* ಕೋವಿಡ್‌ ನಿಯಮದಂತೆ ಶವ ಸಂಸ್ಕಾರಕ್ಕೆ ಗ್ರಾಮಸ್ಥರ ಪಟ್ಟು* ಶವಹೊತ್ತ ಆ್ಯಂಬುಲೆನ್ಸ್‌ ಬರುತ್ತಿದ್ದಂತೆ ತಡೆದ ಗ್ರಾಮಸ್ಥರು* ಗದಗ ಜಿಲ್ಲೆಯ ರೋಣ ತಾಲೂಕಿನ ಬಾಸಲಾಪುರ ಗ್ರಾಮ 

ರೋಣ(ಮೇ.26):ಕೊರೋನಾ ಸೋಂಕಿನಿಂದ ಅಸುನೀಗಿದ್ದ ವ್ಯಕ್ತಿಯ ಶವವನ್ನು ಗ್ರಾಮಸ್ಥರೇ ಮುಂದೆ ನಿಂತು ಕೋವಿಡ್‌ ನಿಯಮದಂತೆ ಅಂತ್ಯಸಂಸ್ಕಾರ ಮಾಡಿಸುವಲ್ಲಿ ಯಶಸ್ವಿಯಾದ ಘಟನೆ ತಾಲೂಕಿನ ಬಾಸಲಾಪುರದಲ್ಲಿ ಮಂಗಳವಾರ ನಡೆದಿದೆ.

ಬಾಸಲಾಪುರದ ನಿವೃತ್ತ ಪೊಲೀಸ್‌ ಪೇದೆ ಹನಮಂತಪ್ಪ ತಳ್ಳಿಗೇರಿ (62) (ಹಾಲಿವಸ್ತಿ ರೋಣ) ವಾರದ ಹಿಂದೆ ರೋಣದ ಭಾರತರತ್ನ ಡಾ. ಭೀಮಸೇನ ಜೋಶಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದರು. ಕುಟುಂಬಸ್ಥರು ಕೊರೋನಾ ಸೋಂಕಿತ ಹನಮಂತಪ್ಪ ಅವರನ್ನು ಹೆಚ್ಚಿನ ಚಿಕಿತ್ಸೆಗೆ 3 ದಿನಗಳ ಹಿಂದೆ ಬಾದಾಮಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಹನುಮಂತಪ್ಪ ಸೋಮವಾರ ರಾತ್ರಿ 10.30ರ ಸುಮಾರಿಗೆ ಅಸುನೀಗಿದರು.

"

ಮಂಗಳವಾರ ಬೆಳಗ್ಗೆ ಯಾವುದೇ ಕೋವಿಡ್‌ ನಿಯಮ ಪಾಲಿಸದೇ ಆಸ್ಪತ್ರೆ ಸಿಬ್ಬಂದಿ ಕುಟುಂಬಸ್ಥರಿಗೆ ಶವ ಹಸ್ತಾಂತರಿಸಿದ್ದರು. ಆದರೆ ಆ್ಯಂಬುಲೆನ್ಸ್‌ ಗ್ರಾಮದ ಬಳಿ ಆಗಮಿಸುತ್ತಿದ್ದಂತೆ ಮಾರ್ಗದ ಮಧ್ಯೆ ಗ್ರಾಮಸ್ಥರು ಅದನ್ನು ತಡೆದು ಕೊರೋನಾ ಸೋಂಕಿತ ಶವವನ್ನು ಗ್ರಾಮದೊಳಗೆ ಬಿಡಲ್ಲ, ಅಲ್ಲದೇ ಕೋವಿಡ್‌ ನಿಯಮ ಅನುಸರಿಸದೇ ಅಂತ್ಯಸಂಸ್ಕಾರ ಮಾಡಲು ಅವಕಾಶ ನೀಡುವುದಿಲ್ಲ ಎಂದು ತೀವ್ರ ವಿರೋಧ ವ್ಯಕ್ತಪಡಿಸಿದರು.
ಕೊರೋನಾದಿಂದ ಸತ್ತಿಲ್ಲ, ಬೇರೆ ಕಾಯಿಲೆಗೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಕೊರೋನಾ ವರದಿ ನೆಗೆಟಿವ್‌ ಇದೆ ಎಂದು ಮೃತನ ಕುಂಟುಂಬಸ್ಥರು ಗ್ರಾಮಸ್ಥರೊಂದಿಗೆ ಕೆಲ ಕಾಲ ವಾಗ್ವಾದ ನಡೆಸಿದಾಗ ಕೊರೋನಾ ವರದಿ ತೋರಿಸುವಂತೆ ಜನರು ಪಟ್ಟುಹಿಡಿದರು.

ನರಗುಂದ: ದಿನಸಿ ಖರೀದಿಗಾಗಿ ಹೋಮ್‌ ಐಸೋಲೇಶನ್‌ ಸೋಂಕಿತರ ಓಡಾಟ..!

ತಹಸೀಲ್ದಾರ್‌ ಜೆ.ಬಿ. ಜಕ್ಕನಗೌಡ್ರರಿಗೆ ಈ ಕುರಿತು ಮಾಹಿತಿ ನೀಡಿದ ಗ್ರಾಮಸ್ಥರು, ಕೂಡಲೇ ಸ್ಥಳಕ್ಕೆ ಬರುವಂತೆ ಆಗ್ರಹಿಸಿದರು. ಆಗ ಆರೋಗ್ಯ ಇಲಾಖೆ ಸಿಬ್ಬಂದಿ, ಕಂದಾಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಮೃತನ ಕುಟುಂಬಸ್ಥರಿಂದ ಮಾಹಿತಿ ಪಡೆದು, ಬಾದಾಮಿ ಖಾಸಗಿ ಆಸ್ಪತ್ರೆಯಿಂದ ಮೃತ ವ್ಯಕ್ತಿಯ ವರದಿ ತರಿಸಿಕೊಂಡರು.

ಕೊರೋನಾ ಸೋಂಕಿನಿಂದ ಮೃತಪಟ್ಟಿರುವುದು ವರದಿಯಲ್ಲಿ ದೃಢಪಟ್ಟಹಿನ್ನೆಲೆಯಲ್ಲಿ ಕೋವಿಡ್‌ ನಿಯಮಾನುಸಾರ ಆರೋಗ್ಯ ಇಲಾಖೆ ಶವ ವಶಕ್ಕೆ ಪಡೆದು, ಬಳಿಕ ಕುಟುಂಬಸ್ಥರೊಂದಿಗೆ ಸ್ಥಳೀಯ ಗ್ರಾಪಂ, ಆರೋಗ್ಯ ಇಲಾಖೆ ಸಿಬ್ಬಂದಿ ಅಂತ್ಯ ಸಂಸ್ಕಾರ ನೆರವೇರಿಸಿದರು. ಆಗ ಗ್ರಾಮಸ್ಥರು ಹೆಚ್ಚಿನ ಅನಾಹುತ ತಪ್ಪುವಂತಾಯಿತೆಂದು ನಿಟ್ಟುಸಿರು ಬಿಟ್ಟರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona