ಬೆಂಗಳೂರು(ಮೇ.08): ಗುರುವಾರ ರಾಜಧಾನಿ ಬೆಂಗಳೂರಿನಲ್ಲಿ ಹೊಸದಾಗಿ ಆರು ಜನರು ಸೇರಿದಂತೆ ರಾಜ್ಯಾದ್ಯಂತ 18 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 711ಕ್ಕೆ ಏರಿಕೆಯಾಗಿದೆ. ದಾವಣಗೆರೆಯಲ್ಲಿ ಒಬ್ಬ ರೋಗಿ ಸಾವನ್ನಪ್ಪಿದ್ದಾರೆ.

ಆರೋಗ್ಯ ಇಲಾಖೆ ಸಂಜೆ ಬಿಡುಗಡೆ ಮಾಡಿದ ಮಾಧ್ಯಮ ಹೇಳಿಕೆಯಲ್ಲಿ ದಾವಣಗೆರೆ, ಕಲಬುರಗಿ ಮತ್ತು ಬಾಗಲಕೋಟೆಯ ಬಾದಾಮಿಯಲ್ಲಿ ತಲಾ ಮೂರು ಪ್ರಕರಣಗಳು, ಬೆಂಗಳೂರು, ಬೆಳಗಾವಿ ಮತ್ತು ಧಾರವಾಡದಲ್ಲಿ ತಲಾ ಒಂದು ಪ್ರಕರಣ ಸೇರಿ ಒಟ್ಟು 12 ಪ್ರಕರಣಗಳು ಪತ್ತೆಯಾಗಿರುವುದಾಗಿ ತಿಳಿಸಲಾಗಿತ್ತು. ಆದರೆ ರಾತ್ರಿ 9 ಗಂಟೆ ಸುಮಾರಿಗೆ ಬೆಂಗಳೂರಿನ ಶಿವಾಜಿನಗರದಲ್ಲಿ ನಾಲ್ಕು, ಕೋವಿಡ್‌ ಹಾಟ್‌ಸ್ಪಾಟ್‌ ಪಾದರಾಯನಪುರದಲ್ಲಿ ಮತ್ತೆರಡು ಪ್ರಕರಣಗಳು ದೃಢಪಟ್ಟವರದಿ ಬಂದಿರುವುದಾಗಿ ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ಒಂದೇ ದಿನ ಒಟ್ಟು 18 ಪ್ರಕರಣಗಳು ವರದಿಯಾದಂತಾಗಿದೆ.

ಭಾರತಕ್ಕೆ ಜೂನ್-ಜುಲೈ ಇನ್ನೂ ಘೋರ, ಎಷ್ಟಕ್ಕೆ ತಲುಪಬಹುದು ಸೋಂಕಿತರ ಸಂಖ್ಯೆ?

ದಾವಣಗೆರೆಯಲ್ಲಿ ಒಂದು ಪ್ರಕರಣ ತೀವ್ರ ಉಸಿರಾಟ ತೊಂದರೆಯಿಂದ ಹಾಗೂ ಇತರೆ ಎರಡು ಪ್ರಕರಣ, ಧಾರವಾಡ ಹಾಗೂ ಬೆಂಗಳೂರಿನ ತಲಾ ಒಂದು ಪ್ರಕರಣಗಳು ಶೀತಜ್ವರದಿಂದ ಬಳಲುತ್ತಿದ್ದವರನ್ನು ಪರೀಕ್ಷೆಗೊಳಪಡಿಸಿದಾಗ ಸೋಂಕು ದೃಢಪಟ್ಟಿದೆ. ಬೆಳಗಾವಿಯ ಪ್ರಕರಣ ಸೋಂಕಿತ ವ್ಯಕ್ತಿಯಿಂದ ಹರಡಿದ್ದಾಗಿದೆ. ಬಾದಾಮಿಯಲ್ಲಿ ಬುಧವಾರ 12 ಜನರಿಗೆ ಸೋಂಕು ಹರಡಿದ್ದ ಗರ್ಭಿಣಿಯಿಂದ ಗುರುವಾರ ಮತ್ತೆ ಮೂವರಿಗೆ ಸೋಂಕು ಹರಡಿದೆ. ಇದರಿಂದ ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 51ಕ್ಕೆ ಏರಿದೆ.

366 ಜನ ಗುಣಮುಖ:

ಗುರುವಾರ ಬೀದರ್‌ನಲ್ಲಿ ಮೂವರು, ವಿಜಯಪುರ, ಕಲಬುರಗಿ ಮತ್ತು ಬೆಂಗಳೂರಿನಲ್ಲಿ ತಲಾ ಇಬ್ಬರು, ಬಳ್ಳಾರಿ, ಮೈಸೂರು ಮತ್ತು ಬಾಗಲಕೋಟೆಯಲ್ಲಿ ತಲಾ ಒಬ್ಬರು ಸೇರಿ ಒಟ್ಟು 12 ಜನ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಗುರುವಾರದವರೆಗೆ ಒಟ್ಟು 711 ಪ್ರಕರಣಗಳ ಪೈಕಿ 366 ಜನರು ಗುಣಮುಖರಾಗಿದ್ದಾರೆ. ಹಾಗಾಗಿ ಗುಣಮುಖ ಪ್ರಮಾಣ ಶೇ.51ಕ್ಕಿಂತ ಹೆಚ್ಚಾಗಿದೆ. ಉಳಿದ 314 ಜನ ಸಕ್ರಿಯ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಆರು ಜನರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಳಗ್ಗೆ ವಿಶಾಖಪಟ್ಟಣ, ಸಂಜೆ ತಮಿಳುನಾಡು.. ಸ್ಫೋಟಗೊಂಡ ಬಾಯ್ಲರ್

ಗುರುವಾರ ಒಟ್ಟು 4758 ಜನರ ಗಂಟಲು ದ್ರವ ಮಾದರಿ ಪರೀಕ್ಷೆಗೊಳಪಡಿಸಿದ್ದು, ಇದರಲ್ಲಿ 4700 ಜನರ ವರದಿ ನೆಗೆಟಿವ್‌, 18 ಜನರದ್ದು ಪಾಸಿಟಿವ್‌ ಬಂದಿದೆ. ಇದರೊಂದಿಗೆ ರಾಜ್ಯದಲ್ಲಿ ಈವರೆಗೆ ಒಟ್ಟು 93,535 ಜನರ ಗಂಟಲು ಮಾದರಿ ಪರೀಕ್ಷೆ ನಡೆಸಿದ್ದು, 87756 ಜನರಿಗೆ ನೆಗೆಟಿವ್‌, 705 ಜನರಿಗೆ ಪಾಸಿಟಿವ್‌ ಬಂದಿದೆ. ಉಳಿದ ವರದಿಗಳು ಬರಬೇಕಿದೆ ಎಂದು ಹೇಳಲಾಗಿದೆ.