ಮಹಾ​ರಾಷ್ಟ್ರ ಪಶ್ಚಿಮ ಘಟ್ಟಗಳಲ್ಲಿ ಅಪಾರ ಮಳೆಯಿಂದಾಗಿ ಹೆಚ್ಚು ನೀರು ಬರುವ ಸಾಧ್ಯತೆ| ಕೃಷ್ಣಾ ಕಣಿವೆಯ ಮಹಾರಾಷ್ಟ್ರದ ಬಹುತೇಕ ಅಣೆಕಟ್ಟುಗಳು ಭರ್ತಿ| ವಿಜಯಪುರ ಜಿಲ್ಲೆಯಲ್ಲಿ ಪ್ರವಾಹದ ಆತಂಕವಿಲ್ಲ| 123.081 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 92 ಟಿಎಂಸಿ ಸಂಗ್ರಹ|

ಆಲಮಟ್ಟಿ(ಆ.06): ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಸುರಿಯುತ್ತಿರುವ ಮಳೆಯ ಕಾರಣ ಮುಂದಿನ ಎರಡು ದಿನಗಳಲ್ಲಿ ಆಲಮಟ್ಟಿ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರಲಿದೆ. ಮಹಾರಾಷ್ಟ್ರರದ ಕೃಷ್ಣಾ ಕಣಿವೆಯ ನಾನಾ ಕಡೆ ಪ್ರತಿ ಕಡೆಯೂ 200 ಮಿಮೀಗೂ ಹೆಚ್ಚಿನ ಮಳೆಯಾಗಿದೆ. ಆ ನೀರು ಎರಡು ದಿನದಲ್ಲಿ ಆಲಮಟ್ಟಿಜಲಾಶಯ ತಲುಪಲಿದ್ದು ಲಕ್ಷ ಕ್ಯುಸೆಕ್‌ ಒಳಹರಿವು ದಾಟಲಿದೆ ಎಂದು ಜಲಾಶಯ ಮೂಲಗಳು ತಿಳಿಸಿವೆ.

ಬೆಳಗ್ಗೆ ಕೇವಲ 3844 ಕ್ಯುಸೆಕ್‌ ಇದ್ದ ಒಳಹರಿವು ಸಂಜೆಯ ವೇಳೆಗೆ 23,000 ಕ್ಯುಸೆಕ್‌ಗೆ ಏರಿಕೆಯಾಗಿದೆ. ಗುರುವಾರ ಒಳಹರಿವು ಇನ್ನೂ ಹೆಚ್ಚಲಿದೆ. ಬೆಳಗ್ಗೆ ಜಲಾಶಯದಿಂದ 5000 ಕ್ಯುಸೆಕ್‌ ನೀರನ್ನು ಬಿಡಲಾಗುತ್ತಿತ್ತು. ಆದರೆ ಸಂಜೆಯ ವೇಳೆಗೆ ಮುಂಜಾಗ್ರತಾ ಕ್ರಮವಾಗಿ ಹೊರಹರಿವನ್ನು 17,000 ಕ್ಯುಸೆಕ್‌ಗೆ ಹೆಚ್ಚಿಸಲಾಗಿದೆ ಎಂದು ಜಲಾಶಯದ ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಮಾಜಿ ಅಧ್ಯಕ್ಷನ ಫೋನ್‌ನಿಂದ ಅಶ್ಲೀಲ ಫೋಟೋ ಪೋಸ್ಟ್: ಫುಲ್ ವೈರಲ್

ಕೃಷ್ಣಾ ಕಣಿವೆಯ ಮಹಾರಾಷ್ಟ್ರದ ಬಹುತೇಕ ಅಣೆಕಟ್ಟುಗಳು ಭರ್ತಿಯತ್ತ ಸಾಗಿವೆ. ಇದರಿಂದಾಗಿ ಬುಧವಾರ ಕರ್ನಾಟಕಕ್ಕೆ ಬಂದು ಸೇರುವ ರಾಜಾಪುರ ಬ್ಯಾರೇಜ್‌ ಬಳಿ ಕೃಷ್ಣೆಯ ಹರಿವು 35,625 ಕ್ಯುಸೆಕ್‌ ಇದ್ದು, ಅದು ರಾತ್ರಿ ವೇಳೆಗೆ ಹೆಚ್ಚಾಗಲಿದೆ ಎಂದು ಮೂಲಗಳು ತಿಳಿಸಿವೆ. ಈ ಬಾರಿ ಇನ್ನೂ ಜಲಾಶಯ ಭರ್ತಿಯಾಗಲು ಎರಡು ಮೀಟರ್‌ ಬಾಕಿಯಿದೆ. ಹೀಗಾಗಿ ಪ್ರವಾಹದ ಆತಂಕವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 123.081 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 92 ಟಿಎಂಸಿ ನೀರಿದೆ. ಮಹಾರಾಷ್ಟ್ರದ ಅಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿದ್ದು, ನೀರಿನ ಹರಿವನ್ನು ಗಮನಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.

ಜಿಲ್ಲೆಯಲ್ಲಿ ಜಿಟಿಜಿಟಿ ಮಳೆ

ಜಿಲ್ಲೆಯ ಹಲವೆಡೆ ಬುಧವಾರ ಜಿಟಿಜಿಟಿ ಮಳೆಯಾಗಿದ್ದು, ಇಡೀ ದಿನ ಮೋಡ ಕವಿದ ವಾತಾವರಣವಿತ್ತು. ಆಗಾಗ ಜಿಟಿಜಿಟಿ ಮಳೆ ದಿನವಿಡೀ ಮುಂದುವರಿದಿತ್ತು. ವಿಜಯಪುರ ನಗರದಲ್ಲಿ ಇಡೀ ದಿನ ಮೋಡ ಕವಿದ ವಾತಾರವಣವಿದ್ದು, ಆಗಾಗ ಜಿಟಿಜಿಟಿ ಮಳೆಯಾಯಿತು. ತಿಕೋಟಾ ತಾಲೂಕು ಕೇಂದ್ರ ಸೇರಿದಂತೆ ವಿವಿಧೆಡೆ ಜಿಟಿಜಿಟಿ ಮಳೆಯಾಗಿದೆ. ಬಸವನ ಬಾಗೇವಾಡಿ ತಾಲೂಕಿನಲ್ಲಿಯೂ ಅಲ್ಪ ಪ್ರಮಾಣದ ಮಳೆಯಾಗಿದೆ. ಮುದ್ದೇಬಿಹಾಳ ತಾಲೂಕಿನಲ್ಲಿ ಕೂಡಾ ಸಾಧಾರಣ ಮಳೆಯಾಗಿದೆ. ಚಡಚಣ, ಇಂಡಿ, ತಾಳಿಕೋಟೆ, ನಿಡಗುಂದಿ ತಾಲೂಕುಗಳಲ್ಲಿ ಮೋಡ ಕವಿದ ವಾತಾರವಣವಿತ್ತು. ಆದರೆ ಮಳೆಯಾಗಿಲ್ಲ.