ವ್ಯಾಕ್ಸಿನ್ ಹಾಕಿಸಿಕೊಳ್ಳಲು ಮುಗಿಬಿದ್ದ ಜನ: ಸಾಮಾಜಿಕ ಅಂತರಕ್ಕೆ ಡೋಂಟ್‌ಕೇರ್..!
* ಲಾಕ್‌ಡೌನ್ ಇದ್ದರೂ ಜನ ಸಂಚಾರ
* ಕಷಿ ಚಟುವಟಿಕೆಗಳ ನೆಪ
* ಕೊರೋನಾದ ಭಯ ಇಲ್ಲದಂತೆ ಓಡಾಡುತ್ತಿರುವ ಜನತೆ
ಕೊಪ್ಪಳ(ಜೂ.07): ಕೊರೋನಾಕ್ಕೆ ತತ್ತರಿಸದ ಜನತೆ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಪೈಪೋಟಿಗಿಳಿದು, ಸಾಮಾಜಿಕ ಅಂತರ ಇಲ್ಲದೆ ಗುಂಪಾಗಿ ನಿಂತಿರುವುದು ನಿಯಮಗಳ ಪಾಲನೆ ಇಲ್ಲದಿರುವುದಕ್ಕೆ ಸಾಕ್ಷಿಯಾಗಿದೆ.
ನಗರದ ಬಸ್ ನಿಲ್ದಾಣದ ಬಳಿ ಆರೋಗ್ಯ ಇಲಾಖೆಯವರು ವ್ಯಾಕ್ಸಿನ್ ಹಾಕುವುದಕ್ಕಾಗಿ ಕೇಂದ್ರ ಪ್ರಾರಂಭಿಸಿದ್ದು, ನಗರ ಸೇರಿದಂತೆ ಗ್ರಾಮೀಣ ಪ್ರದೇಶದ ಜನರು ವ್ಯಾಕ್ಸಿನ್ ಹಾಕಿಸಿಕೊಳ್ಳುವದಕ್ಕೆ ನಾ ಮುಂದು ನೀ ಮುಂದು ಎಂದು ಹೊರಟಿದ್ದಾರೆ.
ಕೊಪ್ಪಳ ನಗರ ಅಲ್ಲದೆ ಜಿಲ್ಲೆಯ ಎಲ್ಲಾ ತಾಲೂಕಗಳಲ್ಲಿ ಜನಸಂದಣಿ ಇದ್ದು, ವ್ಯಾಕ್ಸಿನ್ ಹಾಕಿಸಿಕೊಳ್ಳುವುದಕ್ಕೆ ಪೈಪೋಟಿ ನಡೆಸುತ್ತಿರುವುದು ಸಾಮಾನ್ಯವಾಗಿದೆ. ನಗರದಲ್ಲಿ ಕೊರೋನಾ ಸೋಂಕಿಗೆ ಕೆಲವರು ಭಯಭೀತರಾಗಿದ್ದರೆ. ಇನ್ನು ಕೆಲವರು ಯಾವುದೇ ಭಯ ಇಲ್ಲದೆ ಪೊಲೀಸರ ಕಣ್ಣು ತಪ್ಪಿಸಿ ಸಂಚಾರ ಮಾಡುತ್ತಿದ್ದಾರೆ.
ಕುಷ್ಟಗಿ: ಎಣ್ಣೆ ಹೊಡೆಯೋಕೆ ಕೃಷಿ ಜಮೀನೂ ಸಾಲ್ತಿಲ್ಲ ಕುಡುಕರಿಗೆ..!
ನಗರದ ಜವಾಹರ ರಸ್ತೆ, ಗಡಿಯಾರ ಕಂಬ, ಅಶೋಕ ವೃತ್ತ, ಕುಷ್ಟಗಿ ವೃತ್ತ, ತಾಲೂಕು ಪಂಚಾಯಿತಿ ಮತ್ತು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಜನರು ಎಂದಿನಂತೆ ಸಂಚಾರ ಮಾಡುತ್ತಿದ್ದು, ಕೊರೋನಾದ ಭಯ ಇಲ್ಲದಂತೆ ಓಡಾಡುತ್ತಿದ್ದಾರೆ. ಕೆಲವರು ಮಾಸ್ಕ್ ಹಾಕಿಕೊಂಡಿದ್ದರೆ ಇನ್ನು ಕೆಲವರು ಮಾಸ್ಕ್ ಇಲ್ಲದೆ ಮತ್ತು ಸಾಮಾಜಿಕ ಅಂತರ ಇಲ್ಲದೆ ಸಂಚಾರ ಮಾಡುತ್ತಿದ್ದು, ಇದರಿಂದ ಕೋವಿಡ್ ನಿಯಮಗಳು ಪಾಲೆ ಇಲ್ಲದಂತಾಗಿದೆ.
ಕಷಿ ಚಟುವಟಿಕೆಗಳ ನೆಪ:
ಜಿಲ್ಲೆಯಲ್ಲಿ ಸಂಪೂರ್ಣವಾಗಿ ಮಳೆಯಾಗಿದ್ದು, ಕೆಲವಡೆ ಕೃಷಿ ಚಟುವಟಿಕೆಗಳು ಪ್ರಾರಂಭವಾಗಿವೆ. ರೈತರು ಬಿತ್ತನ ಬೀಜ, ರಸಗೊಬ್ಬರ ಸೇರಿದಂತೆ ಕೃಷಿ ವಸ್ತುಗಳನ್ನು ಕೆಲ ರೈತರು ತೆಗೆದುಕೊಂಡು ಹೋಗುತ್ತಿದ್ದರೆ, ಇನ್ನು ಕೆಲವು ರೈತರು ಎಂದು ಸುಳ್ಳು ಹೇಳಿ ತಮ್ಮ ವೈಯಕ್ತಿಕ ಕೆಲಸ ಕಾರ್ಯಗಳಿಗೆ ಓಡಾಡುತ್ತಿದ್ದಾರೆ. ಕೆಲ ಸಂದರ್ಭದಲ್ಲಿ ಪೊಲೀಸರು ದಂಡ ವಿಧಿಸಿದ್ದಾರೆ.
ನಾಳೆಯಿಂದ ವಸ್ತುಗಳ ಖರೀದಿಗೆ ಅವಕಾಶ:
ಕಳೆದ ಒಂದು ತಿಂಗಳಿನಿಂದ ಸಂಪೂರ್ಣ ಲಾಕ್‌ಡೌನ್ ಆಗಿದ್ದರಿಂದ ತತ್ತರಿಸದ ಜನತೆಗೆ ಜೂನ್ 7ರಿಂದ ಸ್ವಲ್ಪ ಲಾಕ್‌ಡೌನ್ ಸಡಿಲಗೊಳಿಸಿದೆ. ಜೂನ್ 7ರಿಂದ 14ರವರೆಗೆ ಬೆಳಗ್ಗೆ 6ರಿಂದ 10ರವರೆಗೆ ವಸ್ತುಗಳ ಖರೀದಿಗೆ ಅವಕಾಶ ನೀಡಿದ್ದರಿಂದ ವ್ಯಾಪಾರಿಗಳಿಗೆ ಸ್ವಲ್ಪ ನಿಟ್ಟುಸಿರು ಬಿಟ್ಟಂತಾಗಿದೆ. ಲಾಕ್‌ಡೌನ್ ಸಮಯದಲ್ಲಿ ಕದ್ದುಮುಚ್ಚಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳಿಗೆ ಸಮಯ ನೀಡಿದ್ದರಿಂದ ವ್ಯಾಪಾರಕ್ಕೆ ಸ್ವತಂತ್ರ ಸಿಕ್ಕಿದ್ದು, ಜನರಿಗೂ ಸ್ವಲ್ಪಮಟ್ಟಿಗೆ ಉಸಿರಾಡಲು ಅನುಕೂಲವಾಗಿದೆ. ಜಿಲ್ಲೆಯಲ್ಲಿ ಲಾಕ್‌ಡೌನ್ ಇದ್ದರೂ ಜನರು ಕೊರೋನಾ ಸೋಂಕಿನ ಭಯ ಇಲ್ಲದೆ ಸಂಚಾರ ಮಾಡುತ್ತಿದ್ದು, ವ್ಯಾಕ್ಸಿನ್‌ಗಾಗಿ ಪೈಪೋಟಿ ನಡೆಸಿದ್ದಾರೆ.