ಸದ್ಯದಲ್ಲೇ ವಿಶ್ವೇಶ್ವರಯ್ಯ ನಾಲೆಗಳಿಗೆ ನೀರು: ಕೃಷಿ ಸಚಿವ ಚಲುವರಾಯಸ್ವಾಮಿ
ವಿಶ್ವೇಶ್ವರಯ್ಯ ನಾಲೆಗೆ ನೀರು ಹರಿಸುವ ಬಗ್ಗೆ ಸದ್ಯದಲ್ಲೇ ನಿರ್ಧಾರ ಕೈಗೊಳ್ಳಲಾಗುವುದು. ನಾಲಾ ಆಧುನೀಕರಣ ಕೆಲಸ ಮುಗಿಯುವವರೆಗೆ ಕಾಯುವುದಿಲ್ಲ. ಕಾಮಗಾರಿ ಮುಗಿಯವುದಕ್ಕೆ ಇನ್ನೂ ಸಮಯಾವಕಾಶ ಬೇಕು ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಮಂಡ್ಯ (ಜೂ.24): ವಿಶ್ವೇಶ್ವರಯ್ಯ ನಾಲೆಗೆ ನೀರು ಹರಿಸುವ ಬಗ್ಗೆ ಸದ್ಯದಲ್ಲೇ ನಿರ್ಧಾರ ಕೈಗೊಳ್ಳಲಾಗುವುದು. ನಾಲಾ ಆಧುನೀಕರಣ ಕೆಲಸ ಮುಗಿಯುವವರೆಗೆ ಕಾಯುವುದಿಲ್ಲ. ಕಾಮಗಾರಿ ಮುಗಿಯವುದಕ್ಕೆ ಇನ್ನೂ ಸಮಯಾವಕಾಶ ಬೇಕು ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ನಗರದ ಪ್ರವಾಸಿಮಂದಿರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ದೇವರ ಮೇಲೆ ನಂಬಿಕೆ ಇಟ್ಟಿದ್ದೇವೆ. ಉತ್ತಮ ಮಳೆಯಾಗಬಹುದೆಂಬ ನಿರೀಕ್ಷೆಯಲ್ಲಿದ್ದೇವೆ. ನೀರು ಬಿಡಲು ಯಾವುದೇ ಸಮಸ್ಯೆಯಾಗುವುದಿಲ್ಲವೆಂಬ ವಿಶ್ವಾಸದಲ್ಲಿದ್ದೇವೆ. ವ್ಯವಸಾಯದ ಉದ್ದೇಶಕ್ಕೆ ನೀರು ಬಿಡುವ ಕುರಿತಂತೆ ತೀರ್ಮಾನ ಮಾಡಲು ಈಗಲೇ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮಡಿಕೇರಿ ಕಡೆ ಉತ್ತಮ ಮಳೆಯಾದರೆ ಕೃಷ್ಣರಾಜಸಾಗರ ಜಲಾಶಯಕ್ಕೆ ಹೆಚ್ಚು ನೀರು ಹರಿದು ಬರಲಿದೆ. ಜುಲೈ ತಿಂಗಳೊಳಗೆ ೧೧೦ ಅಡಿ ನೀರು ಬಂದರೆ ಅನುಕೂಲವಾಗಲಿದೆ. ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ ನಾಲೆಗಳಿಗೆ ನೀರು ಹರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ನುಡಿದರು. ಮೂವರು ಡಿಸಿಎಂ ವಿಷಯ ಚರ್ಚೆಯಾಗುತ್ತಿರುವ ಬಗ್ಗೆ ಕೇಳಿದಾಗ, ಈ ಬಗ್ಗೆ ಯಾವುದೇ ಚರ್ಚೆ ಇಲ್ಲ. ಎಲ್ಲವನ್ನೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನಮ್ಮ ಪಕ್ಷದಲ್ಲಿ ಶಿಸ್ತು ಇದೆ. ಸಿಎಂ ಡಿಸಿಎಂ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಸಚಿವ ರಾಜಣ್ಣ ಜೊತೆ ಮಾತನಾಡುತ್ತೇನೆ. ಜಮೀರ್, ರಾಜಣ್ಣ ತುಂಬಾ ಆತ್ಮೀಯರು ಎಂದು ನುಡಿದರು.
ಸರ್ಕಾರ ಬೀಳುತ್ತದೆ ಎಂದು ಕೇಂದ್ರ ಸಚಿವ ಸೋಮಣ್ಣ ಕಾಯಲಿ. ಅವರಿಗೆ ರಾಜ್ಯ ಸರ್ಕಾರದ ಮೇಲೆ ಯಾಕೆ ಇಷ್ಟೊಂದು ಪ್ರೀತಿ. ನಾವು ೧೩೬ ಶಾಸಕರು ಇದ್ದೇವೆ. ಡೇಂಜರ್ ರೆನ್‌ನಲ್ಲಿ ಕೇಂದ್ರ ಸರ್ಕಾರ ಇದೆ. ಇವರು ಓವರ್ ಟೇಕ್ ಮಾಡಿ ಕೇಂದ್ರದಲ್ಲಿ ಮಂತ್ರಿ ಆಗಿದ್ದಾರೆ. ಉತ್ತಮ ಕೆಲಸ ಮಾಡಲಿ. ರಾಜ್ಯಕ್ಕೆ ಬೇಕಾದ ಅಭಿವೃದ್ಧಿ, ಅನುದಾನವನ್ನು ತರಲಿ. ಅದನ್ನು ಬಿಟ್ಟು ಸರ್ಕಾರ ಬೀಳಿಸುವ ಮಾತುಗಳನ್ನಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಕುಟುಕಿದರು.
ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳಲ್ಲ: ಸಚಿವ ಜಮೀರ್ ಅಹ್ಮದ್
ಚನ್ನಪಟ್ಟಣ ಉಪಚುನಾವಣೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಚನ್ನಪಟ್ಟಣಕ್ಕೆ ಗೆಲ್ಲುವ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ. ಸಿ.ಪಿ.ಯೋಗೇಶ್ವರ್ ಬಹಳ ಎತ್ತರಕ್ಕೆ ಬೆಳೆದಿದ್ದಾರೆ. ಅವರಿಗಿಂತ ಕುಮಾರಸ್ವಾಮಿ ಅವರು ಇನ್ನೂ ಎತ್ತರದಲ್ಲಿದ್ದಾರೆ. ಇಬ್ಬರೂ ಒಟ್ಟಿಗೆ ಸೇರಿದ್ದಾರೆ. ಅವರ ಎದುರು ನಾವು ತೊಡೆತಟ್ಟಲು ಆಗುವುದಿಲ್ಲ. ಜನರು ತೀರ್ಮಾನ ಮಾಡುತ್ತಾರೆ. ನಮ್ಮ ಅಭಿವೃದ್ಧಿಯನ್ನು ಜನರ ಮುಂದೆ ಇಡುತ್ತೇವೆ ಎಂದಷ್ಟೇ ಹೇಳಿದರು.