ವಸತಿ ಉದ್ದೇಶಕ್ಕಾಗಿ ಪಡೆದ ಪರವಾನಗಿಯಲ್ಲಿ ಮಸೀದಿ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯ ನಿವಾಸಿಗಳು ಪುರಸಭೆಗೆ ದೂರು ನೀಡಿದ್ದಾರೆ. ಈ ಅಕ್ರಮ ನಿರ್ಮಾಣದಿಂದಾಗಿ ಬಡಾವಣೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ಕೂಡಲೇ ಕಾಮಗಾರಿ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.

ವಿಜಯಪುರ: ಬಸವನಬಾಗೇವಾಡಿ ಪಟ್ಟಣದ ವಜ್ರಹನುಮಾನ ನಗರದ ನಿವಾಸಿಗಳು ಸೋಮವಾರ ವಸತಿ ಉದ್ದೇಶಕ್ಕಾಗಿ ಮನೆ ಪರವಾನಗಿ ಪಡೆದುಕೊಂಡು ಮಸೀದಿ ನಿರ್ಮಾಣ ಮಾಡುತ್ತಿರುವ ಕುರಿತು ತಕರಾರು ಮನವಿಯನ್ನು ಪುರಸಭೆ ಮುಖ್ಯಾಧಿಕಾರಿಗಳಿಗೆ ಸಲ್ಲಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಜ್ರಹನುಮಾನ ನಗರದ (ಡಾ: ರಾಧಾಕೃಷ್ಣ ನಗರಕ್ಕೆ ಹೊಂದಿ) ಸಿಟಿ ಸರ್ವೆ ನಂ: 1878/K/158 ದಲ್ಲಿ ಮನೆ ನಿರ್ಮಾಣಕ್ಕೆ ಪುರಸಭೆಯಿಂದ ಪರವಾನಗಿ ಪಡೆದು ಅಲ್ಲಿ ಮಸೀದಿ ನಿರ್ಮಾಣ ಮಾಡುತ್ತಿದ್ದಾರೆ. ಲೇಔಟ್‌ ಮಾಲೀಕರು ಮತ್ತು ಅಲ್ಲಿಯ ನಿವಾಸಿಗಳು ಹೋಗಿ ಪ್ರಶ್ನಿಸಿದರೆ ನಾವು ಮನೆಯನ್ನಾದರೂ ಮಾಡುತ್ತೇವೆ. ಮಸೀದಿಯನ್ನಾದರೂ ಮಾಡುತ್ತೇವೆ. ನೀವು ಮನೆ ಕಟ್ಟುವಾಗ ನಾವು ಬಂದು ಏನು ಕಟ್ಟುತ್ತಿದ್ದೀರಿ ಎಂದು ಕೇಳಿದ್ದೇವೆಯೇ ಎಂದು ತಿರುಗಿ ಪ್ರಶ್ನೆ ಮಾಡಿದ್ದಾರೆ. ಇಲ್ಲಿನ ಪುರಸಭೆಯ ಸಿಬ್ಬಂದಿ ಕರೆಯಿಸಿ ಅವರ ಸಮಕ್ಷಮವೇ ಕೇಳಿದರೂ ಕೂಡ ಸಮರ್ಪಕವಾಗಿ ಉತ್ತರಿಸದೇ ಜಾರಿಕೊಂಡಿದ್ದಾರೆ.ವಿಶ್ವಗುರು ಅಣ್ಣ ಬಸವಣ್ಣನವರ ಜನ್ಮಸ್ಥಳವಾದ ಬಸವನಬಾಗೇವಾಡಿಯಲ್ಲಿ ಎಲ್ಲ ಸಮಾಜದವರೂ ಕೂಡಿ ಅಣ್ಣ-ತಮ್ಮಂದಿರಂತೆ ಬಾಳುತ್ತಿದ್ದೇವೆ. 

1 ಎಕರೆ 20 ಗುಂಟೆ ಜಾಗ

ಇಲ್ಲಿ ಯಾವುದೇ ಕೋಮು ಭಾವನೆ, ದ್ವೇಷ ಇಲ್ಲ. ನಿಮ್ಮ ಸಮಾಜದವರು ಬಂದು ವಿನಯಪೂರ್ವಕವಾಗಿ ಕೇಳಿದ್ದಕ್ಕೆ 1 ಎಕರೆ 20 ಗುಂಟೆ ಜಾಗ ಪುಕ್ಕಟೆಯಾಗಿ ಕೊಟ್ಟಿದ್ದೇವೆ. ನೀವು ಇಲ್ಲಿ ಮಸೀದಿ ನಿರ್ಮಾಣ ಮಾಡುವುದು ಸರಿಯಲ್ಲ ಅಂದರೂ ಕೂಡ ಕೇಳದೇ ನಾವು ಹಣ ಕೊಟ್ಟು ಪ್ಲಾಟ್‌ ಖರೀದಿಸಿದ್ದೇವೆ ನಾವು ಏನಾದರೂ ಮಾಡಿಕೊಳ್ಳುತ್ತೇವೆ. ಅದನ್ನು ಕೇಳುವುದಕ್ಕೆ ನೀವ್ಯಾರು ಎಂದು ಹೇಳಿದ್ದಾರೆ ಎಂದು ಲೇಔಟ್‌ ಮಾಲೀಕರು ಹೇಳುತ್ತಾರೆ. ಇವರ ವರ್ತನೆಯಿಂದ ವಜ್ರಹನುಮಾನ ನಗರ ಮತ್ತು ಅಕ್ಕಪಕ್ಕದ ಡಾ. ರಾಧಾಕೃಷ್ಣನಗರ, ಕೇಶವ ನಗರ, ಗಟ್ಟೂರ ಲೇಔಟ್‌, ಗಣೇಶ ನಗರ, ನಂದಿ ಲೇಔಟ್‌ದಲ್ಲಿನ ಸಾವಿರಾರು ನಿವಾಸಿಗಳಿಗೆ ಗಾಬರಿಯಾಗಿದೆ. ಮುಂದೆ ಏನಾಗುತ್ತದೋ ಎಂದು ಭಯದಲ್ಲಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಲೇಔಟ್‌ ಮಾಲೀಕರು ಹೇಳುವ ಪ್ರಕಾರ ಈ ಪ್ಲಾಟ್‌ ನಂ: 158ಕ್ಕೆ ಖರೀದಿ ವ್ಯವಹಾರ ಸಲುವಾಗಿ ಮಾಲೀಕರ ಹತ್ತಿರ ಬಂದು ಇಸಾರ್‌ (ಅಡ್ವಾನ್ಸ ಕೊಟ್ಟ) ವ್ಯಕ್ತಿಯು, ತಾನು ಪ್ಲಾಟ್‌ ಖರೀದಿಸದೇ ಅದನ್ನು ತಾಳಿಕೋಟಿ ಪಟ್ಟಣದ ಬೇರೊಬ್ಬರ ಹೆಸರಲ್ಲಿ ಖರೀದಿ ಮಾಡಿಸಿ ಈ ತರಹ ಮಸೀದಿ ನಿರ್ಮಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಮಾಲೀಕರ ಮಗ ಖರೀದಿ ನಂತರ ಮಾಲೀಕರಿಗೆ ಈ ವಿಷಯ ಗೊತ್ತಾಗಿದೆ ಎಂದು ಹೇಳಿದ್ದಾರೆ. ಇದೊಂದು ವ್ಯವಸ್ಥಿತ ಸಂಚಾಗಿದೆ.

ಈ ಕಟ್ಟಡ ಕಟ್ಟುವ ಜಾಗದಲ್ಲಿ ಆ ಪ್ಲಾಟಿನ ಮಾಲೀಕರೇ ಇರುವುದಿಲ್ಲ. ಕೆಲವು ಮಾಹಿತಿಗಳ ಪ್ರಕಾರ ಇಲ್ಲಿ ಕಟ್ಟಡ ಕಟ್ಟಲು ಸಮಾಜದ ಕೆಲವು ಜನರು ಫಂಡ್‌ ಕಲೆಕ್ಷನ್‌ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತು ಪರಿಶೀಲಿಸಿದಾಗ ನಾವು ಫಂಡ್‌ ಕಲೆಕ್ಷನ್‌ ಮಾಡಿದ್ದು ನಿಜ ಎಂದು ಅಲ್ಲಿರುವ ವ್ಯಕ್ತಿ ತಿಳಿಸಿದ್ದಾನೆ.

ಕಟ್ಟಡ ಕಾಮಗಾರಿ ನಿಲ್ಲಿಸುವಂತೆ ಆಗ್ರಹ

ಪುರಸಭೆ ಮುಖ್ಯಾಧಿಕಾರಿಗಳು ಕೂಡಲೇ ಈ ಕಟ್ಟಡ ಕಾಮಗಾರಿ ಬಂದ್‌ ಮಾಡಿಸಬೇಕು. ಈ ಪ್ಲಾಟಿನಲ್ಲಿ ಮನೆ ಎಂದು ಕಟ್ಟಡ ನಿರ್ಮಿಸಿದರೂ ಸಹ ಅಲ್ಲಿ ಯಾವುದೇ ಧಾರ್ಮಿಕ ಚಟುವಟಿಕೆ ನಡೆಸಬಾರದು. ಇಲ್ಲಿ ಯಾವುದೇ ಕೋಮು ಭಾವನೆ ಕೆರಳಿಸುವ ಚಟುವಟಿಕೆ, ವರ್ತನೆ ಮಾಡಬಾರದು. ಒಂದು ವೇಳೆ ಭವಿಷ್ಯದಲ್ಲಿ ಅಂತಹ ಘಟನೆ ನಡೆದರೆ ಕೂಡಲೇ ಪುರಸಭೆ ವತಿಯಿಂದ ಆ ಕಟ್ಟಡ ಕೆಡವಲಾಗುವುದು ಎಂದು ಪ್ಲಾಟಿನ ಮಾಲೀಕರಿಗೆ ತಿಳಿಹೇಳಿ ಈ ಭಾಗದ ಜನರಿಗೆ ಶಾಂತಿಯುತ ಜೀವನ ನಡೆಸಲು ಪುರಸಭೆಯವರು ಕಾರ್ಯಕೈಗೊಳ್ಳಬೇಕೆಂದು ವಿನಂತಿಸಲಾಗಿದೆ.

ಈ ಸಂದರ್ಭದಲ್ಲಿ ಕರವೇ ಮುಖಂಡ ಅಶೋಕ ಹಾರಿವಾಳ, ಪಾರೀಶ ಹೊಸಮನಿ, ಶಿವಾನಂದ ಸಜ್ಜನ, ಜಗದೀಶ ಬಾಗೇವಾಡಿ, ಎಸ್.ಬಿ.ಪಟ್ಟಣದ, ಎಂ.ಆರ್.ಹೊನವಾಡ, ಎಸ್.ಪಿ.ಅಗಸರ, ಆರ್.ಕೆ.ಖಮೀತ್ಕರ, ಸುರೇಶ ಸಜ್ಜನ, ಎಸ್.ಎಸ್.ಅಂಗಡಿ, ಸಂಗಪ್ಪ ಕಡ್ಲಿಮಟ್ಟಿ, ಕೆ.ಸಿ.ಅವಟಿ, ಕಿರಣ ದೇಸಾಯಿ, ಎಸ್.ಎಸ್.ಗೊಳಸಂಗಿ, ಶ್ರೀನಿವಾಸ ಜಾಲಗೇರಿ, ಸಚೀನ ಮೇಘರಾಜ, ಡಿ.ಎಸ್.ಅಂಗಡಿ ಸೇರಿದಂತೆ ಇತರರು ಇದ್ದರು.