ಚಾಮರಾಜನಗರ(ಮಾ.08): ಪೌರತ್ವ ಬಹಿಷ್ಕರಿಸೋಣ, ಏನಾಗುತ್ತೋ ನೋಡೋಣ. ನಾಗರಿಕತ್ವ ನಮ್ಮ ಹಕ್ಕು ನಮ್ಮ ದೇಶದಲ್ಲಿ ವಾಸಿ ಮಾಡಲು ಯಾವ ದೊಣ್ಣೆ ನಾಯಕ ಅಪಣ್ಣೆ ಬೇಕಿಲ್ಲ ಎಂದು ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಪ್‌ ಇಂಡಿಯಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್‌ ಮಜೀದ್‌ ಹೇಳಿದ್ದಾರೆ.

ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ಎನ್‌ಪಿಆರ್‌, ಸಿಎಎ, ಎನ್‌ಆರ್‌ಸಿ ವಿರೋಧಿಸಿ ಸಂವಿಧಾನ ಪ್ರಚಾರ ಸಮಿತಿ ವೇದಿಕೆ ಮತ್ತು ಇಸ್ಲಾಹುಲ್‌ ಮುಸ್ಲಿಮೀನ್‌ ಹಾಗೂ ಸಂವಿಧಾನ ಸಂರಕ್ಷಣಾ ವೇದಿಕೆ ಸಹಯೋಗದಲ್ಲಿ ನಡೆದ ಸಂವಿಧಾನ ಸಂರಕ್ಷಣಾ ಸಮಾವೇಶದಲ್ಲಿ ಅವರು ಮಾತನಾಡಿದರು. ಗಾಂಧಿ ಕೊಂದ ಸಿದ್ಧಾಂತ ದೇಶವನ್ನು ವಿಭಜನೆ ಮಾಡುವ ಸಿದ್ಧಾಂತವೇ ಮನುಸ್ಮೃತಿ ಸಿದ್ಧಾಂತ. ಈ ಸಿದ್ಧಾಂತ ದೇಶಕ್ಕೆ ಅಪಾಯಕಾರಿ. ಈ ಸಿದ್ಧಾಂತವಿಟ್ಟುಕೊಂಡಿರುವ ಆರ್‌ಎಸ್‌ಎಸ್‌ ಹಿಡಿತದಲ್ಲಿರುವ ಸರ್ಕಾರದ ಕಾಯ್ದೆಗಳಾಗಲಿ, ಆರ್‌ಎಸ್‌ಎಸ್‌ ಸಿದ್ಧಾಂತವನ್ನಾಗಿಲಿ ಭೂಮಿಯ ಕೆಳಗೆ ಹೂತು ಹಾಕುವ ವರೆಗೂ ಹೋರಾಟ ಮಾಡಬೇಕು ಎಂದರು.

ಕಾಂಗ್ರೆಸ್‌ ಪಕ್ಷದ ಸೋನಿಯಾ ಗಾಂಧಿ ಅವರು ಕಾಂಗ್ರೆಸ್‌ ಆಡಳಿತವಿರುವ 6 ರಾಜ್ಯಗಳು ಹಾಗೂ ಇತರೆ ಪಕ್ಷಗಳೊಂದಿಗೆ ಅಧಿಕಾರದಲ್ಲಿರುವ 2 ರಾಜ್ಯಗಳಲ್ಲಿ ಪೌರತ್ವ ಕಾಯ್ದೆ ಜಾರಿಗೆ ಬಿಡುವುದಿಲ್ಲ ಎಂದು ನಿರ್ಧಾರ ಮಾಡಬೇಕು. ಅಷ್ಟೇ ಅಲ್ಲ ರಾಜ್ಯದಲ್ಲಿ ಬಿಜೆಪಿ ಹೊರತು 100ಕ್ಕೂ ಹೆಚ್ಚು ಶಾಸಕರು ಇದ್ದು ಪೌರತ್ವ ಕಾಯ್ದೆ ವಿರುದ್ಧ ಬದ್ಧತೆಯನ್ನು ಪ್ರದರ್ಶಿಸಬೇಕು. ಯಾವ ಪಕ್ಷವೂ ನಮ್ಮ ರಕ್ಷಣೆ ಮಾಡದಿದ್ದರೆ ನಾವೇ ಪ್ರಾಣವನ್ನು ರಕ್ಷಣೆ ಮಾಡಿಕೊಳ್ಳಬೇಕಾಗುತ್ತದೆ. ಸ್ವಯಂ ರಕ್ಷಣೆ ಮಾಡಿಕೊಳ್ಳದಿದ್ದರೆ ಪರಿಹಾರವಿಲ್ಲ ಎಂದರು.