Vijayapura: ಬಾಣಂತಿಯರ ನರಳಾಟ ಪ್ರಕರಣ : ಜಿಲ್ಲಾಸ್ಪತ್ರೆಗೆ ಉಪಲೋಕಾಯುಕ್ತರ ಭೇಟಿ!

ಸಿಜರಿಯನ್ ಮಾಡಿಸಿಕೊಂಡ ಮಹಿಳೆಯರಿಗೆ ಸೋಂಕು ಕಾಣಿಸಿಕೊಂಡಿದೆ ಎಂದು ಮಾಧ್ಯಮಗಳಲ್ಲಿ ವರದಿಯಾದ ಪ್ರಕರಣದ ಹಿನ್ನೆಲೆಯಲ್ಲಿ ಪರಿಶೀಲನೆಗಾಗಿ ಉಪ ಲೋಕಾಯುಕ್ತ ಬಿ.ಎಸ್.ಪಾಟೀಲ್ ಇಂದು ವಿಜಯಪುರ ನಗರದ ಜಿಲ್ಲಾಸ್ಪತ್ರೆಗೆ ಖುದ್ದು ಭೇಟಿ ನೀಡಿದರು.

vijayapura district hospital cesarean delivery issue upalokayukta bs patil visited to hospital gvd

ಷಡಕ್ಷರಿ ಕಂಪೂನವರ್ ಏಷ್ಯಾನೆಟ್‌ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ (ಮೇ.22): ಸಿಜರಿಯನ್ (Cesarean Delivery) ಮಾಡಿಸಿಕೊಂಡ ಮಹಿಳೆಯರಿಗೆ (Womens) ಸೋಂಕು ಕಾಣಿಸಿಕೊಂಡಿದೆ ಎಂದು ಮಾಧ್ಯಮಗಳಲ್ಲಿ ವರದಿಯಾದ ಪ್ರಕರಣದ ಹಿನ್ನೆಲೆಯಲ್ಲಿ ಪರಿಶೀಲನೆಗಾಗಿ ಉಪ ಲೋಕಾಯುಕ್ತ ಬಿ.ಎಸ್.ಪಾಟೀಲ್ (BS Patil) ಇಂದು ವಿಜಯಪುರ ನಗರದ ಜಿಲ್ಲಾಸ್ಪತ್ರೆಗೆ ಖುದ್ದು ಭೇಟಿ ನೀಡಿದರು.

ಘಟನೆಗೆ ಕಾರಣ ಕೇಳಿದ ಉಪಲೋಕಾಯುಕ್ತ ಬಿ ಎಸ್ ಪಾಟೀಲ್: ಸಿಜರಿಯನ್‌ಗೆ ಒಳಗಾದ ಮಹಿಳೆಯರಿಗೆ ಯಾಕೆ ಸೋಂಕು ಕಾಣಿಸಿಕೊಂಡಿತು? ಇಂತಹ ಅವಘಡಕ್ಕೆ ಕಾರಣ ಏನು ಎಂಬುದನ್ನು ಪತ್ತೆ ಹಚ್ಚಿದ್ದೀರಾ? ಎಂದು ಉಪ ಲೋಕಾಯುಕ್ತರು ವೈದ್ಯಾಧಿಕಾರಿಗಳಿಗೆ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವೈದ್ಯಾಧಿಕಾರಿಗಳು, ಸಿಜರಿಯನ್ ಆದನಂತರ ಕೆಲವರಿಗೆ ಸೋಂಕು ಕಾಣಿಸುತ್ತದೆ. ಆ ಬಳಿಕ ಚಿಕಿತ್ಸೆ ನೀಡಿ ಗುಣಪಡಿಸಲಾಗುತ್ತದೆ. ಉತ್ತಮ ಶುಚಿತ್ವ ಕಾಯ್ದುಕೊಂಡಿದ್ದಕ್ಕೆ ವಿಜಯಪುರ ಜಿಲ್ಲಾಸ್ಪತ್ರೆಗೆ ಬಹುಮಾನ ಲಭಿಸಿದೆ. ಆದರೆ, ಈಗ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು, ಅದಕ್ಕೆ ತಕ್ಕಂತೆ ಮೂಲಭೂತ ಸೌಕರ್ಯವಿಲ್ಲ. ವೈದ್ಯರು ಮತ್ತು ನರ್ಸಗಳ ಕೊರತೆಯಂತಹ ಕಾರಣದಿಂದಲೂ ಲೋಪ ಕಾಣಿಸುತ್ತದೆ. ಇತ್ತೀಚೆಗೆ ಸೋಂಕು ಕಾಣಿಸಿಕೊಂಡ ಕೆಲವರ ಪೈಕಿ ಈಗಾಗಲೇ ಬಹುತೇಕ ಮಹಿಳೆಯರ ಆರೋಗ್ಯ ಸುಧಾರಿಸಿದೆ. ಇನ್ನು ಕೆಲವರಿಗೆ ಮಾತ್ರ ಚಿಕಿತ್ಸೆ ನಡೆಯುತ್ತಿದೆ ಎಂದು ಉಪ ಲೋಕಾಯುಕ್ತರಿಗೆ ಮಾಹಿತಿ ನೀಡಿದರು.

ಬಾಣಂತಿಯರ ನರಳಾಟ ಪ್ರಕರಣ, ಡಿಸಿಗೆ ವರದಿ ಸಲ್ಲಿಕೆ, ಇಲ್ಲಿದೆ ಪ್ರಮುಖ ಅಂಶಗಳು

ಜಿಲ್ಲಾಧಿಕಾರಿಗಳ ಜೊತೆಗೆ ಉಪ ಲೋಕಾಯುಕ್ತರ ಚರ್ಚೆ: ಈ ಅವಘಡಕ್ಕೆ ಕಾರಣವೇನು ಎಂದು ಇದೆ ವೇಳೆ ಉಪ ಲೋಕಾಯುಕ್ತರು ಜಿಲ್ಲಾಧಿಕಾರಿಗಳಿಗಳೊಂದಿಗೆ ಕೆಲ ಹೊತ್ತು ಚರ್ಚಿಸಿದರು. ಸಿಜರಿಯನ್‌ಗೆ ಒಳಗಾದ ಮಹಿಳೆಯರಿಗೆ ಸೋಂಕು ಕಾಣಿಸಿಕೊಂಡಿದೆ ಎಂದು ಮಾಧ್ಯಮಗಳಲ್ಲಿ ವರದಿಯಾದ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಸಮಗ್ರ ಪರಿಶೀಲಿಸಲಾಗಿದೆ. ಈ ಅವಘಡಕ್ಕೆ ಸಂಬಂಧಿಸಿದಂತೆ ಸಮಿತಿಯೊಂದನ್ನು ರಚಿಸಿ ವರದಿ ತಯಾರಿಸಲಾಗಿದೆ. ಆಸ್ಪತ್ರೆಯಲ್ಲಿ ಈಗ ಕೇವಲ ಒಂದೇ ಶಸ್ತ್ರಚಿಕಿತ್ಸಾ ಘಟಕ ಕಾರ್ಯನಿರ್ವಹಿಸುತ್ತಿರುವುದರಿಂದಲೂ ಸೋಂಕು ಕಾಣಿಸಿಕೊಂಡ ಸಾಧ್ಯತೆ ಇದೆ. ಬೇರೆಯದಕ್ಕೆ ಬಳಸುತ್ತಿದ್ದ ಮತ್ತೊಂದು ಕೊಠಡಿ ಶಸ್ತ್ರಚಿಕಿತ್ಸೆಗೆ ಬಳಸಲು ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ವೈದ್ಯಾಧಿಕಾರಿಗಳಿಗೆ ನಿರ್ದೇಶನ: ಆಸ್ಪತ್ರೆಯಲ್ಲಿ ಕಳೆದ ಆರು ತಿಂಗಳಿನಿಂದ ಸಿಜರಿಯನ್ ಮಾಡಿಸಿಕೊಂಡ ಮಹಿಳೆಯರ ಸಂಖ್ಯೆ ಎಷ್ಟು? ಹಿಂದೆ ಈ ರೀತಿ ಎಷ್ಟು ಜನರಿಗೆ ಸೋಂಕು ಕಾಣಿಸಿತ್ತು? ಅದಕ್ಕೆ ಏನು ಕಾರಣವಿತ್ತು? ಹೀಗೆ ಪ್ರತಿಯೊಂದರ ಮಾಹಿತಿಯ ವರದಿಯೊಂದನ್ನು ತಮಗೆ ಕೂಡಲೇ ನೀಡುವಂತೆ ಇದೆ ವೇಳೆ ಉಪ ಲೋಕಾಯುಕ್ತರು, ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

ವೈದ್ಯಾಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಉಪಲೋಕಾಯುಕ್ತ: ಇಂತಹ ಸೋಂಕು ಪ್ರಕರಣಗಳಿಂದ ಸಾಕಷ್ಟು ತೊಂದರೆಯಾಗುತ್ತದೆ. ಕೆಲವರಿಗೆ ಕೀವು ಉಂಟಾಗಿ ಮಗುವಿಗೆ ಹಾಲುಣಿಸಲು ಕೂಡ ಆಗುವುದಿಲ್ಲ. ಇದರಿಂದ ಬಡವರ ಜೀವನ ಪರಿಸ್ಥಿತಿಗೆ ತೊಂದರೆಯಾಗುತ್ತದೆ. ಇಂತಹ ಅವಘಡಗಳು ಮತ್ತೆಂದೂ ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಉಪ ಲೋಕಾಯುಕ್ತರು ಸಂಬಂಧಿಸಿದ ವೈದ್ಯಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಶಸ್ತಚಿಕಿತ್ಸಾ ಘಟಕಕ್ಕೆ ಭೇಟಿ: ಇದೆ ಸಂದರ್ಭದಲ್ಲಿ ಉಪ ಲೋಕಾಯುಕ್ತರು ಆಸ್ಪತ್ರೆಯ ಮಹಾಶಸ್ತ್ರ ಚಿಕಿತ್ಸಾ ಘಟಕವನ್ನು ಖುದ್ದು ವೀಕ್ಷಣೆ ನಡೆಸಿದರು. ಆಸ್ಪತ್ರೆಯಲ್ಲಿ ಸದ್ಯ ಒಂದೇ ಶಸ್ತ್ರಚಿಕಿತ್ಸಾ ಘಟಕ ಕಾರ್ಯನಿರ್ವಹಿಸುತ್ತಿದೆ. ಕೆಲವೇ ಶಸ್ತ್ರಚಿಕಿತ್ಸ ತಜ್ಞರು ಇದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದರು. ದಿನೇದಿನೆ ಶಸ್ತ್ರಚಿಕಿತ್ಸೆಗೆ ಬರುವವರ ಸಂಖ್ಯೆ ಏರುತ್ತಲೆ ಇರುತ್ತದೆ. ಹೀಗಾಗಿ ಇನ್ನೊಂದು ಶಸ್ತಚಿಕಿತ್ಸಾ ಘಟಕವನ್ನು ಮತ್ತು ವೈದ್ಯರು ಹಾಗೂ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸಲು ಗಮನ ಹರಿಸಬೇಕು ಎಂದು ಉಪ ಲೋಕಾಯುಕ್ತರು, ಶಸ್ತಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಅರವಳಿಕೆ ತಜ್ಞರಾದ ಡಾ.ರಾಘವೇಂದ್ರ ಸಾವಳಗಿ ಸೇರಿದಂತೆ ಇನ್ನೀತರ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ಉಪ ಲೋಕಾಯುಕ್ತರ ಎದುರು ಬಾಣಂತಿಯರ ಅಳಲು: ಉಪ ಲೋಕಾಯುಕ್ತರು ಇದೆ ವೇಳೆ ಆಸ್ಪತ್ರೆಯ ನವಜಾತ ಶಿಶು ಆರೈಕೆ ಕೇಂದ್ರ, ಹೆಚ್‌ಡಿಯು ಸೇರಿದಂತೆ ವಿವಿಧೆಡೆ ಭೇಟಿ ನೀಡಿ ವೈದ್ಯಕೀಯ ಸೌಕರ್ಯಗಳ ಬಗ್ಗೆ ಪರಿಶೀಲಿಸಿದರು. ವೈದ್ಯಕೀಯ ದಾಖಲೆಗಳ ಕೋಣೆಗು ಸಹ ಭೇಟಿ ನೀಡಿ ಆಸ್ಪತ್ರೆಯ ಆಡಳಿತಾತ್ಮಕ ವಿಷಯಗಳ ಬಗ್ಗೆ ವಹಿಗಳನ್ನು ಪರಿಶೀಲಿಸಿ ಮಾಹಿತಿ ಪಡೆದುಕೊಂಡರು. ಆಸ್ಪತ್ರೆಯಲ್ಲಿ ಲಭ್ಯವಿರುವ ಹಾಸಿಗೆಗಳ ಬಗ್ಗೆ ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿ ರೋಗಿಗಳ ಅಗತ್ಯಕ್ಕೆ ತಕ್ಕಂತೆ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸಲು ಸೂಚಿಸಿದರು. ಈ ವೇಳೆ ಬಾಣಂತಿಯರು ತಮಗಾದ ಸಮಸ್ಯೆಗಳ ಬಗ್ಗೆ ಅಳಲು ತೋಡಿಕೊಂಡ ಘಟನೆಯು ನಡೆಯಿತು.

ಆಸ್ಪತ್ರೆಯಲ್ಲಿನ ಮೂಲ ಸೌಕರ್ಯಕ್ಕೆ ಮೆಚ್ಚುಗೆ: ಉಪ ಲೋಕಾಯುಕ್ತರು ಆಸ್ಪತ್ರೆಯ ಮೊದಲನೇ ಮತ್ತು ಎರಡನೇಯ ಮಹಡಿಯಲ್ಲಿರುವ ವಿವಿಧ ವಾರ್ಡಗಳ ಭೇಟಿ ವೇಳೆ ಕಂಡ ಶುಚಿತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಉತ್ತಮ ಮೂಲಭೂತ ಸೌಕರ್ಯವಿದೆ ಎಂದು ತಿಳಿಸಿದರು. ಆಸ್ಪತ್ರೆಯು ಅಚ್ಚುಕಟ್ಟಾಗಿರುವ ಕಾರಣಕ್ಕೆ ಜಿಲ್ಲಾಸ್ಪತ್ರೆಗೆ ಈ ಹಿಂದೆ ರಾಷ್ಟಿಯ ಪ್ರಶಸ್ತಿಯೊಂದು ಲಭಿಸಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದರು. ನವಜಾತ ಶಿಶು ಆರೈಕೆ ಕೇಂದ್ರದಲ್ಲಿ 20 ಶಿಶುಗಳಿಗು ಸಹ ವಿಶೇಷ ವೈದ್ಯರು ಮತ್ತು ಎನ್‌ಎಚ್‌ಎಮ್‌ನಿಂದ ತರಬೇತಿ ಪಡೆದ ಸಿಬ್ಬಂದಿಯಿಂದ ಆರೈಕೆ ನಡೆಯುತ್ತಿದೆ ಎಂದು ಡಾ.ಡಾ.ಮನೀಶ್ ರೋಡಗೆ ಮಾಹಿತಿ ನೀಡಿದರು.

Suvarna News Impact: 20 ಬಾಣಂತಿಯರ ನರಳಾಟ: ಪ್ರಕರಣದ ತನಿಖೆಗೆ ಆದೇಶಿಸಿದ ವಿಜಯಪುರ ಜಿಲ್ಲಾಧಿಕಾರಿ

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಹೆಚ್.ಡಿ.ಆನಂದಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ರಾಜುಕುಮಾರ ಯರಗಲ್ ಮತ್ತು ಆಸ್ಪತ್ರೆಯ ಇನ್ನೀತರ ವೈದ್ಯರು ಮತ್ತು ಸಿಬ್ಬಂದಿ ಇದ್ದರು.

Latest Videos
Follow Us:
Download App:
  • android
  • ios