ರೈತರ ಪಹಣಿಯಲ್ಲಿನ ವಕ್ಫ್ ಪದವನ್ನ ನಾಳೆಯೇ ತೆಗೆದುಹಾಕ್ತೇವೆ; ಜಿಲ್ಲಾಧಿಕಾರಿ ಭೂಬಾಲನ್
ವಿಜಯಪುರದಲ್ಲಿ ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು ಸೇರ್ಪಡೆ ಮಾಡಿದ್ದನ್ನು ರದ್ದುಗೊಳಿಸಲಾಗಿದೆ. ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು 41 ಇಂಧೀಕರಣಗಳನ್ನು ರದ್ದು ಮಾಡಿ, ಪಹಣಿಯಿಂದ ವಕ್ಫ್ ಹೆಸರು ತೆಗೆಯುವಂತೆ ಆದೇಶಿಸಿದ್ದಾರೆ. ಒಟ್ಟು 433 ರೈತರಿಗೆ 124 ನೋಟೀಸ್‌ಗಳನ್ನು ನೀಡಲಾಗಿದ್ದು, ಭೂಮಾಲೀಕರು ಮತ್ತು ವಕ್ಫ್ ಸಮಿತಿಗೆ ವಿಚಾರಣೆ ನಡೆಸಲಾಗುವುದು.
ವಿಜಯಪುರ (ಅ.29): ವಿಜಯಪುರದಲ್ಲಿ ರೈತರಿಗೆ ವಕ್ಫ್ ಮಂಡಳಿಯಿಂದ ನೋಟೀಸ್ ಕೊಟ್ಟಿರುವುದು ಮಾತ್ರವಲ್ಲದೇ ಈಗಾಗಲೇ ರಾತ್ರೋ ರಾತ್ರಿ ಕೆಲವು ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಪದವನ್ನು ಸೇರ್ಪಡೆ ಮಾಡಲಾಗಿತ್ತು. ಆದರೆ, ಇದೀಗ 41 ಇಂಧೀಕರಣ ಕ್ಯಾನ್ಸಲ್ ಮಾಡಿದ್ದೇವೆ. ನಾಳೆ ಪಹಣಿಯಿಂದ ವಕ್ಫ್ ಹೆಸರು ಹೋಗಲಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಟಿ. ಭೂಬಾಲನ್ ತಿಳಿಸಿದ್ದಾರೆ.
ಈ ಕುರಿತು ವಿಜಯಪುರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಕ್ಫ್ ಅಧೀನದಲ್ಲಿ 223 ಎಕರೆ ಭೂಮಿ ಇದೆ. ವಕ್ಫ್ ಸಚಿವರು ಒತ್ತುವರಿ ತೆರವು ಮಾಡಲು ಹೇಳಿದ್ದರು. ಆ ಕಾರಣ ಸೂಚನೆ ಮೇರೆಗೆ ಮಾಡಿದ್ದೇವೆ. ಇಂಧೀಕರಣ ಸತತವಾಗಿ ನಡೆಯುತ್ತದೆ. ಪ್ರತಿ ವರ್ಷವೂ ಇಂಧೀಕರಣ ಆಗಿವೆ. ಕೆಲವು ಬಾರಿ ಯಾವುದೇ ರೈತರಿಗೆ ನೋಟಿಸ್ ಕೊಡದೆಯೂ ಇಂಧೀಕರಣ ಆದ ಉದಾಹರಣೆ ಇವೆ. ಕಂದಾಯ ನ್ಯಾಯಮಂಡಳಿಗೆ ರೈತರು ಮೇಲ್ಮನವಿ ಸಲ್ಲಿಕೆ ಮಾಡಿದ್ದಾರೆ. ಒಟ್ಟು 124 ನೋಟಿಸ್‌ಗಳನ್ನು 433 ರೈತರಿಗೆ ಕೊಡಲಾಗಿದೆ. ನೋಟಿಸ್ ಕೊಟ್ಟ ತಕ್ಷಣ ಖಾತಾ ಬದಲಾವಣೆ ಆಗಲ್ಲ. ಎರಡೂ ಪಾರ್ಟಿಗಳಿಗೆ ಕರೆದು ವಿಚಾರಣೆ ನಡೆಸುತ್ತೇವೆ. ಭೂ ಮಾಲಿಕರಿಗೆ ಹಾಗೂ ವಕ್ಫ್ ಸಮಿತಿಗೂ ನಾವು ನೋಟೀಸ್ ಕೊಟ್ಟಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: ವಕ್ಪ್ ಆಸ್ತಿ ವಿವಾದ: ರೈತರಿಗೆ ಕೊಟ್ಟ ನೋಟೀಸ್ ವಾಪಸ್ ಪಡೆಯುತ್ತೇವೆ - ಮುಖ್ಯಮಂತ್ರಿ ಘೋಷಣೆ!
ರೈತರ ಪಹಣಿಯ ಕಾಲಂ ನಂ.9 ರಲ್ಲಿ ವಕ್ಫ್ ಹೆಸರು ಹಾಕಿಲ್ಲ. ಅಂದರೆ, ಭೂಮಿಯ ಮಾಲೀಕತ್ವ ಜಾಗದಲ್ಲಿ ವಕ್ಫ್ ಹೆಸರು ಹಾಕಿಲ್ಲ. ಒಟ್ಟು 44 ಭೂಮಿಗಳಿಗೆ ನೋಟಿಸ್ ಕೊಡದೆ ಇಂಧೀಕರಣ ಮಾಡಿದ್ದೇವೆ, ಆದ್ರೆ ಅವರ ಮಾಲಿಕತ್ವ ಬದಲಾಗಲ್ಲ. ಇಂಡಿ ತಾಲೂಕಿನ ತಹಶಿಲ್ದಾರ್ 41 ನೋಟಿಸ್ ಕೊಡದೆ ಇಂಧೀಕರಣ ಮಾಡಿದ್ದಾರೆ. ಆದ್ದರಿಂದ ಕೂಡಲೇ ಅವರು ಮಾಡಿದ 41 ಇಂಧೀಕರಣಗಳನ್ನು ನಾವು ಕ್ಯಾನ್ಸಲ್ ಮಾಡಿದ್ದೇವೆ. ನಾಳೆ ಪಹಣಿಯಿಂದ ವಕ್ಫ ಹೆಸರು ಹೋಗಲಿದೆ ಎಂದು ಜಿಲ್ಲಾಧಿಕಾರಿ ಭೂಬಾಲನ್ ಮಹತ್ವ ವಿಚಾರವನ್ನು ತಿಳಿಸಿದರು.
ಇನ್ನು ಮುಂದಿನ 10 ವರ್ಷಗಳ ಇಂತಹ ಯಾವುದೇ ಸಮಸ್ಯೆ ಪುನಃ ಮರುಕಳಿಸಬಾರದು ಎಂದು ಟಾಸ್ಕ್ ಪೋರ್ಸ್ ಮಾಡಲಾಗಿದೆ. ಸಚಿವರು ಟಾಸ್ಕ್ ಪೋರ್ಸ್ ಮಾಡಿದ್ದಾರೆ. ಇದರಲ್ಲಿ ಕೆಲವು ಒತ್ತುವರಿ ಆಗಿವೆ. ಅದನ್ನ ಸರ್ಕಾರದಿಂದ 124 ಮಂದಿಗೆ ನೋಟಿಸ್ ಕೊಟ್ಟಿದ್ದೇವೆ, ಅದನ್ನ ವಾಪಸ್ ಪಡೆಯುತ್ತೇವೆ. ನೋಟಿಸ್ ಕೊಟ್ಟ ತಕ್ಷಣ ಇಂಧೀಕರಣ, ಪಹಣಿಯಲ್ಲಿ ಹೆಸರು ಬರಲ್ಲ. ಒಟ್ಟು 250 ಎಕರೆ ಒತ್ತುವರಿ ಮಾಡಿಕೊಂಡವರಿಗೆ ನೋಟಿಸ್ ಕೊಡಲಾಗಿದೆ ಎಂದು ಮಾಹಿತಿ ನೀಡಿದರು.