ಕೃಷ್ಣಾ ನದಿ ಪಾತ್ರದಲ್ಲಿ ಮಳೆ, ತುಂಬಿದ ನಾರಾಯಣಪುರ ಡ್ಯಾಂ: ಹೈ ಅಲರ್ಟ್

ಕಳೆದ ವರ್ಷಕ್ಕೆ ಹೋಲಿಸಿದಲ್ಲಿ, ರಾಜ್ಯದಲ್ಲಿ ಮಳೆ ಪ್ರಮಾಣ ಕುಸಿದಿದೆ. ದೊಡ್ಡ ದೊಡ್ಡ ಜಲಾಶಯಗಳು ಜುಲೈ ಮುಗೀತಾ ಬಂದರೂ ಇನ್ನೂ ತುಂಬಿಲ್ಲ. ಆದರೆ, ಉತ್ತರ ಕರ್ನಾಟಕದ ಹಲವೆಡೆ ಉತ್ತಮ ಮಳೆಯಾಗುತ್ತಿದ್ದು, ನಾರಾಯಣ ಪುರ ಜಲಾಶಯದಿಂದ ನೀರು ಬಿಡಲಾಗುತ್ತಿದೆ ಎಂಬ ನೆಮ್ಮದಿ ಸುದ್ದಿ ಇಲ್ಲಿದೆ...

water released from Naratyanapura dam alert in Krishna river basin

ರಾಯಚೂರು/ವಿಜಯಪುರ/ಬೆಳಗಾವಿ (ಜು.29): ಜುಲೈ ಮುಗಿಯುತ್ತಿದ್ದರೂ ರಾಜ್ಯದ ಯಾವ ಪ್ರಮುಖ ಡ್ಯಾಂಗಳು ಭರ್ತಿಯಾಗಿಲ್ಲವೆಂಬುವುದು ದುಃಖದ ಸಂಗತಿ. ಅದರೊಟ್ಟಿಗೆ ಅಲ್ಲಲ್ಲಿ ಮಳೆಯಾಗಿರುವ ಸುದ್ದಿ ಕೇಳಿದರೂ ಮನಸ್ಸು ಉಲ್ಲಾಸಿತಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ರಾಯಚೂರಿನಲ್ಲಿ ಮಳೆಯಾಗುತ್ತಿದ್ದು, ನಾರಾಯಣಪುರ ಜಲಾಶಯದ ತುಂಬಿದೆ. ಕೃಷ್ಣಾ ನದಿ ನೀರಿನ ಹರಿವು ಹೆಚ್ಚಾಗಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ.

ಕೃಷ್ಣಾ ನದಿ ಪಾತ್ರಗಳಲ್ಲಿ ವರುಣನ ಆರ್ಭಟ ಜೋರಾಗಿದ್ದು, ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದೆ. ನಾರಾಯಣಪುರ ಜಲಾಶಯದಿಂದ 1 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು 18 ಗೇಟ್ ಮೂಲಕ ಬಿಡುಗಡೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕೃಷ್ಣಾ ನದಿ ಪಾತ್ರದ ಗ್ರಾಮಸ್ಥರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ತಾಲೂಕು ಆಡಳಿತ, ತಾಲೂಕು ಪಂಚಾಯತ್ ಅಗ್ನಿಶಾಮಕ ದಳ ಅಧಿಕಾರಿಗಳು ಸುರಕ್ಷತೆ ಕ್ರಮಕ್ಕೆ ಸೂಚಿಸಿದ್ದಾರೆ. ಕೃಷ್ಣಾ ನದಿಗೆ ಇಳಿಯದಂತೆ ನದಿ ಪಾತ್ರದ ಗ್ರಾಮಸ್ಥರಿಗೆ ಎಚ್ಚರಿಸಲಾಗಿದೆ. 

ನಾರಾಯಣಪುರ ಜಲಾಶಯವೆಂದು ಕರೆಯುತ್ತಿದ್ದ ಬಸವ ಸಾಗರ ಡ್ಯಾಮನ್ನು ಕೃಷ್ಣಾ ನದಿಗೆ ಅಡ್ಡಲಾಗಿ ಬಿಜಾಪುರ ಜಿಲ್ಲೆಯ, ಮುದ್ದೇಬಿಹಾಳ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಿರ್ಮಿಸಲಾಗಿದೆ. ಈ ಡ್ಯಾಮಿಗೆ 30 ಗೇಟ್‌ಗಳಿದ್ದು, 37.965 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯವಿದೆ.

ರಾಜ್ಯಾದ್ಯಂತ ಮುಂಗಾರು ಅಬ್ಬರ ಜೋರು 

ಬೆಳಗಾವಿಯಲ್ಲಿಯೂ ಮಳೆ: 

ಬೆಳಗಾವಿ ಜಿಲ್ಲೆಯಾದ್ಯಂತ ಬೆಳಗ್ಗೆಯಿಂದಲೂ ಬಿಡದೇ ಸುರಿಯುತ್ತಿದೆ ಮಳೆ. ಖಾನಾಪುರ, ಕಿತ್ತೂರು, ಬೈಲಹೊಂಗಲ ಸೇರಿ ಹಲವಡೆ ತುಂತುರು ಮಳೆಯಾಗುತ್ತಿದೆ. ಬೆಳಗಾವಿ ನಗರದಲ್ಲೂ ಮಳೆರಾಯನ ಅಬ್ಬರ ಜೋರಾಗಿದ್ದು, ಚೆನ್ನಮ್ಮ ವೃತ್ತ ಸೇರಿ ಹಲವೆಡೆ ರಸ್ತೆ ಮೇಲೆ ಬಾರೀ ಪ್ರಮಾಮದ ನೀರು ಹರಿಯುತ್ತಿದೆ. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಜನರು ಮನೆಯಿಂದ ಹೊರ ಬರಲಾಗದೇ, ಜನಜೀವನ ಅಸ್ತವ್ಯಸ್ಥವಾಗಿದೆ.  ಆದರೆ, ಪಶ್ಚಿಮಘಟ್ಟಗಳಲ್ಲಿ ವರ್ಷಧಾರೆ ತುಸು ತಗ್ಗಿದೆ. 

ಮತ್ತಷ್ಟು ಮಳೆಯಾಗಲಿ. ರಾಜ್ಯದ ದೊಡ್ಡ ದೊಡ್ಡ ಜಲಾಶಯಗಳು ತುಂಬಲಿ. ಆದರೆ, ಯಾವ ಅನಾಹುತವೂ ಆಗದಿರಲಿ ಎಂಬುವುದು ಸುವರ್ಣನ್ಯೂಸ್.ಕಾಂ ಆಶಯ ಹಾಗೂ ಹಾರೈಕೆ. 

Latest Videos
Follow Us:
Download App:
  • android
  • ios