ರಾಷ್ಟ್ರೀಯ ಪಕ್ಷಿ ನವಿಲುಗೆ ಹಸಿವು ನೀಗಿಸಿದ ಸರ್ಕಾರಿ ಶಾಲೆ ಮಕ್ಕಳು!
ವಿಜಯಪುರದ ಜಂಬಗಿ ಗ್ರಾಮದ ಶಾಲೆಯೊಂದರಲ್ಲಿ, ಹಸಿದ ನವಿಲು ಆಹಾರಕ್ಕಾಗಿ ಮಕ್ಕಳ ಬಳಿ ಬಂದಾಗ, ಮಕ್ಕಳು ತಮ್ಮ ಬಿಸಿಯೂಟದ ತಟ್ಟೆಯನ್ನೇ ನವಿಲಿಗೆ ಬಿಟ್ಟುಕೊಟ್ಟ ಹೃದಯಸ್ಪರ್ಶಿ ಘಟನೆ ನಡೆದಿದೆ.
ವಿಜಯಪುರ (ಆ.28): ಕಾಡಿನಲ್ಲಿರುವ ರಾಷ್ಟ್ರೀಯ ಪಕ್ಷಿ ನವಿಲು (National Bird Peacock) ಹಸಿವು ತಾಳಲಾರದೇ ಸರ್ಕಾರಿ ಶಾಲೆಯ (Government School) ಆವರಣದೊಳಗೆ ಬಂದು ಮಕ್ಕಳು ಊಟ ಮಾಡುತ್ತಿದ್ದ ವೇಳೆ ಬಿಸಿಯೂಟದ ತಟ್ಟೆಯತ್ತ ಹೋಗಿದೆ. ನವಿಲಿನ ಹಸಿವು ತಿಳಿದ ಮಕ್ಕಳು ಒಂದು ತಟ್ಟೆಯಲ್ಲಿದ್ದ ಬಿಸಿಯೂಟದ (Mid Day Meals) ಅನ್ನವನ್ನು ರಾಷ್ಟ್ರೀಯ ಪಕ್ಷಿಗೆ ಬಿಟ್ಟುಕೊಟ್ಟಿದ್ದಾರೆ. ಆಗ, ನವಿಲು ತಟ್ಟೆಯಲ್ಲಿದ್ದ ಅನ್ನ ತಿಂದು ಹಾರಿ ಹೋಗಿದೆ.
ಸಾಮಾನ್ಯವಾಗಿ ಹಕ್ಕಿ ಪಕ್ಷಿಗಳು ಮಾನವ ಸಂಪರ್ಕದಿಂದ ದೂರವೇ ಇರುತ್ತವೆ. ಒಂದು ವೇಳೆ ನಾವು ಸಾಕಿದ ಮಾಲೀಕರಿಗೆ ಮಾತ್ರ ಹತ್ತಿರವಾಗಿರುತ್ತವೆ. ಆದರೆ, ನವಿಲು ಬಂದು ಈ ಘಟನೆ ನಡೆದಿರುವುದು ವಿಜಯಪುರ ತಾಲ್ಲೂಕಿನ ಜಂಬಗಿ ಗ್ರಾಮದ ಕೆರೂರವಸ್ತಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ. ಮಕ್ಕಳು ಬಿಸಿಯೂಟ ಸೇವಿಸುವಾಗ ಹಾರಿ ಬಂದ ರಾಷ್ಟ್ರ ಪಕ್ಷಿ ಮಕ್ಕಳು ತಟ್ಟೆಯಲ್ಲಿ ಅನ್ನ ಹಾಕಿಕೊಂಡು ಪ್ರಾರ್ಥನೆ ಮಾಡುತ್ತಾ ಕುಳಿತಾಗ ಅನ್ನದ ತಟ್ಟೆಗೆ ಕಡೆಗೆ ಸಾಗಿದೆ. ಈ ಸಮಯದಲ್ಲಿ ವಿದ್ಯಾರ್ಥಿಯೋರ್ವಳು ತನ್ನ ತಟ್ಟೆಯನ್ನು ನವಿಲಿಗೆ ಕೊಟ್ಟು ಬೇರೊಂದು ತಟ್ಟೆ ತೆಗೆದುಕೊಂಡಿದ್ದಾಳೆ. ವರ್ಗ ಕೋಣೆಯ ಹತ್ತಿರವು ಬಂದ ನವಿಲು ಧಾನ್ಯಗಳನ್ನು ಸವಿದು ತನ್ನ ಹಸಿವನ್ನು ನಿಗಿಸಿಕೊಂಡಿದೆ.
ಕರೆಂಟ್ ಶಾಕ್ ಹೊಡೆದು ನವಿಲು ಸಾವು: ಸಾವನ್ನಪ್ಪಿದ ಪ್ರಾಣಿ, ಪಕ್ಷಿಗಳ ಅಂತ್ಯಕ್ರಿಯೆ ಮಾಡಬೇಡಿ ಎಂದ ಸರ್ಕಾರ.!
ಇನ್ನು ಸರ್ಕಾರಿ ಶಾಲೆಯಲ್ಲಿ ಅಕ್ಷರ ದಾಸೋಹ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳು ಮಧ್ಯಾಹ್ನ ಬಿಸಿಊಟ ಸೇವಿಸುತ್ತಿರುವ ಸಮಯದಲ್ಲಿ ಹಾರಿ ಬಂದ ರಾಷ್ಟ್ರಪಕ್ಷಿ ನವಿಲು ಮಕ್ಕಳೊಂದಿಗೆ ಬಿಸಿಊಟ ಸವಿದ ಘಟನೆ ನಡೆದಿದ್ದು, ಮಕ್ಕಳು ಖುಷಿ ಪಟ್ಟಿದ್ದಾರೆ. ಕೇವಲ ಪುಸ್ತಕದಲ್ಲಿ ನೋಡುತ್ತಿದ್ದ ರಾಷ್ಟ್ರೀಯ ಪಕ್ಷಿ ನವಿಲು ಜೀವಂತವಾಗಿ ಹಾರಿಬಂದು ತಮ್ಮ ಮುಂದೆ ಕುಳಿತು ಊಟ ಸವಿದ ದೃಶ್ಯ ಕಂಡ ಮಕ್ಕಳು ಪುಳುಕಿತರಾಗಿದ್ದಾರೆ. ಇದನ್ನು ಶಾಲೆಯ ಶಿಕ್ಷಕರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದು ಹಂಚಿಕೊಂಡಿದ್ದಾರೆ.
ಅಯ್ಯೋ ಪಾಪಿ: ನಮ್ಮ ರಾಷ್ಟ್ರಪಕ್ಷಿಯ ಗರಿಗಳನ್ನು ಕಿತ್ತು ಹಿಂಸೆ ನೀಡಿ ಕೊಂದೇ ಹಾಕ್ದ! ವಿಡಿಯೋ ವೈರಲ್
ಇನ್ನು ಈ ಸರ್ಕಾರಿ ಶಾಲೆಯ ವಾತಾವರಣ ಹಚ್ಚ ಹಸಿರಿನ ಗಿಡಗಳ ಮಧ್ಯೆ ಇದೆ. ಶಾಲಾ ಆವರಣದ ಸುತ್ತಲೂ ಸುಂದರ ಪ್ರಕೃತಿ ಸೌಂದರ್ಯವಿದ್ದು, ಹಕ್ಕಿ ಪಕ್ಷಿಗಳು, ಕಾಡು ಪ್ರಾಣಿಗಳು, ಸರೀಸೃಪಗಳು ಸೇರಿದಂತೆ ಹಲವು ಪ್ರಾಣಿ ಪಕ್ಷಗಳನ್ನು ನೋಡುತ್ತಾರೆ. ಪ್ರತಿದಿನ ಪ್ರಕೃತಿ ಮಡಿಲಿನಲ್ಲಿ ಓದು, ಆಟ, ಪಾಠ ಹಾಗೂ ಬಿಸಿಯೂಟ ಮಾಡುತ್ತಿದ್ದ ಮಕ್ಕಳಿಗೆ ಇಂದು ರಾಷ್ಟ್ರಪಕ್ಷಿ ನವಿಲು ಆಗಮಿಸಿದ್ದರಿಂದ ಭಾರಿ ಸಂತ ವ್ಯಕ್ತಪಡಿಸಿದ್ದಾರೆ. ಇನ್ನು ಶಿಕ್ಷಕರು ಕೂಡ ನವಿಲು ಬಂದಾಗ ಅದನ್ನು ಓಡಿಸದೇ ಅದೇನು ಮಾಡುತ್ತೋ ನೋಡೋಣ, ಎಲ್ಲ ಮಕ್ಕಳು ಅದಕ್ಕೆ ತೊಂದರೆ ಕೊಡದೇ ಶಾಂತಿಯಿಂದ ವರ್ತಿಸುವಂತೆ ಸೂಚನೆ ನೀಡಿದ್ದಾರೆ. ಆಗ ಶಿಕ್ಷಕರ ಅಣತಿಯಂತೆ ಮಕ್ಕಳು ತಾವು ಊಟ ಮಾಡುವ ಸ್ಥಳಕ್ಕೆ ನವಿಲು ಬಂದರೂ ಗಾಬರಿಗೊಳ್ಳದೇ, ಅದನ್ನೂ ಗಾಬರಿಗೊಳಿಸದೇ ಬಿಸಿ ಊಟದ ತಟ್ಟೆಯನ್ನು ಬಿಟ್ಟುಕೊಟ್ಟು ಒಳ್ಳೆಯ ಕೆಲಸ ಮಾಡಿದ್ದಾರೆ.