ಹೆಚ್ಚಿದ ಒಳಹರಿವು: ಯಾವುದೇ ಕ್ಷಣದಲ್ಲಿ ಕೃಷ್ಣಾ ನದಿಗೆ ನೀರು
* ಕೃಷ್ಣ ನದಿಪಾತ್ರದ ಜನರು ಜಾಗ್ರತೆಯಿಂದಿರಲು ಸಲಹೆ
* ಬಹುತೇಕ ಭರ್ತಿಯಾದ ಆಲಮಟ್ಟಿ ಜಲಾಶಯ
* ಬಸವಸಾಗರಕ್ಕೆ 40 ಸಾವಿರ ಕ್ಯುಸೆಕ್ ನೀರಿನ ಒಳಹರಿವು
ಬಸವರಾಜ ಎಂ. ಕಟ್ಟಿಮನಿ
ಹುಣಸಗಿ(ಜೂ.23): ಆಲಮಟ್ಟಿ ಲಾಲ ಬಹುದ್ದೂರ ಶಾಸ್ತ್ರೀ ಜಲಾಶಯದಿಂದ ಬಸವಸಾಗರ ಜಲಾಶಯಕ್ಕೆ 40 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಬಸವಸಾಗರ ಜಲಾಶಯದಿಂದ ಯಾವುದೇ ಕ್ಷಣದಲ್ಲಾದರೂ ಕೃಷ್ಣ ನದಿಗೆ ನೀರು ಹರಿಬಿಡಲಾಗುವುದು ಎಂದು ಆಣೆಕಟ್ಟು ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಶಂಕರ ನಾಯ್ಕೋಡಿ ತಿಳಿಸಿದ್ದಾರೆ.
ಒಳ ಹರಿವು ಹೆಚ್ಚಾಗುವ ಸಾಧ್ಯತೆ:
519.60 ಮೀ ಗಳಷ್ಟು ನೀರು ಸಂಗ್ರಹ ಸಾಮರ್ಥ್ಯವಿರುವ ಆಲಮಟ್ಟಿ ಲಾಲ ಬಹುದ್ದೂರ ಶಾಸ್ತ್ರೀ ಜಲಾಶಯದ ನೀರಿನ ಸಂಗ್ರಹ ಮಟ್ಟ 516.75 ಮೀ ಗಳಷ್ಟು ಏರಿಕೆಯಾಗಿದೆ. 123.08 ಟಿಎಂಸಿ ನೀರು ಸಂಗ್ರಹವಿರುವ ಜಲಾಶಯದಲ್ಲಿ ಸದ್ಯ 81.421 ಟಿಎಂಸಿ ನೀರು ಸಂಗ್ರಹವಾಗಿದ್ದು, ಇನ್ನು ಜಲಾಶಯಕ್ಕೆ ಒಳ ಹರಿವು ಹೆಚ್ಚಾಗುವ ಸಾಧ್ಯತೆಗಳಿರುವ ಕಾರಣ ನೀರಿನ ಸಂಗ್ರಹ ಮಟ್ಟವನ್ನು ಕಾಯ್ದಕೊಂಡು ಮಂಗಳವಾರ ರಾತ್ರಿ ವೇಳೆಗೆ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಸುಮಾರು 40 ಸಾವಿರ ಕ್ಯುಸೆಕ್ ಪ್ರಮಣದ ನೀರನ್ನು ಹರಿಬಿಡುತ್ತದೆ.
ದೇವದುರ್ಗ: ಕೃಷ್ಣಾ ನದಿಗೆ 13 ಸಾವಿರ ಕ್ಯೂಸೆಕ್ ನೀರು
ಪಶ್ಚಿಮ ಘಟ್ಟಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕಳೆದ ಒಂದು ವಾರದಿಂದ ಆಲಮಟ್ಟಿಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಾಗುತ್ತಿದ್ದು, ಮಂಗಳವಾರ ನೀರಿನ ಒಳಹರಿವಿನಲ್ಲಿ ಗಣನೀಯ ಏರಿಕೆಯಾಗಿದ್ದು, ಆಲಮಟ್ಟಿಜಲಾಶಯಕ್ಕೆ 1ಲಕ್ಷದ 30 ಸಾವಿರ ಕ್ಯುಸೆಕ್ ನೀರಿನ ಒಳ ಹರಿವು ಬರುತ್ತಿದ್ದು, ಜಲಾಶಯ ಸಂಪೂರ್ಣವಾಗಿ ಭರ್ತಿಯಾಗುತ್ತಿದೆ.
ತಾಲೂಕಿನ ನಾರಾಯಣಪುರದ ಬಸವಸಾಗರ ಜಲಾಶಯವು ಕೂಡಾ ಭರ್ತಿಯಾಗುವ ಲಕ್ಷಣಗಳು ಗೋಚರಿಸುತ್ತಿವೆ. 492.252 ಮೀ ನೀರು ಸಂಗ್ರಹ ಸಾಮರ್ಥ್ಯದ ಬಸವಸಾಗರ ಜಲಾಶಯದಲ್ಲಿ ಸದ್ಯ 489.07 ಮೀ ನೀರು ಸಂಗ್ರಹವಾಗಿದೆ. ಒಳ ಹರಿವಿನಲ್ಲಿ ಇನ್ನು ಏರಿಕೆಯಾಗುವ ಲಕ್ಷಣಗಳು ಇರುವ ಕಾರಣ ಜಲಾಶಯದ ನೀರಿನ ಸಂಗ್ರಹಮಟ್ಟವನ್ನು ಕಾಯ್ದುಕೊಂಡು ಹೆಚ್ಚಿನ ನೀರನ್ನು ಯಾವುದೇ ಸಂದರ್ಭದಲ್ಲಾದರೂ ಕೃಷ್ಣ ನದಿಗೆ ನೀರು ಹರಿಸಲಾಗುತ್ತದೆ.
ನಾರಾಯಣಪುರ ಬಸವಸಾಗರ ಜಲಾಶಯದಿಂದ ಯಾವುದೇ ಕ್ಷಣದಲ್ಲಾದರೂ ಕೃಷ್ಣ ನದಿಗೆ ನೀರು ಹರಿಸಲಾಗುತ್ತದೆ. ನದಿ ತೀರದ ಗ್ರಾಮಗಳ ಜನರು ಜಾಗೃತೆ ವಹಿಸಬೇಕು ಹಾಗೂ ನದಿ ಪಾತ್ರದಲ್ಲಿ ಯಾವುದೇ ಚಟುವಟಿಕೆ ನಡೆಸದಂತೆ ಎಚ್ಚರ ವಹಿಸಬೆಕು ಎಂದು ನಾರಾಯಣಪೂರ ಆಣೆಕಟ್ಟು ವಿಭಾಗದ ಕಾರ್ಯನಿರ್ವಾಹಕ ಅಭಿಯತರ ಶಂಕರ ನಾಯ್ಕೋಡಿ ತಿಳಿಸಿದ್ದಾರೆ.