ಅಯ್ಯೋ ಪಾಪಿ: ನಮ್ಮ ರಾಷ್ಟ್ರಪಕ್ಷಿಯ ಗರಿಗಳನ್ನು ಕಿತ್ತು ಹಿಂಸೆ ನೀಡಿ ಕೊಂದೇ ಹಾಕ್ದ! ವಿಡಿಯೋ ವೈರಲ್
ವೈರಲ್ ವಿಡಿಯೋದಲ್ಲಿ ಕಂಡುಬರುವ ಬೈಕ್ ಸಂಖ್ಯೆ ಆಧರಿಸಿ, ಯುವಕನನ್ನು ಗುರುತಿಸಲಾಗಿದೆ. ಇದು ಜಿಲ್ಲೆಯ ರೀಥಿ ಪೊಲೀಸ್ ಠಾಣೆ ಪ್ರದೇಶಕ್ಕೆ ಸೇರಿದೆ ಎಂದು ವಿಭಾಗೀಯ ಅರಣ್ಯ ಅಧಿಕಾರಿ (ಡಿಎಫ್‌ಒ) ಗೌರವ್ ಶರ್ಮಾ ಹೇಳುತ್ತಾರೆ.
ಭೋಪಾಲ್ (ಮೇ 22, 2023): ನಮ್ಮ ದೇಶದ ರಾಷ್ಟ್ರಪಕ್ಷಿ ಅಂದರೆ ನವಿಲು. ಅದರ ಅಂದಚೆಂದ, ಕುಣಿತಕ್ಕೆ ಸರಿಸಾಟಿ ಇಲ್ಲ. ಅದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸದವರೇ ಇಲ್ಲ. ಆದರೆ, ಇಂತಹ ನವಿಲಿಗೇ ವ್ಯಕ್ತಿಯೊಬ್ಬ ಹಿಂಸೆ ನೀಡಿ ಸಾಯಿಸಿದ್ದಾನೆ. ಅದರ ಗರಿಗಳನ್ನೆಲ್ಲ ಕಿತ್ತು ಹಾಕಿದ್ದಾನೆ. ನೋವಿನಲ್ಲಿ ರಳಿ ಆ ನವಿಲು ಸತ್ತೇ ಹೋಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶವೂ ವ್ಯಕ್ತವಾಗಿದೆ. ಇನ್ನು, ಸ್ಥಳಿಯ ಪೊಲೀಸರು ಈ ವ್ಯಕ್ತಿಯನ್ನು ಬಂಧಿಸಲು ಇನ್ನೂ ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮಧ್ಯಪ್ರದೇಶದ ಕಟ್ನಿಯಲ್ಲಿ ಈ ಘಟನೆ ನಡೆದಿದ್ದು, ಘಟನೆಯ ವಿಡಿಯೋವನ್ನು ತನ್ನ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿದ್ದು, ಹಲವಾರು ಬಳಕೆದಾರರು ಆತನ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಇನ್ನು, ಪೊಲೀಸರು ಆರೋಪಿಯನ್ನು ಗುರುತಿಸಿದ್ದು, ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಇದನ್ನು ಓದಿ: ಮೊಟ್ಟೆ ಕಳ್ಳಿಯರ ಮೇಲೆ ನವಿಲಿನ ರೋಷಾವೇಷ: ಈ ಜನ್ಮದಲ್ಲಿ ಅವ್ರು ಮೊಟ್ಟೆ ತಿನ್ನಲ್ಲ!
"ವೈರಲ್ ವಿಡಿಯೋದಲ್ಲಿ ಕಂಡುಬರುವ ಬೈಕ್ ಸಂಖ್ಯೆ ಆಧರಿಸಿ, ಯುವಕನನ್ನು ಗುರುತಿಸಲಾಗಿದೆ. ಇದು ಜಿಲ್ಲೆಯ ರೀಥಿ ಪೊಲೀಸ್ ಠಾಣೆ ಪ್ರದೇಶಕ್ಕೆ ಸೇರಿದೆ" ಎಂದು ವಿಭಾಗೀಯ ಅರಣ್ಯ ಅಧಿಕಾರಿ (ಡಿಎಫ್‌ಒ) ಗೌರವ್ ಶರ್ಮಾ ಹೇಳುತ್ತಾರೆ.
ಆರೋಪಿ ಅತುಲ್ ನವಿಲಿನ ಗರಿಗಳನ್ನು ಹೊರತೆಗೆಯುತ್ತಿರುವುದು ವಿಡಿಯೋದಲ್ಲಿದೆ. ಇನ್ನು, ಈ ವಿಡಿಯೋದ ಹಿನ್ನೆಲೆಯಲ್ಲಿ ಹಾಡೊಂದು ಪ್ಲೇ ಆಗುತ್ತಿದ್ದು, ಅದರ ಜೊತೆಗೆ ಆತ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾನೆ. ಅಲ್ಲದೆ, ಆತ ಈ ಕೃತ್ಯವೆಸಗುತ್ತಿರಬೇಕಾದ್ರೆ ಆತನ ಸ್ನೇಹಿತೆಯೊಬ್ಬಳು ಪಕ್ಕದಲ್ಲೇ ಇರುವುದು ಕಂಡುಬಂದಿದ್ದು, ಆಕೆಯೂ ಕೂಡ ಯಾವುದೇ ಪ್ರತಿರೋಧ ವ್ಯಕ್ತಪಡಿಸದೆ ಸುಮ್ಮನೆ ನೋಡುತ್ತಿದ್ದಾಳೆ ಎನ್ನುವುದನ್ನು ಸಹ ಈ ವೈರಲ್ ವಿಡಿಯೋದಲ್ಲಿ ನೋಡಬಹುದಾಗಿದೆ.
ಆರೋಪಿ ಅತುಲ್‌ನನ್ನು ಬಂಧಿಸಲು ಆತನ ಮನೆಗೆ ಪೊಲೀಸರು ಹೋಗಿದ್ದು, ಆದರೆ ಆತ ಮನೆಯಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ. ಈ ಹಿನ್ನೆಲೆ ಸ್ಥಳೀಯರು ಮತ್ತು ಮಾಧ್ಯಮದವರು ಆರೋಪಿಯನ್ನು ಕಂಡರೆ ಮಾಹಿತಿ ನೀಡುವಂತೆ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಕರೆಂಟ್ ಶಾಕ್ ಹೊಡೆದು ನವಿಲು ಸಾವು: ಸಾವನ್ನಪ್ಪಿದ ಪ್ರಾಣಿ, ಪಕ್ಷಿಗಳ ಅಂತ್ಯಕ್ರಿಯೆ ಮಾಡಬೇಡಿ ಎಂದ ಸರ್ಕಾರ.!
ಮೊಟ್ಟೆ ಕಳ್ಳಿಯರಿಗೆ ತಕ್ಕ ಶಾಸ್ತಿ ಮಾಡಿದ್ದ ನವಿಲು
ಕಳೆದ ತಿಂಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ನವಿಲಿನ ಮೊಟ್ಟೆಗಳನ್ನು ಕದಿಯಲು ಹೋದ ಮಹಿಳೆಯರಿಗೆ ತಕ್ಕ ಶಾಸ್ತಿಯಾಗಿದೆ. ಅವರು ಮಾಡಲು ಹೋಗಿದ್ದ ಕೆಲಸ ಎಂತದ್ದು ಎಂಬುದು ಅವರಿಗೆ ನಂತರ ಅರಿವಾಗಿರ್ಬೇಕು. ಇನ್ನು, ಅವರು ತಮ್ಮ ಜೀವನಪರ್ಯಂತ ಮೊಟ್ಟೆಯನ್ನೇ ತಿನ್ನೋಕೆ ಹೋಗಲ್ವೇನೋ! ಹಾಗಾದ್ರೆ, ಅಂತದ್ದೇನಾಯ್ತು ಅಂತೀರಾ..
ಮರದಿಂದ ನವಿಲಿನ ಮೊಟ್ಟೆಗಳನ್ನು ಕದಿಯೋಕೆ ಇಬ್ಬರು ಮಹಿಳೆಯರು ಪ್ರಯತ್ನಿಸಿದ್ದು, ಈ ಪೈಕಿ ಒಬ್ಬರು ಮಹಿಳೆ ಮರ ಹತ್ತಿದ್ದರು. ಆ ಸಮಯದಲ್ಲಿ ನವಿಲು ಆ ಮೊಟ್ಟೆ ಇಟ್ಟಿದ್ದ ಗೂಡಿನ ಬಳಿ ಇರಲಿಲ್ಲ. ಈ ಹಿನ್ನೆಲೆ ಮೊಟ್ಟೆಗಳನ್ನು ಎತ್ತಿಕೊಂಡು ಆಕೆ ಮತ್ತೊಬ್ಬ ಮಹಿಳೆಗೆ ನೀಡಬೇಕು ಎನ್ನುವಷ್ಟರಲ್ಲಿ ನವಿಲು ಆ ಸ್ಥಳಕ್ಕೆ ಸಮಯಕ್ಕೆ ಸರಿಯಾಗಿ ಬಂದಿದೆ ನೋಡಿ. ಹಾರಿಕೊಂಡು ಬಂದ ನವಿಲು ಮೊಟ್ಟೆಗಳನ್ನು ಕೈಯಲ್ಲಿ ಇಟ್ಟುಕೊಂಡು ಇನ್ನೊಬ್ಬ ಮಹಿಳೆಗೆ ನೀಡಲು ಹೋದ ಮಹಿಳೆಯ ಮೇಲೆ ದಾಳಿ ಮಾಡಿದೆ. ಅಷ್ಟೇ ಅಲ್ಲದೆ, ನೆಲದ ಮೇಲೆ ನಿಂತಿದ್ದ ಮತ್ತೊಬ್ಬ ಮಹಿಳೆಯ ಮೇಲೂ ಆ ನವಿಲು ದಾಳಿ ಮಾಡಿತ್ತು.
ಇದನ್ನೂ ಓದಿ: Astro tips: ಹೊಸ ವರ್ಷದಲ್ಲಿ ಆರ್ಥಿಕ ಸ್ಥಿತಿ ಬಲಪಡಿಸಲು ನವಿಲುಗರಿಯ ಈ ಟ್ರಿಕ್ಸ್ ಬಳಸಿ..