Asianet Suvarna News Asianet Suvarna News

ಗದಗ: ಕೊರೋನಾ ಸೋಂಕಿತ ಸಂಚಾರ ವದಂತಿ, ಸ್ವಯಂ ಲಾಕ್‌ಡೌನ್‌

ರೋಣ ತಾಲೂಕು ಕೊತಬಾಳದ ಅಂಗಡಿ ಮುಂಗಟ್ಟು ಬಂದ್‌| ಕೊರೋನಾ ಶಂಕಿತ ವ್ಯಕ್ತಿಯೊಬ್ಬರು ಕುರಹಟ್ಟಿ ಗ್ರಾಮದ ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮಕ್ಕೆ ಬಂದು ಹೋಗಿರುವ ಮಾಹಿತಿ ಹಿನ್ನೆಲೆಯಲ್ಲಿ ಕೊತಬಾಳ ಗ್ರಾಮವನ್ನು ಗ್ರಾಮಸ್ಥರಿಂದ ಸ್ವ ಪ್ರೇರಣೆಯಿಂದ ಲಾಕ್‌ಡೌನ್‌|

Villegers Self Lockdown due to Increasing Coronavirus cases in Gadag District
Author
Bengaluru, First Published Jun 18, 2020, 9:44 AM IST

ರೋಣ(ಜೂ.18): ಹುಬ್ಬಳ್ಳಿ ಮೂಲದ ಕೊರೋನಾ ಸೋಂಕಿತ ವ್ಯಕ್ತಿಯೊಬ್ಬ 7 ದಿನಗಳ ಹಿಂದೆ ತಾಲೂಕಿನ ಕುರಹಟ್ಟಿಮತ್ತು ಕೊತಬಾಳ ಗ್ರಾಮಗಳಲ್ಲಿ ಸಂಚರಿಸಿ, ಅಲ್ಲಿನ ಸಂಬಂಧಿಕರ ಮನೆಗೆ ಭೇಟಿ ನೀಡಿದ್ದಾನೆ ಎಂಬ ಸುದ್ದಿ ಗ್ರಾಮದಾದ್ಯಂತ ಹರಡುತ್ತಿದ್ದಂತೆ ಆತಂಕಕ್ಕೆ ಒಳಗಾದ ಕೊತಬಾಳ ಗ್ರಾಮಸ್ಥರು ಬುಧವಾರ ಸ್ವಯಂ ಲಾಕ್‌ಡೌನ್‌ ಘೋಷಿಕೊಂಡಿದ್ದು, ಮುಂಜಾಗ್ರತಾ ಕ್ರಮವಾಗಿ ಅಂಗಡಿ, ಮುಂಗಟ್ಟುಗಳು ಸ್ವಪ್ರೇರಣೆಯಿಂದ ಬಂದ್‌ ಮಾಡಲಾಗಿದೆ.

ಹುಬ್ಬಳ್ಳಿ ಮೂಲದ ಈ ವ್ಯಕ್ತಿ ತಾಲೂಕಿನ ಕುರಹಟ್ಟಿ ಗ್ರಾಮದಲ್ಲಿ ತನ್ನ ಸಂಬಂಧಿಕರ ಮನೆಯಲ್ಲಿನ ಕಾರ್ಯಕ್ರಮಕ್ಕೆ ಜೂ. 10ರಂದು ಬಂದಿದ್ದು, ಆ ದಿನವೇ ಕಾರ್ಯಕ್ರಮಕ್ಕೆ ಬೇಕಾದ ಸಿಹಿ ತಿನಿಸು ತರಲೆಂದು ಕುರಹಟ್ಟಿಯ ತನ್ನ ಸಂಬಂಧಿಕರೊಂದಿಗೆ ಕೊತಬಾಳ ಗ್ರಾಮಕ್ಕೆ ಬಂದಿದ್ದರು. ಚಹಾ ಅಂಗಡಿಯೊಂದರಲ್ಲಿ ಸಿಹಿ ತಿನಿಸು ಖರೀದಿಸಿ, ಆ ಬಳಿಕ ಕೊತಬಾಳದಲ್ಲಿನ ತನ್ನ ಸಂಬಂಧಿಕರೊಬ್ಬರ ಮನೆಗೆ ತೆರಳಿ ಅಲ್ಲಿ ಉಪಾಹಾರ ಸೇವಿಸಿ ತೆರಳಿದ್ದಾರೆ.

'ಕೊರೋನಾ ಪರಿಸ್ಥಿತಿ ದುರ್ಬಳಕೆ ಮಾಡಿಕೊಂಡು ಸರ್ಕಾರದಿಂದ ರೈತರಿಗೆ ಅನ್ಯಾಯ'

ಅಲ್ಲಿಂದ ಹುಬ್ಬಳ್ಳಿ ಸಮೀಪದ ತನ್ನ ಗ್ರಾಮಕ್ಕೆ ತೆರಳಿದ್ದು, ಸದ್ಯ ಆರೋಗ್ಯದಲ್ಲಿ ಏರುಪೇರಾಗಿ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಕೊರೋನಾ ಪಾಸಿಟಿವ್‌ ಬಂದಿದೆ ಎಂಬ ಸುದ್ದಿ ಕೊತಬಾಳದಲ್ಲಿ ಮಂಗಳವಾರ ರಾತ್ರಿ ಹರದಾಡುತ್ತಿದಂತೆ ಆತಂಕಗೊಂಡ ಗ್ರಾಮಸ್ಥರು ಸ್ವಯಂಪ್ರೇರಣೆಯಿಂದ ಲಾಕ್‌ಡೌನ್‌ಗೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಪಿಡಿಒ ಕಲ್ಪನಾ ಕಡಗದ ಅವರು, ಮುಂಜಾಗ್ರತಾ ಕ್ರಮವಾಗಿ ವ್ಯಕ್ತಿ ಭೇಟಿ ನೀಡಿದ ಅಂಗಡಿ ಮತ್ತು ಸಂಬಂಧಿಕರ ಮನೆಗಳಿಗೆ ತೆರಳಿ, ಆ ಮೂವರನ್ನು ರೋಣ ಸಾರ್ವಜನಿಕ ಆಸ್ಪತ್ರೆಗೆ ಕರೆ ತಂದು ಗಂಟಲು ದ್ರವ ಮಾದರಿ ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಗ್ರಾಪಂ ಸಭಾಭವನದಲ್ಲಿ ಆಡಳಿತ ಮಂಡಳಿ ತುರ್ತು ಸಭೆ ನಡೆಸಿ, ಯಾವುದೇ ಕಾರಣಕ್ಕೂ ಜನತೆ ಆತಂಕಪಡುವ ಅಗತ್ಯವಿಲ್ಲ. ಸಂಶಯವಿದ್ದಲ್ಲಿ ಮುಂಜಾಗ್ರತಾ ಕ್ರಮ ಅನುಸರಿಸುವುದು ಸೂಕ್ತವಾಗಿದ್ದು, ಈ ನಿಟ್ಟಿನಲ್ಲಿ ಶಂಕಿತನ ಸಂಪರ್ಕದಲ್ಲಿದ್ದ ಎರಡು ಕುಟುಂಬಸ್ಥರು ಯಾವುದೇ ಕಾರಣಕ್ಕೂ ಮನೆಯಿಂದ 14 ದಿನ ಹೊರ ಬರದಂತೆ ಹೋಂ ಕ್ವಾರಂಟೈನಲ್ಲಿರಬೇಕು ಎಂದು ಸೂಚಿಸಿದ್ದಾರೆ.

ಅಲ್ಲದೆ ಕೊತಬಾಳದಲ್ಲಿನ ಚಹಾ ಅಂಗಡಿ, ಹೋಟೆಲ್‌, ಜನರಲ್‌ ಸ್ಟೋರ್‌, ಕಟಿಂಗ್‌ ಸಲೂನ್‌ಗಳನ್ನು 14 ದಿನಗಳ ವರೆಗೆ ಬಂದ್‌ ಮಾಡಬೇಕು. ಕಿರಾಣಿ ಅಂಗಡಿಗಳು ಪ್ರತಿದಿನ ಬೆಳಗ್ಗೆ 6ರಿಂದ 10 ಗಂಟೆವರೆಗೆ ಮಾತ್ರ ತೆರೆಯಬೇಕು. ಕಿರಾಣಿ ಅಂಗಡಿಗೆ ಬರುವವರು ಕಡ್ಡಾಯವಾಗಿ ಮಾಸ್ಕ್‌ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬ ನಿಯಮ ಜಾರಿಗೆ ತಂದಿದ್ದಲ್ಲದೇ, ಈ ಕುರಿತು ಗ್ರಾಮದಲ್ಲಿ ಡಂಗುರ ಹೊಡೆಸಿದ್ದಾರೆ.

ಹುಬ್ಬಳ್ಳಿ ಮೂಲದ ಕೊರೋನಾ ಶಂಕಿತ ವ್ಯಕ್ತಿಯೊಬ್ಬರು ಕುರಹಟ್ಟಿ ಗ್ರಾಮದ ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮಕ್ಕೆ ಬಂದು ಹೋಗಿರುವ ಮಾಹಿತಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೊತಬಾಳ ಗ್ರಾಮವನ್ನು ಗ್ರಾಮಸ್ಥರೇ ಸ್ವ ಪ್ರೇರಣೆಯಿಂದ ಲಾಕ್‌ಡೌನ್‌ ಮಾಡಿಕೊಂಡಿದ್ದಾರೆ. ಶಂಕಿತ ವ್ಯಕ್ತಿಯ ಸಂಪರ್ಕದಲ್ಲಿ ಮೂವರ ಗಂಟಲು ದ್ರವ ಮಾದರಿಯನ್ನು ಬುಧವಾರ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಕೊತಬಾಳಕ್ಕೆ ಬಂದು ಹೋಗಿರುವ ವ್ಯಕ್ತಿಗೆ ಇಲ್ಲಿಂದ ತೆರಳಿದ ಮೇಲೆ ಸೋಂಕು ತಗಲಿದೆಯೋ ಅಥವಾ ಸೋಂಕಿನಿಂದ ಗುಣಮುಖವಾಗಿ ಆ ಬಳಿಕ ಇಲ್ಲಿಗೆ ಬಂದಿದ್ದಾನೋ ಎಂಬುದು ಗೊತ್ತಾಗಬೇಕಿದೆ. ಈ ಕುರಿತು ಆರೋಗ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ಕೊತಬಾಳ ಗ್ರಾಪಂ ಪಿಡಿಒ ಕಲ್ಪನಾ ಕಡಗದ ಅವರು ತಿಳಿಸಿದ್ದಾರೆ. 

Follow Us:
Download App:
  • android
  • ios