ಧಾರವಾಡ: ಶಾಸಕ ದೇಸಾಯಿ ಮನವೊಲಿಕೆ ಯಶಸ್ಸು, ಧ್ವಜಾರೋಹಣಕ್ಕೆ ಗ್ರಾಮಸ್ಥರ ಒಪ್ಪಿಗೆ..!
ಹರ್ ಘರ್ ತಿರಂಗಾ ಅಭಿಯಾನ ಯಶಸ್ವಿಗೆ ಗರಗ ಗ್ರಾಮಸ್ಥರ ನಿರ್ಧಾರ
ವರದಿ: ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ
ಧಾರವಾಡ(ಆ.12): ನಮ್ಮ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷಗಳು ಪೂರೈಸುತ್ತಿದ್ದು, ಈ ಹಿನ್ನೆಲೆಯಲ್ಲಿ ಇಡೀ ದೇಶದ ತುಂಬಾ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಸುತ್ತೋಲೆ ಹಾಗೂ ಆದೇಶಗಳ ಪ್ರಕಾರ ಗರಗ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಹರ್ ಘರ್ ತಿರಂಗಾ (ಮನೆ ಮನೆಯಲ್ಲೂ ರಾಷ್ಟ್ರಧ್ವಜ) ಘೋಷಣೆಯೊಂದಿಗೆ ಪ್ರತಿ ಮನೆಗಳಲ್ಲಿಯೂ ತ್ರಿವರ್ಣ ಧ್ವಜವನ್ನು ಹಾರಿಸುವುದರ ಮೂಲಕ ದೇಶಾಭಿಮಾನವನ್ನು ಮೆರೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಗರಗ ಗ್ರಾಮ ಪಂಚಾಯತಿಯ ಅಧ್ಯಕ್ಷೆ ಲಕ್ಷ್ಮೀ ನಾಗಪ್ಪ ಕಾಶಿಗಾರ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆದೇಶಗಳ ಮೂಲಕ ಗರಗ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿರುವ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ತ್ರಿವರ್ಣ ಧ್ವಜವನ್ನು ಧ್ವಜಾರೋಹಣ ಮಾಡಲಾಗುವುದು ಗರಗ ಗ್ರಾಮದಲ್ಲಿ ಕೆಲವು ಗ್ರಾಮಸ್ಥರು ಹರ್ ಘರ್ ತಿರಂಗಾ ಅಭಿಯಾನ ಆಚರಿಸುವ ಕುರಿತು ಮನವಿ ಸಲ್ಲಿಸಿ ಖಾದಿ ಬಟ್ಟೆಯನ್ನು ಹೊರತು ಪಡಿಸಿ ಬೇರೆ ಬಟ್ಟೆಯಿಂದ ತಯಾರು ಮಾಡಿದ ಧ್ವಜವನ್ನು ಹಾರಿಸುವುದಿಲ್ಲ ಎಂದು ಗ್ರಾಮದ ಗುರು ಹಿರಿಯರು ಗ್ರಾಮ ಪಂಚಾಯತಿಗೆ ಮನವಿ ಸಲ್ಲಿಸಿದ್ದರು. ಬಳಿಕ ಶಾಸಕ ಅಮೃತ ದೇಸಾಯಿ ಗ್ರಾಮಸ್ಥರ ಮನವೊಲಿಸಿ ಸದ್ಯ ಧ್ವಜಾರೋಹಣ ಮಾಡಲು ಪಂಚಾಯತಿಯ ಸದಸ್ಯರನ್ನ ಮನವೊಲಿಸಿದರು.
ಹುಬ್ಬಳ್ಳಿ ಈದ್ಗಾ ಮೈದಾನಕ್ಕೂ ಕಾಲಿಟ್ಟ ಗಣೇಶೋತ್ಸವ ವಿವಾದ
ಅವರ ಮನವಿಯನ್ನು ಪರಿಶೀಲಿಸಿ ಹರ್ ಘರ್ ತಿರಂಗಾ ಅಭಿಯಾನವನ್ನು ಯಶಸ್ವಿಮಾಡಲು ಗ್ರಾಮದ ಗುರು-ಹಿರಿಯರ ಜೊತೆ ಚರ್ಚಿಸಿ ಮನ ಒಲಿಸಲು ಗ್ರಾಮ ಪಂಚಾಯತಿಯಿಂದ ಕ್ರಮ ಕೈಗೊಳ್ಳಲಾಗಿದೆ ಗರಗ ಗ್ರಾಮ ಪಂಚಾಯತ ವ್ಯಾಪ್ತಿಯ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಖಾದಿ ಬಟ್ಟೆಯಿಂದ ತಯಾರಿಸಿದ ತ್ರಿವರ್ಣ ಧ್ವಜವನ್ನೇ ಧ್ವಜಾರೋಹಣ ಮಾಡಲಾಗುತ್ತಿದೆ. 75 ನೇ ಸ್ವಾತಂತ್ರ್ಯೋತ್ಸವದ ಆಚರಣೆಯ ಸಂದರ್ಭದಲ್ಲಿ ಗರಗ ಗ್ರಾಮದ ಪ್ರತಿಯೊಬ್ಬರೂ ಕೂಡ ತಮ್ಮ ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸುವುದರ ಮೂಲಕ ಹರ್ ಘರ್ ತಿರಂಗಾ ಅಭಿಯಾನವನ್ನು ಯಶಸ್ವಿಮಾಡಿ ದೇಶಾಭಿಮಾನವನ್ನು ಮೆರೆಯಬೇಕೆಂದು ಗ್ರಾಮ ಪಂಚಾಯತ ಅಧ್ಯಕ್ಷರು ಗ್ರಾಮಸ್ಥರಲ್ಲಿ ಮನವಿಮಾಡಿಕೊಂಡಿದ್ದಾರೆ.
ಆಗಸ್ಟ್ 5 ರಂದು ವಿಶೇಷ ಸಭೆಯಲ್ಲಿ ಈ ಕುರಿತ ವಿಷಯದ ಬಗ್ಗೆ ಸುದೀರ್ಘವಾಗಿ ಚರ್ಚೆಮಾಡಲಾಗಿದ್ದು, ಸರ್ಕಾರದ ನಿರ್ದೇಶನಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲು ಹಾಗೂ ಗ್ರಾಮದ ತುಂಬಾ ಹರ್ ಘರ್ ತಿರಂಗಾ ಕುರಿತು ಪ್ರಚಾರ ಮಾಡಲು ಠರಾವು ಪಾಸು ಮಾಡಲಾಗಿದೆ. ಆಗಸ್ಟ್ 11 ರಂದು ಗರಗ ಗ್ರಾಮ ಪಂಚಾಯತ ಆಡಳಿತ ಮಂಡಳಿ ಹಾಗೂ ಗ್ರಾಮದ ಗುರು ಹಿರಿಯರ ಸಮ್ಮುಖದಲ್ಲಿ ಸಭೆಯನ್ನು ಕರೆದು ಸುದೀರ್ಘವಾಗಿ ಚರ್ಚೆ ಮಾಡಿ ಹರ್ ಘರ್ ತಿರಂಗಾ ಅಭಿಯಾನವನ್ನು ಯಶಸ್ವಿಯಾಗಿ ಆಚರಣೆ ಮಾಡಲಾಗುವುದೆಂದು ಸಭೆಯಲ್ಲಿ ನಿರ್ಧರಿಸಲಾಯಿತು. ಗರಗ ಖಾದಿ ಗ್ರಾಮೋದ್ಯೋಗದ ಕೇಂದ್ರದ ಅಭಿವೃದ್ಧಿಗಾಗಿ ಸರ್ಕಾರದಿಂದ ಆರ್ಥಿಕ ಸೌಲಭ್ಯ ಪಡೆಯಲು ಸಂಬಂಧ ಪಟ್ಟ ಇಲಾಖೆಗಳಿಗೆ ಮನವಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮ ಪಂಚಾಯತ ಅಧ್ಯಕ್ಷರು ಸಭೆಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಉಪಾಧ್ಯಕ್ಷ ಫಕ್ಕೀರಪ್ಪ ನಾ ಕಟ್ಟಿಮನಿ, ಗ್ರಾಮ ಪಂಚಾಯತ ಸರ್ವ ಸದಸ್ಯರು ಮತ್ತು ತಾಲೂಕು ಪಂಚಾಯತ ಮಾಜಿ ಉಪಾಧ್ಯಕ್ಷ ಮಹೇಶ ಯಲಿಗಾರ, ಗ್ರಾಮದ ರೈತ ಮುಖಂಡ ಶಿವನಿಂಗಪ್ಪ ಕಾಶೀಗಾರ, ರೈತ ಸಂಘದ ಧಾರವಾಡ ಜಿಲ್ಲಾ ಉಪಾಧ್ಯಕ್ಷ ರವಿ ಗುಗ್ಗರಿ, ಭಾರತೀಯ ದಲಿತ ಸಂಘರ್ಷ ಸಮೀತಿಯ ರಾಜ್ಯ ಉಪಾಧ್ಯಕ್ಷ ಕಲ್ಮೇಶ ಹಾದಿಮನಿ, ರಾಜು ಕಟ್ಟಿಮನಿ, ಗರಗ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ ವಿಜಯ ಮಗೆಣ್ಣವರ, ಅಜಿತ ಕಲ್ಲೂರ ಹಾಗೂ ಗರಗ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ವಿರೂಪಾಕ್ಷಯ್ಯ ಕುಲಕರ್ಣಿ, ಗ್ರಾಮಸ್ಥರು ಉಪಸ್ಥಿತರಿದ್ದರು.