ಗದಗ(ಜೂ.15): ಕೋವಿಡ್‌-19 ಪರಿಸ್ಥಿತಿ ದುರ್ಬಳಕೆ ಮಾಡಿಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಮಾಜಿ ಶಾಸಕ ಡಿ.ಆರ್‌. ಪಾಟೀಲ ಆರೋಪಿಸಿದರು.

ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭೂ ಸುಧಾರಣಾ ಕಾಯ್ದೆ ಕಲಂ 63, ಕಲಂ 79 ಎ ಬಿ ಸಿ ಮತ್ತು ಕಲಂ 80ಕ್ಕೆ ತಿದ್ದುಪಡಿಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸುತ್ತಿರುವುದು ಸರ್ಕಾರ ರೈತರಿಗೆ ಮತ್ತು ಬಡವರಿಗೆ ಮಾಡುತ್ತಿರುವ ಘೋರ ಅನ್ಯಾಯವಾಗಿದೆ. ಜಮೀನ್ದಾರ್‌ ಪದ್ಧತಿಯನ್ನು ಬ್ರಿಟಿಷ್‌ ಆಡಳಿತ ತನ್ನ ಅನುಕೂಲಕ್ಕಾಗಿ ಬೆಂಬಲಿಸುತ್ತಿದ್ದಾಗ ದೇಶದಲ್ಲಿ ಇದರ ವಿರುದ್ಧ ಸ್ವಾತಂತ್ರ್ಯ ಯೋಧರು ಧ್ವನಿ ಎತ್ತಿದ್ದರು. ಕಾಂಗ್ರೆಸ್‌ ಸಮಾಜವಾದಿ ನಿಲುವಿನ ನಾಯಕರು ಉಳುವವರೇ ಭೂಮಿಯ ಒಡೆಯರಾಗಬೇಕೆಂದು ಘೋಷಿಸಿ, ಆ ದಿಶೆಯಲ್ಲಿ ಹೋರಾಟವನ್ನು ಆರಂಭಿಸಿ ಚಂಪಾರಣ್ಯ ಸತ್ಯಾಗ್ರಹದಿಂದ ಹಿಡಿದು ರಾಜ್ಯದಲ್ಲಿ ಕಾಗೋಡು ಹೋರಾಟವನ್ನು ನಡೆಸಿದ ಇತಿಹಾಸವಿದೆ. ಭೂ ಸುಧಾರಣಾ ಕಾರ್ಯಕ್ರಮವನ್ನು ದೇವರಾಜ ಅರಸು ಸರ್ಕಾರ ಗೇಣಿದಾರರೇ ಭೂ ಮಾಲೀಕರಾಗಲು ಅನುಕೂಲ ಕಲ್ಪಿಸಿತ್ತು. ಆದರೆ, ಬಿಜೆಪಿ ಸರ್ಕಾರ ತಿದ್ದುಪಡಿ ತರುವ ಮೂಲಕ ಶ್ರೀಮಂತರಿಗೆ, ರಿಯಲ್‌ ಎಸ್ಟೆಟ್‌ ದಂಧೆ ನಡೆಸುವವರಿಗೆ ಕೈಗಾರಿಕೆ ಹೆಸರಿನಲ್ಲಿ ಬಡವರ ಭೂಮಿ ಕಿತ್ತುಕೊಳ್ಳುವವರಿಗೆ ಅನುಕೂಲ ಕಲ್ಪಿಸಲು ಈ ಕಾನೂನು ಜಾರಿಗೆ ತರುತ್ತಿದೆ ಎಂದು ಆರೋಪಿಸಿದರು.

'DCM ಕಾರಜೋಳಗೆ ಸಮಾಜದ ಹಿತಕ್ಕಿಂತ ಅಧಿಕಾರವೇ ಮುಖ್ಯ'

ಈ ಕಾನೂನು ಜಾರಿಯಾಗುವುದರಿಂದ ಪ್ರಜಾಸತಾತ್ಮಕ ವ್ಯವಸ್ಥೆ ದುರ್ಬಲಗೊಳ್ಳಲಿದೆ. ದುರ್ಬಲರ ಹಿತಕ್ಕೆ ದ್ರೋಹ ಬಗೆಯುವುದು ಧ್ವನಿ ಇಲ್ಲದ ಅಸಂಘಟಿತರ ಧ್ವನಿಯನ್ನು ಹತ್ತಿಕ್ಕುವುದು ಸರ್ಕಾರದ ಉದ್ದೇಶವಾಗಿದೆ. ಯಾವುದೇ ಜನಪ್ರತಿನಿಧಿಗಳ ಸಭೆಯಲ್ಲಿ ವಿವರವಾಗಿ ಚರ್ಚೆಯಾಗಿ ತೀರ್ಮಾನವಾಗಬೇಕಿದ್ದ ಕಾನೂನನ್ನು ಯಾವುದೇ ರೀತಿಯ ಚರ್ಚೆಗೆ ಅವಕಾಶ ನೀಡದೇ ಕೋವಿಡ್‌ -19 ಪರಿಸ್ಥಿತಿಯ ದುರ್ಲಾಭ ಪಡೆದು ಚಳವಳಿಗಳು ನಡೆಯದಂತೆ ಮಾಡುವುದು ಸರ್ಕಾರದ ಹೇಯ ನಡತೆಯಾಗಿದೆ. ಈ ಕುರಿತು ಕಾಂಗ್ರೆಸ್‌ ಶೀಘ್ರದಲ್ಲಿಯೇ ರಾಜ್ಯ ಮಟ್ಟದಲ್ಲಿ ದೊಡ್ಡ ಹೋರಾಟವನ್ನು ರೂಪಿಸಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಜೆ.ಕೆ. ಜಮಾದಾರ, ಗುರಣ್ಣ ಬಳಗಾನೂರ, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಅಶೋಕ ಮಂದಾಲಿ, ಸರ್ಫರಾಜ ಬಬರ್ಚಿ ಮುಂತಾದವರು ಹಾಜರಿದ್ದರು.