ಮಂಗಳೂರು(ಮಾ.15): ಪುಂಡರೀಕ ಯಾಗ, ಮಹಾವ್ರತ ದೀರ್ಘ ಸತ್ರ ಯಾಗ ಸೇರಿದಂತೆ ನಿರಂತರ ನಡೆಯುತ್ತಿರುವ ಹಲವಾರು ಯಾಗಗಳ ಮೂಲಕ ಕರಾವಳಿ ಜಿಲ್ಲೆಯಲ್ಲಿ ಯಾಗ ಕ್ಷೇತ್ರವೆಂದೇ ಪ್ರಸಿದ್ಧವಾಗಿರುವ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ಅಚ್ಚರಿಯ ಬೆಳವಣಿಗೆ ನಡೆದಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ದೇವಸ್ಥಾನದ ಆವರಣದಲ್ಲಿ ಶ್ರೀ ಗೋಪಾಲಕೃಷ್ಣ ದೇವಳದ ಶಿಲಾಮಯ ಗುಡಿಯನ್ನು ಪ್ರತಿಷ್ಠಾಪಿಸಲಾಗುತ್ತಿದ್ದು ನಿರ್ಮಾಣ ಹಂತದಲ್ಲಿರುವ ಗುಡಿಯ ಶೇ.90 ಭಾಗ ಕಾಮಗಾರಿ ಮುಗಿದಿದ್ದು 18ರಂದು ಲೋಕಾರ್ಪಣೆಗೊಳ್ಳಲಿದೆ. ಶುಕ್ರವಾರ ಗರ್ಭಗುಡಿಯ ಒಳಭಾಗದಲ್ಲಿ ನೀರು ಉಕ್ಕಿ ಮೇಲೆ ಬಂದು ಅಚ್ಚರಿ ಮೂಡಿಸಿದೆ. ಸುಮಾರು 200ಕ್ಕಿಂತಲೂ ಹೆಚ್ಚು ಕೊಡಪಾನದಷ್ಟುನೀರು ಉಕ್ಕಿ ಬಂದಿದ್ದು ಇಲ್ಲಿನ ಅರ್ಚಕರು ಹಾಗೂ ಸಹಾಯಕರು ನೀರನ್ನು ಮೇಲೆತ್ತಿದ್ದಾರೆ.

ಪ್ರೇಮಿಗಳಿಗೆ ಸ್ಯಾಡ್ ನ್ಯೂಸ್: ತಣ್ಣೀರು ಬಾವಿ ಎಂಟ್ರಿ ಫೀಸ್ ಹೆಚ್ಚಳ

ಈ ಬಗ್ಗೆ ಮಾತನಾಡಿದ ದೇವಳದ ಪ್ರಮುಖರಾದ ವಿದ್ಯಾಶಂಕರ್‌, ದೇವಳದ ಗರ್ಭಗುಡಿಯು ನೆಲದಿಂದ ಮೂರು ಅಡಿ ಎತ್ತರದಲ್ಲಿ ನಿರ್ಮಾಣವಾಗಿದೆ. ಭಾಗಶಃ ಎಲ್ಲ ಕೆಲಸವು ಮುಕ್ತಾಯವಾಗಿದೆ. ಏಕಾಏಕಿ ನೀರು ಉಕ್ಕಿರುವುದು ಎಲ್ಲರನ್ನೂ ಅಚ್ಚರಿಗೊಳಿಸಿದೆ.

ಹಿರಿಯ ಮಾರ್ಗದರ್ಶಕ ಕೆ. ಎಸ್‌. ನಿತ್ಯಾನಂದ ಸ್ವಾಮೀಜಿ, ದೇವಳದ ನಿರ್ಮಾಣಕ್ಕೆ ಭಗವಂತನೇ ಸಂತಸ ವ್ಯಕ್ತಪಡಿಸಿದ್ದಾನೆ ಎಂಬ ನಂಬಿಕೆ ಗಟ್ಟಿಗೊಂಡಂತಾಗಿದೆ. ದೇವಳದ ಸುತ್ತಮುತ್ತ ಇರುವ ನೀರು ಸ್ವಲ್ಪ ಉಪ್ಪಿನಾಂಶ ಇದ್ದು ಗರ್ಭಗುಡಿಯೊಳಗೆ ಉಕ್ಕಿ ಬಂದ ನೀರು ಮಾತ್ರ ಸಿಹಿ ನೀರಾಗಿದೆ ಎಂದು ಹೇಳಿದರು.

ಮಂಗಳೂರಲ್ಲಿ ಪಾತಾಳಕ್ಕಿಳಿದ ಕೋಳಿ ಬೆಲೆ: ಕೆಜಿಗೆ 50 ರೂಪಾಯಿ

ಪಾವಂಜೆ ಶ್ರೀ ಜ್ಞಾನ ಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಶತಮಾನೋತ್ಸವ ಪ್ರಯುಕ್ತ ದೇವಳದ ಶ್ರೀ ಸುಬ್ರಾಯ ಭಟ್‌ ಸ್ಮಾರಕ ಶಾರಧ್ವತ ಯಜ್ಞಾಂಗಣದಲ್ಲಿ ವೇದ ಕೃಷಿಕ ಕೆ. ಎಸ್‌. ನಿತ್ಯಾನಂದ ನಿರ್ದೇಶನದಲ್ಲಿ 206 ದಿನಗಳ ಕಾಲ ನಡೆಯುತ್ತಿರುವ ಮಹಾವ್ರತ ದೀರ್ಘ ಸತ್ರಯಾಗ ನಿರಂತರವಾಗಿ ನಡೆಯುತ್ತಿದ್ದು ಏಪ್ರಿಲ್‌ನಲ್ಲಿ ಸಮಾಪ್ತಿಗೊಳ್ಳಲಿದೆ. ನೂತನ ಶ್ರೀ ಗೋಪಾಲಕೃಷ್ಣ ಗುಡಿಯು ಮಾ.18ರಂದು ಲೋಕಾರ್ಪಣೆಗೊಳ್ಳಲಿದೆ.