Suvarna News Impact: 20 ಬಾಣಂತಿಯರ ನರಳಾಟ: ಪ್ರಕರಣದ ತನಿಖೆಗೆ ಆದೇಶಿಸಿದ ವಿಜಯಪುರ ಜಿಲ್ಲಾಧಿಕಾರಿ
ವಿಜಯಪುರ ಜಿಲ್ಲಾಸ್ಪತ್ರೆಯ ತಾಯಿ ಮಗು ಹೆರಿಗೆ ಆಸ್ಪತ್ರೆಯಲ್ಲಿ ಬಾಣಂತಿಯರ ನರಳಾಟದ ಬಗ್ಗೆ ಕಳೆದ ಮೂರು ದಿನಗಳಿಂದ ನಿರಂತರವಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಬಿತ್ತರಿಸುತ್ತಲಿದೆ. ವರದಿ ಪರಿಣಾಮ ಈಗ ವಿಜಯಪುರ ಜಿಲ್ಲಾಧಿಕಾರಿ ಇಡೀ ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ.
ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ
ವಿಜಯಪುರ (ಮೇ.16): ಜಿಲ್ಲಾಸ್ಪತ್ರೆಯ (Vijayapura District Hospital) ತಾಯಿ ಮಗು ಹೆರಿಗೆ ಆಸ್ಪತ್ರೆಯಲ್ಲಿ ಬಾಣಂತಿಯರ ನರಳಾಟದ ಬಗ್ಗೆ ಕಳೆದ ಮೂರು ದಿನಗಳಿಂದ ನಿರಂತರವಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ (Asianet Suvarna News) ವರದಿ ಬಿತ್ತರಿಸುತ್ತಲಿದೆ. ವರದಿ ಪರಿಣಾಮ ಈಗ ವಿಜಯಪುರ ಜಿಲ್ಲಾಧಿಕಾರಿ (Vijayapura DC) ಇಡೀ ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ. 48 ಗಂಟೆಗಳಲ್ಲಿ ತನಿಖೆ ಪೂರ್ಣಗೊಳಿಸುವಂತೆ ಸೂಚನೆಯನ್ನು ನೀಡಿದ್ದಾರೆ. ನಾಳೆ ವರದಿ ಸಲ್ಲಿಕೆಯಾಗುವ ಸಾಧ್ಯತೆಗಳಿವೆ.
ಬಾಣಂತಿಯರ ನರಳಾಟ-ತನಿಖೆಗೆ ಆದೇಶ: ಜಿಲ್ಲಾಸ್ಪತ್ರೆಯ ತಾಯಿ ಮಗು ಹೆರಿಗೆ ಆಸ್ಪತ್ರೆಯಲ್ಲಿ ವೈದ್ಯರ ಯಡವಟ್ಟಿಗೆ 20ಕ್ಕು ಅಧಿಕ ಬಾಣಂತಿಯರು ನರಳಾಡಿದ ಪ್ರಕರಣ ಈಗ ಡಿಸಿ ಅಂಗಳ ತಲುಪಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ನ ನಿರಂತರ ವರದಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ್ (Vijayamahantesh Danammanavar) ಇಡೀ ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ. ವಿಜಯಪುರ ಉಪವಿಭಾಗಾಧಿಕಾರಿ ಬಲರಾಮ್ ಲಮಾಣಿ ನೇತೃತ್ವದಲ್ಲಿ ತಂಡ ರಚನೆಯಾಗಿದ್ದು, ಈ ತಂಡದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ, ಸಂತಾನ ನಿಯಂತ್ರಣಾಧಿಕಾರಿ ಒಳಗೊಂಡಿದ್ದಾರೆ.
Vijayapura: ಜಿಲ್ಲಾಸ್ಪತ್ರೆಯಲ್ಲಿ ಮುಂದುವರೆದ ಬಾಣಂತಿಯರ ನರಳಾಟ!
ಜಿಲ್ಲಾಸ್ಪತ್ರೆಗೆ ತನಿಖಾ ತಂಡ ಭೇಟಿ: ಎಸಿ ನೇತೃತ್ವದಲ್ಲಿ ರಚನೆಯಾಗಿರುವ ತನಿಖಾ ತಂಡ ಇಂದು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ತಾಯಿ ಮತ್ತು ಮಗು ಆಸ್ಪತ್ರೆಯಲ್ಲಿ ಪ್ರಕರಣ ಸಂಬಂಧ ವಿಚಾರಣೆಯಲ್ಲೂ ನಡೆಸಿದರು. ಅಂದಾಜು 15ಕ್ಕೂ ಅಧಿಕ ಸಿಬ್ಬಂದಿ ವೈದ್ಯರಿಂದ ಪ್ರಕರಣ ಸಂಬಂಧ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಆಸ್ಪತ್ರೆಯ ಕೊಠಡಿಯೊಂದರಲ್ಲಿ ತನಿಖಾ ತಂಡ ದಾಖಲೆಗಳನ್ನ ತರಿಸಿಕೊಂಡು ಪರಿಶೀಲನೆಯನ್ನು ನಡೆಸಿದೆ. ನಡೆದ ಸಿಜೇರಿಯನ್ ಎಷ್ಟು, ಸೋಂಕು ಎಷ್ಟು ಬಾಣಂತಿಯರಲ್ಲಿ ಕಾಣಿಸಿಕೊಂಡಿದ ಎಂಬುದರ ಬಗ್ಗೆಯು ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
48 ಗಂಟೆಗಳಲ್ಲಿ ವರದಿ ಸಲ್ಲಿಸಲು ತನಿಖಾ ತಂಡಕ್ಕೆ ಸೂಚನೆ: ಇನ್ನು ತನಿಖೆ ಆದೇಶ ಮಾಡಿರುವ ಜಿಲ್ಲಾಧಿಕಾರಿಗಳು 48 ಗಂಟೆಗಳಲ್ಲಿ ತನಿಖಾ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದ್ದಾರೆ. ಹೀಗಾಗಿ ಬೆಳಿಗ್ಗೆ 11 ಗಂಟೆಗೆ ಜಿಲ್ಲಾಸ್ಪತ್ರೆಗೆ ಆಗಮಿಸಿದ ತನಿಖಾ ತಂಡ ಸಂಜೆವರೆಗೂ ಪರಿಶೀಲನೆ ನಡೆಸಿದೆ, ಜೊತೆಗೆ ಮಾಹಿತಿಗಳನ್ನು ಪಡೆದುಕೊಂಡಿದೆ. 48 ಗಂಟೆಗಳಲ್ಲೆ ವರದಿ ಸಲ್ಲಿಸಬೇಕಾಗಿರುವ ಕಾರಣ ಸತತ 6 ಗಂಟೆಗಳ ಕಾಲ ವಿಚಾರಣೆ ಸೇರಿದಂತೆ ತನಿಖೆ ಕೈಗೊಂಡಿದೆ.
ಬಾಣಂತಿಯರು, ಪೋಷಕರಿಂದಲು ಮಾಹಿತಿ ಸಂಗ್ರಹ: ಹೆರಿಗೆ ಆಸ್ಪತ್ರೆಯ ಸಿಬ್ಬಂದಿ, ವೈದ್ಯರ ವಿಚಾರಣೆಯ ಜೊತೆ ಜೊತೆಗೆ ತನಿಖಾ ತಂಡ ಆಸ್ಪತ್ರೆಯಲ್ಲಿ ಅಡ್ಮೀಟ್ ಇರುವ ಸ್ಟಿಚ್ ಇತ್ತು ಹೋಗಿರುವ ಬಾಣಂತಿಯರು, ಪೋಷಕರಿಂದಲು ಮಾಹಿತಿಗಳನ್ನ ಪಡೆದುಕೊಂಡಿದೆ. ಘಟನೆಗೆ ನಿಖರ ಕಾರಣಗಳ ಏನು ಎನ್ನುವ ಬಗ್ಗೆ ಅಗತ್ಯ ಪ್ರಶ್ನೆಗಳನ್ನ ಕೇಳಿ ತನಿಖಾ ತಂಡ ಉತ್ತರ ಪಡೆದುಕೊಂಡಿದೆ ಎನ್ನಲಾಗಿದೆ.
ಆಸ್ಪತ್ರೆ ಒಳ-ಹೊರಗು ಸಂಘಟನೆಗಳ ಹೋರಾಟ: ಅತ್ತ ತನಿಖೆ ನಡೆಯುತ್ತಿದ್ದರೆ ಇತ್ತ ತಾಯಿ ಮಗು ಆಸ್ಪತ್ರೆ ಎದುರು ಸಂಘಟನೆಗಳ ಕಾರ್ಯಕರ್ತರಿಂದ ಪ್ರತಿಭಟನೆಗಳು ನಡೆದವು. ಆಸ್ಪತ್ರೆ ಹೊರ ಆಫ್ ಹಾಗೂ ಕೆಆರ್‌ಎಸ್ ಪಕ್ಷದವರು ಮೌನ ಪ್ರತಿಭಟನೆ ನಡೆಸಿದ್ದಾರೆ. ಇತ್ತ ಆಸ್ಪತ್ರೆ ಒಳಗೆ ಹೈಡ್ರಾಮಾವೇ ನಡೆದಿದೆ. ಕೆಪಿಸಿಸಿ ಮಹಿಳಾ ಪ್ರಧಾನ ಕಾರ್ಯದರ್ಶಿ ಗೀತಾಂಜಲಿ ಪಾಟೀಲ್ ಬಾಣಂತಿಯರ ನರಳಾಟ ಬಗ್ಗೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
Vijayapura ಜಿಲ್ಲಾ ಆಸ್ಪತ್ರೆಯಲ್ಲಿ 20ಕ್ಕೂ ಅಧಿಕ ಬಾಣಂತಿಯರ ನರಳಾಟ!
ಆಸ್ಪತ್ರೆ ಒಳಗೆ ಕೈ ಮುಖಂಡೆಯರ ವಾಗ್ವಾದ: ಆಸ್ಪತ್ರೆಯಲ್ಲಿ ಬಾಣಂತಿಯರಿಗೆ ಸಾಂತ್ವನ ಹೇಳುವ ನಿಟ್ಟಿನಲ್ಲಿ ಆಗಮಿಸಿದ್ದ ಕೆಪಿಸಿಸಿ ಮಹಿಳಾ ಪ್ರಧಾನ ಕಾರ್ಯದರ್ಶಿ ಗೀತಾ ಪಾಟೀಲ್ ಹಾಗೂ ಸಿಬ್ಬಂದಿಗಳ ನಡುವೆ ವಾಗ್ವಾದ ನಡೆದಿದೆ. ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಹೀಗಾಗಿದ್ರೆ ಸುಮ್ಮನಿರ್ತಿದ್ರಾ ಎಂದು ಕೈ ಮುಖಂಡೆಯರು ಸಿಬ್ಬಂದಿ, ವೈದ್ಯರನ್ನ ತರಾಟೆಗೆ ತೆಗೆದುಕೊಂಡ ಘಟನೆಯು ನಡೆಯಿತು. ಈ ವೇಳೆ ಕಾಂಗ್ರೆಸ್ ಮಹಿಳಾ ಮುಖಂಡೆಯರು ಹಾಗೂ ಸಿಬ್ಬಂದಿಗಳ ನಡುವೆ ಮಾತಿಗೆ ಮಾತು ಬೆಳೆದು ಕೈಮೀರುವ ಹಂತಕ್ಕೆ ತಲುಪಿದ ಘಟನೆಯು ನಡೆಯಿತು.