ಮಂಡ್ಯ(ಜು.19): ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಜು.28 ರಿಂದ ಕೃಷ್ಣರಾಜಸಾಗರ ಮತ್ತು ಕಬಿನಿ ಜಲಾಶಯಗಳ ಅಚ್ಚುಕಟ್ಟು ವ್ಯಾಪ್ತಿಯ ನಾಲೆಗಳಿಗೆ ನೀರು ಹರಿಸಲಾಗುವುದು ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ತಿಳಿಸಿದರು.

ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ ಜಲಾಶಯದ ಕಾವೇರಿ ಸಭಾಂಗಣದಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿ, ಕಬಿನಿ ಮತ್ತು ಕೃಷ್ಣರಾಜಸಾಗರದಲ್ಲಿರುವ ನೀರಿನ ಸಂಗ್ರಹ, ಬೆಳೆಗೆ ನೀರು ಹರಿಸುವ ಕುರಿತಂತೆ ಈ ವ್ಯಾಪ್ತಿಯ ಶಾಸಕರು, ಸಂಸದರು, ಜನಪ್ರತಿನಿಧಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿ ಜನಪ್ರತಿನಿಧಿಗಳ ಅಭಿಪ್ರಾಯದ ಮೇರೆಗೆ ಜು. 28ರಿಂದ ನಾಲೆಗಳಿಗೆ ನೀರು ಹರಿಸಲು ತೀರ್ಮಾನಿಸಲಾಗಿದೆ ಎಂದರು.

ಸಚಿನ್‌ ಪೈಲಟ್‌ ಬಣ ಶಾಸಕರು ಬೆಂಗಳೂರಿಗೆ ಶಿಫ್ಟ್‌?

ಕಬಿನಿ ಜಲಾಶಯದ ವ್ಯಾಪ್ತಿಯ ನಾಲೆಗಳ ದುರಸ್ತಿ ಕಾರ‍್ಯ ಕೈಗೊಳ್ಳಲಾಗಿದೆ. ಅದು ಇನ್ನೊಂದು ವಾರದೊಳಗೆ ಪೂರ್ಣಗೊಳ್ಳಲಿದೆ. ಕೃಷ್ಣರಾಜಸಾಗರ ಜಲಾಶಯ ವ್ಯಾಪ್ತಿಯ ನಾಲೆಗಳ ದುರಸ್ತಿ ಈಗಾಗಲೇ ಪೂರ್ಣಗೊಂಡಿದೆ. ಇಲ್ಲಿ ಯಾವುದೇ ಸಮಸ್ಯೆ ಇಲ್ಲ. ಹಾಗಾಗಿ ಜು.28ರಿಂದ ನಾಲೆಗಳಿಗೆ ನೀರು ಹರಿಸಲು ಯಾವುದೇ ಅಡ್ಡಿ ಅತಂಕಗಳಿಲ್ಲ ಎಂದು ಸ್ಪಷ್ಟಪಡಿಸಿದರು.

ನಾಲ್ಕು ವಾರದಲ್ಲಿ ಪಾವತಿ:

ನೀರಾವರಿ ಸಂಪರ್ಕ ಜಾಲವನ್ನು ಸಮರ್ಪಕವಾಗಿ ನಿರ್ವಹಿಸುವ, ನಾಲೆಗಳಲ್ಲಿ ನೀರಿನ ಹರಿವು, ವಿತರಣಾ ನಾಲೆಗಳಿಗೆ ಹರಿಸುವುದು ಸೇರಿದಂತೆ ವಿವಿಧ ಕೆಲಸ ಮಾಡುವ ನೀರಗಂಟಿಗಳಿಗೆ 6 ತಿಂಗಳಿಂದ ವೇತನ ಪಾವತಿಯಾಗದೆ ಸಂಕಷ್ಟದಲ್ಲಿದ್ದಾರೆ ಎಂದು ಶಾಸಕರು ಗಮನ ಸೆಳೆದಿದ್ದಾರೆ. ಈಗಾಗಲೇ ಅಧಿಕಾರಿಗಳು ಈ ಬಗ್ಗೆ ಹಣಕಾಸು ಇಲಾಖೆಗೆ ಮಾಹಿತಿ ನೀಡಿದ್ದು, ಸಂಬಂಧಿಸಿದ ಕಡತ ಹಣಕಾಸು ಇಲಾಖೆಯಲ್ಲಿದೆ. ನಾಲ್ಕು ವಾರಗಳೊಳಗೆ ನೀರಗಂಟಿಗಳಿಗೆ ವೇತನ ಮತ್ತು ಇತರೆ ಸೌಲಭ್ಯ ಕೊಡಿಸುವುದಾಗಿ ಭರವಸೆ ನೀಡಿದರು.

ಕ್ವಾರಂಟೈನ್‌ನಲ್ಲಿ ಇರಬೇಕಾದ ವ್ಯಕ್ತಿ ಹೋಟೆಲ್‌ ತೆರೆದಿದ್ದ..!

ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ ಮಾತನಾಡಿ, ಜು.28ರಿಂದ ಕೃಷ್ಣರಾಜಸಾಗರ ಜಲಾಶಯದ ಎಲ್ಲ ನಾಲೆಗಳಿಗೂ ನೀರು ಹರಿಸಲು ನಿರ್ಧರಿಸಲಾಗಿದ್ದು, ಕಟ್ಟು ನೀರು ಪದ್ಧತಿ ಅನುಸಾರವಾಗಿ ನೀರು ಹರಿಸಲು ತೀರ್ಮಾನಿಸಲಾಗಿದೆ ಎಂದರು.

ಈ ಬಾರಿ ಉತ್ತಮ ಮಳೆಯಾಗುವ ಆಶಾಭಾವನೆ ಇದೆ. ತಜ್ಞರು ಸಹ ಉತ್ತಮ ಮಳೆ ಬೀಳಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾವೇರಿ ಜಲಾನಯನ ವ್ಯಾಪ್ತಿಯ ಜಲಾಶಯಗಳಲಿ ನೀರಿನ ಸಂಗ್ರಹ ನೋಡಿಕೊಂಡು ಮುಂದೆ ನಿರ್ಧಾರ ಮಾಡಲಾಗುವುದು ಎಂದರು.

ಸಂಸದ ಪ್ರತಾಪಸಿಂಹ, ಶಾಸಕರಾದ ಜಿ.ಟಿ. ದೇವೇಗೌಡ, ಸಿ.ಎಸ್‌. ಪುಟ್ಟರಾಜು, ಎಂ. ಶ್ರೀನಿವಾಸ್‌, ಅನ್ನದಾನಿ, ರವೀಂದ್ರ ಶ್ರೀಕಂಠಯ್ಯ, ಚಿಕ್ಕಮಾದು, ಅಶ್ವಿನ್‌ಕುಮಾರ್‌, ಮಹೇಶ್‌, ಸುರೇಶ್‌ಗೌಡ, ವಿಧಾನ ಪರಿಷತ್‌ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಅಪ್ಪಾಜಿಗೌಡ, ಮೈಸೂರು ಜಿಲ್ಲಾಧಿಕಾರಿ ಅಭಿರಾಮ್‌ ಶಂಕರ್‌, ಮಂಡ್ಯ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್‌, ಜಿ.ಪಂ. ಸಿಇಓ ಕೆ. ಯಾಲಕ್ಕಿಗೌಡ, ಮಂಡ್ಯ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಡಾ. ವಿ.ಜೆ. ಶೋಭಾರಾಣಿ, ಕಾವೇರಿ ನೀರಾವರಿ ನಿಗಮದ ಎಂಜಿನಿಯರ್‌ಗಳು ಇತರೆ ಅಧಿಕಾರಿಗಳು ಇದ್ದರು.

1492 ನೀರಗಂಟಿಗಳ ನೇಮಕ

ಕಾವೇರಿ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸಲು 1492 ನೀರುಗಂಟಿಗಳ ಕೊರತೆ ಇದ್ದು, ಸರ್ಕಾರದೊಂದಿಗೆ ಮಾತುಕತೆ ನಡೆಸಿ ನೇಮಕಾತಿಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು. ಹಾಲಿ ಇರುವವರಿಗೆ ಅಗತ್ಯ ಸೌಲಭ್ಯಗಳನ್ನು ಕೊಡಿಸು ಬಗ್ಗೆಯೂ ತೀರ್ಮಾನಿಸಲಾಗುವುದು. ನೀರಿನ ಸಂಪರ್ಕ ಜಾಲದ ವ್ಯವಸ್ಥೆ ನೋಡಿಕೊಳ್ಳುವಲ್ಲಿ ನೀರುಗಂಟಿಗಳ ಪಾತ್ರ ದೊಡ್ಡದು. ಅವರಿಗೆ ಸೌಲಭ್ಯಗಳನ್ನು ಕೊಟ್ಟರೆ ಯಾವ ಸಮಸ್ಯೆಯೂ ಎದುರಾಗುವುದಿಲ್ಲ ಎಂದು ಸಚಿವ ಎಸ್‌.ಟಿ. ಸೋಮಶೇಖರ್‌ ಹೇಳಿದರು.