ಸಾ ರಾ ಮಹೇಶ್ ರೋಹಿಣಿ ಸಿಂಧೂರಿ ನಡುವಿನ ವಾಕ್ಸಮರ ಮುಂದುವರಿಕೆ ಸಾ ರಾ ವಿರುದ್ಧ  ಗಂಭೀರ ಆರೋಪ ಮಾಡಿ ರೋಹಿಣಿ ಸಿಂಧೂರಿ  ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವುದಾಗಿ ತಿಳಿಸಿದ ಸಾ ರಾ 

ಮೈಸೂರು (ಜೂ.10): ಮೈಸೂರು ಜಿಲ್ಲಾಧಿಕಾರಿ ಸ್ಥಾನದಿಂದ ವರ್ಗವಾಗಿದ್ದರೂ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಕೆ.ಆರ್‌.ನಗರ ಶಾಸಕ ಸಾ.ರಾ. ಮಹೇಶ್‌ ಅವರ ನಡುವಿನ ಆರೋಪ-ಪ್ರತ್ಯಾರೋಪ ಸರಣಿ ನಿಂತಿಲ್ಲ. 

ಮಹೇಶ್‌ ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿ, ಸಿಂಧೂರಿ ವಿರುದ್ಧ 10 ಅಂಶಗಳ ಆರೋಪ ಹೊರಿಸಿ, ತನಿಖೆ ನಡೆಸಿ, ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದರು. 

ಇದರ ಬೆನ್ನಲ್ಲೇ ರೋಹಿಣಿ ಕೂಡ, ಮೈಸೂರಿನಲ್ಲಿ ಭೂಮಾಫಿಯಾ ಸಕ್ರಿಯವಾಗಿದೆ. ಇವರೆಲ್ಲಾ ಸೇರಿ ನನ್ನನ್ನು ವರ್ಗ ಮಾಡಿಸಿದ್ದರು ಎಂಬ ಅರ್ಥದಲ್ಲಿ ಮಾಹಿತಿ ನೀಡಿದ್ದರು. ಮಾತ್ರವಲ್ಲದೆ ಮಹೇಶ್‌ ಒಡೆತನದ ಚೌಲ್ಟ್ರಿಯನ್ನು ರಾಜಾಕಾಲುವೆ ಮೇಲೆ ನಿರ್ಮಿಸಲಾಗಿದೆ ಎಂದು ಆರೋಪಿಸಿದ್ದರು. 

ಮೈಸೂರು ಹೈಡ್ರಾಮ: ಶಿಲ್ಪಾನಾಗ್‌ ಹೇಳಿಕೆ ಬಗ್ಗೆ ರೋಹಿಣಿ ಸಿಂಧೂರಿ ಕೊಟ್ಟ ಉತ್ತರವಿದು..!

ಇದರಿಂದ ಆಕ್ರೋಶಗೊಂಡಿರುವ ಮಹೇಶ್‌, ಚೌಲ್ಟ್ರಿಯನ್ನು ರಾಜಕಾಲುವೆ ಮೇಲೆ ನಿರ್ಮಿಸಿದ್ದರೆ ಸರ್ಕಾರದ ವಶಕ್ಕೆ ಪಡೆಯಿರಿ. ಇದು ನಿಜವೇ ಆಗಿದ್ದರೆ ನಾನು ಸಾರ್ವಜನಿಕ ಜೀವನದಿಂದ ನಿವೃತ್ತನಾಗುತ್ತೇನೆ ಎಂದು ಸವಾಲು ಹಾಕಿದ್ದಾರೆ.

ಈ ಆರೋಪ ಸುಳ್ಳಾದರೆ ಸಿಂಧೂರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿರುವ ಮಹೇಶ್‌ ಜೂ.10 ರಂದು ಬೆಳಗ್ಗೆ 10.30 ರಿಂದ ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಧರಣಿ ನಡೆಸುವುದಾಗಿ ತಿಳಿಸಿದ್ದಾರೆ.