ಬೆಂಗಳೂರು(ಅ.30): ತ್ಯಾಜ್ಯ ನೀರು ಮರುಬಳಕೆ ಉದ್ದೇಶದಿಂದ ನೈಋುತ್ಯ ರೈಲ್ವೆ, ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಕಚೇರಿ ಆವರಣದಲ್ಲಿ 1.81 ಕೋಟಿ ವೆಚ್ಚದಲ್ಲಿ ಐದು ಲಕ್ಷ ಲೀಟರ್‌ ಸಾಮರ್ಥ್ಯದ ತ್ಯಾಜ್ಯ ನೀರು ಶುದ್ಧೀಕರಣ ಘಟಕ ಸ್ಥಾಪಿಸಿದೆ.

ನೂತನ ಘಟಕವು ನಿತ್ಯ ಐದು ಲಕ್ಷ ಲೀಟರ್‌ ತ್ಯಾಜ್ಯದ ನೀರನ್ನು ಶುದ್ಧೀಕರಿಸುವ ಸಾಮರ್ಥ್ಯ ಹೊಂದಿದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್‌) ರೈಲು ನಿಲ್ದಾಣದಲ್ಲಿ ಸಾಮಾನ್ಯ ದಿನಗಳಲ್ಲಿ 168 ರೈಲುಗಳು ಸಂಚರಿಸುತ್ತಿದ್ದು, ನಿತ್ಯ ಸುಮಾರು ಎರಡು ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಇದಕ್ಕಾಗಿ ಸದ್ಯ ರೈಲು ನಿಲ್ದಾಣಕ್ಕೆ ನಿತ್ಯ ಅಗತ್ಯವಿರುವ 40 ಲಕ್ಷ ಲೀಟರ್‌ ನೀರನ್ನು ಬೆಂಗಳೂರು ಜಲಮಂಡಳಿಯಿಂದ ಪಡೆಯಲಾಗುತ್ತಿದೆ.

2003ರಲ್ಲಿ ಸ್ಥಾಪಿಸಿರುವ ಎಂಟು ಲಕ್ಷ ಲೀಟರ್‌ ಸಾಮರ್ಥ್ಯದ ತ್ಯಾಜ್ಯ ನೀರು ಶುದ್ಧೀಕರಣ ಘಟಕದಿಂದ ಪಡೆದ ಶುದ್ಧೀಕರಿಸಿದ ನೀರನ್ನು ರೈಲ್ವೆ ಬೋಗಿ, ಶೌಚಗೃಹ ಸ್ವಚ್ಛತೆ ಸೇರಿ ಇನ್ನಿತರ ಕಾರ್ಯಕ್ಕೆ ಬಳಸಲಾಗುತ್ತಿದೆ. ಆದರೆ ರೈಲು ನಿಲ್ದಾಣದ ವೈಟಿಂಗ್‌ ರೂಂ, ವಿಶ್ರಾಂತಿ ಕೊಠಡಿ, ಪಾವತಿಸಿ ಬಳಸುವ ಶೌಚಾಲಯ, ಕಿಚನ್‌, ವಿಭಾಗೀಯ ಕಚೇರಿ, ಟಿಕೆಟ್‌ ಕಾಯ್ದಿರಿಸುವ ಕಟ್ಟಡ, ಅಧಿಕಾರಿಗಳ ವಿಶ್ರಾಂತಿ ಗೃಹ, ಸಿಸ್ಟಂ ಟ್ರೈನಿಂಗ್‌ ಸೆಂಟರ್‌ನಿಂದ ಉತ್ಪತ್ತಿಯಾಗುವ ತ್ಯಾಜ್ಯದ ನೀರನ್ನು ನೇರವಾಗಿ ಒಳಚರಂಡಿಗೆ ಹರಿಸಲಾಗುತ್ತಿತ್ತು. ಇದನ್ನು ತಪ್ಪಿಸಿ ಈ ನೀರನ್ನು ಶುದ್ಧೀಕರಿಸಿ ಮರುಬಳಕೆ ಮಾಡಲು ಇದೀಗ ಐದು ಲಕ್ಷ ಲೀಟರ್‌ ಸಾಮರ್ಥ್ಯದ ತ್ಯಾಜ್ಯ ನೀರು ಶುದ್ಧೀಕರಣ ಘಟಕ ಸ್ಥಾಪಿಸಲಾಗಿದೆ.

ಪ್ರಸ್ತುತ ರೈಲು ಹಾಗೂ ಪ್ರಯಾಣಿಕರ ಸಂಚಾರ ಕಡಿಮೆ ಇರುವುದರಿಂದ ನಿತ್ಯ 50 ಸಾವಿರ ಲೀಟರ್‌ ತ್ಯಾಜ್ಯದ ನೀರನ್ನು ಮೂರು ಹಂತದಲ್ಲಿ ನೀರನ್ನು ಶುದ್ಧೀಕರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಶುದ್ಧೀಕರಿಸಿ, ಆ ನೀರನ್ನು ರೈಲ್ವೆ ಪಾರ್ಕ್, ಪ್ಲಾಟ್‌ ಫಾಮ್‌ರ್‍ಗಳ ಸ್ವಚ್ಛತೆ, ಶೌಚಾಲಯಗಳ ಸ್ವಚ್ಛತೆ ಸೇರಿದಂತೆ ಇತರೆ ಕಾರ್ಯಗಳಿಗೆ ಮರುಬಳಕೆ ಮಾಡಲಾಗುವುದು.

ರೈಲಿನಲ್ಲಿ ಮಹಿಳಾ ಪ್ರಯಾಣಿಕರ ನೆರವಿಗೆ ಬಂದಿದೆ 'ಮೇರಿ ಸಹೇಲಿ'

ನೀರಿನ ಶುಲ್ಕ ಉಳಿತಾಯ: 

ಈ ನೂತನ ಘಟಕ ಸ್ಥಾಪನೆಯಿಂದ ಜಲಮಂಡಳಿಗೆ ಪಾವತಿಸುವ ನೀರಿನ ಶುಲ್ಕ ಕಡಿಮೆಯಾಗಲಿದೆ. ಪ್ರಸ್ತುತ ಜಲಮಂಡಳಿಗೆ ಒಂದು ಲಕ್ಷ ಲೀಟರ್‌ ನೀರಿಗೆ 10,800 ಪಾತಿಸಲಾಗುತ್ತಿದೆ. ಆದರೆ ಇದೀಗ ಒಂದು ಲಕ್ಷ ಲೀಟರ್‌ ತ್ಯಾಜ್ಯದ ನೀರು ಶುದ್ಧೀಕರಣಕ್ಕೆ ಕೇವಲ 900 ವೆಚ್ಚವಾಗಲಿದೆ ಎಂದು ನೈಋುತ್ಯ ರೈಲ್ವೆ ತಿಳಿಸಿದೆ.