ಕೆಆರ್‌ಎಸ್, ಕಬಿನಿ ಹೊರಹರಿವು ಹೆಚ್ಚಾದ ಬೆನ್ನಲ್ಲೇ ಕಾವೇರಿ ಕೊಳ್ಳದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಅದರಲ್ಲೂ ಗಡಿ ಜಿಲ್ಲೆಯ 9 ಕ್ಕೂ ಹೆಚ್ಚು ಗ್ರಾಮದ ಜನರು ಚಿಂತಿತರಾಗಿದ್ದಾರೆ.  

ವರದಿ: ಪುಟ್ಟರಾಜು.ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.

ಚಾಮರಾಜನಗರ (ಜು.22): ಕೆಆರ್‌ಎಸ್, ಕಬಿನಿ ಹೊರಹರಿವು ಹೆಚ್ಚಾದ ಬೆನ್ನಲ್ಲೇ ಕಾವೇರಿ ಕೊಳ್ಳದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಅದರಲ್ಲೂ ಗಡಿ ಜಿಲ್ಲೆಯ 9 ಕ್ಕೂ ಹೆಚ್ಚು ಗ್ರಾಮದ ಜನರು ಚಿಂತಿತರಾಗಿದ್ದಾರೆ. ಹಿಂದೆ ಪ್ರವಾಹ ಬಂದಾಗಲೂ ಅಪಾರ ನಷ್ಟ ಸಂಭವಿಸಿತ್ತು. ಈ ಬಾರಿ ಬಂದ್ರೆ ಏನೋ ಮಾಡೋದೆಂಬ ಸಂಕಷ್ಟದಲ್ಲಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ. ಕೆಆರ್‌ಎಸ್ ಹಾಗು ಕಬಿನಿ ಜಲಾಶಯಗಳಿಂದ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಿರುವುದರಿಂದ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನಲ್ಲಿ ನದಿಪಾತ್ರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.

ಹಳೇ ಹಂಪಾಪುರ, ದಾಸನಪುರ, ಹಳೇ ಅಣಗಳ್ಳಿ, ಹರಳೆ ಸೇರಿದಂತೆ 9 ಗ್ರಾಮಗಳಿಗೆ ನೀರು ನುಗ್ಗಿ ಹೊಲಗದ್ದೆ, ಮನೆಗಳು ಜಲಾವೃತವಾಗುವ ಆತಂಕ ಕಾಡುತ್ತಿದೆ. ಕಳೆದ ಬಾರಿ ಪ್ರವಾಹ ಬಂದಾಗಲೂ ಕೂಡ ಈ ಗ್ರಾಮಗಳ ಜನ ಜಾನುವಾರುಗಳನ್ನು ಕೊಳ್ಳೇಗಾಲದಲ್ಲಿ ತೆರೆದಿದ್ದ ಗಂಜಿ ಕೇಂದ್ರಕ್ಕೆ ಕರೆತರಲಾಗಿತ್ತು. ಅದರಲ್ಲು ದಾಸನಪುರದಲ್ಲಿ ವಾಸವಾಗಿದ್ದ ಎಲ್ಲರನ್ನೂ ಕೊಳ್ಳೇಗಾಲಕ್ಕೆ ಶಿಫ್ಟ್ ಮಾಡಲಾಗಿತ್ತು ಹಾಗಾಗಿ ಈ ಬಾರಿಯು ಪ್ರವಾಹ ಬಂದರೆ ಅಪಾರ ಬೆಳೆ ನಷ್ಟದೊಂದಿಗೆ ಈ ಭಾಗದ ಜನ ಜೀವನ ಅಸ್ತವ್ಯಸ್ತಗೊಳ್ಳುತ್ತಿದ್ದು, ಶಾಶ್ವತ ಪರಿಹಾರ ತಡೆ ಗೋಡೆ ಕಲ್ಪಿಸುವಲ್ಲಿ ಜನಪ್ರತಿನಿಧಿಗಳು ಹಾಗು ಅಧಿಕಾರಿಗಳು ವಿಫಲರಾಗಿದ್ದಾರೆ.

ಇನ್ನೂ ನದಿ ಪಾತ್ರದ ಗ್ರಾಮಗಳಿಗೆ ನೀರು ನುಗ್ಗದಂತೆ ತಡೆಗೋಡೆ ನಿರ್ಮಿಸುವ ಯೋಜನೆ ಕನಸಾಗಿಯೇ ಉಳಿದಿದೆ. ಪ್ರವಾಹ ಬಂದಾಗಲೆಲ್ಲಾ ತಡೆಗೋಡೆ ನಿರ್ಮಾಣದ ಭರವಸೆ ನೀಡುವ ಜನಪ್ರತಿನಿಧಿಗಳು ನೆರೆ ಇಳಿದ ಬಳಿಕ ಈ ಗ್ರಾಮಗಳಿಗೆ ತಲೆ ಹಾಕದೆ ನಿರ್ಲಕ್ಷ್ಯ ತೋರುತ್ತಿದ್ದು ಗ್ರಾಮಸ್ಥರ ಪ್ರವಾಹ ಸಂದರ್ಭದಲ್ಲಿ ಆತಂಕದಲ್ಲೇ ದಿನ ದೂಡುವಂತಾಗಿದೆ. ಹಿಂದೆಯೂ ಕೂಡ ಪ್ರವಾಹ ಬಂದಿದ್ದ ವೇಳೆ ಜನರಿಗೆ ಅಪಾರ ಪ್ರಮಾಣದ ನಷ್ಟವಾಗಿತ್ತು. ಶಾಶ್ವತವಾಗಿ ತಡೆಗೋಡೆ ನಿರ್ಮಿಸಿದ್ರೆ ಪ್ರವಾಹ ಪರಿಸ್ಥಿತಿ ನಮಗೆ ಎದುರಾಗುತ್ತಿರಲಿಲ್ಲ. 

ಮುಂಗಾರು ಮಳೆ ಅಬ್ಬರಕ್ಕೆ ಕಾಫಿನಾಡಿನಲ್ಲಿ 100 ಕೋಟಿಗೂ ಅಧಿಕ ನಷ್ಟ: ಮುಳ್ಳಯ್ಯನಗಿರಿ ಪ್ರದೇಶಕ್ಕೆ ನಿಷೇಧ ಮುಂದುವರಿಕೆ

ಇದೀಗ ಯಾವಾಗ ನೆರೆ ಬರುತ್ತೋ ಅನ್ನೋ ಭಯದಲ್ಲಿ ಇದ್ದೀವಿ ಅಂತಿದ್ದಾರೆ. ಒಟ್ನಲ್ಲಿ ಕೆಆರ್ ಎಸ್, ಕಬಿನಿ ಹೊರ ಹರಿವು ಮತ್ತಷ್ಟು ಹೆಚ್ಚಾದ್ರೆ ಕೊಳ್ಳೇಗಾಲದ 9 ಗ್ರಾಮಗಳು ಮುಳುಗಡೆಯಾಗೋದು ಫೀಕ್ಸ್. ಒಂದು ವೇಳೆ ಹೊರ ಹರಿವಿನ ಪ್ರಮಾಣ ಕಡಿಮೆಯಾದ್ರೆ ನಿರಾಳವಾಗಿರಬಹುದು. ಆದ್ರೆ ಅದಕ್ಕೂ ಮುನ್ನವೇ ಅಧಿಕಾರಿಗಳು ಎಚ್ಚೆತ್ತುಕೊಂಡು ಪ್ರವಾಹ ಪರಿಸ್ಥಿತಿ ಎದುರಿಸಲು ಸನ್ನದ್ದವಾಗಬೇಕಿದೆ.