ನಾವು ಯಾರೊಂದಿಗೂ ಸಂಘರ್ಷ ಮಾಡುವುದಿಲ್ಲ : ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ
ಕೊಲೆಗಡುಗ ಅಂಗುಲಿಮಾಲನ ಪರಿವರ್ತನೆ ಮಾಡಿದ ಬೌದ್ಧ ಧಮ್ಮ ಅನುಸರಣೆ ಮಾಡುವ ನಾವು ಯಾರೊಂದಿಗೂ ಸಂಘರ್ಷ ಮಾಡುವುದಿಲ್ಲ. ನಾವು ಬಂದೂಕಿನಿಂದ ಭಾರತ ಕಟ್ಟುವುದಿಲ್ಲ. ಪೆನ್ನಿನಿಂದ ಸಾಮರಸ್ಯ ಸಾಧಿಸಿದವರು ಎಂದು ಉರಿಲಿಂಗಿಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ತಿಳಿಸಿದರು.

ಮೈಸೂರು : ಕೊಲೆಗಡುಗ ಅಂಗುಲಿಮಾಲನ ಪರಿವರ್ತನೆ ಮಾಡಿದ ಬೌದ್ಧ ಧಮ್ಮ ಅನುಸರಣೆ ಮಾಡುವ ನಾವು ಯಾರೊಂದಿಗೂ ಸಂಘರ್ಷ ಮಾಡುವುದಿಲ್ಲ. ನಾವು ಬಂದೂಕಿನಿಂದ ಭಾರತ ಕಟ್ಟುವುದಿಲ್ಲ. ಪೆನ್ನಿನಿಂದ ಸಾಮರಸ್ಯ ಸಾಧಿಸಿದವರು ಎಂದು ಉರಿಲಿಂಗಿಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ತಿಳಿಸಿದರು.
ನಗರದ ಪುರಭವನ ಆವರಣದಲ್ಲಿ ಮಹಿಷ ದಸರಾ ಆಚರಣಾ ಸಮಿತಿಯು ಶುಕ್ರವಾರ ಆಯೋಜಿಸಿದ್ದ ಮಹಿಷ ಉತ್ಸವ ಮತ್ತು ಧಮ್ಮ ದೀಕ್ಷಾ ಸಮಾರಂಭದಲ್ಲಿ ಮಾತನಾಡಿದ ಅವರು, ಮಹಿಷ ಆಚರಣೆ ಮುಖಾಂತರ ಹೊಸ ಇತಿಹಾಸ ದಾಖಲು ಮಾಡಿದ್ದೇವೆ. ಇದು ಧಮ್ಮ ದೀಕ್ಷೆ ಕಾರ್ಯಕ್ರಮ. ಮಹಿಷೋತ್ಸವ ಸಾಮರಸ್ಯದ ಕಾರ್ಯಕ್ರಮ. ಯಾರ ವಿರುದ್ಧವೂ ಅಲ್ಲ. ಇದು ಮೈತ್ರಿ ಪ್ರೀತಿ ಮಮತೆ ಸಾರುವ ಕಾರ್ಯಕ್ರಮ ಎಂದರು.
ಸಕಲ ಚರಾಜರ ವಸ್ತುಗಳಲ್ಲಿ ದೇವರಿದ್ದಾನೆ ಎನ್ನುವುದಾದರೆ ಮಹಿಷಾಸುರನಲ್ಲಿ ಯಾರಿದ್ದಾರೆ? ಎಂಥ ಢೋಂಗಿತನ ನಿಮ್ಮದು? ನಾವು ಬೆಂಕಿ ಹಚ್ಚುವವರಲ್ಲ, ಬೆಂಕಿ ಆರಿಸುವವರು. ಮಹಿಷಾ ದಸರಾ ವಿರೋಧಿಸಿದ ವ್ಯಕ್ತಿಯೊಬ್ಬರಿಗೆ ಧನ್ಯವಾದ ಅರ್ಪಿಸಬೇಕು. ಅವರಿಂದಾಗಿ ರಾಜ್ಯದ ಸ್ವಾಭಿಮಾನಿಗಳು ಒಂದೆಡೆ ಸೇರಿದ್ದಾರೆ. ಮಹದೇಶ್ವರಬೆಟ್ಟ, ಆದಿಚುಂಚನಗಿರಿ ಕುರಿತು ಜನರಿಗೆ ತಪ್ಪು ಸಂದೇಶ ರವಾನಿಸುತ್ತಿದ್ದಾರೆ. ನಾವೆಂದೂ ನಿಮ್ಮಂತೆ ಇತಿಹಾಸ ತಿರುಚುವುದಿಲ್ಲ ಎಂದು ಅವರು ತಿರುಗೇಟು ನೀಡಿದರು.
ಮಹಿಷಾನಾಡು ಇತ್ತು
ಇತಿಹಾಸಕಾರ ಡಾ. ತಲಕಾಡು ಚಿಕ್ಕರಂಗೇಗೌಡ ಮಾತನಾಡಿ, ಭರತ ಖಂಡ ಮಹಿಷಾ ನಾಡು. ಭರತ ಖಂಡ ಎಮ್ಮೆಗಳ ನಾಡು ಹೌದು. ಕ್ರಿ.ಶ. 975ರಲ್ಲಿ ಧಾರವಾಡದ ಕೊಡಲೂರಿನಲ್ಲಿ ಸಿಕ್ಕ ಮೂರು ಶಾಸನಗಳಲ್ಲಿ ಮಹಿಷೂರಿನ ಉಲ್ಲೇಖ ಇದೆ. ಭಾಗಮತಿ ದಿಣ್ಣೆ ಶಾಸನದಲ್ಲಿ ಚಾಮುಂಡಿಬೆಟ್ಟದ ಉಲ್ಲೇಖವಿದೆ. ಇದರ ಪ್ರಕಾರ ದಕ್ಷಿಣದಲ್ಲಿ ಕಾವೇರಿ, ಉತ್ತರದಲ್ಲಿ ಲೋಕಾಪಾವನಿ ಮಧ್ಯದಲ್ಲಿ ಮಹಿಷೂರು ಇದೆ ಎಂದರು.
ಚಾಮುಂಡಿಬೆಟ್ಟದ ಮಹಾಬಲ ದೇವಸ್ಥಾನದಲ್ಲಿ ಸಿಕ್ಕ ಮಾಹಿತಿ ಪ್ರಕಾರ ಮೂವರು ಮಹಿಳೆಯರು ಅತಿ ಹೆಚ್ಚು ದಾನ ಧರ್ಮ ಮಾಡುತ್ತಿದ್ದರು. ಅವರು ಶೀಲವಂತರಾಗಿದ್ದರು. ರಾಮರಾಜ್ಯದ ಪರಿಕಲ್ಪನೆ ಸಾಕಾರಗೊಂಡಿತ್ತು. ಇದಕ್ಕೂ ಹಿಂದೆ 1ನೇ ಶತಮಾನದಲ್ಲಿ ಚಾಮುಂಡಿಬೆಟ್ಟ ಜೈನತ ಶಾಂತಿಯ ತಾಣವಾಗಿತ್ತು ಎಂದು ಅವರು ಹೇಳಿದರು.
ವಿಜಯನಗರ ಅರಸರ ಕಾಲದಲ್ಲಿ ಮಹಿಷಾನಾಡು ಹೊಯ್ಸಳ ದೇಶವಾಗಿ ಬದಲಾಯಿತು. ಅಲ್ಲಿಂದಲೇ ಮಹಿಷಾ ವಿರೋಧಿ ಮನಸ್ಥಿತಿ ಆರಂಭವಾಗಿದೆ. ನಂತರ ದ್ವಾರಕದಿಂದ ಬಂದ ಯದುವಂಶೀಯರಿಗೆ ರಕ್ಷಣೆ ಸಿಕ್ಕಿದೆ. ಆನಂತರ ಚಾಮುಂಡಿಬೆಟ್ಟದ ಕಲ್ಪನೆ ಬಂದಿದೆ. 500 ವರ್ಷಗಳ ಹಿಂದೆ, ಪುರಾಣ ಲಕ್ಷಾಂತರ ವರ್ಷವಾಗಿದೆ ಎಂಬುದೆಲ್ಲಾ ಸುಳ್ಳು ಎಂದರು.
ಮಹಿಷಾ ನಾಡು ಇತ್ತು ಎನ್ನುವುದಕ್ಕೆ ಶಾಸನಗಳ ಅಧಿಕೃತ ಮಾಹಿತಿ ಇದೆ. ಚಾಮುಂಡೇಶ್ವರಿ ವಲಸೆ ಬಂದ ದೇವತೆ. ಚಾಮುಂಡೇಶ್ವರಿಗೆ ನರಬಲಿ ಕೊಡಲಾಗುತ್ತಿತ್ತು. ಇದನ್ನು ನಿಲ್ಲಿಸಿದವನು ಹೈದರಾಲಿ. ಡಾ. ಅಂಬೇಡ್ಕರ್ ಬರುವ ತನಕ ಸುಳ್ಳುಗಳನ್ನೇ ನಂಬಿದೆವು. ಸುಳ್ಳು ಯಾವುದು ಗೊತ್ತಾಯಿತು. ಕೋಮುವಾದಿಗಳದ್ದು ಕೆಮಿಸ್ಟ್ರಿಯ ಜ್ಞಾನ. ಇದು ಕಾಲ ಅಥವಾ ಪ್ರದೇಶಕ್ಕೆ ತಕ್ಕಂತೆ ಬದಲಾಗುತ್ತದೆ. ಅಂಬೇಡ್ಕರ್ ಅವರದು ಗಣಿತದ ಜ್ಞಾನ. ಚಂದ್ರಲೋಕಕ್ಕೆ ಹೋದರೂ ಬದಲಾಗುವುದಿಲ್ಲ ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಎದುರು ಜಿರಲೆ, ತಿಗಣೆ, ಇಲಿ ಸಮಾನವಾಗಿ ಓಡಾಡುವವರನ್ನು ಲೆಕ್ಕಕ್ಕೆ ಇಟ್ಟುಕೊಳ್ಳಬಾರದು. ಮೋದಿಗೆ ಸವಾಲು ಹಾಕುವ ನಾಯಕನನ್ನು ಸೃಷ್ಟಿ ಮಾಡೋಣ. ಜೀತಗಾರರು ಬೇಡ. ಸರಿ ಸಮಾನಾಗಿ ಮಾತಾಡುವ ವೀರಾಧಿ ವೀರರನ್ನು ಆಯ್ಕೆ ಮಾಡೋಣ ಎಂದರು.
ಅಧ್ಯಯನದ ಕೊರತೆ
ನಿವೃತ್ತ ಪ್ರಾಧ್ಯಾಪಕ ಜೆ.ಎಸ್. ಪಾಟೀಲ್ ಮಾತನಾಡಿ, ಮಹಿಷಾ ಅಸಹ್ಯ, ಅಪದ್ಧ ಎನ್ನುವವರು ಕಿಡಿಗೇಡಿಗಳು. ಅವರು ಇತಿಹಾಸ ಅಧ್ಯಯನ ಮಾಡುವುದಿಲ್ಲ. ಬಲಪಂಥೀಯರಲ್ಲಿ ಅಧ್ಯಯನದ ಕೊರತೆ ಇರುತ್ತದೆ. ಬುದ್ಧಿ ಜೀವಿಗಳೂ ಇರುವುದಿಲ್ಲ.
ತಮ್ಮ ಸಂಸ್ಕೃತಿ ಅಸಹ್ಯ ಎನ್ನುವವರು ತಮ್ಮ ಸಂಸ್ಕೃತಿಯ ಬಗ್ಗೆಯೂ ತಿಳಿದುಕೊಳ್ಳಬೇಕು. ಸರ್ವಜ್ಞರು ತ್ರಿಪದಿಗಳನ್ನು ಓದಬೇಕು ಎಂದು ಹೇಳಿದರು.
ಹೊಸ ಮಾದರಿ ಪಠ್ಯಕ್ರಮ ರೂಪಿಸಬೇಕು. ಬಹುಜನ ಇತಿಹಾಸ, ಜೀವನ ಕ್ರಮ, ತತ್ವಶಾಸ್ತ್ರದ ಬಗ್ಗೆ ಅಧ್ಯಯನ ಮಾಡಬೇಕು. ಸೈದ್ಧಾಂತಿಕ ವಿರೋಧಿಗಳನ್ನು ಸೋಲಿಸಬೇಕು ಎಂದು ನುಡಿದರು.
ಚಿಂತಕ ಪ್ರೊ. ಮಹೇಶಚಂದ್ರ ಗುರು ಸಂವಿಧಾನ ಪ್ರಸ್ತಾವನೆ ಓದಿದರು. ಬೋಧಿದತ್ತ ಬಂತೇಜಿ ಧಮ್ಮ ದೀಕ್ಷಾ ಬೋಧಿಸಿದರು. ಅಮ್ಮ ರಾಮಚಂದ್ರ ತಂಡದವರು ಭೀಮಗೀತೆ ಹಾಡಿದರು. ತುಂಬಲ ರಾಮಣ್ಣ ನಿರ್ಣಯ ಮಂಡಿಸಿದರು.
ಚಿಂತಕ ಪ್ರೊ.ಕೆ.ಎಸ್. ಭಗವಾನ್, ಪ್ರೊ. ನಂಜರಾಜೇ ಅರಸ್, ಮಾಜಿ ಮೇಯರ್ ಪುರುಷೋತ್ತಮ್, ಹ.ರಾ. ಮಹೇಶ್, ಭಾಸ್ಕರ್ ಪ್ರಸಾದ್, ಬಿ.ಸಿ. ಇಂದ್ರಮ್ಮ, ಸಿದ್ಧಸ್ವಾಮಿ, ಅಹಿಂದ ಜವರಪ್ಪ, ಬೆಟ್ಟಯ್ಯ ಕೋಟೆ, ಹರಿಹರ ಆನಂದಸ್ವಾಮಿ, ಹೊಸೂರು ಕುಮಾರ್, ದ್ಯಾವಪ್ಪನಾಯಕ, ಆರ್. ನರೇಂದ್ರ, ಶಂಭುಲಿಂಗಸ್ವಾಮಿ, ವಿನೋದ್, ಶಿವಸ್ವಾಮಿ, ಆಲಗೂಡು ಶಿವಕುಮಾರ್, ಕಲ್ಲಹಳ್ಳಿ ಕುಮಾರ್, ಮಹೇಶ್, ಮಾಯಿಗೌಡ, ಡಾ.ಬಿ.ಜೆ. ವಿಜಯ್ ಕುಮಾರ್, ಪಿ. ರಾಜು ಮೊದಲಾದವರು ಇದ್ದರು. ಡಾ. ಕೃಷ್ಣಮೂರ್ತಿ ಚಮರಂ ನಿರೂಪಿಸಿದರು.
ಮಹಿಷಾ ಉತ್ಸವವೂ ಸತ್ಯ ಹೇಳುವ ಕಾರ್ಯಕ್ರಮವಾಗಿದೆ. ಮಹಿಷಾ ಕುರಿತು ಶ್ರೀಲಂಕಾ, ಕಾಂಬೋಡಿಯಾ, ಜಪಾನ್, ಚೀನಾ, ತೈವಾನ್, ಥಾಯ್ಲೆಂಡ್ ಗಳಲ್ಲಿ ಉಲ್ಲೇಖಗಳಿವೆ. ತ್ರಿಪಿಟಿಕಾ, ಶ್ರೀಲಂಕಾದ ಮಹಾವಂಶ ಕೃತಿಗಳಲ್ಲಿ ಉಲ್ಲಖವಿದೆ. ಬುದ್ಧರ ಜಾತಕ ಕತೆಗಳಲ್ಲಿ ಮಹಿಷಾ ರಾಜರ, ಹರಹಂತ ಮಹದೇವ ತೇರರ ಉಲ್ಲೇಖವಿದೆ. ಮಹಿಷಾ ದಸರಾ ಯಾರ ವಿರುದ್ಧ ಅಥವಾ ದ್ವೇಷದಿಂದ ಮಾಡುತ್ತಿಲ್ಲ. ಮೈತ್ರಿ, ಕರುಣೆಯಿಂದ ಆಚರಿಸುತ್ತಿದ್ದೇವೆ. ಇತರೆ ಧರ್ಮಗಳಲ್ಲಿ ಸತ್ಯ ಇದ್ದರೆ ಒಪ್ಪಿಕೊಳ್ಳುವಂತೆ ಬುದ್ಧರೇ ಹೇಳಿದ್ದಾರೆ.
- ಬೋಧಿದತ್ತ ಬಂತೇಜಿ, ಬೌದ್ಧ ಬಿಕ್ಕು
----
ನಮಗೆ ರಕ್ತಕ್ರಾಂತಿ ಮುಖ್ಯವಲ್ಲ. ಶಾಂತಿ ಮುಖ್ಯ. ಸ್ವಂತ ಖರ್ಚಿನಿಂದ ರಾಜಕಾರಣಿಯ ಬೆಂಬಲವಿಲ್ಲದೇ ಜನಸ್ತೋಮ ನೆರೆದಿದೆ. ಈ ಮೂಲಕ ನಮ್ಮ ಶಕ್ತಿ ಇಡೀ ರಾಜ್ಯಕ್ಕೆ ಪ್ರದರ್ಶನವಾಗಿದೆ. ಇದು ದೊಡ್ಡ ಸಂದೇಶ ನೀಡಿದೆ.
- ಪುರುಷೋತ್ತಮ್, ಮಾಜಿ ಮೇಯರ್
----
ಮಹಿಷಾ ದಸರಾವನ್ನು ಮುಂದಿನ ವರ್ಷ ಬೆಂಗಳೂರಿನಲ್ಲಿ ಆಚರಿಸುತ್ತೇವೆ. ರಾಜ್ಯದ 31 ಜಿಲ್ಲೆಗಳಲ್ಲೂ ಆಚರಿಸಬೇಕು.
- ಭಾಸ್ಕರ್ ಪ್ರಸಾದ್, ಹೋರಟಾಗರ
ಎರಡು ನಿರ್ಣಯ
ಪ್ರತಿ ವರ್ಷ ಅ.14 ರಂದು ಮಹಿಷಾ ಉತ್ಸವ ಮತ್ತು ಧಮ್ಮ ದೀಕ್ಷ ಕಾರ್ಯಕ್ರಮ ಮಾಡಲು ಹಾಗೂ ರಾಜ್ಯ ಸರ್ಕಾರಕ್ಕೆ ಬೌದ್ಧ ಪ್ರಾಧಿಕಾರ ರಚಿಸುವಂತೆ ಒತ್ತಾಯಿಸಲು ನಿರ್ಣಯಿಸಲಾಯಿತು.