ಧಾರವಾಡ(ನ.12): ಮಾಜಿ ಸಚಿವ ವಿನಯ್‌ ಕುಲಕರ್ಣಿ ಅವರ ಬಂಧನದ ಮುಜುಗರ ತಪ್ಪಿಸಿಕೊಳ್ಳಲು ಕಾಂಗ್ರೆಸ್‌ ಮುಖಂಡರು ಬಿಜೆಪಿ ವಿರುದ್ಧ ಮಾತನಾಡುತ್ತಿದ್ದು ಇದೆಲ್ಲವೂ ಸತ್ಯಕ್ಕೆ ದೂರವಾದುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದ್ದಾರೆ. 

ಬುಧವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಬಿಐ ಸಾಂವಿಧಾನಿಕ ಸಂಸ್ಥೆ ಎಂಬುದು ಗೊತ್ತಿರುವ ಮಾತು. ನಿಷ್ಪಕ್ಷಪಾತ ತನಿಖೆ ಮಾಡಲು ಬಿಡದೇ ತನಿಖೆಯಲ್ಲಿ ರಾಜಕಾರಣ ಸೇರಿಸಲಾಗುತ್ತಿದೆ. ಅನವಶ್ಯಕವಾಗಿ ಆಡಳಿತ ಸರ್ಕಾರಗಳ ವಿರುದ್ಧ ಆರೋಪ ಮಾಡಿ ಪ್ರಯೋಜನವಿಲ್ಲ. ಈ ತನಿಖೆಯಲ್ಲಿ ಸತ್ಯಾಸತ್ಯತೆ ಹೊರಗೆ ಬರುತ್ತದೆ. ವಿನಯ ಕುಲಕರ್ಣಿ ಅವರು ನಿರಪರಾಧಿಯಾಗಿದ್ದರೆ ಹೊರಗೆ ಬರುತ್ತಾರೆ ಎಂದು ತಿಳಿಸಿದ್ದಾರೆ. 

ಜೈಲಲ್ಲಿ ವಿನಯ್‌ ಕುಲಕರ್ಣಿಗೆ ಸಾಮಾನ್ಯ ಕೈದಿಯ ಸೌಲಭ್ಯ

ಸಚಿವ ಸಂಪುಟ ವಿಸ್ತರಣೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈ ವಿಷಯ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. ಅವರು ಮಾತ್ರ ನೀಡಿದ ಮಾತು ತಪ್ಪುವುದಿಲ್ಲ ಎಂಬುದು ಸತ್ಯ ಎಂದ ಅವರು, ಉಪ ಚುನಾವಣೆ ಹಾಗೂ ಪರಿಷತ್‌ ಚುನಾವಣೆಯಲ್ಲಿ ರಾಜ್ಯದ ಜನರು ಸರ್ಕಾರ ಹಾಗೂ ಬಿಎಸ್‌ವೈ ಆಡಳಿತಕ್ಕೆ ಪ್ರಮಾಣಪತ್ರ ನೀಡಿದ್ದಾರೆ ಎಂದು ಹೇಳಿದ್ದಾರೆ.