ನಾಲ್ಕು ಮಕ್ಕಳ ಸಮೇತ ಕಾಲುವೆಗೆ ಹಾರಿದ ತಾಯಿ; ಮಕ್ಕಳೆಲ್ಲರೂ ಸಾವು, ಬದುಕಿದ ತಾಯಿ!
ವಿಜಯಪುರದಲ್ಲಿ ಕೌಟುಂಬಿಕ ಕಲಹದಿಂದ ಬೇಸತ್ತ ತಾಯಿಯೊಬ್ಬರು ತನ್ನ ನಾಲ್ವರು ಮಕ್ಕಳನ್ನು ಕಾಲುವೆಗೆ ಬೀಸಾಡಿ, ತಾನೂ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಾಲ್ವರು ಮಕ್ಕಳು ಸಾವನ್ನಪ್ಪಿದ್ದು, ತಾಯಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ.
ವಿಜಯಪುರ (ಜ.13): ಕೌಟುಂಬಿಕ ಕಲಹದ ಕಾರಣಕ್ಕೆ ಬೇಸತ್ತ ಮಹಿಳೆಯೊಬ್ಬರು ತನ್ನ ನಾಲ್ಕು ಚಿಕ್ಕ, ಚಿಕ್ಕ ಮಕ್ಕಳನ್ನು ರಭಸವಾಗಿ ಹರಿಯುತ್ತಿದ್ದ ನೀರಿನ ಕಾಲುವೆಗೆ ಬೀಸಾಡಿ, ನಂತರ ತಾನೂ ಕಾಲುವೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವಿಜಯಪುರದಲ್ಲಿ ನಡೆದಿದೆ. ಆದರೆ, ನಾಲ್ವರು ಮಕ್ಕಳು ದಾರುಣವಾಗಿ ಸಾವನ್ನಪ್ಪಿದ್ದು, ಪಾಪಿ ತಾಯಿಯನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ಈ ಘಟನೆ ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಬೇನಾಳ ಬಳಿಯ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಯಲ್ಲಿ ನಡೆದಿದೆ. ಇಂದು ಬೆಳಗ್ಗೆ ತನ್ನ 4 ಮಕ್ಕಳನ್ನು ತಾಯಿ ಕಾಲುವೆಗೆ ಎಸೆದು ತಾನೂ ಕಾಲುವೆಗೆ ಹಾರಿದ್ದಾಳೆ. ಆದರೆ, ಪುಟ್ಟ ಕಂದಮ್ಮಗಳು ಈಜು ಬಾರದೇ ನೀರಿನಲ್ಲಿ ಮುಳುಗಿ ಕೊಚ್ಚಿಕೊಂಡು ಹೋಗಿ ಜಲಸಮಾಧಿ ಆಗಿವೆ. ಆದರೆ, ಒಂದಷ್ಟು ಈಜು ಕಲಿತಿದ್ದ ತಾಯಿ ನೀರಿಗೆ ಬಿದ್ದ ನಂತರವೂ ನೀರು ಕುಡಿದು ಸಾಯುವುದಕ್ಕೆ ಮುನ್ನ ಒದ್ದಾಡಿದ್ದಾರೆ. ಯಾರೋ ಮಹಿಳೆ ನೀರಿಗೆ ಬಿದ್ದಿದ್ದಾರೆ ಎಂದು ಸ್ಥಳೀಯರು ಕಾಲುವೆಗೆ ಹಾರಿ ಮಹಿಳೆಯನ್ನು ರಕ್ಷಿಸಿದ್ದಾರೆ. ಇದೀಗ ತಾಯಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲ್ಲೂಕಿನ ತೆಲಗಿ ಗ್ರಾಮದ ತನು ನಿಂಗರಾಜ ಭಜಂತಿ (5), ರಕ್ಷಾ ನಿಂಗರಾಜ ಭಜಂತ್ರಿ (3), ಅವಳಿ ಮಕ್ಕಳಾದ ಹಸೇನ ನಿಂಗರಾಜ ಭಜಂತ್ರಿ (13) ಹಾಗೂ ಹುಸೇನ ನಿಂಗರಾಜ ಭಜಂತ್ರಿ (13 ತಿಂಗಳು) ಮೃತ ಮಕ್ಕಳಾಗಿದ್ದಾರೆ. ನಾಲ್ವರು ಮಕ್ಕಳು ಜಲಸಮಾಧಿ ಆದರೂ ತಾಯಿ ಭಾಗ್ಯ ಭಜಂತ್ರಿಯನ್ನು ಸ್ಥಳೀರು ಕಾಪಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ: 'ಮಕ್ಕಳ ಕತ್ತು ಹಿಸುಕುವಾಗಲೂ ಮನಸ್ಸು ಕರಗಲಿಲ್ಲವಾ..' ಗಂಡನ ಮೇಲಿನ ಅನುಮಾನಕ್ಕೆ ಮಕ್ಕಳನ್ನು ಕೊಂದ ಪಾಪಿ ತಾಯಿ!
ಈ ಮಹಿಳೆ ನೀರಿನ ಕಾಲುವೆಗೆ ಮಕ್ಕಳನ್ನು ಎಸೆದು ತಾನೂ ಬೀಳಲು ಯತ್ನಿಸಿರುವುದಕ್ಕೆ ಕೌಟುಂಬಿಕ ಕಲಹವೇ ಕಾರಣ ಎಂದು ಹೇಳಲಾಗುತ್ತಿದೆ. ಇದೀಗ ಸ್ಥಳೀಯ ನೀರು ಮುಳುಗು ತಜ್ಞರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಸೇರಿ ಇಬ್ಬರು ಹೆಣ್ಣು ಮಕ್ಕಳ ಶವ ಹೊರ ತೆಗೆದಿದ್ದಾರೆ. ಉಳಿದ ಇಬ್ಬರು ಗಂಡು ಮಕ್ಕಳ ಶವಕ್ಕಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಸ್ಥಳಕ್ಕೆ ನಿಡಗುಂದಿ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಶವಗಳ ಶೋಧ ಮಾಡುತ್ತಿದ್ದಾರೆ.