ವಕ್ಪ್ ಆಸ್ತಿ ವಿವಾದ: ರೈತರಿಗೆ ಕೊಟ್ಟ ನೋಟೀಸ್ ವಾಪಸ್ ಪಡೆಯುತ್ತೇವೆ - ಮುಖ್ಯಮಂತ್ರಿ ಘೋಷಣೆ!
ರಾಜ್ಯದಲ್ಲಿ ರೈತರಿಗೆ ಮತ್ತು ಮಠ, ಮಂದಿರಗಳಿಗೆ ವಕ್ಫ್ ಆಸ್ತಿಯೆಂದು ನೀಡಲಾದ ನೋಟೀಸ್‌ಗಳನ್ನು ವಾಪಸ್ ಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವಿಜಯಪುರ ಸೇರಿದಂತೆ ರಾಜ್ಯದ ವಿವಿಧೆಡೆ ಯಾವುದೇ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ ಎಂದು ಅವರು ಭರವಸೆ ನೀಡಿದ್ದಾರೆ. ಒಳ ಮೀಸಲಾತಿಗೆ ಸಂಬಂಧಿಸಿದಂತೆ ಸಂಪುಟ ಸಭೆಯಲ್ಲಿ ತಿರ್ಮಾನ ಕೈಗೊಳ್ಳಲಾಗಿದೆ ಮತ್ತು ವರದಿ ಸಂಗ್ರಹಿಸಲು ಆಯೋಗ ರಚಿಸಲಾಗುವುದು.
ಬೆಂಗಳೂರು (ಅ.29): ರಾಜ್ಯದಲ್ಲಿ ತೀವ್ರ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿರುವ ವಿಜಯಪುರ ಸೇರಿದಂತೆ ರಾಜ್ಯದ ವಿವಿಧೆಡೆ ರೈತರಿಗೆ ಮತ್ತು ಮಠ, ಮಂದಿರಗಳಿಗೆ ವಕ್ಫ್ ಆಸ್ತಿಯೆಂದು ನೋಟೀಸ್ ನೀಡಲಾಗಿದ್ದರೆ, ಎಲ್ಲ ನೊಟೀಸ್‌ಗಳನ್ನು ವಾಪಸ್ ಪಡೆದುಕೊಳ್ಳುತ್ತೇವೆ ಎಂದು ಮುಖ್ಯಮತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಕ್ಫ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ರೈತರಿಗೆ ನೊಟೀಸ್ ನೀಡುವ ಮೂಲಕ ಯಾವುದೇ ರೈತರನ್ನು ಒಕ್ಕಲೆಬ್ಬಿಸಲ್ಲ. ನಿನ್ನೆ ಈ ಬಗ್ಗೆ ಕಂದಾಯ ಸಚಿವರು ಸ್ಪಷ್ಟಪಡಿಸಿದ್ದಾರೆ. ವಿಜಯಪುರದಲ್ಲಿ ಯಾವುದೇ ರೈತರನ್ನು ಒಕ್ಕಲೆಬ್ಬಿಸಲ್ಲ. ಒಂದೊಮ್ಮೆ ನೊಟೀಸ್ ಕೊಟ್ಟಿದ್ದರೆ ನೊಟೀಸ್ ವಾಪಸ್ ಪಡೆಯುತ್ತೇವೆ. ಧಾರವಾಡದಲ್ಲೂ ರೈತರಿಗೆ ನೊಟೀಸ್ ಕೊಟ್ಟಿದ್ದರೆ ನಾವು ಅದನ್ನು ಪರಿಶೀಲನೆ ಮಾಡಲಾಗುವುದು ಎಂದು ಸ್ಪಷ್ಟನೆಯನ್ನು ನೀಡಿದರು.
ಒಳ ಮೀಸಲಾತಿ ನೀಡಲು ಸಂಪುಟ ಸಭೆಯಲ್ಲಿ ತಿರ್ಮಾನ ಮಾಡಿದ್ದೇವೆ. ಸೂಕ್ತ ದಾಖಲೆ ಸಂಗ್ರಹ ಮಾಡಲು ಆಯೋಗ ಮಾಡ್ತೇವೆ. ಆಯೋಗ 3 ತಿಂಗಳಲ್ಲಿ ವರದಿ ಕೊಡಲಿದೆ. ಇವತ್ತೇ ಆಯೋಗದ ಜಡ್ಜ್ ನೇಮಕ ಮಾಡಲಾಗುತ್ತದೆ. ಆಯೋಗ ರಚನೆಯ ಹಿನ್ನೆಲೆಯಲ್ಲಿ ಹೊಸ ಹುದ್ದೆಯ ನೇಮಕ ಇಲ್ಲ. ಹಳೆಯ ಅಧಿಸೂಚನೆ ಪ್ರಕಾರ ನೇಮಕಾತಿ ನಡೆಯುತ್ತಿರುವುದು ಮುಂಮದುವರಿಯಲಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಇಲ್ಲಿ ಆಸ್ತಿ ಮಾಡೋಕೆ ಅಲ್ಲಾ ಏನು ಭಾರತದವನಾ? ನೋಟೀಸ್ ಕೊಡೋಕೆ ಇವರಪ್ಪನ ಮನೆ ಆಸ್ತೀನಾ? ಪ್ರಹ್ಲಾದ್ ಜೋಶಿ!
ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದ್ದೇನು?
ವಿಜಯಪುರ ಜಿಲ್ಲೆಯಲ್ಲಿ ಒಂದು ಕಾಲಕ್ಕೆ 14,201.32 ಎಕರೆ ವಕ್ಫ್ ಮಂಡಳಿಯದಾಗಿತ್ತು. ಈ ಪೈಕಿ ಭೂ ಸುಧಾರಣಾ ಕಾಯ್ದೆಯಡಿ 11,835.29 ಎಕರೆ ಮತ್ತು ಇನಾಂ ರದ್ದತಿ ಕಾಯ್ದೆಯಡಿ 1,459.26 ಎಕರೆಯನ್ನು ರೈತರಿಗೆ ಮಂಜೂರು ಮಾಡಲಾಗಿದೆ. 137 ಎಕರೆಯನ್ನು ವಿವಿಧ ಯೋಜನೆಗಳಿಗೆ ಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ಮಿಕ್ಕ 773 ಎಕರೆ ಮಾತ್ರ ವಕ್ಫ್ ಸಂಸ್ಥೆಗಳ ಅಡಿಯಲ್ಲಿದೆ. ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದ ರೈತರಿಗೆ ವಕ್ಫ್ ಆಸ್ತಿಯೆಂದು ಯಾವುದೇ ನೊಟೀಸ್ ನೀಡಿಲ್ಲ. ಇನ್ನು 1974ರ ಗೆಜೆಟ್ ಅಧಿಸೂಚನೆಯಲ್ಲಿ ವಿಜಯಪುರದ ಮಹಾಲಬಾಗಾಯತದ ಪಕ್ಕದಲ್ಲಿ ಬ್ರ್ಯಾಕೆಟ್ ಒಳಗೆ ವಕ್ಫ್ ಆಸ್ತಿಯಡಿಯಲ್ಲಿ ಹೊನವಾಡ ಎಂದು ತಪ್ಪಾಗಿ ನಮೂದಿಸಲಾಗಿತ್ತು.1977ರಲ್ಲಿ ವಕ್ಫ್ ಮಂಡಳಿಯೇ ತನ್ನ ತಪ್ಪನ್ನು ಸರಿಪಡಿಸಿದೆ. ಇದು ವಿವಾದವೇ ಅಲ್ಲ ಎಂದರು.
ಇಂಡಿ ತಾಲ್ಲೂಕಿನಲ್ಲಿ ಮಾತ್ರ ಅಲ್ಲಿಯ ತಹಸೀಲ್ದಾರರು ಯಾವುದೇ ನೋಟೀಸ್ ನೀಡದೆ, 41 ಆಸ್ತಿಗಳನ್ನು ಇಂದೀಕರಣ ಮಾಡಿದ್ದಾರೆ. ಇದು ನಿಯಮಗಳಿಗೆ ವಿರುದ್ಧವಾಗಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ರೈತರು 1974ಕ್ಕಿಂತ ಮೊದಲಿನ ದಾಖಲೆ ಕೊಟ್ಟರೆ ಅಂತಹ ಆಸ್ತಿಗಳನ್ನು ವಕ್ಫ್ ಅಧಿಸೂಚನೆಯಿಂದ ಕೈಬಿಡಲಾಗುವುದು. ಬಾಧಿತ ರೈತರು ಉಪವಿಭಾಗಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದರೆ, ಅವರು ಪರಿಶೀಲಿಸಿ, ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ. ಆದರೆ, ಬಿಜೆಪಿಯಲ್ಲಿ ವಿಜಯೇಂದ್ರ ಮತ್ತು ಬಸವರಾಜ ಪಾಟೀಲ ಯತ್ನಾಳ ನಡುವೆ ನಡೆಯುತ್ತಿರುವ ತಿಕ್ಕಾಟದಿಂದ ಇದು ರಾಜಕೀಯ ಬಣ್ಣ ಪಡೆದುಕೊಂಡಿದೆ ಎಂದು ಕೃಷ್ಣ ಬೈರೇಗೌಡ ಹೇಳಿದ್ದರು.
ಇದನ್ನೂ ಓದಿ: ರೈತರಿಗೆ ವಕ್ಫ್ ಆಸ್ತಿಯೆಂದು ನೋಟಿಸ್ ಕೊಟ್ಟಿದ್ದೇ ಬಿಜೆಪಿ ಸರಕಾರ: ಎಂ ಬಿ ಪಾಟೀಲ