ಕ್ವಾರಂಟೈನ್ ಅವ್ಯವಸ್ಥೆ: ವಿಜಯಪುರ DHOಗೆ ಸಚಿವ ಶ್ರೀರಾಮುಲು ತರಾಟೆ
ಕ್ವಾರಂಟೈನ್‌ಗಳಲ್ಲಿ ಸೂಕ್ತ ವ್ಯವಸ್ಥೆಯಿಲ್ಲ. ಊಟ, ಉಪಾಹಾರ ಸೇರಿದಂತೆ ವಿವಿಧ ಸೌಕರ್ಯಗಳು ಸಮರ್ಪಕವಾಗಿಲ್ಲ| ವಿಜಯಪುರ ಡಿಎಚ್‌ಒ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ಯಾವುದೇ ರೀತಿಯ ದೂರುಗಳು ಬರದಂತೆ ವ್ಯವಸ್ಥೆ ಸರಿಪಡಿಸಬೇಕು ಎಂದು ಸೂಚಿಸಿದ ಆರೋಗ್ಯ ಸಚಿವ ಬಿ. ಶ್ರೀರಾಮುಲು|
ಬಳ್ಳಾರಿ(ಮೇ.29): ಕ್ವಾರಂಟೈನ್ ಕೇಂದ್ರಗಳಲ್ಲಿ ಅವ್ಯವಸ್ಥೆ ಇದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರು ವಿಜಯಪುರ ಜಿಲ್ಲಾ ಆರೋಗ್ಯಾಧಿಕಾರಿಯನ್ನು ದೂರವಾಣಿ ಮೂಲಕ ಗುರುವಾರ ತರಾಟೆಗೆ ತೆಗೆದುಕೊಂಡಿದ್ದಾರೆ.
ಕ್ವಾರಂಟೈನ್‌ಗಳಲ್ಲಿ ಸೂಕ್ತ ವ್ಯವಸ್ಥೆಯಿಲ್ಲ. ಊಟ, ಉಪಾಹಾರ ಸೇರಿದಂತೆ ವಿವಿಧ ಸೌಕರ್ಯಗಳು ಸಮರ್ಪಕವಾಗಿಲ್ಲ. ಸ್ವಚ್ಛತೆ ಮಾಡಲಾಗಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದ್ದಂತೆಯೇ ವಿಜಯಪುರ ಡಿಎಚ್‌ಒ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ಯಾವುದೇ ರೀತಿಯ ದೂರುಗಳು ಬರದಂತೆ ವ್ಯವಸ್ಥೆ ಸರಿಪಡಿಸಬೇಕು ಎಂದು ಸೂಚಿಸಿದ್ದಾರೆ.
ಕ್ವಾರಂಟೈನ್:'ದೆವ್ವಕ್ಕೆ ಇಡುವಂತ ಆಹಾರ ಕೊಡ್ತಿದ್ದಾರೆ, ನಮಗೆ ಜೋಳದ ರೊಟ್ಟಿ ಕೊಡಿ'
‘ಕ್ವಾರಂಟೈನ್ ಕ್ಲೀನ್ ಇಲ್ಲ ಎಂದು ಫೋಟೋಗಳು ಬಂದಿವೆ. ಟ್ವೀಟ್ ಸಹ ಮಾಡಿದ್ದಾರೆ. ಹಾಗಾದರೆ ನೀವು ಮಾಡುತ್ತಿರುವುದೇನು? ಎಲ್ಲವೂ ಜಿಲ್ಲಾಧಿಕಾರಿಗಳು ಮಾಡುವಂತಿದ್ದರೆ ನಿಮ್ಮ ಕೆಲಸವೇನು? ಎಂದು ತರಾಟೆಗೆ ತೆಗೆದುಕೊಂಡಿರುವ ಸಚಿವರು, ‘ಜವಾಬ್ದಾರಿ ಇಲ್ಲವೆಂದ ಮೇಲೆ ನೀವು ಅಲ್ಲಿರುವುದು ಸಹ ಅಗತ್ಯವಿಲ್ಲ ಎಂದುಕೊಂಡಿದ್ದೇನೆ. ಜಿಲ್ಲಾಧಿಕಾರಿಗಳ ಮೇಲೆ ತಪ್ಪಿಸಿಕೊಳ್ಳುವ ಕೆಲಸ ಮಾಡಬಾರದು. ವಾಸ್ತವವಾಗಿ ಅಲ್ಲೇನಾಗಿದೆ ಎಂಬ ವರದಿ ನೀಡಿ ಎಂದು ವಿಜಯಪುರ ಡಿಎಚ್‌ಒಗೆ ಸೂಚನೆ ನೀಡಿದ ಸಚಿವ ಶ್ರೀರಾಮುಲು, ಬಳಿಕ ಮಂಡ್ಯ ಡಿಎಚ್‌ಒ ಜೊತೆ ಮಾತನಾಡಿ ಕ್ವಾರಂಟೈನ್ ಕೇಂದ್ರದಿಂದ ಯಾವುದೇ ದೂರುಗಳು ಬರದಂತೆ ಸರಿಯಾಗಿ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಿದ್ದಾರೆ.