಧಿ ನಡೆದಿರೋದು ಸರ್ಕಾರದ ಅನುದಾನಗಳಿಂದಲ್ಲ.‌ ಬದಲಾಗಿ ಭಾರೀ ಪ್ರಮಾಣದಲ್ಲಿ ಇನ್ಫೋಸಿಸ್ ಫೌಂಡೇಶನ್ ಹಾಗೂ ಸ್ಥಳೀಯ ದಾನಿಗಳ ಸಹಕಾರದಿಂದ ಈ ಆಸ್ಪತ್ರೆಯಲ್ಲಿ ಏರ್ ಕಂಡೀಷನ್ ಹಾಲ್, ಡಯಾಲಿಸಿಸ್ ಸೆಂಟರ್, 100 ಬೆಡ್ ವ್ಯವಸ್ಥೆ, ಸೂಪರ್ ಸ್ಪೆಷಲ್ ಹಾಗೂ ಡಿಲಕ್ಸ್ ರೂಮ್ಸ್ , ಹವಾ ನಿಯಂತ್ರಿತ ಶವಗಾರ, ಉತ್ತಮ ಗಾರ್ಡನ್ ಸೇರಿದಂತೆ ಹತ್ತು ಹಲವು ಸೌಲಭ್ಯಗಳನ್ನು ಹೊಂದಿದೆ. ಎಲ್ಲವೂ ದಾನಿಗಳ ಸಹಾಯದಿಂದ ಆಗಿರೋದು ಹೊರತು ಇದ್ಯಾವುದಕ್ಕೂ ಸರ್ಕಾರದ ಯಾವುದೇ ಅನುದಾನ ಬಳಕೆಯಾಗಿಲ್ಲ.

Uttara Kannada: ಕಾರವಾರ ನಗರಸಭೆಯಿಂದ ಬಡವರಿಗಾಗಿ ನೈಟ್ ಶೆಲ್ಟರ್ ಸೌಲಭ್ಯ!

ಮಳೆ ಬಂದರೆ ಪೂರ್ಣ ಪ್ರಮಾಣದಲ್ಲಿ ಸೋರುತ್ತಿದ್ದ ಈ ಆಸ್ಪತ್ರೆಗೆ 20ಲಕ್ಷ ರೂ. ವೆಚ್ಚದಲ್ಲಿ ಇನ್ಪೊಸಿಸ್ ಫೌಂಡೇಷನ್ ರೂಫ್ ವ್ಯವಸ್ಥೆ ಮಾಡಿಸಿಕೊಟ್ಟಿದೆ. ದಾನಿಯೋರ್ವರಿಂದ ಸುಮಾರು 45ಲಕ್ಷ ರೂ. ವೆಚ್ಚದಲ್ಲಿ ಡಯಾಲಿಸಿಸ್ ಸೆಂಟರ್ ನಿರ್ಮಾಣವಾಗಿದೆ. ಇನ್ನೋರ್ವ ದಾನಿಯಿಂದ ಆಸ್ಪತ್ರೆಗೆ ಸಂಪೂರ್ಣವಾಗಿ ಪೈಂಟಿಂಗ್ ವ್ಯವಸ್ಥೆ. ಹೀಗೆ ಹತ್ತು ಹಲವು ಸೌಲಭ್ಯಗಳು ದಾನಿಗಳಿಂದಲೇ ಈ ಆಸ್ಪತ್ರೆಗೆ ದೊರಕಿದೆ. ದಾನಿಗಳೇ ಖುದ್ದಾಗಿ ಆಸ್ಪತ್ರೆಯನ್ನು ಸಂಪರ್ಕಿಸಿ ತಾಲೂಕು ವೈದ್ಯಾಧಿಕಾರಿಗಳು ನೀಡಿದ ಮಾಹಿತಿಯಂತೆ ಬಡವರಿಗೆ ಅನುಕೂಲವಾಗುವ ರೀತಿಯಲ್ಲಿ ಆಸ್ಪತ್ರೆಯನ್ನು ತಯಾರು ಮಾಡಿಕೊಟ್ಟಿದ್ದಾರೆ. 

ಒಟ್ಟಿನಲ್ಲಿ ಸದಾ ವಿವಾದಲ್ಲೇ ಇರುವ ಭಟ್ಕಳದಲ್ಲಿ ಸರ್ವ ಜನಾಂಗದವರು ಸೇರಿ ದಾನದ ಮೂಲಕ ಸರಕಾರಿ ಆಸ್ಪತ್ರೆಯನ್ನು ಖಾಸಗಿ ಆಸ್ಪತ್ರೆಗಿಂತ ಉತ್ತಮವಾಗಿ ನಿರ್ಮಿಸಿದ್ದಾರೆ. ಸರ್ಕಾರದ ಮೇಲೆ ನಿರ್ಬರವಾಗದೆ ಬಡವರಿಗಾಗಿ ಒಂದು ಸುಸಜ್ಜಿತ ಆಸ್ಪತ್ರೆ ನಿರ್ಮಿಸುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದ್ದಾರೆ. 
 

Latest Videos
Follow Us:
Download App:
  • android
  • ios