ತುಮಕೂರಿನ ತಿಪಟೂರು ತಾಲೂಕಿನಲ್ಲಿ ನೀರಿಲ್ಲದೆ ಗ್ರಾಮಸ್ಥರು ಪರದಾಡುವ ಸ್ಥಿತಿ ಉಂಟಾಗಿದೆ. ಕಳೆದ ಮೂರು ತಿಂಗಳಿಂದಲೂ ಕುಡಿಯುವ ನೀರಿಲ್ಲದೆ ಇಲ್ಲಿನ ಜನ ತೊಂದರೆಗೊಳಗಾಗಿದ್ದಾರೆ. ನೀರಿಗಾಗಿ ನಿರ್ಮಾಣ ಮಾಡಲಾಗಿರುವ ಬೋರ್‌ವೆಲ್‌ಗಳಲ್ಲಿಯೂ ನೀರಿನ ಸೆಲೆ ಬತ್ತಿದ್ದು, ಜನರು ಕುಡಿಯಲೂ ನೀರಿಲ್ಲದೆ ಕಷ್ಟಪಡುತ್ತಿದ್ದಾರೆ.

ತುಮಕೂರು(ಸೆ.23): ತಿಪಟೂರು ತಾಲೂಕಿನ ಗ್ರಾಪಂ ವ್ಯಾಪ್ತಿಯ ಬೈರನಾಯ್ಕನಹಳ್ಳಿಯಲ್ಲಿ ಮೂರು ತಿಂಗಳಿನಿಂದಲೂ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಉಂಟಾಗಿದ್ದು, ಈ ಬಗ್ಗೆ ಗ್ರಾಪಂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ನಿರ್ಲಕ್ಷ್ಯ ತೋರಿಸುತ್ತಿದ್ದಾರೆಂದು ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮದಲ್ಲಿ ಸುಮಾರು 250ಕ್ಕೂ ಹೆಚ್ಚು ಮನೆಗಳಿದ್ದು, ಜನ-ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಪ್ರತಿನಿತ್ಯ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮಗಳಲ್ಲಿರುವ ಬೋರ್‌ವೆಲ್‌ಗಳಲ್ಲಿ ನೀರಿಲ್ಲದಂತಾಗಿದ್ದು, ದಿನಬೆಳಗಾದರೆ ದೂರದ ತೋಟಗಳ ನೀರನ್ನು ಆಶ್ರಯಿಸುವಂತಾಗಿದೆ. ದಿನವೂ ದೂರದಿಂದ ಮನೆಮಂದಿಯೆಲ್ಲಾ ನೀರು ಹೊತ್ತು ಹೊತ್ತು ಸಾಕಾಗಿದೆ ಎಂದು ಸಾರ್ವಜನಿಕರು ಅಳಲು ತೋಡಿಕೊಂಡರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನೀರಿನ ಸಮಸ್ಯೆ ಬಗ್ಗೆ ಗ್ರಾಪಂಗೆ ಹಲವು ಬಾರಿ ಮನವಿ ಮಾಡಿದಿದ್ದರೂ ನಮ್ಮ ಗ್ರಾಮಗಳಿಗೆ ಶಾಶ್ವತ ನೀರಿನ ವ್ಯವಸ್ಥೆ ಇಲ್ಲಿನವರೆಗೂ ಕಲ್ಪಿಸಿಲ್ಲ. ನೀರಿಗಾಗಿ ಇಡೀ ದಿನವನ್ನು ವ್ಯಯಿಸುವಂತಾಗಿದ್ದು, ಕೂಲಿ ಕೆಲಸ ಬಿಟ್ಟು ನೀರನ್ನು ತರುವುದೆ ಒಂದು ದೊಡ್ಡ ಕೆಲಸವಾಗಿ ಬದುಕು ನಡೆಸುವುದು ಕಷ್ಟವಾಗುತ್ತಿದೆ.

ಪ್ರತಿವರ್ಷವೂ ನೀರಿನ ಸಮಸ್ಯೆಯಿಂದ ಜನರ ಪರದಾಟ:

ನೀರಿಗಾಗಿ ಜನರು ಕಷ್ಟಪಡುತ್ತಿದ್ದರೂ ಟ್ಯಾಂಕರ್‌ ಮೂಲಕವೂ ನೀರು ನೀಡುತ್ತಿಲ್ಲ. ಈ ಭಾಗದಲ್ಲಿ ಪ್ರತಿವರ್ಷ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದ್ದು, ಜನತೆ ಕಂಗಾಲಾಗಿದ್ದಾರೆ. ಆದ್ದರಿಂದ ಸಂಬಂಧಪಟ್ಟಜನಪ್ರತಿನಿಧಿಗಳು, ಅಧಿಕಾರಿಗಳು ಗ್ರಾಮಕ್ಕೆ ಅನುಕೂಲವಾಗುವಂತೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ವಾರದೊಳಗೆ ಸರಿಯಾಗಿ ನೀರು ಕೊಡದಿದ್ದರೆ ತಾಪಂ ಹಾಗೂ ಗ್ರಾಪಂಗೆ ಬೀಗ ಜಡಿದು ಪ್ರತಿಭಟಿಸಲಾಗುವುದೆಂದು ಗ್ರಾಮಸ್ಥರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಕೆರೆಗಳ ಭರ್ತಿಗೆ ಮೊದಲ ಆದ್ಯತೆ: ಸಂಸದ ಬಸವರಾಜು

ಈ ಬಗ್ಗೆ ಪ್ರತಿಕ್ರಿಯಿಸಿರುವ ಗುಡಿಗೊಂಡನಹಳ್ಳಿ ಪಿಡಿಒ ಬಸವರಾಜು, ಬೋರ್‌ವೆಲ್‌ನಲ್ಲಿ ನೀರಿದ್ದು, ಎಲ್ಲಾ ಟ್ಯಾಂಕ್‌ಗಳಿಗೆ ನೀರು ಹರಿಯಲು ಪೈಪ್‌ಲೈನ್‌ ಮಾಡುತ್ತಿದ್ದು, ಶೀಘ್ರದಲ್ಲೇ ಸಮಸ್ಯೆ ಬಗೆ ಹರಿಸಲಾಗುವುದು. ಅಲ್ಲಿಯವರೆಗೂ ಟ್ಯಾಂಕರ್‌ಗಳಿಂದ ನೀರು ನೀಡಲಾಗುವುದು ಎಂದು ಭರವಸೆ ನೀಡಿದರು.