ತುಮಕೂರು:(ಸೆ.22) ಹೇಮಾವತಿ ನೀರನ್ನು ನಾಲೆಯ ಕೊನೆಯ ಭಾಗದ ಪ್ರದೇಶದಲ್ಲಿರುವ ಕೆರೆಗಳನ್ನು ಭರ್ತಿ ಮಾಡಲು ಮೊದಲ ಆದ್ಯತೆ ನೀಡಬೇಕೆಂದು ಸಂಸದ ಜಿ.ಎಸ್‌.ಬಸವರಾಜು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶನಿವಾರ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ದಿಶಾ (ಡಿಸ್ಟ್ರಿಕ್ಟ್ ಡೆವಲಪ್‌ಮೆಂಟ್‌ ಕೋಅರ್ಡಿನೇಷನ್‌ ಅಂಡ್‌ ಮಾನಿಟರಿಂಗ್‌ ಕಮಿಟಿ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗೊರೂರು ಜಲಾಶಯ ಪ್ರದೇಶದಲ್ಲಿ ಸಾಕಷ್ಟು ಮಳೆಯಾಗುತ್ತಿರುವುದರಿಂದ ಹೇಮಾವತಿ ನಾಲೆಗೆ ನೀರು ಹರಿಸಲಾಗುತ್ತಿದೆ. ನಾಲೆಯ ನೀರನ್ನು ನಾಲೆಗೆ ಸಂಪರ್ಕವಿರುವ ಎಲ್ಲಾ ಕೆರೆಗಳನ್ನು ತುಂಬಿಸಿಕೊಂಡರೆ ಮುಂದಿನ ಬೇಸಿಗೆಗೆ ನೀರಿನ ಬವಣೆ ತಲೆದೋರುವುದಿಲ್ಲ. ಕಳೆದ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಜಿಲ್ಲೆಯ ಜನತೆ ತತ್ತರಿಸಿ ಹೋಗಿತ್ತು. ಈ ಹಿನ್ನೆಲೆಯಲ್ಲಿ ಎಲ್ಲಾ ಕೆರೆಗಳನ್ನು ತುಂಬಿಸಬೇಕೆಂದು ಹೇಮಾವತಿ ನಾಲಾ ವಲಯದ ಇಂಜಿನಿಯರ್‌ ಮೋಹನ್‌ ಅವರಿಗೆ ನಿರ್ದೇಶನ ನೀಡಿದರು.

ನಾಲೆಗೆ ನೀರಿನ ಮಾಪಕವನ್ನು ಅಳವಡಿಸಿ ಪ್ರತಿದಿನ ಹರಿಯುವ ನೀರಿನ ಪ್ರಮಾಣದ ಅಂಕಿ ಅಂಶವನ್ನು ದಾಖಲಿಸಬೇಕು. ಜಲಾಶಯದಲ್ಲಿ ಸಾಕಷ್ಟು ನೀರಿನ ಲಭ್ಯತೆ ಇರುವುದರಿಂದ ಡಿಸೆಂಬರ್‌ವರೆಗೂ ನೀರು ಹರಿಯುವ ನಿರೀಕ್ಷೆಯಿದೆ. ಶಾಂತ ರೀತಿಯಿಂದ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ನೀರು ಹರಿಸಲು ಅವಕಾಶ ನೀಡಬೇಕೆಂದು ತಿಳಿಸಿದರು.

4.6 ಟಿಎಂಸಿ ನೀರು ಹರಿಸಲಾಗಿದೆ:

ಇದೆ ವೇಳೆ ಮಾತನಾಡಿದ ಹೇಮಾವತಿ ಎಂಜಿನಿಯರ್‌ ಮೋಹನ್‌ ಅವರು, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಸಿರುವ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ವೇಳಾಪಟ್ಟಿ ನಿಗದಿಪಡಿಸಿದ್ದು, ವೇಳಾಪಟ್ಟಿಯನ್ವಯ ನೀರನ್ನು ನಾಲೆಗೆ ಬಿಡಲಾಗುತ್ತಿದೆ. ಕಳೆದ ಶನಿವಾರದವರೆಗೆ 4.6 ಟಿಎಂಸಿ ನೀರನ್ನು ಹರಿಯ ಬಿಡಲಾಗಿದೆ ಎಂದು ಮಾಹಿತಿ ನೀಡಿದರು.

ಇದಕ್ಕೂ ಮುನ್ನ ಮಾತನಾಡಿದ ಸಂಸದರು, ಕೇಂದ್ರ ಸರ್ಕಾರದಿಂದ ನೀಡಿರುವ ಇಲಾಖಾವಾರು ಅನುದಾನ ಸದ್ವಿನಿಯೋಗವಾಗಿರುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲು ಈ ಸಭೆ ಕರೆಯಲಾಗಿದ್ದು, 3 ತಿಂಗಳಿಗೊಮ್ಮೆ ಕಡ್ಡಾಯವಾಗಿ ಸಭೆಯನ್ನು ನಡೆಸಬೇಕೆಂದು ಜಿಪಂ ಸಿಇಒ ಶುಭಾ ಕಲ್ಯಾಣ್‌ಗೆ ಸೂಚನೆ ನೀಡಿದರು.

ವಿವಿಧ ಕ್ಷೇತ್ರದ ಪ್ರತಿನಿಧಿಗಳು:

ಈ ಹೊಸ ದಿಶಾ ಸಮಿತಿಯಲ್ಲಿ ಜಿಲ್ಲೆಯ ಎಲ್ಲಾ ಶಾಸಕರು, ಪಾಲಿಕೆ ಮೇಯರ್‌, ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು, ಗ್ರಾಮ ಪಂಚಾಯತಿಗಳ ಆಯ್ದ ಐವರು ಅಧ್ಯಕ್ಷರು, ಎಲ್ಲಾ ತಾಪಂ ಅಧ್ಯಕ್ಷರು, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಜಯಪ್ರಕಾಶ್‌, ಜಿಪಂ ಅಧ್ಯಕ್ಷೆ ಲತಾ, ಸಿಐಟಿಯ ನಿರ್ದೇಶಕ ಡಾ.ಡಿ.ಎಸ್‌.ಸುರೇಶ್‌, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ ಕುಮಾರ್‌, ಜಿಪಂ ಯೋಜನಾ ನಿರ್ದೇಶಕ, ಲೀಡ್‌ ಬ್ಯಾಂಕ್‌ ಮ್ಯಾನೇಜರ್‌, ಅಂಚೆ ಅಧೀಕ್ಷಕರು ಸಮಿತಿ ಸದಸ್ಯರಾಗಿರುತ್ತಾರೆ ಎಂದು ತಿಳಿಸಿದ ಅವರು, ವಿವಿಧ ಕ್ಷೇತ್ರಗಳ ಪ್ರತಿನಿಧಿಗಳಾದ ಟಿ.ಆರ್‌.ರಘೋತ್ತಮ ರಾವ್‌, ಎನ್‌.ಎಸ್‌. ಜಯಕುಮಾರ್‌, ನಾಗೇಂದ್ರ ಪ್ರಸಾದ್‌, ಪ್ರೇಮಹೆಗಡೆ, ಕುಂದರನಹಳ್ಳಿ ರಮೇಶ್‌ ಅವರನ್ನು ಸಮಿತಿ ಸದಸ್ಯರನ್ನಾಗಿ ಸಂಸದರು ನಾಮನಿರ್ದೇಶನ ಮಾಡಿದರು. ಉಳಿದಂತೆ ಸದಸ್ಯ ಕಾರ್ಯದರ್ಶಿಯಾಗಿ ಜಿಪಂ ಸಿಇಒ ಶುಭಾಕಲ್ಯಾಣ್‌ ಕಾರ್ಯನಿರ್ವಹಿಸಲಿದ್ದಾರೆ ಎಂದರು. 

ವಿಷನ್‌ ಅಂಡ್‌ ಪ್ರೆಷರ್‌ ಗ್ರೂಪ್‌:

ಅಲ್ಲದೆ ದಿಶಾ ಸಮಿತಿಯಡಿ ಬರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರತಿಯೊಂದು ಯೋಜನೆಗಳ ಯಶಸ್ವಿ ಜಾರಿಗೆ ಅಧಿಕಾರಿಗಳು, ಪರಿಣಿತರು, ನಿವೃತ್ತ ಅಧಿಕಾರಿಗಳು, ರೈತರು, ಮಹಿಳೆಯರು, ಯುವಕರು, ವಿದ್ಯಾರ್ಥಿಗಳು, ಮಾಧ್ಯಮ ಮತ್ತು ಸಂಘ ಸಂಸ್ಥೆಗಳ ಪಧಾದಿಕಾರಿಗಳನ್ನೊಳಗೊಂಡ ‘ವಿಷನ್‌ ಮತ್ತು ಪ್ರಷರ್‌ ಗ್ರೂಪ್‌’ ರಚಿಸಲು ಸಭೆ ಕರೆದು ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಜಿಲ್ಲೆಯಲ್ಲಿ ಬರುವ ಎಲ್ಲಾ ಪಿಡಿಒಗಳ ಸಹಿತ ಎಲ್ಲಾ ಹೋಬಳಿ ಮಟ್ಟದ ಅಧಿಕಾರಿಗಳನ್ನು ಒಳಗೊಂಡ ಹೋಬಳಿ ಮಟ್ಟದ ಮತ್ತು ವಿಧಾನಸಭಾ ಕ್ಷೇತ್ರ ಮಟ್ಟದ ದಿಶಾ ಉಪ ಸಮಿತಿಗಳನ್ನು ರಚಿಸಬೇಕೆಂದು ಸೂಚಿಸಿದರು.

ಕೇಂದ್ರ ಸರ್ಕಾರದಿಂದ ಹೆಚ್ಚಿಗೆ ಅನುದಾನ ಪಡೆಯಲು ಮತ್ತು ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಹಾಲಿ ಮತ್ತು ಮಾಜಿ ಚುನಾಯಿತ ಜನಪ್ರತಿನಿಧಿಗಳನ್ನು ಸಮಿತಿಯಲ್ಲಿ ಸದಸ್ಯರನ್ನಾಗಿ ನೇಮಕ ಮಾಡಬೇಕು. ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಸಿದ್ಧಪಡಿಸಲು ಉದ್ದೇಶಿಸಿರುವ ‘ವಿಷನ್‌ ತುಮಕೂರು -2025’ ಕುರಿತು ವ್ಯಾಪಕ ಜನ ಜಾಗೃತಿ ಕೈಗೊಳ್ಳಬೇಕು. ಇದರಿಂದ ಸ್ಥಳೀಯ ಸಂಸ್ಥೆಗಳ ಮಟ್ಟದ ಅಭಿವೃದ್ಧಿ ಯೋಜನೆಗಳ ಕಡೆ ವಿಶೇಷ ಗಮನಹರಿಸಲು ಅನೂಕೂಲವಾಗುತ್ತದೆ ಎಂದು ಹೇಳಿದರು. 

ಮುಂದಿನ ದಿಶಾ ಸಭೆಯಲ್ಲಿ ಸಮಿತಿಯು ಪೂರ್ಣ ಪ್ರಮಾಣದಲ್ಲಿ ರಚನೆಯಾಗಿ ಸಂಬಂಧಿಸಿದ ಎಲ್ಲಾ ಸದಸ್ಯರು, ಅಧಿಕಾರಿಗಳು ತಪ್ಪದೇ ಸಭೆಗೆ ಹಾಜರಾಗಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಬೇಕೆಂದರಲ್ಲದೆ ಕೇಂದ್ರ ಸರ್ಕಾರವು ರಾಜ್ಯದ ವಿವಿಧ ಇಲಾಖೆಗಳ ಮೂಲಕ ಸುಮಾರು 41 ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಈ ಯೋಜನೆಗಳ ಎಲ್ಲಾ ಅನುಷ್ಠಾನಾಧಿಕಾರಿಗಳು ದಿಶಾ ಸಮಿತಿ ಸದಸ್ಯರಾಗಿರುತ್ತಾರೆ ಎಂದು ತಿಳಿಸಿದ ಸಂಸದರು ವಿವಿಧ ಇಲಾಖಾಧಿಕಾರಿಗಳಿಂದ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಮಾಹಿತಿ ಪಡೆದರು.

ಒಳಚರಂಡಿ, ಉದ್ಯಾನವನ ಅಭಿವೃದ್ಧಿ:

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಾತನಾಡಿ, ನಗರದಲ್ಲಿ ಕೇಂದ್ರದ ಅಮೃತ್‌ ಯೋಜನೆಯಡಿ ಒಳಚರಂಡಿ, ಮಳೆನೀರು ಚರಂಡಿ, ನೀರು ಪೂರೈಕೆ, ನಗರ ಸಾರಿಗೆ (ಮೋಟಾರು ರಹಿತ), ಹಸಿರು ವಲಯ ಹಾಗೂ ಉದ್ಯಾನವನ ಅಭಿವೃದ್ಧಿಗಾಗಿ 10.38 ಕೋಟಿ ರು. ಖರ್ಚು ಮಾಡಲಾಗಿದೆ. ಒಟ್ಟಾರೆ ನಿಗದಿಯಾಗಿದ್ದ 32 ಕಾಮಗಾರಿಗಳ ಪೈಕಿ 20 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದ್ದು, ಉಳಿದಂತೆ 9 ಕಾಮಗಾರಿ ಪ್ರಗತಿಯಲ್ಲಿದ್ದು, 1 ಕಾಮಗಾರಿ ಟೆಂಡರು ಹಂತದಲ್ಲಿದೆ ಎಂದು ಮಾಹಿತಿ ನೀಡಿದರು.

156 ಕುಡಿಯುವ ನೀರು ಕಾಮಗಾರಿ:

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್‌ ಇಫ್ತಿಕಾರ್‌ ಅಹಮದ್‌ ಸಭೆಗೆ ಮಾಹಿತಿ ನೀಡಿ ಮಾತನಾಡಿ, ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಗಾಗಿ ಜಿಲ್ಲೆಗೆ 6.08 ಕೋಟಿ ರು. ಬಿಡುಗಡೆಯಾಗಿದ್ದು, ಈವರೆಗೂ 156 ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಅಲ್ಲದೆ ಜಿಲ್ಲೆಯಲ್ಲಿ 1470 ಶುದ್ಧ ಕುಡಿಯುವ ನೀರಿನ ಘಟಕ(ಆರ್‌ಓ ಪ್ಲಾಂಟ್‌)ಗಳನ್ನು ಸ್ಥಾಪಿಸಲಾಗಿದ್ದು, ಹೊಸದಾಗಿ 115 ಘಟಕಗಳನ್ನು ನಿರ್ಮಿಸುವ ಯೋಜನೆ ತಯಾರಿಸಲಾಗುತ್ತಿದೆ ಹಾಗೂ 1466 ಆರ್‌ಓ ಘಟಕಗಳನ್ನು ಸ್ಥಾಪಿಸುವ ಕಾಮಗಾರಿ ಕಾರ್ಯಾರಂಭ ಮಾಡಲಾಗಿದ್ದು, ಈ ಪೈಕಿ 62 ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲವೆಂದು ತಿಳಿಸಿದರು.

ಆರ್‌ಓ ಘಟಕ ಕೆಡುತ್ತಿವೆ:

ಗ್ರಾಮೀಣ ಜನರು ಕುಡಿಯುವ ನೀರಿನ ತೊಂದರೆ ಅನುಭವಿಸುವುದು ಈವರೆಗೂ ಕೊನೆಗೊಂಡಿಲ್ಲ. ಆರ್‌ಓ ಘಟಕ ಸ್ಥಾಪಿಸಿ 3 ತಿಂಗಳೊಳಗೆ ಕೆಟ್ಟುಹೋಗುತ್ತಿದೆ. ಘಟಕ ಸ್ಥಾಪಿಸುವ ಏಜೆನ್ಸಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರಲ್ಲದೆ ಜಿಲ್ಲೆಯಲ್ಲಿ ಕೊರೆಯಲಾದ 149 ಕೊಳವೆ ಬಾವಿಗಳಿಗೆ ಇದುವರೆಗೂ ವಿದ್ಯುತ್‌ ಸಂಪರ್ಕ ಕಲ್ಪಿಸದಿರುವ ಬಗ್ಗೆ ಸ್ಪಷ್ಟೀಕರಣ ಕೇಳಿದಾಗ ಉತ್ತರಿಸಿದ ಬೆಸ್ಕಾಂ ಇಂಜಿನಿಯರ್‌ ಇದುವರೆಗೂ ಕೊರೆದ ಕೊಳವೆ ಬಾವಿಗಳ ವಿದ್ಯುತ್‌ ಸಂಪರ್ಕಕ್ಕೆ ಬೆಸ್ಕಾಂ ಸಂಸ್ಥೆಗೆ ನೋಂದಣಿಗೆ ಮನವಿ ಸಲ್ಲಿಸಿರುವುದಿಲ್ಲ. ನೋಂದಣಿ ಮಾಡಿಸಿದ ಕೂಡಲೇ ವಿದ್ಯುತ್‌ ಸಂಪರ್ಕಕ್ಕೆ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.

11 ಕೋಟಿ ರು. ಬಿಡುಗಡಯಾಗಿದ್ದರೂ ಕ್ರಮವಿಲ್ಲ:

ಜಿಲ್ಲಾಧಿಕಾರಿ ಡಾ. ಕೆ.ರಾಕೇಶ್‌ ಕುಮಾರ್‌ ಮಾತನಾಡಿ, ಕುಡಿಯುವ ನೀರಿನ ಕಾಮಗಾರಿಗಳಿಗಾಗಿ ಸರ್ಕಾರದಿಂದ 11 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದರೂ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆಯು ಕ್ರಮ ಕೈಗೊಂಡಿಲ್ಲ. ಕ್ರಿಯಾ ಯೋಜನೆ ಅನುಮೋದನೆ ದೊರೆಯದ ಕೊಳವೆ ಬಾವಿಗಳಿದ್ದರೆ ಅನುಮೋದನೆಗಾಗಿ ಕಾಯದೇ ಕೂಡಲೇ ಬೆಸ್ಕಾಂ ಸಂಸ್ಥೆಗೆ ವಿದ್ಯುದ್ದೀಕರಣಕ್ಕಾಗಿ ನೋಂದಾಯಿಸಿಕೊಳ್ಳಬೇಕೆಂದು ಸೂಚಿಸಿದರು.

102.60 ಕಿಮೀ ರೈಲ್ವೆ ಮಾರ್ಗ:

ತುಮಕೂರು-ರಾಯದುರ್ಗ ರೈಲ್ವೆ ಯೋಜನೆ ಪ್ರಗತಿಗೆ ಸಂಬಂಧಿಸಿದಂತೆ ಸಂಸದರ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿ ಹಾಗೂ ರೈಲ್ವೆ ಅಧಿಕಾರಿಗಳು ಈ ಯೋಜನೆಯನ್ನು ಜಿಲ್ಲೆಯ 1217.60 ಎಕರೆ ಪ್ರದೇಶದಲ್ಲಿ 102.60 ಕಿ.ಮೀ. ಉದ್ದದ ರೈಲ್ವೆ ಮಾರ್ಗವನ್ನು ನಿರ್ಮಿಸಲು ಅನುಷ್ಠಾನಗೊಳಿಸಲಾಗುತ್ತಿದೆ. ತುಮಕೂರು, ಕೊರಟಗೆರೆ, ಮಧುಗಿರಿ ಹಾಗೂ ಪಾವಗಡ ತಾಲ್ಲೂಕುಗಳ ಮೂಲಕ ಹಾದು ಹೋಗುವ ಈ ರೈಲು ಮಾರ್ಗದ ಕಾಮಗಾರಿಯು ಭೂಸ್ವಾಧೀನ ಸಮಸ್ಯೆಯಿಂದ ವಿಳಂಬವಾಗಿದೆ. ಈವರೆಗೂ ಯೋಜನಾನುಷ್ಠಾನಕ್ಕಾಗಿ 149 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಭೂಸ್ವಾಧೀನಕ್ಕೊಳಗಾದ ಜಮೀನಿನ ಮಾಲೀಕರಿಗೆ ಪರಿಹಾರ ನೀಡಲಾಗುತ್ತಿದೆ. ಅದೇ ರೀತಿ ತುಮಕೂರು-ದಾವಣಗೆರೆ, ತುಮಕೂರು-ಅರಸೀಕೆರೆ ದ್ವಿಪಥ ರೈಲ್ವೇ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ನಂತರ ಸಂಸದರು ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಚತುಷ್ಪಥ ರಸ್ತೆ ನಿರ್ಮಾಣಕ್ಕೆ 4 ಪ್ಯಾಕೇಜ್‌ನಡಿ ಅಭಿವೃದ್ಧಿ ಕಾರ್ಯವನ್ನು ಅಕ್ಟೋಬರ್‌ನಲ್ಲಿ ಕೈಗೆತ್ತಿಕೊಳ್ಳುವ ಬಗ್ಗೆ ಸಂಬಂಧಿಸಿದ ಅಧಿಕಾರಿಯಿಂದ ಮಾಹಿತಿ ಪಡೆದರು.

ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ ತುಮಕೂರು ಹಾಗೂ ಶಿರಾ ತಾಲ್ಲೂಕಿನಲ್ಲಿ 1091.90 ಕಿ.ಮೀ. ಉದ್ದದ 194 ರಸ್ತೆಗಳನ್ನು ಅಭಿವೃದ್ಧಿಪಡಿಸಿ 24868.84 ರು. ಖರ್ಚು ಮಾಡಲಾಗಿದ್ದು, ವಾರ್ಷಿಕ ನಿರ್ವಹಣೆಯಡಿ ಕಾಲಕಾಲಕ್ಕೆ ಮರು ಡಾಂಬರೀಕರಣಗೊಳಿಸಲಾಗುತ್ತಿದೆ ಎಂದು ಪಿಎಂಜಿಎಸ್‌ವೈ ಎಂಜಿನಿಯರ್‌ ಸಭೆಗೆ ಮಾಹಿತಿ ನೀಡಿದರು.

ಬಯೋಮೆಟ್ರಿಕ್‌ ಪದ್ಧತಿ:

ನಕಲಿ ಪಡಿತರ ಚೀಟಿಗಳ ವಿತರಣೆ ಬಗ್ಗೆ ಮಾಹಿತಿ ಒದಗಿಸಲು ಸಂಸದರು ಸೂಚಿಸಿದಾಗ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸಯ್ಯ ಮಾತನಾಡಿ, ಜಿಲ್ಲೆಯಲ್ಲಿ ಬಯೋ ಮೆಟ್ರಿಕ್‌ ಪದ್ಧತಿಯಿದ್ದು, ಇಲಾಖೆ ಸಂಪೂರ್ಣವಾಗಿ ಗಣಕೀಕರಣಗೊಂಡಿರುವುದರಿಂದ ನಕಲಿ ಪಡಿತರ ಚೀಟಿ ವಿತರಣೆಗೆ ಆಸ್ಪದವಿಲ್ಲ. ಎಲ್ಲಾ ಪಡಿತರ ಚೀಟಿಗಳನ್ನು ಆಧಾರ್‌ ಲಿಂಕ್‌ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಕೇಂದ್ರದ ಉಜ್ವಲ ಯೋಜನೆಯಡಿ ಬಿಪಿಎಲ್‌ ಕುಟುಂಬಕ್ಕೆ ಅಡುಗೆ ಅನಿಲ ಸಂಪರ್ಕ ಕಾಮಗಾರಿ ಪ್ರಗತಿಯಲ್ಲಿದ್ದು, ಈವರೆಗೆ 118161 ಬಿಪಿಎಲ್‌ ಕುಟುಂಬದ ಮನೆಗಳಿಗೆ ಅನಿಲ ಸಂಪರ್ಕ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ನೇರ ಖಾತೆಗೆ:


ಖಜಾನೆ 1 ರಿಂದ ಖಜಾನೆ 2 ಗೆ ಬದಲಾಗಿರುವುದರಿಂದ ಜಿಲ್ಲೆಯಲ್ಲಿ ವಿತರಿಸಲಾಗುತ್ತಿರುವ ವೃದ್ದಾಪ್ಯವೇತನ, ವಿಧವಾ ವೇತನ, ಅಂಗವಿಕಲ ವೇತನ, ಮತ್ತಿತರ ಪಿಂಚಣಿ ಮೊತ್ತವನ್ನು ಫಲಾನುಭವಿಗಳಿಗೆ ವಿತರಿಸಲು ವಿಳಂಬವಾಗುತ್ತಿದೆ. ಬರುವ ದಿನಗಳಲ್ಲಿ ಮನಿ ಆರ್ಡರ್‌ ಮೂಲಕ ವಿತರಣೆ ಮಾಡಲಾಗುತ್ತಿರುವ ಪಿಂಚಣಿ ಧನವನ್ನು ಆರ್‌ಟಿಜಿಎಸ್‌ ಮೂಲಕ ನೇರವಾಗಿ ಅವರ ಖಾತೆಗೆ ವರ್ಗಾಯಿಸಲು ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿಗಳು ಸಂಸದರ ಗಮನಕ್ಕೆ ತಂದರು.

ಹೆಲ್ತ್‌ ಕಾರ್ಡ್‌:

ಕೇಂದ್ರದ ಆಯುಷ್ಮಾನ್‌ ಆರೋಗ್ಯ ಭಾರತ್‌ ಯೋಜನೆಯಡಿ ಜಿಲ್ಲೆಯಲ್ಲಿರುವ 27ಲಕ್ಷ ಜನಸಂಖ್ಯೆಯ ಪೈಕಿ ಕೇವಲ 260000 ಫಲಾನುಭವಿಗಳಿಗೆ ಮಾತ್ರ ಹೆಲ್ತ್‌ ಕಾರ್ಡ್‌ ವಿತರಣೆಯಾಗಿದ್ದು, ತ್ವರಿತವಾಗಿ ಎಲ್ಲಾ ಫಲಾನುಭವಿಗಳಿಗೂ ವಿತರಿಸಲು ಕ್ರಮ ಕೈಗೊಳ್ಳಬೇಕು. ಹೆಲ್ತ್‌ ಕಾರ್ಡ್‌ ವಿತರಣೆಗೆ ನಿಗಧಿತ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕ ವಸೂಲಿ ಮಾಡಬಾರದೆಂದು ಡಿಹೆಚ್‌ಓ ಡಾ. ಚಂದ್ರಿಕಾ ಅವರಿಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಲತಾ ರವಿಕುಮಾರ್‌, ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಯೋಜನಾ ನಿರ್ದೇಶಕ ಮಾಂಕಾಳಪ್ಪ, ಮತ್ತಿತರ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಚಿತ್ರದುರ್ಗ ಸಂಸದ ನಾರಾಯಣಸ್ವಾಮಿ ಬೇಸರ

ಚಿತ್ರದುರ್ಗ ಸಂಸದ ನಾರಾಯಣಸ್ವಾಮಿ ಮಾತನಾಡಿ, ಪಾವಗಡ ಹಾಗೂ ಶಿರಾ ತಾಲೂಕಿನಲ್ಲಿರುವ ಸರ್ಕಾರಿ ಹಾಗೂ ಖಾಸಗಿ ನಿವೇಶನಗಳು, ನಿವೇಶನ ಸಹಿತ ಹಾಗೂ ರಹಿತ ಕುಟುಂಬಗಳು, ಸ್ಮಶಾನ ಭೂಮಿಗಳ ಬಗ್ಗೆ ಸಮೀಕ್ಷೆ ನಡೆಸಿ ಮಾಹಿತಿ ಒದಗಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ವಸಂತನರಸಾಪುರ ಹಾಗೂ ಶಿರಾ ಕೈಗಾರಿಕಾ ಪ್ರದೇಶದಲ್ಲಿ ಪರಿಶಿಷ್ಟಜಾತಿ/ಪಂಗಡದವರಿಗೆ ಶೇ. 22.5 ಪ್ರದೇಶವನ್ನು ಮೀಸಲಿಡಬೇಕು. ಈ ಬಗ್ಗೆ ಪತ್ರಿಕಾ ಜಾಹೀರಾತು ನೀಡಿ ಸಮುದಾಯದವರಿಗೆ ಮಾಹಿತಿ ತಿಳಿಯುವಂತೆ ಪ್ರಚಾರ ನೀಡಬೇಕು ತಾಕೀತು ಮಾಡಿದರು.

ಪಾವಗಡ ತಾಲ್ಲೂಕು ಪೆಮ್ಮನಹಳ್ಳಿ ಗೊಲ್ಲರಹಟ್ಟಿಗೆ ಇತ್ತೀಚೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಕೆಲಸವಾಗಿಲ್ಲ. ಈ ಹಟ್ಟಿಗೆ ಸೂಕ್ತ ರಸ್ತೆ ಸಂಪರ್ಕವಿಲ್ಲ, ಚರಂಡಿ ವ್ಯವಸ್ಥೆ, ಶಾಲಾ ಅಭಿವೃದ್ಧಿ ಕಂಡಿಲ್ಲದಿರುವುದು ತಮ್ಮ ಗಮನಕ್ಕೆ ಬಂದಿದೆ. ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಅವರು ಕೂಡಲೇ ಸಂಬಂಧಪಟ್ಟಅಧಿಕಾರಿಗಳು ಗೊಲ್ಲರಹಟ್ಟಿಗಳ ಅಭಿವೃದ್ಧಿಗೆ ಮುಂದಾಗ ಬೇಕಲ್ಲದೆ ಅಲ್ಲಿರುವ ಕಂದಾಚಾರಗಳು, ಮೌಢ್ಯತೆ ಬಗ್ಗೆ ಅರಿವು ಮೂಡಿಸಬೇಕೆಂದರು.

ರೈತರಿಗೆ 6.81 ಕೋಟಿ ರು. ಬಾಕಿ

ಜಂಟಿ ಕೃಷಿ ನಿರ್ದೇಶಕ ಜಯಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯಡಿ 9569 ರೈತರ ಅರ್ಜಿಗಳು ಬ್ಯಾಂಕಿನಿಂದ ಕಾಲಮಿತಿಯೊಳಗೆ ಸಲ್ಲಿಸದ ಕಾರಣ ತಿರಸ್ಕೃತಿಗೊಂಡಿತ್ತು. ನಂತರ ಪರಿಶೀಲಿಸಿದಾಗ ಈ ಅರ್ಜಿಗಳ ಪೈಕಿ 7957 ಅರ್ಜಿ ವಿಮಾ ಪರಿಹಾರ ಪಡೆಯಲು ಅರ್ಹಗೊಂಡಿವೆ. ಆದರೆ ರೈತರಿಗೆ ವಿತರಿಸಬೇಕಾದ 6.81 ಕೋಟಿ ರು. ವಿಮಾ ಮೊತ್ತದ ಹಣವನ್ನು ಸಂಬಂಧಿಸಿದ ಬ್ಯಾಂಕುಗಳೇ ಪಾವತಿ ಮಾಡಬೇಕೆಂದು ಸರ್ಕಾರದ ಅಪರ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಸ್ಮಾ ರ್ಟ್‌ಸಿಟಿ ಗೆ 112.46 ಕೋಟಿ ವೆಚ್ಚ


ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್‌ಕುಮಾರ್‌ ಮಾತನಾಡಿ, ತುಮಕೂರು ನಗರವು ಕೇಂದ್ರದ ಸ್ಮಾರ್ಟ್‌ ಸಿಟಿ ಯೋಜನೆಗೆ ಆಯ್ಕೆಯಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ 50:50 ಅನುಪಾತದ ಅನುದಾನದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಈವರೆಗೂ ಸ್ಮಾರ್ಟ್‌ ಸಿಟಿ ಯೋಜನೆಯಡಿ ಸ್ಮಾರ್ಟ್‌ ಲಾಂಜ್‌, ಡಿಜಿಟಲ್‌ ಲೈಬ್ರರಿ, ಮಲ್ಟಿಡೈಮೆನ್ಷನಲ್‌ ಆಡಿಟೋರಿಯಂ, ಪೆರಿಫರಲ್‌ ರಿಂಗ್‌ ರಸ್ತೆ ನಿರ್ಮಾಣ, ಸ್ಮಾರ್ಟ್‌ ತರಗತಿ, ಸ್ಮಾರ್ಟ್‌ ರಸ್ತೆ, ಬಸ್‌ ಶೆಲ್ಟರ್‌, ಅಮಾನಿಕರೆ ಅಭಿವೃದ್ಧಿ, ಮತ್ತಿತರ ಕಾಮಗಾರಿಗಳನ್ನು ಕೈಗೊಂಡು ಕಾಮಗಾರಿಗಳು ಪ್ರಗತಿಯಲ್ಲಿವೆ. ಈವರೆಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ 112.46 ಕೋಟಿ ರೂ.ಗಳನ್ನು ವಿವಿಧ ಕಾಮಗಾರಿಗಳಿಗೆ ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.


13 ಸಾವಿರ ಕೋಟಿ ರು. ಬಿಡುಗಡೆ


ಗಣಿಬಾಧಿತ ಪ್ರದೇಶಗಳಾದ ತುಮಕೂರು, ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದಿಂದ 13 ಸಾವಿರ ಕೋಟಿ ರೂ. ಬಿಡುಗಡೆಯಾಗಿದ್ದು, ನಿಯಮಾವಳಿಯನ್ವಯ ಕ್ರಿಯಾ ಯೋಜನೆ ತಯಾರಿಸಿ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಪದ್ಮಜ ಅವರಿಗೆ ಸಂಸದ ಜಿ.ಎಸ್‌.ಬಸವರಾಜು ಅವರು ಸೂಚಿಸಿದರು.