ಧಾರವಾಡ(ನ.13): ಜಿಪಂ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ನ.9ರಂದು ಬಂಧನವಾಗಿ ಬೆಳಗಾವಿ ಹಿಂಡಲಗಾ ಜೈಲಿನಲ್ಲಿರುವ ಮಾಜಿ ಸಚಿವ ವಿನಯ್‌ ಕುಲಕರ್ಣಿ ಪರ ಸಲ್ಲಿಕೆಯಾಗಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ಇಲ್ಲಿನ 2ನೇ ಹೆಚ್ಚುವರಿ ಜಿಲ್ಲಾ ಸೆಷನ್‌ ನ್ಯಾಯಾಲಯ (ಸಿಬಿಐನ ವಿಶೇಷ ನ್ಯಾಯಾಲಯ) ನ.18ಕ್ಕೆ ಮುಂದೂಡಿದೆ. 

ತಮ್ಮ ಕಕ್ಷಿದಾರರು ಸಿಬಿಐನ ವಿಚಾರಣೆಗೆ ಎಲ್ಲ ರೀತಿಯಲ್ಲಿ ಸಹಕರಿಸಿದ್ದು ಜಾಮೀನು ಒದಗಿಸಿ ಎಂದು ವಿನಯ್‌ ಕುಲಕರ್ಣಿ ಪರ ಹಾಜರಾದ ಬೆಂಗಳೂರು ಮೂಲದ ವಕೀಲ ಭರತಕುಮಾರ ವಾದ ಮಂಡಿಸಿದರು. ಆಗ ನ್ಯಾಯಾಧೀಶರಾದ ಎಂ.ಪಂಚಾಕ್ಷರಿ ಅವರು ಸಿಬಿಐ ಪರ ವಕೀಲರಿಗೆ ತಕರಾರರು ಸಲ್ಲಿಸಲು ಸೂಚನೆ ನೀಡಿ ನ.18ಕ್ಕೆ ವಿಚಾರಣೆಯನ್ನು ಮುಂದೂಡಿದರು.

ವಿನಯ್‌ ಕುಲಕರ್ಣಿ ಬಂಧನ: 'ಮುಜುಗರ ತಪ್ಪಿಸಿಕೊಳ್ಳಲು ಬಿಜೆಪಿ ಮೇಲೆ ಆರೋಪ'

ವಿನಯ್‌ ಅವರನ್ನು ನ.5ರಂದು ಸಿಬಿಐ ವಶಕ್ಕೆ ಪಡೆದು ಬಂಧನ ಮಾಡಿತ್ತು. ಒಂದು ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ತದನಂತರ ಮೂರು ದಿನಗಳ ಕಾಲ ಸಿಬಿಐ ವಿಚಾರಣೆ ನಡೆಸಿದ ನಂತರ 14 ದಿನಗಳ ಕಾಲ ನ.23ರ ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಇದೀಗ ಅವರ ಜಾಮೀನು ಅರ್ಜಿಯನ್ನು ನ.18ಕ್ಕೆ ಮುಂದೂಡಲಾಗಿದ್ದು ವಿನಯ್‌ ಅವರು ದೀಪಾವಳಿಯನ್ನು ಹಿಂಡಲಗಾ ಜೈಲಿನಲ್ಲಿ ಕಳಿಯಬೇಕಾಗಿದೆ.