ವಿಜಯಪುರ(ಮೇ.29): ಜಿಲ್ಲೆಯಲ್ಲಿ ಮಹಾರಾಷ್ಟ್ರ, ಆಂಧ್ರಪ್ರದೇಶ, ಗುಜರಾತ್‌ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿರುವ ಕಾರ್ಮಿಕರಿಗೆ ಸಾಂಸ್ಥಿಕ ಕ್ವಾರಂಟೈನ್‌ ಮಾಡಲಾಗಿದ್ದು, ಸರ್ಕಾರದ ಹೊಸ ಮಾರ್ಗಸೂಚಿಯಂತೆ ಏಳು ದಿನಗಳನ್ನು ಪೂರೈಸಿದ ಕಾರ್ಮಿಕರ ಗಂಟಲು ದ್ರವ ಮಾದರಿಯನ್ನು ಪಡೆದು ಕಟ್ಟುನಿಟ್ಟಿನ ಹೋಮ್‌ಕ್ವಾರಂಟೈನ್‌ ಮಾಡಿ ನಿಗಾ ಇಡುವಂತೆ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿಯ ವಿಡಿಯೋ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು, ಜಿಲ್ಲೆಗೆ ಆಗಮಿಸಿರುವ ಕಾರ್ಮಿಕರು 7 ದಿನ ಸಾಂಸ್ಥಿಕ ಕ್ವಾರಂಟೈನ್‌ ಪೂರ್ಣ ಮಾಡಿದ್ದಲ್ಲಿ ಅವರನ್ನು ಹೋಮ್‌ ಕ್ವಾರಂಟೈನ್‌ ಮಾಡಿ ಸಂಪೂರ್ಣ ನಿಗಾ ಇಡಬೇಕು. ಏಳು ದಿನಗಳ ಒಳಗಾಗಿ ಅವರ ಗಂಟಲುದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿ ಕೊಡಬೇಕು ಎಂದು ಸೂಚಿಸಿದರು.

ಕ್ವಾರಂಟೈನ್‌ ಅವ್ಯವಸ್ಥೆ: ವಿಜಯಪುರ DHOಗೆ ಸಚಿವ ಶ್ರೀರಾಮುಲು ತರಾಟೆ

ವಿವಿಧ ರಾಜ್ಯಗಳಿಂದ ಆಗಮಿಸಿರುವ ಕಾರ್ಮಿಕರನ್ನು ಹೋಮ್‌ಕ್ವಾರಂಟೈನ್‌ ಮಾಡುವಾಗ ಪ್ರತಿಯೊಬ್ಬರು ಕ್ವಾರಂಟೈನ್‌ ವಾಚ್‌ ಆ್ಯಪ್‌ನ್ನು ಡೌನ್‌ಲೋಡ್‌ ಮಾಡುವಂತೆ ಸೂಚಿಸಬೇಕು. ಅಧಿಕಾರಿಗಳು ಕಾರ್ಮಿಕರನ್ನು ಹೋಮ್‌ ಕ್ವಾರಂಟೈನ್‌ ಮಾಡಿದ ನಂತರ ಅವರ ಒಂದು ಸೆಲ್ಫಿಯನ್ನು ಈ ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡುವಂತೆ ಸೂಚಿಸಬೇಕು ಎಂದು ಹೇಳಿದರು.

ಸೀಲ್‌ ಹಾಕಿ:

ಪ್ರಾಥಮಿಕ ಹಾಗೂ ಪ್ರೌಢಶಾಲೆ ಸೇರಿದಂತೆ ವಿವಿಧ ವಸತಿ ನಿಲಯಗಳಲ್ಲಿ ಸಾಂಸ್ಥಿಕ ಕ್ವಾರಂಟೈನ್‌ ಮಾಡಲಾಗಿದ್ದು, ಗ್ರಾಮಮಟ್ಟದ ಪಿಡಿಒ, ಗ್ರಾಮ ಲೆಕ್ಕಾಧಿಕಾರಿಗಳು, ತಾಲೂಕು ಮಟ್ಟದ ತಾಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿಗಳು ಹಾಗೂ ತಹಸೀಲ್ದಾರಗಳು ಸೂಕ್ತ ನಿಗಾ ಇಡಲು ಸೂಚಿಸಬೇಕು. ಹೋಮ್‌ಕ್ವಾರಂಟೈನ್‌ ಮಾಡುವ ಮೊದಲು ಸೀಲ್‌ ಹಾಕಬೇಕು ಎಂದು ಸೂಚಿಸಿದರು.

ಉತ್ತಮ ಕಾರ್ಯ:

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಅವರು ಮಾತನಾಡಿ, ಜಿಲ್ಲೆಯಾದ್ಯಂತ ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿದ ವಲಸೆ ಕಾರ್ಮಿಕರು ಏಳು ದಿನ ಪೂರೈಸಿದವರ ಗಂಟಲು ದ್ರವ ಮಾದರಿಯನ್ನು ಪಡೆಯಲಾಗಿದ್ದು, ಐದು ದಿನದಲ್ಲಿಯೇ 21,000 ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಲಾಗಿದ್ದು, ಗಮನಾರ್ಹ ಕಾರ್ಯವಾಗಿದೆ. ಎಲ್ಲ ತಾಲೂಕು ಮತ್ತು ಸ್ಥಳೀಯ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಉತ್ತಮ ಕಾರ್ಯ ನಿರ್ವಹಿಸಿದೆ ಎಂದರು.

ಜಿಲ್ಲೆಗೆ ಆಗಮಿಸುವ ಕಾರ್ಮಿಕರನ್ನು ಏಳು ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್‌ ಮಾಡಲಾಗುವುದು. ಏಳು ದಿನದ ಒಳಗಾಗಿ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗುವುದು. ಏಳು ದಿನದ ನಂತರ ಸಂಪೂರ್ಣ ನಿಗಾ ವಹಿಸಿ ಹೋಮ್‌ಕ್ವಾರಂಟೈನ್‌ ಮಾಡಬೇಕು ಎಂದು ಹೇಳಿದರು.

ಈ ವಿಡಿಯೋ ಸಂವಾದದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ್‌, ಮಹಾನಗರ ಪಾಲಿಕೆ ಆಯುಕ್ತ ಶ್ರೀಹಷರ್ಷ ಶೆಟ್ಟಿ, ಡಾ.ಮಲ್ಲನಗೌಡ ಬಿರಾದಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಂದ್ರ ಕಾಪ್ಸೆ, ಉಪ ವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ, ತಹಸೀಲ್ದಾರ್‌ ಮೋಹನ್‌ಕುಮಾರಿ ಸೇರಿದಂತೆ ಇತರರಿದ್ದರು.

ಗಂಟಲು ದ್ರವ ಸಂಗ್ರಹ:

ಸಾಂಸ್ಥಿಕ ಕ್ವಾರಂಟೈನ್‌ ಮಾಡಲಾಗಿರುವ ಕಾರ್ಮಿಕರನ್ನು ಹೋಮ್‌ಕ್ವಾರಂಟೈನ್‌ ಮಾಡುವಾಗ ವಾಹನಗಳ ಅವಶ್ಯಕತೆ ಎದುರಾದರೆ ಅವರನ್ನು ಕರೆದೊಯ್ಯಲು ಸರ್ಕಾರಿ ವಾಹನಗಳನ್ನು ಬಳಸಿಕೊಳ್ಳಬಹುದಾಗಿದ್ದು, ಅವಶ್ಯಕತೆಗೆ ಅನುಗುಣವಾಗಿ ವಾಹನ ನೀಡಲಾಗುತ್ತದೆ. ಹೋಮ್‌ ಕ್ವಾರಂಟೈನ್‌ ಮಾಡುವ ಮೊದಲು ಗಂಟಲು ದ್ರವ ಮಾದರಿ ಸಂಗ್ರಹಿಸಲಾಗುವುದು. ಒಂದು ವೇಳೆ ಪಾಸಿಟಿವ್‌ ಬಂದಲ್ಲಿ ಅಂತಹವರಿಗೆ ನಗರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು. ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಸಾಂಸ್ಥಿಕ ಕ್ವಾರಂಟೈನ್‌ ಮಾಡಿ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗುವುದು ಎಂದು ಡಿಸಿ ಹೇಳಿದರು.