ಬಿಜೆಪಿ ಆರ್‌ಎಸ್‌ಎಸ್ ದ್ವೇಷ ರಾಜಕಾರಣದ ಯಶಸ್ವಿಗೆ ನಾವೇ ಕಾರಣ: ಯೋಗೇಂದ್ರ ಯಾದವ್
ಬಿಜೆಪಿ ಆರ್ ಎಸ್‌ಎಸ್ ದ್ವೇಷ ರಾಜಕಾರಣದಲ್ಲಿ ಯಶಸ್ವಿಯಾಗಲು ನಮ್ಮ ವೈಫಲ್ಯ ಕೂಡ ಇದೆ.
ಉಡುಪಿ (ಆ.20): ಇವತ್ತು ಮೊಬೈಲ್ ನಲ್ಲಿ ವಾಟ್ಸಪ್ ನಂತಹ ಸಾಧನಗಳಿಂದ ಈ ದೇಶದಲ್ಲಿ ದ್ವೇಷ ಹಬ್ಬಿಸಲಾಗುತ್ತಿದೆ. ಆದುದರಿಂದ ನಾವು ದೇಶದಲ್ಲಿ ಸಂವಹನದ ಮುಖಾಂತರವೇ ದ್ವೇಷ ಅಳಿಸುವ ಕಾರ್ಯ ಮಾಡಬೇಕು. ಈ ಸುಳ್ಳಿನ ಸಾಮ್ರಾಜ್ಯ ಮುರಿಯಲು ಸಂವಹನ ಸಾಧನವನ್ನು ಉಪಯುಕ್ತ ರೀತಿಯಲ್ಲಿ ಬಳಸಬೇಕು. ಟ್ರೋಲ್ ಅರ್ಮಿಯ ವಿರುದ್ಧ ಟ್ರುತ್ (ಸತ್ಯದ) ಆರ್ಮಿ ಬಳಸಬೇಕಾಗಿದೆ ಎಂದು ನವದೆಹಲಿ ಸ್ವರಾಜ್ ಇಂಡಿಯಾ ಮುಖಂಡ ಹಾಗೂ ರಾಜಕೀಯ ತಜ್ಞ ಯೋಗೇಂದ್ರ ಯಾದವ್ ಹೇಳಿದ್ದಾರೆ.
ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ಉಡುಪಿಯ ಮಣಿಪಾಲ್ ಇನ್ ಹೊಟೇಲ್ ಸಭಾಂಗಣದಲ್ಲಿ ಇಂದು ನಡೆದ ಸಮಾನ ಮನಸ್ಕರ ಸಭೆಯಲ್ಲಿ 'ದೇಶದ ಭವಿಷ್ಯ ಕ್ಕಾಗಿ ನಾವು' ವಿಷಯದ ಕುರಿತು ಅವರು ಮಾತನಾಡುತ್ತಿದ್ದರು. ಬಿಜೆಪಿ ಆರ್ ಎಸ್‌ಎಸ್ ದ್ವೇಷ ರಾಜಕಾರಣದಲ್ಲಿ ಯಶಸ್ವಿಯಾಗಲು ನಮ್ಮ ವೈಫಲ್ಯ ಕೂಡ ಇದೆ. ನಾವು ಕಳೆದ 70 ವರ್ಷದಲ್ಲಿ ನಾವು ಮಾಡಿದ್ದೇನು ಎಂಬುವುದನ್ನು ಪ್ರಶ್ನಿಸಬೇಕು. ಆ ಕುರಿತು ಅವಲೋಕಿಸಬೇಕಾದ ಅಗತ್ಯವಿದೆ. ನಾವು ಹಲವು ತಪ್ಪುಗಳನ್ನು ಮಾಡಿದ್ದೇವೆ. ದೊಡ್ಡ ದೊಡ್ಡ ಜಾತ್ಯಾತೀತರು ಇಂಗ್ಲಿಷ್ ನಲ್ಲಿ ಮಾತನಾಡುತ್ತಾರೆ. ಇಲ್ಲಿನ ಜನರ ಭಾಷೆಯಲ್ಲಿ ಮಾತನಾಡಬೇಕಾಗಿದೆ ಎಂದರು.
ನಮ್ಮ ದೊಡ್ಡ ಸಂಪತ್ತಾದ ರಾಷ್ಟ್ರೀಯವಾದವನ್ನು ಅವರಿಗೆ ಬಿಟ್ಟು ಕೊಟ್ಟೆವು. ಇವತ್ತು ಅವರು ನಮಗೆ ಅಂದೋಲನ ಜೀವಿಯೆಂದು ಹಂಗಿಸುತ್ತಾರೆ. ಸ್ವಾತಂತ್ರ್ಯಕ್ಕಾಗಿ ಮಡಿಯದ ಜನ ಇಂದು ಸ್ವಾತಂತ್ರ್ಯದ ಹಕ್ಕುದಾರರಾಗಿ ಮುಂದೆ ಬರುತ್ತಾರೆ. ಇದಕ್ಕೆ ನಾವೆ ಹೊಣೆಗಾರರಾಗಿದ್ದೇವೆ. ಮತ್ತೆ ನಾವು ಆ ರಾಷ್ಟ್ರೀಯವಾದವನ್ನು ವಾಪಸು ಪಡೆಯಬೇಕು. 2024 ಹೋರಾಟ ಮಾತ್ರ ನಮ್ಮ ಎದುರು ಇರುವುದಲ್ಲ ಇಂದು ದೀರ್ಘ ಕಾಲದ ಹೋರಾಟ. .ನಮ್ಮ ಬಳಿ ಸ್ವಾತಂತ್ರ್ಯ ಆಂದೋಲನದ ಇತಿಹಾಸ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಇದೆ. ಇದು ಮುಂದಿನ ಮಕ್ಕಳ ಭವಿಷ್ಯ ಉಳಿಸುವ ಸಮಯವಾಗಿದೆ. ನಾವು ಏನನ್ನು ಉದ್ವೇಗದಿಂದ ಮಾಡದೆ ಸಂಯಮದಿಂದ ದೇಶ ಕಟ್ಟುವ ಕೆಲಸ ಮಾಡಬೇಕಾಗಿದೆ. ಈ ದೇಶವನ್ನು ಉಳಿಸುವ ಪ್ರಯತ್ನ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಇವತ್ತು ಹರಡುತ್ತಿರುವ ದ್ವೇಷ ನೈಸರ್ಗಿಕ ಕ್ರಿಯೆಯಲ್ಲ. ಇದು ಸಾಮಾನ್ಯವೂ ಅಲ್ಲ. ಇದನ್ನು ಮಾಡಿಸಲಾಗುತ್ತಿದೆ. ಇದರ ಹಿಂದೆ ರಾಜಕೀಯ ಇದೆ. ಆದ್ದರಿಂದ ನಾವು ರಾಜಕೀಯದಿಂದ ಹಿಂದೆ ಸರಿಯುವಂತಿಲ್ಲ. ನಾವು ರಾಜಕೀಯವನ್ನು ಸರಿ ಪಡಿಸುವ ಪ್ರಯತ್ನದ ಭಾಗವಾಗಿ ಸಕ್ರಿಯರಾಗಬೇಕಾದ ಅವಶ್ಯಕತೆ ಇದೆ. ನಾವು ರಾಜಕೀಯವನ್ನು ನಿರ್ಲಕ್ಷ್ಯ ಮಾಡದೆ ಇದರ ಕಡೆ ಗಮನ ಹರಿಸಬೇಕು. ರಾಜಕೀಯದ ಕಡೆ ನಾವು ಹೆಜ್ಜೆ ಇಡದೆ ಈ ಕೆಲಸ ಮಾಡಲು ಸಾಧ್ಯವಿಲ್ಲ. ಇವತ್ತು ನಮ್ಮ ಮಕ್ಕಳ ಭವಿಷ್ಯ ರಾಜಕೀಯದಿಂದ ನಿರ್ಧಾರ ವಾಗುತ್ತಿದೆ. ಗೂಂಡಾಗಳು ರಾಜಕೀಯಕ್ಕೆ ಬರುತ್ತಿರುವ ಈ ಕಾಲಘಟ್ಟದಲ್ಲಿ ಒಳ್ಳೆಯ ಜನರು ಇದರತ್ತ ಮುಖ ಮಾಡಬೇಕು ಎಂದು ತಿಳಿಸಿದರು.
ಕೃಷಿ ಸಚಿವರ ಲಂಚ ಬೇಡಿಕೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಸಿಐಡಿ: ಮಂಡ್ಯ ಮಾತ್ರವಲ್ಲ, ಮೈಸೂರಿನವರ ಕೈವಾಡವೂ ಇದೆ
ಅಂಕಣಕಾರ, ಅಝೀಂ ಪ್ರೇಮ್ ಜಿ ವಿಶ್ವವಿದ್ಯಾಲಯ ದ ಪ್ರಾಧ್ಯಾಪಕ ಎ.ನಾರಾಯಣ ಬೆಂಗಳೂರು ಮಾತನಾಡಿ, ರಾಜಕೀಯ ಎಂಬುದು ಕೇವಲ ಚುನಾವಣೆಗೆ ಸಿಮೀತವಾಗಿಲ್ಲ ಎಂಬುದು ಪ್ರಸ್ತುತ ವಿದ್ಯಮಾನ ನೋಡಿದರೆ ಅರ್ಥವಾಗುತ್ತದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜಾತ್ಯತೀತ ಪಕ್ಷಗಳು ಗೆದ್ದರೂ ಈಗಾಗಲೆ ಹಬ್ಬಿದ ದ್ವೇಷ ಅಳಿಸಲು ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ಪ್ರಯತ್ನದ ಭಾಗವಾಗಿ ನಾವು ಇನ್ನಷ್ಟು ಕಾರ್ಯ ಪ್ರವೃತರಾಗಬೇಕು. ನಮ್ಮಲ್ಲಿಯೇ ಪರಿಹಾರಗಳನ್ನು ನಾವು ಕಂಡು ಕೊಳ್ಳಬೇಕು ಎಂದರು.
ದ್ವೇಷ ರಾಜಕಾರಣ ತಿರಸ್ಕರಿಸುವ ದೊಡ್ಡ ಜನ ಸಮೂಹ ಸೃಷ್ಟಿಯಾಗುವರೆಗೆ ಈ ವಾತಾವರಣ ಬದಲಾಯಿಸಲು ಸಾಧ್ಯವಾಗುದಿಲ್ಲ. ಆದರೆ ನಾವು ಸಂವಿಧಾನದ ಆಶಯ ತಿಳಿಸುವಲ್ಲಿ ಸೋತಿದ್ದೇವೆ. ಈ ದೇಶ ದೇಶವಾಗಿ ಉಳಿಯಲು ಸಂವಿಧಾನದ ಪ್ರಾಧಾನ್ಯತೆಯನ್ನು ಜನರುಗೆ ತಿಳಿಸಬೇಕಾಗಿದೆ. ಇಲ್ಲದಿದ್ದರೆ ಅವರು ಹೇಳುವ ವಿಚಾರದಲ್ಲಿ ಈ ದೇಶ ಉಳಿಯುವುದಿಲ್ಲ. ಬಿಜೆಪಿಯವರು ಇಡೀ ಸಿದ್ಧಾಂತವನ್ನು ಪೊಳ್ಳು ವಾದದ ಮೇಲೆ ಕಟ್ಟಿದ್ದಾರೆ. ಇದು ಹೆಚ್ಚು ದಿನ ಬಾಳುದಿಲ್ಲ. ಅವರಲ್ಲಿ ಸುಳ್ಳು ಇದ್ದರೆ ನಮ್ಮಲ್ಲಿ ಸತ್ಯ ಇದೆ. ಆದುದರಿಂದ ಇವರ ಧ್ವೇಷದ ರಾಜಕಾರಣ ದ ವಿರುದ್ದ ನಾವು ಸತ್ಯ ಮತ್ತು ಸಂವಿಧಾನವನ್ನು ಅಸ್ತ್ರವಾಗಿ ಬಳಸಬೇಕು. ಸಂವಿಧಾನದ ಮೌಲ್ಯ ವನ್ನು ಹೊಸ ತಲೆಮಾರಿಗೆ ತಿಳಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.
ಬಡವರು ರೈತರ ಕಷ್ಟ ಅರಿತಿದ್ದು ದೇವರಾಜು ಅರಸು ಮಾತ್ರ: ಸಚಿವೆ ಶೋಭಾ ಕರಂದ್ಲಾಜೆ
ಎದ್ದೇಳು ಕರ್ನಾಟಕ ಸಂಯೋಜನಾ ಸಮಿತಿಯ ಸದಸ್ಯ ಅಕ್ಬರ್ ಅಲಿ ಸಮಾರೋಪ ಭಾಷಣ ಮಾಡಿದರು. ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ದಸಂಸ ಮುಖಂಡರಾದ ಮಂಜುನಾಥ್ ಗಿಳಿಯಾರ್, ಹಿರಿಯ ಚಿಂತಕ ಪ್ರೊ.ಫಣಿರಾಜ್, ಫಾ.ವಿಲಿಯಂ ಮಾರ್ಟಿಸ್, ಲೂವಿಸ್ ಲೋಬೋ ಮೊದಲಾದವರು ಉಪಸ್ಥಿತರಿದ್ದರು.