ಕೊರೋನಾದಿಂದ ವ್ಯಾಪಾರಿಗಳ ಬದುಕು ಮೂರಾಬಟ್ಟೆ: ಗ್ರಾಹಕರಿಲ್ಲದೇ ಕೊಳೆಯುತ್ತಿದೆ ಕಲ್ಲಂಗಡಿ..!
ಬಳ್ಳಾರಿ ಜಿಲ್ಲೆಯಲ್ಲಿ ಲಾಕ್‌ಡೌನ್ ಪರಿಣಾಮದಿಂದಾಗಿ ಕಳೆಗುಂದಿದ ಕಲ್ಲಂಗಡಿ ಹಣ್ಣಿನ ಮಾರಾಟ| ಕಲ್ಲಂಗಡಿ ಹಣ್ಣಿನ ವ್ಯಾಪಾರವನ್ನೇ ನಂಬಿಕೊಂಡಿದ್ದ ವ್ಯಾಪಾರಿಗಳ ಬದುಕು ಮಾತ್ರ ಮೂರಾಬಟ್ಟೆಯಾಗಿದೆ| ಆರ್ಥಿಕ ಸಂಕಷ್ಟದಿಂದ ಹೊರಬಾರದ ಸ್ಥಿತಿ ಎದುರಿಸುವಂತಾಗಿದೆ|
ಸಿದ್ಧಲಿಂಗಸ್ವಾಮಿ ವೈ.ಎಂ.
ಬಳ್ಳಾರಿ(ಮೇ.02): ಬೇಸಿಗೆ ಬಂತೆಂದರೆ ಸಾಕು ಬಿಸಿಲನಾಡು ಬಳ್ಳಾರಿಯಲ್ಲಿ ಸಾಕಷ್ಟು ಬೇಡಿಕೆಯಿರುತ್ತಿದ್ದ ಕಲ್ಲಂಗಡಿ ಹಣ್ಣಿನ ವ್ಯಾಪಾರಕ್ಕೆ ಕೊರೋನಾ ವೈರಸ್ ಮಹಾಮಾರಿ ತಣ್ಣೀರೆರಚಿದೆ. ಹೌದು, ಜಿಲ್ಲೆಯಲ್ಲಿ ಲಾಕ್‌ಡೌನ್ ಪರಿಣಾಮದಿಂದಾಗಿ ಕಲ್ಲಂಗಡಿ ಹಣ್ಣಿನ ಮಾರಾಟ ಈ ಬಾರಿ ಕಳೆಗುಂದಿದ್ದು, ಕಲ್ಲಂಗಡಿ ಹಣ್ಣಿನ ವ್ಯಾಪಾರವನ್ನೇ ನಂಬಿಕೊಂಡಿದ್ದ ವ್ಯಾಪಾರಿಗಳ ಬದುಕು ಮಾತ್ರ ಮೂರಾಬಟ್ಟೆಯಾಗಿದೆ. ಆರ್ಥಿಕ ಸಂಕಷ್ಟದಿಂದ ಹೊರಬಾರದ ಸ್ಥಿತಿ ಎದುರಿಸುವಂತಾಗಿದೆ.
ಬೇಸಿಗೆ ಕಾಲ ಬಂದಾಗ ಪ್ರತಿದಿನ ಅತಿ ಹೆಚ್ಚು ಆದಾಯ ಗಳಿಸುತ್ತಿದ್ದ ವ್ಯಾಪಾರಿಗಳಿಗೆ ಹಾಕಿದ ಬಂಡವಾಳವೂ ಮರಳಿ ಬಾರದ ಸ್ಥಿತಿಗೆ ತಲುಪಿದೆ. ಅಂದಾಜು 2 ಲಕ್ಷ ರು.ಗಳಷ್ಟು ಹಾಕಿ ತಮಿಳುನಾಡಿನಿಂದ 17 ಟನ್‌ವುಳ್ಳ 1 ಲಾರಿಯಷ್ಟು ಹಣ್ಣುಗಳನ್ನು ತರಿಸಿಕೊಳ್ಳಲಾಗಿತ್ತು. ಆದರೆ 10 ಸಾವಿರಕ್ಕೂ ಕಡಿಮೆ ವ್ಯಾಪಾರವಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.
ಪೊಲೀಸರ ಒಳ್ಳೆ ಕೆಲಸ ನೋಡಿ , ಹಸುಗಳ ಹೊಟ್ಟೆ ತುಂಬಿಸಿದ ಕಲ್ಲಂಗಡಿ
ಕೊಳ್ಳುಗರಿಲ್ಲದೇ ಖಾಲಿ ಖಾಲಿ:
ಬಿಸಿಲಿನಿಂದ ಬಾಯಾರಿಕೆ, ಆಯಾಸ ನೀಗಿಸಿಕೊಳ್ಳಲು ಕಲ್ಲಂಗಡಿ ಹಣ್ಣಿನ ವ್ಯಾಪಾರದ ಸ್ಥಳಕ್ಕೆ ಗ್ರಾಹಕರು ಹುಡುಕಿಕೊಂಡು ಬರುತ್ತಿದ್ದರು. ಆದರೆ ಲಾಕ್‌ಡೌನ್‌ನಿಂದ ಜನರು ಮನೆಯಿಂದ ಹೊರಬಾರದ ಕಾರಣ ಕಲ್ಲಂಗಡಿ ವ್ಯಾಪಾರಿಗಳು ಖಾಲಿ ಕೂಡುವಂತಾಗಿದೆ.
ಪಾರ್ಸೆಲ್‌ಗೆ ಮಾತ್ರ ಅವಕಾಶ
ಕೋರೋನಾ ಎಫೆಕ್ಟ್‌ನಿಂದಾಗಿ ಕೇವಲ ಪಾರ್ಸೆಲ್‌ಗೆ ಮಾತ್ರ ಅವಕಾಶ ನೀಡಲಾಗಿದ್ದು, ಇದರಿಂದ ಪಾರ್ಸಲ್‌ಗೆ ಬಳಸುವ ಬಾಕ್ಸ್‌ನ ಬೆಲೆ 2 ರು.ನಿಂದ ನಾಲ್ಕಕ್ಕೆ ಏರಿದೆ. ಇದೂ ಸಹ ವ್ಯಾಪಾರಿಗಳಿಗೆ ನಷ್ಟವನ್ನುಂಟು ಮಾಡುತ್ತಿದೆ. ಜೊತೆಗೆ ಇಟ್ಟಜಾಗದಲ್ಲಿದ್ದ ಹಣ್ಣುಗಳು ಕೊಳೆಯಲಾರಂಭಿಸಿವೆ. ಈ ಮೊದಲು 10, 15ರು ಗೆ ಒಂದು ಪ್ಲೇಟ್‌ನಂತೆ ನೀಡುತ್ತಿದ್ದೆವು. ಇದರಿಂದ ನಮಗೆ ಉತ್ತಮ ವ್ಯಾಪಾರವಾಗುತ್ತಿತ್ತು. ಆದರೆ ಕನಿಷ್ಠ ವ್ಯಾಪಾರವೂ ಇಲ್ಲದೇ ಭಾರಿ ನಷ್ಟ ಅನುಭವಿಸುವಂತಾಗಿದೆ.
ಲಾಕ್‌ಡೌನ್‌ನಿಂದಾಗಿ ವ್ಯಾಪಾರವಾಗದೇ ದಿನೇ ದಿನೇ ಕಲ್ಲಂಗಡಿ ಹಣ್ಣುಗಳು ಕೊಳೆತು ಹೋಗುತ್ತಿವೆ. ಅವುಗಳನ್ನು ನೋಡಲಾಗದೇ ಬಿಡಾಡಿ ದನಗಳಿಗೆ ಹಾಕಲಾಗುತ್ತಿದೆ. ಹಣ್ಣಿನ ವ್ಯಾಪಾರವನ್ನೇ ನೆಚ್ಚಿಕೊಂಡಿರುವ ವ್ಯಾಪಾರಿಗಳು ತಮ್ಮ ಕೂಲಿಕಾರರಿಗೂ ಹಣ ನೀಡಲಾಗದೇ ತಲೆಮೇಲೆ ಕೈಹೊತ್ತು ಕೂರುವಂತಾಗಿದೆ.
ಈ ಮೊದಲು 25ರಿಂದ 30ರು. ಗಳಿಗೆ ಒಂದು ಕೆಜಿ ಇರುತ್ತಿದ್ದ ಕಲ್ಲಂಗಡಿ ಹಣ್ಣು ಇದೀಗ 10ರಿಂದ 12 ರು.ಗಳಿಗೆ ಕುಸಿತಗೊಂಡಿದೆ. ಗ್ರಾಹಕರೇ ಇಲ್ಲದ ಕಾರಣ ಕಲ್ಲಂಗಡಿ ಹಣ್ಣು ವ್ಯಾಪಾರವಾಗುತ್ತಿಲ್ಲ. ಅನಿವಾರ್ಯವಾಗಿ ತೀರಾ ಕಡಿಮೆ ಬೆಲೆಗೆ ಹಣ್ಣು ಮಾರಾಟ ಮಾಡುತ್ತಿವೆ ಎಂದು ತಮ್ಮ ಅಳಲು ವ್ಯಕ್ತಪಡಿಸುತ್ತಾರೆ ವ್ಯಾಪಾರಿಗಳು.
ಕೊರೋನಾ ಎಫೆಕ್ಟ್ ನಮ್ಮ ವ್ಯಾಪಾರವನ್ನೇ ಕಿತ್ತುಕೊಂಡಿದೆ. ಅಷ್ಟೇ ಅಲ್ಲ, ಹಾಕಿದ್ದ ಬಂಡವಾಳವೂ ಬಾರದೇ ತೀರಾ ಸಂಕಷ್ಟ ಎದುರಿಸುವಂತಾಗಿದೆ ಎಂದು ಕಲ್ಲಂಗಡಿ ವ್ಯಾಪಾರಿ ಸಲೀಂ ಅವರು ಹೇಳಿದ್ದಾರೆ.