ಶಿರಾ, ರಾರಾ ಯಶಸ್ಸು ಕೇವಲ ಟ್ರೈಲರ್, ಇನ್ನೂ ಸಿನಿಮಾ ಬಾಕಿ ಇದೆ: ವಿಜಯೇಂದ್ರ
ಜನರ ತಿರಸ್ಕಾರಕ್ಕೆ ಒಳಪಟ್ಟ 2 ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಅಧಿಕಾರ ಹಿಡಿಯಲು ಹಗಲು ಕನಸು ಕಾಣುತ್ತಿವೆ| ಬೇಲೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ|
ಬೇಲೂರು(ನ.29): ಶಿರಾ ಹಾಗೂ ಆರ್‌ಆರ್ ನಗರ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕೇವಲ ಟ್ರೈಲರ್ ತೋರಿಸಿದ್ದೇವೆ. ಮುಂದಿನ ಚುನಾವಣೆಗಳಲ್ಲಿ ಪೂರ್ತಿ ಸಿನಿಮಾ ತೋರಿಸಲಿದ್ದೇವೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಹೇಳಿದರು.
ಬೇಲೂರಿನಲ್ಲಿ ನಡೆದ ಗ್ರಾಮ ಸ್ವರಾಜ್ಯ ಪಟ್ಟಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಜನರ ತಿರಸ್ಕಾರಕ್ಕೆ ಒಳಪಟ್ಟ 2 ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಅಧಿಕಾರ ಹಿಡಿಯಲು ಹಗಲು ಕನಸು ಕಾಣುತ್ತಿವೆ. ಅವರೆಲ್ಲಾ ಮೊದಲು ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲಿ ಎಂದು ವ್ಯಂಗ್ಯವಾಡಿದರು.
'ರಾಜೀನಾಮೆ ಕೊಡಿ ಎಂದು ಕೇಳಿಲ್ಲ, ಸಂತೋಷ್ ಕೃತ್ಯ ನನಗೂ ಶಾಕ್ ಆಗಿದೆ'
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನೀಡಿದ ಯೋಜನೆಗಳು ರೈತಪರ, ದೀನದಲಿತರ ಪರ ಹಾಗೂ ಬಡವರ್ಗದ ಕಷ್ಟಗಳಿಗೆ ನೆರವಾಗಿರುವುದರಿಂದ ಅವರಿಗೆ ಎಲ್ಲಾ ಕಡೆಯೂ ಸಹ ಜಯ ಸಿಗುತ್ತಿದೆ. ಯಡಿಯೂರಪ್ಪನವರು ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿ ರಾಜ್ಯದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಅವರ ನೇತೃತ್ವದಲ್ಲಿ ನಡೆದ 14 ಉಪಚುನಾವಣೆಯಲ್ಲಿ 12 ಸ್ಥಾನಗಳನ್ನು ಗೆಲ್ಲುವ ಮೂಲಕ ಅವರ ಸ್ಥಾನ ಏನು ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ ಎಂದರು.
ಆರ್ ಆರ್ ನಗರ ಹಾಗೂ ಶಿರಾ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್‌ನ ಎಲ್ಲ ನಾಯಕರು ಬಂದು ನಿಂತಿದ್ದರೂ ಆ ಪಕ್ಷಗಳು ನೆಲ ಕಚ್ಚಿದರು. ಇದಕ್ಕೆ ಅಲ್ಲಿಯ ಮತದಾರರು ನೀಡಿದ ತೀರ್ಪೇ ಸಾಕ್ಷಿ. ಮುಂದಿನ ದಿನಗಳಲ್ಲಿ ಹಳೆ ಮೈಸೂರು ಭಾಗದಲ್ಲಿ ಕಮಲ ಅರಳಲು ನಮ್ಮ ಕಾರ್ಯಕರ್ತರು ಶ್ರಮಿಸಲಿದ್ದಾರೆ ಎಂದರು.
ತೋಟಗಾರಿಕೆ ಸಚಿವ ನಾರಾಯಣಗೌಡ ಮಾತನಾಡಿ, ಈ ಹಿಂದೆ ಮಂಡ್ಯ ಹಾಗೂ ಹಾಸನ ಜೆಡಿಎಸ್ ಭದ್ರಕೋಟೆ ಎಂದು ಬೀಗುತ್ತಿದ್ದ ಇವರಿಗೆ ತಕ್ಕ ಉತ್ತರ ನೀಡಲು ಈ ಗ್ರಾಮಪಂಚಾಯಿತಿ ಚುನಾವಣೆ ನಮಗೆ ದಿಕ್ಸೂಚಿ. ಆದ್ದರಿಂದ ಪ್ರತಿಯೊಬ್ಬರೂ ನಮ್ಮ ಒಳ ವೈಮನಸ್ಸನ್ನು ಮರೆತು ತಳಮಟ್ಟದಿಂದ ಪಕ್ಷವನ್ನು ಬಲಪಡಿಸುವಂತಹ ಕೆಲಸಕ್ಕೆ ಮುಂದಾಗಬೇಕು. ಅಲ್ಲದೆ ಈಗಾಗಲೇ 60 ವರ್ಷ ದೇಶವನ್ನು ಆಳಿದ ಪಕ್ಷಕ್ಕೆ ಬುದ್ಧಿ ಕಲಿಸಲಾಗಿದ್ದು, ಮುಂದೆ ಇಲ್ಲಿಯ ಅಪ್ಪ ಮಕ್ಕಳ ಪಕ್ಷಕ್ಕೆ ಬುದ್ಧಿ ಕಲಿಸಲು ನಮಗೆ ಚನ್ನರಾಯಪಟ್ಟಣ ತಾಲೂಕನ್ನು ಗ್ರಾಮಪಂಚಾಯಿತಿ ಚುನಾವಣೆಗೆ ನಮಗೆ ವಹಿಸಿಕೊಟ್ಟಲ್ಲಿ ನಮ್ಮ ಶಕ್ತಿ ಏನು ಎಂಬುವುದನ್ನು ತೋರಿಸಲಾಗುವುದು ಎಂದು ಎಚ್ಚರಿಸಿದರು.