ಬೆಂಗಳೂರು (ಜೂ. 24):  ಮುಂಗಾರು ಮಾರುತ ರಾಜ್ಯಕ್ಕೆ ಕಾಲಿಟ್ಟಬಳಿಕ ಇದೇ ಮೊದಲ ಬಾರಿಗೆ ರಾಜ್ಯಾದ್ಯಂತ ಭಾನುವಾರ ಭರ್ಜರಿ ಮಳೆಯಾಗಿದೆ. ಕರಾವಳಿ ಜಿಲ್ಲೆಯಲ್ಲಿ ಮಳೆಯಬ್ಬರ ಹೇಳಿಕೊಳ್ಳುವಂತಿಲ್ಲದಿದ್ದರೂ ಉತ್ತರ ಕರ್ನಾಟಕದ ಹಲವೆಡೆ ಕೆಲಗಂಟೆಗಳ ಕಾಲ ಧಾರಾಕಾರ ಮಳೆ ಸುರಿದಿದೆ.

ಹುಬ್ಬಳ್ಳಿ ನಗರದಲ್ಲಿ ಕೃತಕ ನೆರೆಯಿಂದಾಗಿ ತಗ್ಗುಪ್ರದೇಶಗಳಿಗೆ ನೀರು ನುಗ್ಗಿದ್ದು, ಎರಡು ಬೈಕ್‌ಗಳು ಕೊಚ್ಚಿಕೊಂಡು ಹೋಗಿವೆ. ಇನ್ನು ಗದಗ ಹಾಗೂ ಕೊಪ್ಪಳದಲ್ಲಿ ದಿಢೀರ್‌ ಪ್ರವಾಹಕ್ಕೆ ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆ ಸಂಬಂಧಿ ಅನಾಹುತಕ್ಕೆ ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಮಹಿಳೆಯರು, ಇಬ್ಬರು ಬಾಲಕರು ಸೇರಿ ಐದು ಮಂದಿ ಬಲಿಯಾಗಿದ್ದಾರೆ.

ಗದಗ ಜಿಲ್ಲೆಯ ಲಿಂಗದಾಳ ಗ್ರಾಮದಲ್ಲಿ ಆಡು ಮೇಯಿಸಲು ಹೋಗಿದ್ದ ದೇವಕ್ಕ ದೊಡ್ಡಮನಿ(65), ಧಾರವಾಡ ಜಿಲ್ಲೆ ಹುಬ್ಬಳ್ಳಿ ಸಮೀಪದ ಮಿಶ್ರಿಕೋಟಿ ಗ್ರಾಮದಲ್ಲಿ ಹೊಲಕ್ಕೆ ಹೋಗಿದ್ದ ರವಿ ಪಿರೋಜಿ(25) ಸಿಡಿಲಿಗೆ ಬಲಿಯಾದರೆ, ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಬೈಚನಾಳ್‌ನಲ್ಲಿ ವಿದ್ಯುತ್‌ ಕಂಬವೊಂದು ಕುಸಿದು ಬಿದ್ದು ಬಹಿರ್ದೆಸೆಗೆ ಕುಳಿತಿದ್ದ ಬಾಲಕ ತಿರುಪತಿ(14) ಮೃತಪಟ್ಟಿದ್ದಾನೆ.

ಇನ್ನು ಬೀದರ್‌ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಯಲಗುಂಡಿ ಗ್ರಾಮದಲ್ಲಿ ಕಟ್ಟಿಗೆ ತರಲು ಹೋಗಿದ್ದ ಒಂದೇ ಕುಟುಂಬದ ನಾಲ್ವರಲ್ಲಿ ಅನಿತಾ ಪರಮೇಶ್ವರ (35), ಪುತ್ರ ಭಾಗ್ಯವಂತ (14) ಹಳ್ಳ ದಾಟುತ್ತಿದ್ದ ವೇಳೆ ಕಾಲುಜಾರಿ ಬಿದ್ದು ನೀರು ಪಾಲಾಗಿದ್ದಾರೆ.

ಇದೇ ಸಂದರ್ಭದಲ್ಲಿ ನೀರಿನಲ್ಲಿ ಸಿಲುಕಿದ್ದ ಇಬ್ಬರು ಮಕ್ಕಳನ್ನು ಗ್ರಾಮಸ್ಥರು ಶಂಕರ ವಡೆಯರ್‌ ಎಂಬವರು ಜೀವದ ಹಂಗು ತೊರೆದು ರಕ್ಷಿಸಿದ್ದಾರೆ. ನೀರುಪಾಲಾದ ಅನಿತಾ ದೇಹಕ್ಕಾಗಿ ಶೋಧ ಮುಂದುವರಿದಿದೆ.

ಮಳೆಯಬ್ಬರಕ್ಕೆ ಜನತತ್ತರ: ಕೊಪ್ಪಳ ಜಿಲ್ಲೆಯ ಕೊಪ್ಪಳ, ಭಾನುಪುರ, ಕುಕನೂರು ಹಾಗೂ ತಾವರಗೇರಾ ಭಾಗದಲ್ಲಿ ಸುರಿದ ಭಾರೀ ಮಳೆಗೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಜುಮಲಾಪೂರ ಗ್ರಾಮದ ಸುತ್ತ ಹಳ್ಳ ತುಂಬಿ ಕೆಲಗಂಟೆಗಳ ಕಾಲ ಪ್ರವಾಹದ ವಾತಾವರಣ ನಿರ್ಮಾಣವಾಗಿತ್ತು.

ತಾವರಗೇರಾ ಹೋಬಳಿಯ ವ್ಯಾಪ್ತಿಯ ಜುಮಲಾಪುರದಲ್ಲಿ ಮೇಯಲು ಹೋಗಿದ್ದ ಒಂದು ಆಕಳು ಹಳ್ಳದ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದೆ. ಗದಗ ಜಿಲ್ಲೆಯ ಲಕ್ಷ್ಮೇ​ಶ್ವರ ಸಮೀಪದ ಗೊಜನೂರ ಬಳಿ ಹೆದ್ದಾರಿ ಮೇಲೆ ಹಳ್ಳದ ನೀರು ತುಂಬಿ ಹರಿದು ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಕೊಚ್ಚಿ ಹೋದ ವಾಹನಗಳು: ಧಾರವಾಡ ಜಿಲ್ಲಾದ್ಯಂತ ಭಾನುವಾರ ಮಧ್ಯಾಹ್ನ ಧಾರಾಕಾರ ಮಳೆ ಸುರಿದಿದ್ದು ಎರಡು ಮನೆಗಳು ಕುಸಿದಿವೆ. ಕೃತಕ ನೆರೆಯಿಂದಾಗಿ ಧಾರವಾಡ ನಗರದ ತಗ್ಗು ಪ್ರದೇಶದಲ್ಲಿ ನೀರು ನುಗ್ಗಿ, ಜನಜೀವನ ಅಸ್ತವ್ಯಸ್ತಗೊಂಡಿದೆ.

ಹುಬ್ಬಳ್ಳಿಯ ಚರಂಡಿಗಳೆಲ್ಲ ತುಂಬಿ ಹರಿದು ಸಂಚಾರ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ತುಳಜಾಭವಾನಿ ಸರ್ಕಲ್‌ನಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಎರಡು ಬೈಕ್‌, ಎರಡ್ಮೂರು ಬೈಸಿಕಲ್‌ಗಳು ನೀರಲ್ಲಿ ಕೊಚ್ಚಿಕೊಂಡು ಹೋಗಿವೆ. ಒಂದೇ ಮಳೆಗೆ ಹಳ್ಳ-ಕೊಳ್ಳಗಳಿಗೂ ನೀರು ಹರಿದು ಬಂದಿದ್ದು ನವಲಗುಂದ ತಾಲೂಕಿನ ಬೆಣ್ಣಿಹಳ್ಳ ಮೈದುಂಬಿ ಹರಿದಿದೆ.

ಇನ್ನು ಕರಾವಳಿ ಜಿಲ್ಲೆಗಳಲ್ಲಿ ಶನಿವಾರ ರಾತ್ರಿಯಿಂದೀಚೆಗೆ ಬಿಟ್ಟು ಬಿಟ್ಟು ಬಿರುಸಿನ ಮಳೆ ಸುರಿದಿದೆ. ಮಲೆನಾಡು ಜಿಲ್ಲೆಗಳಾದ ಕೊಡಗು, ಚಿಕ್ಕಮಗಳೂರು ಹಾಗೂ ಶಿವಮೊಗ್ಗದಲ್ಲಿ ಸಾಧಾರಣ ಮಳೆಯಾಗಿದೆ. ಮೈಸೂರಲ್ಲೂ ಸುಮಾರು ಒಂದು ಗಂಟೆ ಕಾಲ ಉತ್ತಮ ಮಳೆ ಸುರಿದಿದೆ.

ಎಲ್ಲಿ ಎಷ್ಟುಮಳೆ?: ಹಾವೇರಿಯಲ್ಲಿ ಅತಿ ಹೆಚ್ಚು 95.50 ಮಿ.ಮೀ ಮಳೆಯಾದ ವರದಿಯಾಗಿದೆ. ಧಾರವಾಡ 93.50, ಬೆಳಗಾವಿ 91, ಕೊಪ್ಪಳ 87.10, ಗದಗ 83.50, ಬಾಗಲಕೋಟೆ 79, ಉಡುಪಿ 70, ವಿಜಯಪುರ 68.50, ಬಳ್ಳಾರಿ 64.50, ಬೀದರ್‌ 61.50,ಕಲಬುರಗಿ 62, ದಕ್ಷಿಣ ಕನ್ನಡ 54, ಚಿತ್ರದುರ್ಗ 50.80, ದಾವಣಗೆರೆ 48.30, ಕೊಡಗು 47, ರಾಯಚೂರು 30, ತುಮಕೂರು 27.40, ಮೈಸೂರು 24, ಮಂಡ್ಯ 20.30 ಹಾಗೂ ಚಿಕ್ಕಬಳ್ಳಾಪುರದಲ್ಲಿ 17 ಮಿ.ಮೀ ಮಳೆಯಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ಮಾಹಿತಿ ನೀಡಿದೆ.

ನಾಳೆಯೂ ಮುಂಗಾರು ಅಬ್ಬರ

ಬೆಂಗಳೂರು: ಮುಂಗಾರು ಮಳೆ ಅಬ್ಬರ ಇನ್ನೆರಡು ದಿನವೂ ಮುಂದುವರಿಯಲ್ಲಿದ್ದು, ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಉತ್ತರ ಮತ್ತು ದಕ್ಷಿಣ ಕರ್ನಾಟಕ ಭಾಗಗಳಲ್ಲಿ ಅದರಲ್ಲೂ ಧಾರವಾಡ, ಹಾವೇರಿ, ಗದಗ ಜಿಲ್ಲೆಗಳಲ್ಲಿ ಉತ್ತಮ ಮಳೆ ಸುರಿಯಲಿದೆ. ಉತ್ತರ ಮತ್ತು ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗುವ ಲಕ್ಷಣಗಳಿವೆ ಎಂದು ಮಾಹಿತಿ ನೀಡಿದೆ. ಜೂ.25ರವರೆಗೆ ಮುಂಗಾರು ತನ್ನ ಅಬ್ಬರ ಮುಂದುವರಿಸಲಿದೆ.

ಅದಾದ ನಂತರ ಮಳೆಯ ಕಣ್ಣಾಮುಚ್ಚಾಲೆ ಮತ್ತೆ ಆರಂಭವಾಗಲಿದೆ. ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಮಳೆ ಸುರಿದರೂ, ಉಳಿದೆಡೆ ಮಳೆಯ ಪ್ರಮಾಣ ಕುಸಿಯಲಿದೆ ಎಂದು ಕೆಎಸ್‌ಎನ್‌ಡಿಎಂಸಿ ನಿರ್ದೇಶಕ ಶ್ರೀನಿವಾಸ್‌ ರೆಡ್ಡಿ ಮಾಹಿತಿ ನೀಡಿದ್ದಾರೆ.