Asianet Suvarna News Asianet Suvarna News

ಮಕ್ಕಳಲ್ಲಿ ವ್ಯಾಪಿಸುತ್ತಿದೆ ವೈರಲ್‌ ಜ್ವರ..!

*  ಜ್ವರ, ನೆಗಡಿ, ಕೆಮ್ಮು ಬಾಧೆ ಹೆಚ್ಚಳ
*  ಆತಂಕಗೊಳ್ಳುವ ಅಗತ್ಯವಿಲ್ಲ: ಆರೋಗ್ಯ ಇಲಾಖೆ ಅಧಿಕಾರಿಗಳು
*  ಮಕ್ಕಳಲ್ಲಿ ಕೊರೋನಾ ಸೋಂಕು ಕಡಿಮೆ
 

Viral Fever Spreads in children at Uttara Kannada grg
Author
Bengaluru, First Published Sep 22, 2021, 11:23 AM IST

ಕಾರವಾರ(ಸೆ.22): ಉತ್ತರ ಕನ್ನಡ (Uttara Kannada) ಜಿಲ್ಲೆಯ ಮಕ್ಕಳಲ್ಲೀಗ ವೈರಲ್‌ ಜ್ವರ(Viral Fever) ವ್ಯಾಪಿಸುತ್ತಿದೆ. ಪಾಲಕರು ಮಕ್ಕಳನ್ನು ಆಸ್ಪತ್ರೆಗೆ ಕರೆತರುತ್ತಿದ್ದಾರೆ. ಆದರೆ ಮಕ್ಕಳಲ್ಲಿ ಕೊರೋನಾ(Coronavirus) ಸೋಂಕಿನ ಪ್ರಮಾಣ ಕಡಿಮೆ ಪ್ರಮಾಣದಲ್ಲಿ ಇರುವುದು ಸಮಾಧಾನದ ಸಂಗತಿಯಾಗಿದೆ.

ಮಕ್ಕಳಲ್ಲಿ ಜ್ವರ, ನೆಗಡಿ, ಕೆಮ್ಮು ಕಾಣಿಸಿಕೊಂಡಿದ್ದು, ನಿಧಾನವಾಗಿ ಹರಡುತ್ತಿದೆ. ಮಳೆಗಾಲದ ಹಂಗಾಮಿನಲ್ಲಿ ವೈರಲ್‌ ಜ್ವರ ಕಾಣಿಸಿಕೊಳ್ಳುವುದು ಮಾಮೂಲು. ಅದೀಗ ಕಾಣಿಸಿಕೊಂಡಿದೆ. ಯಾರೂ ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ವರ್ಷ ಲಾಕ್‌ಡೌನ್‌ (Lockdown) ಇದ್ದುದರಿಂದ ಶಾಲಾ- ಕಾಲೇಜುಗಳನ್ನು ಮುಚ್ಚಲಾಗಿತ್ತು. ಇದರಿಂದ ವೈರಲ್‌ ಜ್ವರ ಒಬ್ಬರಿಂದ ಇನ್ನೊಬ್ಬರಿಗೆ ಹರಡಿರಲಿಲ್ಲ. ಜ್ವರದಿಂದ ಬಳಲುತ್ತಿದ್ದ ಮಕ್ಕಳ (Children)ಪ್ರಮಾಣ ಕಡಿಮೆ ಇತ್ತು. ಆದರೆ ಈ ಬಾರಿ 6ನೇ ತರಗತಿ ನಂತರದ ವಿದ್ಯಾರ್ಥಿಗಳಿಗೆ ಶಾಲೆ ಆರಂಭವಾಗಿದೆ. ಬಹುತೇಕ ಅನ್‌ಲಾಕ್‌ ಆಗಿದೆ. ಈ ಕಾರಣದಿಂದ ಒಬ್ಬರಿಂದ ಒಬ್ಬೊರಿಗೆ ಜ್ವರ ಹರಡುತ್ತಿದೆ.

ವೈರಲ್ ಫಿವರ್‌ನಿಂದ ಗುಣಮುಖರಾದ ಮಕ್ಕಳಲ್ಲಿ ಅಲರ್ಜಿ, ಕೈಕಾಲು ನೋವು ಪತ್ತೆ

ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಖಾಸಗಿ ಆಸ್ಪತ್ರೆಯ ಮಕ್ಕಳ ತಜ್ಞ ವೈದ್ಯರ ಎದುರು ಜ್ವರ, ನೆಗಡಿ, ಕೆಮ್ಮಿನಿಂದ ಬಳಲುತ್ತಿರುವ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಔಷಧಿ ಪಡೆದು ಮರಳುತ್ತಿದ್ದಾರೆ. ಜ್ವರದಿಂದ ಆಸ್ಪತ್ರೆಗಳಲ್ಲಿ ದಾಖಲಾಗುವ ಮಕ್ಕಳ ಪ್ರಮಾಣ ಹೆಚ್ಚಾಗಿಲ್ಲ. ಇದರಿಂದ ಆಸ್ಪತ್ರೆಗಳಲ್ಲಿ ಬೆಡ್‌ ಕೊರತೆ ಉಂಟಾಗಿಲ್ಲ.

ಏಪ್ರಿಲ್‌ 2021ರಿಂದ ಈ ತನಕ ಅಂದರೆ ಕೇವಲ 6 ತಿಂಗಳುಗಳಲ್ಲಿ 6 ವರ್ಷದೊಳಗಿನ 10908, 7ರಿಂದ 12 ವರ್ಷದೊಳಗಿನ 15840 ಹಾಗೂ 13ರಿಂದ 18 ವರ್ಷದೊಳಗಿನ 20108 ಮಕ್ಕಳು ವೈರಲ್‌ ಜ್ವರದಿಂದ ಬಳಲಿದ್ದಾರೆ.
ಕಳೆದ ಇಡೀ ವರ್ಷದಲ್ಲಿ 37763 ಮಕ್ಕಳಲ್ಲಿ ಜ್ವರ ಕಾಣಿಸಿಕೊಂಡರೆ ಈ ಬಾರಿ ಏಪ್ರಿಲ್‌ನಿಂದ ಆರು ತಿಂಗಳಲ್ಲಿ 46856 ಮಕ್ಕಳು ಜ್ವರದಿಂದ ಬಳಲಿದ್ದಾರೆ.

ಮಕ್ಕಳಲ್ಲಿ ಕೊರೋನಾ ಸೋಂಕು ಕಡಿಮೆ:

ಸದ್ಯ ಜ್ವರ ವ್ಯಾಪಕವಾಗಿ ಹರಡುತ್ತಿದ್ದರೂ ಕೊರೋನಾ ಸೋಂಕಿಗೊಳಗಾದವರ ಸಂಖ್ಯೆ ಕಡಿಮೆ ಇದೆ. 6 ವರ್ಷದೊಳಗಿನ 1625 ಮಕ್ಕಳು, 7ರಿಂದ 12 ವರ್ಷದ 2563, 13ರಿಂದ 18 ವರ್ಷ 3657 ಹೀಗೆ ಒಟ್ಟು 7845 ಮಕ್ಕಳು ಕೊರೋನಾ ಸೋಂಕಿಗೊಳಗಾಗಿದ್ದರು. ಸದ್ಯ 36 ಮಕ್ಕಳು ಸೋಂಕಿಗೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರತಿವರ್ಷ ಸಾಮಾನ್ಯವಾಗಿ ಈ ಸಂದರ್ಭದಲ್ಲಿ ವೈರಲ್‌ ಜ್ವರ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಈ ಬಾರಿಯೂ ಮಕ್ಕಳಲ್ಲಿ ವೈರಲ್‌ ಜ್ವರ ಕಾಣಿಸಿಕೊಂಡಿದೆ. ಔಷಧಿಗಳು ಲಭ್ಯವಿದ್ದು, ಆತಂಕಗೊಳ್ಳುವ ಅಗತ್ಯತೆ ಇಲ್ಲ ಎಂದು ವೈದ್ಯಾಧಿಕಾರಿ ಕ್ಯಾಪ್ಟನ್‌ ರಮೇಶ್‌ ರಾವ್‌ ತಿಳಿಸಿದ್ದಾರೆ.  
 

Follow Us:
Download App:
  • android
  • ios