* ಅಲ್ಲಲ್ಲಿ ಗುಂಪು ಗುಂಪಾಗಿ ಕುಳಿತು ಹರಟುತ್ತಾರೆ* ಮಾಸ್ಕ್‌ ಇಲ್ಲದೇ ಗುಡಿ ಗುಂಡಾರಗಳಲ್ಲಿ ಜನ ಜಂಗುಳಿ* ಗ್ರಾಪಂ ಮಟ್ಟದ ಟಾಸ್ಕ್‌ ಫೋರ್ಸ್‌ ಸಮಿತಿ ನಿರ್ಲಕ್ಷ್ಯ 

ಸಂಜೀವಕುಮಾರ ಹಿರೇಮಠ

ಹೊಳೆಆಲೂರ(ಮೇ.27):ಕೊರೋನಾ ಮಹಾಮಾರಿ ತಡೆಗೆ ಸರ್ಕಾರ ಲಾಕ್‌ಡೌನ್‌ ಜಾರಿಗೊಳಿಸಿದೆ. ಆದರೆ ಇಲ್ಲಿಗೆ ಸಮೀಪದ ಹುನಗುಂಡಿಯಲ್ಲಿ ಜನರು ಸಾಮಾಜಿಕ ಅಂತರ, ಮಾಸ್ಕ್‌ ಇಲ್ಲದೇ ಗುಡಿ ಗುಂಡಾರಗಳಲ್ಲಿ, ಗಿಡಮರಗಳ ಕೆಳಗೆ, ಕಟ್ಟೆಮೇಲೆ ಗುಂಪು ಗುಂಪಾಗಿ ಕುಳಿತು ಹರಟೆ ಹೊಡೆಯುತ್ತಾರೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯಪಡೆ ರಚನೆಯಾಗಿದ್ದು, ಇಲ್ಲಿ ಯಾರೂ ಹೇಳೋರಿಲ್ಲ ಕೇಳೋರಿಲ್ಲ ಎಂಬಂತಾಗಿದೆ.

ಜನರು ಎಲ್ಲೆಂದರಲ್ಲಿ ಕುಳಿತು ಹರಟೆ ಹೊಡೆಯುತ್ತಾರೆ, ಗುಂಪುಗೂಡಿ ಕಟ್ಟೆಗಳ ಮೇಲೆ ಆರಾಮಾಗಿ ನಿದ್ದೆ ಮಾಡುತ್ತಿದ್ದಾರೆ. ಲಾಕ್‌ಡೌನ್‌ ಸಂದರ್ಭದಲ್ಲೂ ಕೆಲವು ಕಿರಾಣಿ ಅಂಗಡಿಗಳು, ಚಹಾದಂಗಡಿ ತೆಗೆದು ಯಾರ ಭಯವಿಲ್ಲದೇ ವ್ಯಾಪಾರ ವಹಿವಾಟು ನಡೆಸುತ್ತಿವೆ. ಈ ಅಂಗಡಿಗಳಲ್ಲೂ ಮಾಸ್ಕ್‌, ಸಾನಿಟೈಸರ್‌ ಕೂಡಾ ಇಟ್ಟಿಲ್ಲ.

"

ಮಾದರಿಯಾಗಿದ್ದ ಹುನಗುಂಡಿ

ಕೊರೋನಾ ಮೊದಲ ಅಲೆ ಬಂದಾಗ ಗ್ರಾಮದವರೆಲ್ಲರೂ ಸೇರಿ ಗುಳೆ ಹೋಗಿ ವಾಪಸ್‌ ಬಂದ ಗ್ರಾಮಸ್ಥರನ್ನು 14 ದಿವಸ ಕ್ವಾರಂಟೈನ್‌ ಮಾಡಿ ಸ್ವತಃ ಅವರ ಮನೆಗೆ ತಾವೇ ಕಾವಲು ಇರುತ್ತಿದ್ದರು. ಬೆಂಗಳೂರು, ಗೋವಾಕ್ಕೆ ಕೆಲಸಕ್ಕೆ ಹೋಗಿ ಬಂದ ಗ್ರಾಮಸ್ಥರನ್ನು ಕೊರೋನಾ ಟೆಸ್ಟ್‌ ಮಾಡಿಸಿ ನೆಗೆಟಿವ್‌ ಬಂದರೂ ಅವರಿಗೆ ಕ್ವಾರಂಟೈನ್‌ ಮಾಡಿಸಿದ್ದರು. ಮತ್ತೆ ಇಲ್ಲಿಗೆ ಬೇರೆ ಗ್ರಾಮಗಳಿಂದ ಯಾವುದೇ ವಾಹನಗಳು ಬರದಂತೆ ಪಕ್ಕದ ಮಾಡಲಗೇರಿ, ಬಸರಕೋಡ, ಹೊಳೆಆಲೂರ, ರೋಣ ರಸ್ತೆಗಳನ್ನು ಬಂದ್‌ ಮಾಡಿದ್ದರು.

ರೋಣ: ಕೋವಿಡ್‌ ನಿಯಮದಂತೆ ಶವ ಸಂಸ್ಕಾರ ಮಾಡಿಸಿದ ಗ್ರಾಮಸ್ಥರು

ಮಾರ್ಗದರ್ಶನ ಇಲ್ಲ:

ಹುನಗುಂಡಿ ಗ್ರಾಮ ಪಂಚಾಯಿತಿಯಲ್ಲಿ ಕೊರೋನಾ ಕಾರ್ಯಪಡೆ ರಚನೆ ಮಾಡಲಾಗಿದೆ. ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಸದಸ್ಯರು ಸ್ಥಳೀಯವಾಗಿರುವುದರಿಂದ ಕೊರೋನಾ ತಡೆಗೆ ಪ್ರಯತ್ನಿಸುತ್ತಿದ್ದಾರೆ. ಇಲ್ಲಿಯ ಪಿಡಿಒ ತಿಂಗಳಿಂದ ಅನಾರೋಗ್ಯದ ಕಾರಣ ಬೆಡ್‌ ರೆಸ್ಟ್‌ನಲ್ಲಿದ್ದರೆ, ಚಾರ್ಜ್‌ ತೆಗೆದುಕೊಂಡ ಪಿಡಿಒ ತಮ್ಮ ಮೊದಲ ಪಂಚಾಯಿತಿ ಸಮಸ್ಯೆಯ ಕಾರಣ ಇಲ್ಲಿಗೆ ಬರುವುದಿಲ್ಲ. ಇನ್ನೊಬ್ಬ ಪಿಡಿಒಗೆ ಈಗಷ್ಟೇ ಉಸ್ತುವಾರಿ ವಹಿಸಿದ್ದಾರೆ. ಆದರೆ ಅವರೂ ಎರಡು ಪಂಚಾಯಿತಿ ನಿರ್ವಹಿಸುತ್ತಿದ್ದು, ಅವರಿಗೂ ಸಮಸ್ಯೆಯಾಗಿದೆ.

ಈಗಾಗಲೇ ಹಳ್ಳಿಗಳಲ್ಲಿ ಕೊರೋನಾ ತಾಂಡವ ಆಡುತ್ತಿದ್ದು, ಹೊಳೆಆಲೂರು ಹೋಬಳಿ ಗ್ರಾಮಗಳಲ್ಲಿ 60ಕ್ಕೂ ಹೆಚ್ಚು ಪಾಸಿಟಿವ್‌ ಕೇಸ್‌ಗಳು ಪತ್ತೆಯಾಗಿವೆ. ಆಕ್ಸಿಜನ್‌, ಬೆಡ್‌, ವೆಂಟಿಲೇಟರ್‌ ಸಿಗದೆ ಮೃತಪಡುತ್ತಿದ್ದಾರೆ. ಜನರು ಸ್ವಯಂಪ್ರೇರಿತವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಇಲ್ಲಾಂದ್ರೆ ಸಂಬಂಧಪಟ್ಟ ಅಧಿಕಾರಿಗಳು ಗಮನಕೊಟ್ಟು ಗುಂಪು ಕೂಡಿ ಕುಳಿತುಕೊಳ್ಳದಂತೆ ನೋಡಿಕೊಳ್ಳಬೇಕು.

ನಾವು ಜನರಲ್ಲಿ ಜಾಗೃತಿ ಮೂಡಿಸಿದ್ದೇವೆ, ಪಂಚಾಯಿತಿಗಳಿಂದ ಡಂಗುರ ಸಾರಿದ್ದೇವೆ, ಸದಸ್ಯರು, ಅಧಿಕಾರಿಗಳು ಸೇರಿ ಸಂಚಾರ ಮಾಡಿ ತಿಳಿವಳಿಕೆ ಹೇಳಿದ್ದೇವೆ. ಅವರು ಪೊಲೀಸ್‌ ಸಿಬ್ಬಂದಿಗೆ ಮಾತ್ರ ಭಯ ಪಟ್ಟು ಮನೆಯಲ್ಲಿರುತ್ತಾರೆ, ಬಿಟ್ರೆ ನಮ್ಮ ಮಾತು ಕೇಳೋದಿಲ್ಲ ಎಂದು ಎಇಒ ಸಂತೋಷ ಪಾಟೀಲ ತಿಳಿಸಿದ್ದಾರೆ. 

ನಾವು ಇವತ್ತು ಮನೆಯಲ್ಲಿ ಕುಳಿತುಕೊಳ್ಳಲು ಹೇಳುತ್ತೇವೆ, ಅವರು ಮನೆಯಲ್ಲಿ ಕುಳಿತರೆ ಒಳ್ಳೆಯದು, ನೀವು ನಮಗ್ಯಾಕ್‌ ಹೇಳಾಕತ್ತೀರಿ, ಅವರಿಗೆ ಹೇಳ್ರಿ, ಹೊರಗ ಅಡ್ಯಾಡಕತ್ತಾರ ಅಂತಾರ, ನಾವು ಒಬ್ಬೊಬ್ಬರ ಏನಾರ ಹೇಳಿದ್ರ ಕೇಳಂಗಿಲ್ರಿ ಎಂದು ಹೆಸರು ಹೇಳದ ಕಾರ್ಯಪಡೆ ಸದಸ್ಯ ಹೇಳಿದ್ದಾರೆ. (ಚಿತ್ರ: ಸಾಂದರ್ಭಿಕ ಚಿತ್ರ) 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona