Asianet Suvarna News Asianet Suvarna News

ರೈತರ ವಿದ್ಯುತ್‌ ಬಿಲ್‌ ಬಾಕಿ ಮನ್ನಾ: ಸೋಮಣ್ಣ ಭರವಸೆ

ರೈತರು, ಜನಸಾಮಾನ್ಯರು, ಬಡ ಜನತೆಯ ಕೆಲಸಗಳಿಗೆ ಸ್ಪಂದಿಸಿ ಅಧಿಕಾರಿಗಳಿಗೆ ಸಚಿವ ಸೋಮಣ್ಣ ತಾಕೀತು

Waiver of Farmers Electricity Bill Says Minister V Somanna grg
Author
First Published Oct 23, 2022, 11:30 PM IST

ಚಾಮರಾಜನಗರ(ಅ.23):  ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಕರೆಗೆ ಓಗೊಟ್ಟು ನಡೆಸಲಾದ ಕರ ನಿರಾಕರಣೆ ಸಂಬಂಧ ವಿದ್ಯುತ್‌ ಸರಬರಾಜು ನಿಗಮಕ್ಕೆ ರೈತರ ಬಾಕಿ ಇರುವ 25.37 ಕೋಟಿ ರು. ವಿದ್ಯುತ್‌ ಬಿಲ್‌ ಪಾವತಿ ಮನ್ನಾ ಮಾಡಲು ಸಚಿವ ಸಂಪುಟದ ಮುಂದೆ ಇಡಲಾಗುವುದು. ಈ ಸಂಬಂಧ ಈಗಾಗಲೇ ಇಂಧನ ಸಚಿವರ ಜೊತೆ ಚರ್ಚೆ ನಡೆಸಲಾಗಿದೆ. ವಿದ್ಯುತ್‌ ಸರಬರಾಜು ನಿಗಮದ ಅಧಿಕಾರಿಗಳು ರೈತರ ಬಾಕಿ ಪಾವತಿ ಸಂಬಂಧ ಒತ್ತಾಯಿಸಬಾರದು ಎಂದು ಸಚಿವ ವಿ. ಸೋಮಣ್ಣ ನಿರ್ದೇಶನ ನೀಡಿದರು. ನಗರದ ಜಿ.ಪಂ. ಸಭಾಂಗಣದಲ್ಲಿ ಶನಿವಾರ ರೈತರ ಕುಂದುಕೊರತೆ ಸಮಸ್ಯೆಗಳ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದರು.

ಅಧಿಕಾರಿಗಳು ತಮ್ಮ ಕಾರ್ಯ ವೈಖರಿ ಬದಲಿಸಿಕೊಂಡು ರೈತರು, ಜನಸಾಮಾನ್ಯರು, ಬಡವರ ಕೆಲಸಗಳಿಗೆ ಸ್ಪಂದಿಸಬೇಕು. ಜಿಲ್ಲೆಯ ಸವಾಂರ್‍ಗೀಣ ಅಭಿವೃದ್ದಿ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕೆಂದು ತಾಕೀತು ಮಾಡಿದರು. ಜಿಲ್ಲೆಯಲ್ಲಿ ಜನರು ಹಿಂದೆಂದೂ ಕಾಣದ ಮಳೆ, ಪ್ರವಾಹದಿಂದ ತತ್ತರಿಸಿದ್ದಾರೆ. ಸಾಕಷ್ಟುಬೆಳೆ, ಮನೆಗಳಿಗೆ ಹಾನಿಯಾಗಿದೆ. ರಸ್ತೆ, ಸೇತುವೆ ಮೂಲಸೌಕರ್ಯಗಳಿಗೂ ತೊಂದರೆಯಾಗಿದೆ. ಅಧಿಕಾರಿಗಳು ಜನಪರವಾಗಿ ಕೆಲಸ ಮಾಡಿ, ಪರಿಹಾರ ಕಾರ್ಯಗಳಿಗೆ ಮುಂದಾಗಬೇಕು. ಬಡವರಿಗೆ, ರೈತರಿಗೆ ತೊಂದರೆ ಕೊಡಬೇಡಿ. ಸಮರ್ಪಕವಾಗಿ ಸವಲತ್ತು ತಲುಪಿಸಿ ಎಂದು ಸಚಿವರು ತಿಳಿಸಿದರು.

ವಿ. ಸೋಮಣ್ಣ ಸಚಿವನಾಗಲು ನಾಲಾಯಕ್: ಸಿದ್ದರಾಮಯ್ಯ ಕಿಡಿ

ಈಗಾಗಲೇ ಕೋವಿಡ್‌, ಪ್ರಕೃತಿ ವಿಕೋಪಗಳಿಂದ ಜನರು ಸಾಕಷ್ಟುಸಂಕಷ್ಟಅನುಭವಿಸಿದ್ದಾರೆ. ನೊಂದವರ ಅಹವಾಲು ಕೇಳಿದ್ದೇನೆ. ತಾಲೂಕು, ಗ್ರಾಮಗಳ ಜನರ ಸಮಸ್ಯೆ ಪರಿಹಾರಕ್ಕೆ ಇನ್ನಾದರೂ ಕೂಡಲೇ ತೊಡಗಿಕೊಳ್ಳಿ. ಮಳೆಯಿಂದ ಗುಂಡಿ ಬಿದ್ದ ರಸ್ತೆಗಳನ್ನು ಸರಿಪಡಿಸಬೇಕು. ಇದಕ್ಕಾಗಿ ಇನ್ನಷ್ಟುಹಣ ಕೂಡಲೇ ಬಿಡುಗಡೆ ಮಾಡಲಾಗುವುದು. ರಾಜಕಾಲುವೆ, ಕೆರೆಗಳ ತ್ಯಾಜ್ಯ ತೆರವುಗೊಳಿಸಬೇಕು ಎಂದು ಸಚಿವರು ಸೂಚಿಸಿದರು. ಶಾಸಕ ಆರ್‌. ನರೇಂದ್ರ ಮಾತನಾಡಿ, ಜಾಗೇರಿ ಭಾಗದಲ್ಲಿ ಜನರಿಗೆ ವಿದ್ಯುತ್‌ ಸಂಪರ್ಕ ನೀಡುತ್ತಿಲ್ಲ. ಹಳೆಯ ಆದೇಶವನ್ನೇ ಮುಂದೊಡ್ಡಿ, ವಿದ್ಯುತ್‌ ಸಂಪರ್ಕಕ್ಕೆ ತೊಂದರೆ ನೀಡಲಾಗುತ್ತಿದೆ.

ಜಾಗದ ಸಮಸ್ಯೆಯು ಬಹಳ ವರ್ಷಗಳಿಂದ ಬಗೆ ಹರಿದಿಲ್ಲ ಎಂದು ಗಮನಕ್ಕೆ ತಂದರು. ಸಚಿವರು ಪ್ರತಿಕ್ರಿಯಿಸಿ ಈ ಸಮಸ್ಯೆಯನ್ನು ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕಿದೆ. ಅರಣ್ಯ ಇಲಾಖೆ ಅಧಿಕಾರಿಗಳು ವಾಸ್ತಾವಾಂಶ ಆಧಾರಿಸಿ ಟಿಪ್ಪಣಿ ತಯಾರಿಸಬೇಕು.ವಿದ್ಯುತ್‌ ನಿಗಮದ ಅಧಿಕಾರಿಗಳು ಜನರಿಗೆ ತೊಂದರೆ ಕೊಡಬೇಡಿ ಎಂದರು.

ಕಬ್ಬಿನ ಬಗ್ಗೆಯೂ ಚರ್ಚೆ: 

ಕಬ್ಬಿಗೆ ಸೂಕ್ತ ಬೆಲೆ ನೀಡಬೇಕೆಂಬ ವಿಷಯ ಕುರಿತು ಚರ್ಚಿಸಿದ ವೇಳೆ ಸಚಿವ ಸೋಮಣ್ಣ, ಬಣ್ಣಾರಿ ಅಮ್ಮನ್‌ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ಶರವಣ ಹಾಗೂ ಆಹಾರ ಇಲಾಖೆಯ ಉಪನಿರ್ದೇಶಕ ಯೋಗಾನಂದ ಅವರಿಂದ ವಿವರವಾದ ಮಾಹಿತಿ ಪಡೆದರು.

ಶಾಸಕ ಪುಟ್ಟರಂಗಶೆಟ್ಟಿ ಮಾತನಾಡಿ, ಕಬ್ಬು ಕಟಾವು ಸಾಗಾಣೆ ವೆಚ್ಚ ಹೆಚ್ಚಿದ್ದು ಕಬ್ಬು ಬೆಳೆದ ರೈತರಿಗೆ ನಷ್ಟ ಉಂಟಾಗುತ್ತಿದೆ ಎಂದರು.

ಶಾಸಕ ಆರ್‌. ನರೇಂದ್ರ, ಎನ್‌. ಮಹೇಶ್‌ ಇದಕ್ಕೆ ಧ್ವನಿಗೂಡಿಸಿ ರೈತರ ತೊಂದರೆಯನ್ನು ವಿವರಿಸಿದರು. ಸಂಬಂಧಪಟ್ಟ ಸಚಿವರೊಂದಿಗೆ ಸಮಾಲೋಚಿಸುವುದಾಗಿ ತಿಳಿಸಿದರು.

ಶಾಸಕ ಎನ್‌ ಮಹೇಶ್‌, ಚೈನ್‌ಗೇಟ್‌ ಹಾಕುವುದರಿಂದ ಅನಾರೋಗ್ಯದ ವೇಳೆ ಜನರು ವಾಹನಗಳಲ್ಲಿ ಆಸ್ಪತ್ರೆಗೆ ಹೋಗಿ ಬರಲು ತೊಂದರೆಯಾಗುತ್ತಿದೆ. ಅರಣ್ಯ ಇಲಾಖೆ ಈ ಬಗ್ಗೆ ಅಗತ್ಯ ಕ್ರಮವಹಿಸಬೇಕು ಎಂದರು.
ಶಾಸಕ ಸಿ.ಎಸ್‌. ನಿರಂಜನ್‌ ಕುಮಾರ್‌, ಈ ಹಿಂದೆ ಗ್ರಾಮಾಂತರ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಬಸ್ಸುಗಳನ್ನು ಕೋವಿಡ್‌ ಸಂದರ್ಭದಲ್ಲಿ ನಿಲ್ಲಿಸಲಾಗಿತ್ತು. ಆದರೆ ಪುನಹ ಓಡಾಟ ಆರಂಭವಾಗಿಲ್ಲ. ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಗಮನಸೆಳೆದರು.

ಸಚಿವರು ಮಾತನಾಡಿ ವಿದ್ಯಾರ್ಥಿಗಳಿಗೆ, ಜನರಿಗೆ ಅಗತ್ಯವಿರುವ ಕಡೆ ಬಸ್ಸುಗಳ ಓಡಾಟಕ್ಕೆ ಕೂಡಲೇ ಕ್ರಮ ತೆಗೆದುಕೊಳ್ಳಿ. ತಾಲೂಕುಗಳಿಗೆ ತೆರಳಿ ಎಲ್ಲಿ ಹೆಚ್ಚು ಬೇಡಿಕೆ ಇದೆ ಎಂಬುದನ್ನು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿದು ಅನುಕೂಲ ಕಲ್ಪಿಸಿ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಾಣಾಧಿಕಾರಿ ಶ್ರೀನಿವಾಸ್‌ ಅವರಿಗೆ ಸೂಚಿಸಿದರು.

ರೈತ ಮುಖಂಡರಾದ ಅಣಗಳ್ಳಿ ಬಸವರಾಜು ಅವರು ರೈತರ ಸಮಸ್ಯೆಗಳ ಕುರಿತು ಮಾತನಾಡಿದರು. ಎಸ್‌. ಬಸವರಾಜು, ಇತರೆ ರೈತರ ಮುಖಂಡರು, ಕಾವೇರಿ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಜಿ. ನಿಜಗುಣರಾಜು, ಜಿಪಂ ಸಿಇಓ ಕೆ.ಎಂ ಗಾಯಿತ್ರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್‌, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌. ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಎಸ್‌. ಸುಂದರ್‌ ರಾಜ್‌, ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಡಾ. ಸಂತೋಷ್‌ ಕುಮಾರ್‌, ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಗೆ ಸಚಿವ ವಿ. ಸೋಮಣ್ಣ ಕಪಾಳಮೋಕ್ಷ

ನಿನ್‌ ಮನೆ ಕಾಯೋಗ, ಮಾಹಿತಿ ನೀಡದ ಅಧಿಕಾರಿಗೆ ಸಚಿವ ತರಾಟೆ

ಚಾಮರಾಜನಗರ: ನಿಂಗೆ ಎನ್‌ಡಿಆರ್‌ಎಫ್‌ ಯಾವುತ್ರ್ದ ಎಸ್‌ಡಿಆರ್‌ಎಫ್‌ ಯಾವುತ್ರ್ದ ಅಂತಾ ಗೊತ್ತಿಲ್ಲ. ನೀನೆಂತಾ ಅಸಿಸ್ಟೆಂಟ್‌ ಡೈರೆಕ್ಟರ್‌ ಯಪ್ಪಾ? ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ನಾಗೇಶ್‌ರಾವ್‌ ಅವರಿಗೆ ಸಚಿವ ಸೋಮಣ್ಣ ತರಾಟೆಗೆ ತೆಗೆದುಕೊಂಡರು. ಮಳೆ ಹಾನಿ ವರದಿ ಕೇಳಿದ್ದಕ್ಕೆ ತಡವರಿಸಿದ ಹಿರಿಯ ಸಹಾಯಕ ನಿರ್ದೇಶಕ ನಾಗೇಶ್‌ರನ್ನು ಎನ್‌ಡಿಆರ್‌ಎಫ್‌ ಮತ್ತು ಎಸ್‌ಡಿಆರ್‌ಎಫ್‌ನಿಂದ ಬೆಳೆಹಾನಿಯಾದ ರೈತರಿಗೆ ಎಷ್ಟುಪರಿಹಾರ ನೀಡುತ್ತೀರಾ ಎಂದು ಕೇಳಿದಾಗ ಅವರು ಸರಿಯಾದ ಮಾಹಿತಿ ನೀಡಲಿಲ್ಲ.ಇದಕ್ಕೆ ಕೋಪಗೊಂಡು ಸಚಿವರು ಮೊದಲು ಈತನನ್ನು ರಿಲೀವ್‌ ಮಾಡಿ ಎಂದು ಆಕ್ರೋಶ ಹೊರಹಾಕಿದರು.

ಸಚಿವರಲ್ಲಿ ಕ್ಷಮೆ ಯಾಚಿಸಿದ ರೈತ ಮುಖಂಡ !

ಚಾಮರಾಜನಗರ: ರೈತರ ಕುಂದು ಕೊರತೆ ಸಮಸ್ಯೆಗಳ ಸಂಬಂಧ ಸಭೆಗೆ ಸಚಿವರು ಆಗಮಿಸಲು ತಡವಾಗಿದ್ದನ್ನು ವಿರೋಧಿಸಿ ರೈತ ಸಂಘದ ಕಾರ್ಯಕರ್ತರು ಸಭೆ ಬಹಿಷ್ಕರಿಸಿದ ಹಿನ್ನೆಲೆ ರೈತ ಮುಖಂಡ ಅಣಗಳ್ಳಿ ಬಸವರಾಜು ಸಭೆಯಲ್ಲಿ ಸಚಿವರಲ್ಲಿ ಕ್ಷಮೆ ಯಾಚಿಸಿದರು. ರೈತ ಸಂಘದ ಪರವಾಗಿ ನಿಜವಾದ ರೈತರಾದ ನಾವು ನಿಮ್ಮಲ್ಲಿ ಕ್ಷಮೆಯಾಚಿಸುತ್ತೇನೆ. ಒಂದು ಗಂಟೆ ಸಚಿವರು ತಡವಾಗಿ ಬಂದಿರುವುದು ದೊಡ್ಡ ವಿಚಾರವೇನಲ್ಲ. ತಡವಾಗಿ ಬಂದ ವಿಚಾರವನ್ನೇ ಮುಂದಿಟ್ಟುಕೊಂಡು ಸಭೆ ಬಹಿಷ್ಕರಿಸುವುದು ಸೇರಿದಂತೆ ಪದೇ ಪದೇ ಕೆಲವರು ಬೇಕಂತಲೇ ವಿವಾದ ಸೃಷ್ಠಿಸುತ್ತಿದ್ದಾರೆ ಎಂದು ತಿಳಿಸಿದರು.
 

Follow Us:
Download App:
  • android
  • ios