ಮುಂಗಾರು ಮಳೆ ಅಬ್ಬರಕ್ಕೆ ಕಾಫಿನಾಡಿನಲ್ಲಿ 100 ಕೋಟಿಗೂ ಅಧಿಕ ನಷ್ಟ: ಮುಳ್ಳಯ್ಯನಗಿರಿ ಪ್ರದೇಶಕ್ಕೆ ನಿಷೇಧ ಮುಂದುವರಿಕೆ

ಜಿಲ್ಲೆಯ ಮಲೆನಾಡಿನ ಭಾಗದಲ್ಲಿ ಸುರಿದ ಮುಂಗಾರು ಮಳೆ ಅಬ್ಬರಕ್ಕೆ  100 ಕೋಟಿಗೂ ಅಧಿಕ ನಷ್ಟವಾಗಿದ್ದು 7 ದಿನದ ಅಬ್ಬರಕ್ಕೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಜಿಲ್ಲೆಯಲ್ಲಿ ಉಂಟಾಗಿರುವ ಹಾನಿ ಬಗ್ಗೆ ರಾಜ್ಯ ಸರ್ಕಾರಕ್ಕೆ ಚಿಕ್ಕಮಗಳೂರು ಜಿಲ್ಲಾಡಳಿತ ವರದಿ ಸಲ್ಲಿಸಿದೆ. 

More than 100 crores loss in Chikkamagaluru due to Monsoon rains gvd

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಜು.22): ಜಿಲ್ಲೆಯ ಮಲೆನಾಡಿನ ಭಾಗದಲ್ಲಿ ಸುರಿದ ಮುಂಗಾರು ಮಳೆ ಅಬ್ಬರಕ್ಕೆ  100 ಕೋಟಿಗೂ ಅಧಿಕ ನಷ್ಟವಾಗಿದ್ದು 7 ದಿನದ ಅಬ್ಬರಕ್ಕೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಜಿಲ್ಲೆಯಲ್ಲಿ ಉಂಟಾಗಿರುವ ಹಾನಿ ಬಗ್ಗೆ ರಾಜ್ಯ ಸರ್ಕಾರಕ್ಕೆ ಚಿಕ್ಕಮಗಳೂರು ಜಿಲ್ಲಾಡಳಿತ ವರದಿ ಸಲ್ಲಿಸಿದೆ. ಈ ಬಗ್ಗೆ ಮಾಹಿತಿ ನೀಡಿದ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಪಿಆರ್ಇಡಿ ಗೆ 48 ಕೋಟಿ ರೂ. ಹಾಗೂ ಪಿಡಬ್ಲುಡಿ ಇಲಾಖೆಗೆ 56 ಕೋಟಿ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದರು. ಅತೀವೃಷ್ಠಿಯಿಂದಾಗಿ ಲೋಕೋಪಯೋಗಿ ಇಲಾಖೆಗೆ ಸೇರಿದ 8.40 ಕಿ.ಮೀ. ರಸ್ತೆ ಹಾನಿಗೀಡಾಗಿ 23.45 ಕೋಟಿ ರೂ. ನಷ್ಟ ಸಂಭವಿಸಿದೆ. ಈ ಪೈಕಿ ಚಿಕ್ಕಮಗಳೂರು ತಾಲ್ಲೂಕಿನಲ್ಲಿ 6.43 ಕಿ.ಮೀ., ಕೊಪ್ಪದಲ್ಲಿ 0..98 ಕಿ.ಮೀ., ಮೂಡಿಗೆರೆ ತಾಲ್ಲೂಕಿನಲ್ಲಿ .35 ಕಿ.ಮೀ., ಶೃಂಗೇರಿಯಲ್ಲಿ 0.22 ಹಾಗೂ ಎನ್.ಆರ್.ಪುರದಲ್ಲಿ 0.47 ಕಿ.ಮೀ ರಸ್ತೆಗೆ ಹಾನಿ ಸಂಭವಿಸಿದೆ.

41 ಸೇತುವೆಗೆ ಹಾನಿ: ಒಟ್ಟು 41 ಸೇತುವೆಗಳಿಗೆ ಹಾನಿ ಸಂಭವಿಸಿದ್ದು, 31.24 ಕೋಟಿ ರೂ. ನಷ್ಟ ಸಂಭವಿಸಿದೆ. ಚಿಕ್ಕಮಗಳೂರು ತಾಲ್ಲೂಕಿನಲ್ಲಿ 7, ಕೊಪ್ಪಾದಲ್ಲಿ 5, ಮೂಡಿಗೆರೆಯಲ್ಲಿ 20, ಶೃಂಗೇರಿ ಹಾಗೂ ನ.ರಾ.ಪುರದಲ್ಲಿ ತಲಾ 3, ತರೀಕೆರೆಯಲ್ಲಿ 2, ಹಾಗೂ ಕಡೂರಿನಲ್ಲಿ 1 ಸೇತುವೆ ಹಾನಿಗೀಡಾಗಿದೆ.

ಮಳೆ ಕ್ಷೀಣಿಸಿದ್ದರೂ ಮಲೆನಾಡಿನಲ್ಲಿ ಗಾಳಿ ಆರ್ಭಟ ಜೋರು: ಇನ್ನು 2 ದಿನ ಕತ್ತಲಲ್ಲಿ ಕೆಲಗ್ರಾಮಗಳು!

ಮೂಡಿಗೆರೆಯಲ್ಲಿ ಹೆಚ್ಚು ಹಾನಿ: ಪಿಡಬ್ಲೂಡಿಗೆ ಮೂಡಿಗೆರೆ ತಾಲ್ಲೂಕಿನಲ್ಲಿ ಅತೀ ಹೆಚ್ಚು ಮಳೆ ಹಾನಿ ಸಂಭವಿಸಿದ್ದು, 17.02 ಕೋಟಿ ರೂ. ನಷ್ಟ ಸಂಭವಿಸಿದೆ. ಚಿಕ್ಕಮಗಳೂರು ತಾಲ್ಲೂಕಿನಲ್ಲಿ 9.80 ಕೋಟಿ ರೂ., ಕೊಪ್ಪಾ ತಾಲ್ಲೂಕಿನಲ್ಲಿ 16.60 ಕೋಟಿ ರೂ., ಶೃಂಗೇರಿ ತಾಲ್ಲೂಕು 2.20 ಕೋಟಿ ರೂ., ನ.ರಾ.ಪುರದಲ್ಲಿ 1.90ಕೋಟಿ ರೂ., ತರೀಕೆರೆ ತಾಲ್ಲೂಕಿನಲ್ಲಿ 8.50 ಕೋಟಿ ರೂ., ಹಾಗೂ ಕಡೂರು ತಾಲ್ಲೂಕಿನಲ್ಲಿ 70 ಲಕ್ಷ ರೂ. ನಷ್ಟ ಸಂಭವಿಸಿದೆ.ಪಿಆರ್ಇಡಿ ಇಲಾಖೆ ವ್ಯಾಪ್ತಿಯ 339.34ಕಿ.ಮೀ. ರಸ್ತೆಗೆ ಹಾನಿ ಉಂಟಾಗಿದ್ದು, 41.02 ಕೋಟಿ ರೂ. ನಷ್ಟ ಸಂಭವಿಸಿದೆ. 27 ಸೇತುವೆ ಮತ್ತು ಕಲ್ವರ್ಟ್ಗಳು ಹಾನಿಗೀಡಾಗಿ 5.26 ಕೋಟಿ ರೂ. ನಷ್ಟ ಉಂಟಾಗಿದೆ. 7 ಕೆರೆಗಳು ಹಾನಿಗೀಡಾಗಿದ್ದು, 56.50 ಲಕ್ಷ ರೂ., 12ಪ್ರಾಥಮಿಕ ಶಾಲಾ ಕಟ್ಟಡಗಳು ಹಾನಿಗೀಡಾಗಿ 86.50 ಲಕ್ಷ ರೂ. ನಷ್ಟ ಸಂಭವಿಸಿದೆ. 10 ಸರ್ಕಾರಿ ಕಟ್ಟಡಗಳಿಗೆ ಹಾನಿ ಉಂಟಾಗಿ 1.13 ಲಕ್ಷ ರೂ. ನಷ್ಟ ಸಂಭವಿಸಿದೆ.

192 ಮನೆಗಳಿಗೆ ಹಾನಿ: ಮಳೆಯಿಂದಾಗಿ ಜಿಲ್ಲೆಯಲ್ಲಿ ಒಟ್ಟು 192 ಮನೆಗಳಿ ಹಾನಿ ಸಂಭವಿಸಿದೆ. ಈ ಪೈಕಿ 122 ಮನೆಗಳು ತೀವ್ರ ಹಾನಿಗೀಡಾಗಿದ್ದು, ಒಟ್ಟು 56ಮನೆಗಳಿಗೆ 67.5 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಭಾಗಶಃ ಹಾನಿಗೀಡಾಗಿರುವ 70 ಮನೆಗಳ ಪೈಕಿ 19 ಮನೆಗಳಿಗೆ 1.9 ಲಕ್ಷ ರೂ. ಪರಿಹಾರ ನೀಡಲಾಗಿದೆ.

284 ರೈತರಿಗೆ ನಷ್ಟ: ಜಿಲ್ಲೆಯಲ್ಲಿನ 80 ಎಕರೆಯಷ್ಟು ತೋಟಗಾರಿ ಬೆಳೆ ಹಾನಿಯಾಗಿದ್ದು, 19 ಲಕ್ಷ ರೂ. ನಷ್ಟ ಉಂಟಾಗಿದೆ. 93 ಅತೀ ಸಣ್ಣ ರೈತರು, 191 ಸಣ್ಣ ರೈತರು ಸೇರಿ 284 ರೈತರು ನಷ್ಟ ಅನುಭವಿಸಿದ್ದಾರೆ.ಈ ವರೆಗೆ 4 ಜಾನುವಾರುಗಳು ಮಳೆಯಿಂದಾಗಿ ಜೀವ ಕಳೆದುಕೊಂಡಿವೆ. ಕಳೆದೊಂದು ತಿಂಗಳಲ್ಲಿ ಸುರಿದ ಮಳೆಯಿಂದಾಗಿ ಯಾವುದೇ ಮಾನವ ಜೀವ ಹಾನಿ ಸಂಭವಿಸಿಲ್ಲ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ವಾಡಿಕೆಗಿಂತ ಹೆಚ್ಚು  ಮಳೆ: ಜನವರಿಯಿಂದ ಈ ವರೆಗೆ ಜಿಲ್ಲೆಯಲ್ಲಿ ವಾಡಿಕೆಯಂತೆ ಸರಾಸರಿ 887 ಮಿ.ಮೀ. ಮಳೆಯಾಗಬೇಕಿದ್ದು, ಈ ವರ್ಷ ವಾಡಿಕೆಗಿಂತಲೂ ಹೆಚ್ಚು ಅಂದರೆ 1096 ಮಿ.ಮೀ. ಮಳೆಯಾಗಿದೆ.

ಮಳೆ ಜೊತೆಗೆ ಮಡಿಕೇರಿ ನಗರಸಭೆ ಎಡವಟ್ಟಿನಿಂದ ಕುಸಿಯುತ್ತಿರುವ ಸಾಯಿ ಕ್ರೀಡಾಂಗಣ ಜಂಕ್ಷನ್ ರಸ್ತೆ!

ಗಿರಿ ಪ್ರದೇಶಕ್ಕೆ ನಿಷೇಧ ಮುಂದುವರಿಕೆ: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ಮುಳ್ಳಯ್ಯನಗಿರಿ ಪ್ರದೇಶಕ್ಕೆ ಮತ್ತೆ ಒಂದು ವಾರ ಪ್ರವಾಸಿ ವಾಹನಗಳನ್ನ ನಿಷೇಧಿಸಿಲಾಗಿದೆ. ಮುಳ್ಳಯ್ಯನಗಿರಿ ಸೀತಾಳಯ್ಯನಗಿರಿ ರಸ್ತೆಯಲ್ಲಿ ಹಲವು ಕಡೆ ಭೂ ಕುಸಿತ ಉಂಟಾಗಿದ್ದು ಲೋಕೋಪಯೋಗಿ ಇಲಾಖೆ ಇನ್ನೂ ಒಂದು ವಾರ ರಸ್ತೆ ದುರಸ್ಥಿಗೆ ಕಾಲಾವಕಾಶ ಕೇಳಿರುವ ಹಿನ್ನೆಲೆಯಲ್ಲಿ ಮುಂದಿನ ವಾರದ ವರೆಗೂ ಅಂದರೆ ಜುಲೈ 29 ರವರೆಗೆ ಗಿರಿ ಪ್ರದೇಶಕ್ಕೆ ಪ್ರವಾಸಿಗರ ವಾಹನಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆ.

Latest Videos
Follow Us:
Download App:
  • android
  • ios