'ಮೈಸೂರು ಡೀಸಿಯಾಗಿದ್ದ ರೋಹಿಣಿ ವರ್ಗಾವಣೆ ಹಿಂದಿನ ಕಾರಣವೇ ಇದು'
- ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ವರ್ಗಾವಣೆ
- ರೋಹಿಣಿ ವರ್ಗಾವಣೆ ಹಿಂದಿನ ಕಾರಣ ಹೇಳಿದ ಮುಖಂಡ
- ಉದ್ದೇಶಪೂರ್ವಕವಾಗಿ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಟ್ರಾನ್ಸ್‌ಫರ್
ಮೈಸೂರು (ಜೂ.09): ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರು ಭೂ ಮಾಫಿಯಾ, ಮೆಡಿಕಲ್ ಮಾಫಿಯಾ ಹಗರಣ ಬಯಲಿಗೆಳೆಯುತ್ತಾರೆ ಎಂದು ವರ್ಗಾವಣೆ ಮಾಡಿಸಲಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಆರೋಪಿಸಿದರು.
ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕೂಡಲೇ ಮೈಸೂರಿನ ಭೂ ಮಾಫಿಯಾ ಹಾಗೂ ಮೆಡಿಕಲ್ ಮಾಫಿಯಾ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಸಿನಿಮಾ ಆಗುತ್ತಿದೆ ರೋಹಿಣಿ ಜೀವನ : ಭಾರತ ಸಿಂಧೂರಿಗೆ ನಟಿಯೂ ಆಯ್ಕೆ!
ಪಾಲಿಕೆ ಆಯುಕ್ತರಾಗಿದ್ದ ಶಿಲ್ಪಾ ನಾಗ್ ಅವರು ರಿಯಲ್ ಎಸ್ಟೇಟ್ ದಲ್ಲಾಳಿಗಳು ಯಾರ ಮನೆಯಲ್ಲಿರುತ್ತಿದ್ದರು ಎಂಬುದು ಗೊತ್ತಿದೆ ಎನ್ನುತ್ತಾರೆ. ಹಾಗಿದ್ದರೆ, ಭೂ ಮಾಫಿಯಾ, ಮೆಡಿಕಲ್ ಮಾಫಿಯಾ ಹಿಂದೆ ರಾಜ್ಯ ಸರ್ಕಾರ ಇದೆಯೇ? ಅಥವಾ ಮೈಸೂರಿನ ಜನಪ್ರತಿನಿದಿಗಳೇ ಇದ್ದಾರಾ? ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದರು.
ಶಿಲ್ಪಾ ನಾಗ್ ಅವರು ನನ್ನ ಪ್ರತಿಭಟನೆಗೆ ಫಲ ಸಿಕ್ಕಿದೆ ಎನ್ನುತ್ತಾರೆ ಹಾಗಿದ್ದರೆ, ಡೀಸಿ ಅವರನ್ನು ವರ್ಗಾವಣೆ ಮಾಡಿಸುವುದೇ ಅವರ ಉದ್ದೇಶವಾಗಿತ್ತಾ? ಅಥವಾ ಜನಪ್ರತಿನಿಧಿಗಳ ಕೈಗೊಂಬೆಯಾಗಿ ಈ ರೀತಿ ನಿರ್ಧಾರ ಕೈಗೊಂಡರಾ? ಎನ್ನುವ ಬಗ್ಗೆಯೂ ಸಮಗ್ರವಾಗಿ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದರು.
ಈಜುಕೊಳ ವಿಚಾರ : ಸರ್ಕಾರಕ್ಕೆ ಉತ್ತರಿಸಿದ ರೋಹಿಣಿ ಸಿಂಧೂರಿ .
ರಾಜ್ಯದಲ್ಲಿ ಕೊರೋನಾದಿಂದ ಮೃತಪಡುತ್ತಿರುವವರ ಸಂಖ್ಯೆ ಕಡಿಮೆ ಆಗುತ್ತಿಲ್ಲ. ಮೊದಲು ಕೊರೋನಾ ನಿಯಂತ್ರಣಕ್ಕೆ ಆದ್ಯತೆ ನೀಡಿ. ಆ ಮೇಲೆ ಬೇಕಿದ್ದರೆ ಯಾರನ್ನು ಬೇಕಿದ್ದರೂ ಬದಲಾವಣೆ ಮಾಡಿಕೊಳ್ಳಿ. ಜನರು ಸಾಯುವ ಸಂದರ್ಭದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಇವರಿಗೆ ಕೊರೋನಾ ಪರಿಸ್ಥಿತಿ ನಿರ್ವಹಣೆಗಿಂತ ಅಧಿಕಾರವೇ ಮುಖ್ಯ. ಕೊರೋನಾ ಪರಿಸ್ಥಿತಿ ನಿಭಾಯಿಸುವಲ್ಲಿ ರಾಜ್ಯ ಸರ್ಕಾರವು ಸಂಪೂರ್ಣ ವಿಫಲವಾಗಿದೆ ಎಂದು ಅವರು ಆರೋಪಿಸಿದರು.
ಸಾವಿನ ಸಂಖ್ಯೆಯಲ್ಲೂ ಸುಳ್ಳು ಹೇಳಿ, ಸತ್ತವರಿಗೆ ಪರಿಹಾರ ನೀಡುವುದು ಬಿಟ್ಟು ಕಾವೇರಿಯಲ್ಲಿ ಅಸ್ಥಿ ವಿಸರ್ಜಿಸುವ ನಾಟಕವಾಡುತ್ತಿದ್ದಾರೆ. ಸಾಂತ್ವನ ಹೇಳುವುದು ಬಿಟ್ಟು ಕೊರೋನಾದಿಂದ ಮೃತಪಟ್ಟವರಿಗೆ ಮೊದಲು ಪರಿಹಾರ ನೀಡಿ ಎಂದು ಅವರು ಆಗ್ರಹಿಸಿದರು.
ರಾಜ್ಯದ ಐದು ಜಿಲ್ಲೆಗಳಲ್ಲಿ ಈಗಾಗಲೇ ಪೆಟ್ರೋಲ್ ದರ ಶತಕದ ಗಡಿ ದಾಟಿದೆ. ಜನರಿಂದ ಕೇಂದ್ರ ಸರ್ಕಾರ ಸುಲಿಗೆ ಮಾಡುತ್ತಿದೆ. ದಿನ ಬಳಕೆಯ ವಸ್ತುಗಳ ಬೆಲೆಯೂ ಗಗನಕ್ಕೇರಿದೆ. ಜನರು ಬದುಕಲಿಕ್ಕೆ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಂದಿನ ಯುಪಿಎ ಸರ್ಕಾರವು ಪೆಟ್ರೋಲ್ ಬೆಲೆ 18 ಪೈಸೆ ಹೆಚ್ಚಳ ಮಾಡಿದ್ದಕ್ಕೆ ಬಿಜೆಪಿಯವರು ರಸ್ತೆಗಿಳಿದು ಪ್ರತಿಭಟಿಸಿದ್ದರು. ಹೀಗಾಗಿ, ಈಗ ಕಾಂಗ್ರೆಸ್ ಹೋರಾಟಕ್ಕೆ ಜನ ಸ್ಪಂದಿಸಬೇಕು. ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳಿಂದ ಎಲ್ಲರೂ ಹೋರಾಡಬೇಕು ಎಂದು ಅವರು ಕೋರಿದರು.
ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ, ಕಾರ್ಯದರ್ಶಿ ಎಂ. ಶಿವಣ್ಣ ಇದ್ದರು.