ಮಂಗಳೂರು(ಮಾ.15): ಜಿಲ್ಲೆಯ ತಣ್ಣೀರುಬಾವಿ ಟ್ರೀಪಾರ್ಕ್‌ನ ನಿರ್ವಹಣೆಗಾಗಿ ಸರ್ಕಾರದಿಂದ ಅನುದಾನ ಬಾರದೆ ಇರುವುದರಿಂದ ಟ್ರೀಪಾರ್ಕ್‌ನ ಪ್ರವೇಶ ಶುಲ್ಕವನ್ನು ಪರಿಷ್ಕರಿಸಲಾಗುವುದು ಎಂದು ಮಂಗಳೂರು ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕರಿಕಾಲನ್‌ ಹೇಳಿದ್ದಾರೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬೆಂಗರೆ ತಣ್ಣೀರುಬಾವಿ ಟ್ರೀಪಾರ್ಕ್‌ನ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ್ದಾರೆ.

ಮಂಗಳೂರಲ್ಲಿ ಪಾತಾಳಕ್ಕಿಳಿದ ಕೋಳಿ ಬೆಲೆ: ಕೆಜಿಗೆ 50 ರೂಪಾಯಿ

ಟ್ರೀಪಾರ್ಕ್‌ನ ಪ್ರವೇಶ ಶುಲ್ಕದಲ್ಲಿ 6 ವರ್ಷದೊಳಗಿನ ಮಕ್ಕಳಿಗೆ ವಿನಾಯಿತಿ ಇದ್ದು, 6ರಿಂದ 14 ವರ್ಷ ಪ್ರಾಯದವರಿಗೆ 10 ರು. ಮತ್ತು 14 ವರ್ಷ ಮೇಲ್ಪಟ್ಟವರಿಗೆ 20 ರು., ಸಾಮಾನ್ಯ ಕ್ಯಾಮರಾ ಉಪಯೋಗಕ್ಕೆ 25 ರು., ಝೂಂ ಕ್ಯಾಮರಾ/ ಹ್ಯಾಂಡ್‌ ಕ್ಯಾಮರಾ ಬಳಸುವುದಕ್ಕೆ 50 ರು., ಸ್ಟ್ಯಾಂಡ್‌ ಕ್ಯಾಮರಾ ಬಳಸುವುದಕ್ಕೆ 100 ರು. ಮತ್ತು ಫೋಟೊ ಶೂಟ್‌ಗಳಿಗೆ 200 ರು.ನಂತೆ ಪರಿಷ್ಕರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಪರಿಷ್ಕೃತ ಶುಲ್ಕವು ಏಪ್ರಿಲ್‌ 1ರಿಂದ ಜಾರಿಗೆ ಬರಲಿದೆ. ಈವರೆಗೆ ಟ್ರೀಪಾರ್ಕ್ನಿಂದ 26,26,000 ರು. ಆದಾಯ ಬಂದಿದ್ದು, ಅದರಲ್ಲಿ 2018-19ನೇ ಸಾಲಿನಲ್ಲಿ ಟ್ರೀ ಪಾರ್ಕ್ನ ವಿದ್ಯುತ್‌ ವೆಚ್ಚದ ಬಿಲ್ಲು, ನೀರಿನ ವೆಚ್ಚದ ಬಿಲ್ಲು ಮತ್ತು ಟ್ರೀಪಾರ್ಕ್ ಸ್ವಚ್ಛಗೊಳಿಸುವವರ ವೇತನ ಬಾಕಿ ಪಾವತಿಸಲು ಸಭೆಯಲ್ಲಿ ತಿಳಿಸಲಾಯಿತು. ಸಭೆಯಲ್ಲಿ ಮಂಗಳೂರು ವಲಯ ಅರಣ್ಯಾಧಿಕಾರಿ ಶ್ರೀಧರ್‌ ಹಾಗೂ ಸಂಬಂಧಪಟ್ಟಇಲಾಖಾಧಿಕಾರಿಗಳು, ಪ್ರತಿನಿಧಿಗಳು ಇದ್ದರು.