ನನಸಾಗಲಿದೆ ವಿಜಯಪುರ ಜಿಲ್ಲೆಯ ಜನರ ವಿಮಾನ ನಿಲ್ದಾಣದ ಕನಸು
ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಇಂದು (ಸೋಮವಾರ) ವಿಜಯಪುರ ವಿಮಾನ ನಿಲ್ದಾಣದ ಕಾಮಗಾರಿಯನ್ನು ವೀಕ್ಷಿಸಿದರು. ಅಲ್ಲದೇ ಬೇಗ ಮುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.
ವರದಿ: ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್..
ವಿಜಯಪುರ (ಆಗಸ್ಟ್ 01) : ಮುಂಬರುವ ಜನವರಿ 23ರ ಒಳಗಾಗಿ ವಿಜಯಪುರ ವಿಮಾನ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಲಾಗುವುದು. ಈ ಹಿನ್ನೆಲೆಯಲ್ಲಿ ಅಷ್ಟರೊಳಗೆ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕೆಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿಮಾನ ನಿಲ್ದಾಣ ಕಾಮಗಾರಿ ವೀಕ್ಷಣೆ ಮಾಡಿದ ಕಾರಜೋಳ..!
ಬುರನಾಪುರದಲ್ಲಿ ನಿರ್ಮಿಸುತ್ತಿರುವ ವಿಮಾನ ನಿಲ್ದಾಣದ ಕಾಮಗಾರಿಯನ್ನು ಪರಿಶೀಲಿಸಿದ ಗೋವಿಂದ ಕಾರಜೋಳ, ಅಧಿಕಾರಿಗಳಿಗೆ, ಅಲ್ಲಿದ್ದ ಇಂಜಿನಿಯರ್ ಗಳಿಗೆ ಅಗತ್ಯ ಸೂಚನೆಗಳನ್ನ ನೀಡಿದರು. ಬರುವ ಜನೇವರಿಗೆ 23ರಕ್ಕೆ ವಿಮಾನ ನಿಲ್ದಾಣ ಲೋಕಾರ್ಪಣೆಗೊಳಿಸಲಾಗುದು, ಕಾಮಗಾರಿ ಪೂರ್ಣಗೊಳಿಸಿ ಎಂದು ಖಡಕ್ ಸೂಚನೆ ನೀಡಿದ್ದಾರೆ.
ಪಕ್ಷಾಂತರ ನಿಷೇಧ ಕಾಯ್ದೆ ಇನ್ನಷ್ಟು ಬಲಪಡಿಸಬೇಕು: ಕಾಗೇರಿ ಅಭಿಪ್ರಾಯ
ಕಾಮಗಾರಿ ವೇಗ ತೃಪ್ತಿ ತಂದಿಲ್ಲ ಎಂದ ಸಚಿವರು
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ನಡೆಯುತ್ತಿರುವ ಕಾಮಗಾರಿ ಕೇವಲ ಶೇ.4 ರಷ್ಟು ಮಾತ್ರ ಮುಗಿದಿದೆ, ಇದು ನನಗೆ ಸಮಾಧಾನ ತಂದಿಲ್ಲ. ಹೀಗಾಗಿ ಕಾಮಗಾರಿಯನ್ನು ಚುರುಕುಗೊಳಿಸಲು ಹಾಗೂ ಯಾವುದೇ ಕಾಮಗಾರಿ ಬಾಕಿ ಉಳಿಯದಂತೆ ಕ್ರಮವಹಿಸಲು ಸೂಚನೆ ನೀಡಿರುವುದಾಗಿ ಮಾಹಿತಿ ನೀಡಿದರು.
ಸರ್ಕಾರ ಮಟ್ಟದಲ್ಲಿ ಅಡೆತಡೆ ಇದ್ದರೇ ನಾನಿದ್ದೇನೆ..!
ಸರ್ಕಾರದ ಮಟ್ಟದಲ್ಲಿ ಏನಾದರೂ ಅಡೆತಡೆಗಳಿದ್ದರೆ ಅದನ್ನು ನಾನು ಸಚಿವನಾಗಿ ಬಗೆಹರಿಸಿಕೊಡುತ್ತೇನೆ ಏನೇ ಆಗಲಿ ಜನೆವರಿ ವೇಳೆಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು. ಜೊತೆಗೆ ಈ ವಿಮಾನನಿಲ್ದಾಣದ ರನ್ ವೇ ಗೆ ಅಡ್ಡಲಾಗಿದ್ದ ಕೆರೆಗೆ ನೀರು ತುಂಬಿಸುವ ಯೋಜನೆಯ ಕಾಲುವೆಯನ್ನು ಸ್ಥಳಾಂತರಿಸಲಾಗಿದ್ದು, ಯಾವುದೇ ಅಡೆತಡೆಯಿಲ್ಲದೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಶೀಘ್ರದಲ್ಲೇ ರೇವಣಸಿದ್ಧೇಶ್ವರ ಏತನೀರಾವರಿ ಯೋಜನೆ
ಇದೇವೇಳೆ ಸುಮಾರು 7 ವರ್ಷಗಳಿಂದ ಹೊರ್ತಿ ರೇವನಸಿದ್ದೇಶ್ವರ ಏತ ನೀರಾವರಿಗೆ ಹೋರಾಟ ನಡೆಯುತ್ತಿದೆ. ಅಲ್ಲಿಯ ರೈತರು ಕೂಡಾ ನನ್ನನ್ನು ಭೇಟಿಯಾಗಿ ಕಾಮಗಾರಿ ಕೈಗೆತ್ತಿಕೊಂಡು ಪೂರ್ಣಗೊಳಿಸಲು ಮನವಿ ಮಾಡಿದ್ದರು, ಅದರಂತೆ 2700 ಕೋಟಿ ವೆಚ್ಚದ ಅತಿದೊಡ್ಡ ಕಾಮಗಾರಿಯಾದ ಇದಕ್ಕೆ ಈಗಾಗಲೇ ಅನುಮೋದನೆ ಸಿಕ್ಕಿದೆ, ಜೊತೆಗೆ ಪರಿಸರ ಇಲಾಖೆ ಕೂಡಾ ಅನುಮತಿ ನೀಡಿದ್ದು ಶೀಘ್ರವೇ ಕಾಮಗಾರಿ ಕೈಗೆತ್ತಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು. ಇದು 56 ಹಳ್ಳಿಗಳಿಗೆ ನೀರು ಒದಗಿಸುವ ಯೋಜನೆ ಇದಾಗಲಿದೆ ಎಂದು ಮಾಹಿತಿ ನೀಡಿದರು. ಈ ವೇಳೆ ಲೋಕೋಪಯೋಗಿ ಹಾಗೂ ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳು, ಗುತ್ತಿಗೆದಾರರು ಹಾಜರಿದ್ದರು.
ಹಿಂದೂ ಯುವಕನ ಹತ್ಯೆ ಮಾಡಿದ ಪಾಪಿಗಳನ್ನ ಬಿಡೋದಿಲ್ಲ..!
ಮಂಗಳೂರಿನಲ್ಲಿ ನಡೆದ ಹಿಂದೂ ಯುವಕರ ಕೊಲೆಯ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ ನಡೆಸುತ್ತಿದ್ದು, ಕೊಲೆ ಪಾತಕಿಗಳಿಗೆ ಶಿಕ್ಷೆಯಾಗಲಿದೆ. ಯಾವುದೇ ಕಾರಣಕ್ಕೂ ಕೆಲ ಪಾತಕಿಗಳನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಿಶ್ವಾಸ ವ್ಯಕ್ತಪಡಿಸಿದರು..
ಕಾಂಗ್ರೆಸ್ ಜನರಲ್ಲಿ ವಿಷಬೀಜ ಬಿತ್ತುತ್ತಿದೆ..!
ಕಾಂಗ್ರೆಸ್ ಪಕ್ಷ ಜನರಲ್ಲಿ ವಿಷ ಬೀಜ ಬಿತ್ತುವ ಕೆಲಸವನ್ನು ಬಿಡಬೇಕು, ಆರ್ ಎಸ್ ಎಸ್ ದೇಶಭಕ್ತಿಯನ್ನು ಬಿತ್ತುವ ಕೆಲಸ ಮಾಡುತ್ತಿರುವ ದೇಶಭಕ್ತ ಸಂಘಟನೆ. ಕಾಂಗ್ರೆಸ್ ಪಕ್ಷ ಇಂತಹ ದೇಶ ಭಕ್ತಿ ಸಂಸ್ಥೆಯ ವಿರುದ್ಧ ಅಪಪ್ರಚಾರ ಮಾಡುತ್ತಿದೆ, ಇದನ್ನು ಕಾಂಗ್ರೆಸ್ ಪಕ್ಷ ಬಿಡಬೇಕು ಎಂದು ವಾಗ್ದಾಳಿ ನಡೆಸಿದರು. ಆರ್.ಎಸ್.ಎಸ್. ಎನ್ನುವುದು ರಾಷ್ಟ್ರಸಂತರನ್ನು ಕಟ್ಟುವ ಸಂಘಟನೆ ಎಂದು ಸಮರ್ಥಿಸಿಕೊಂಡರು.
ದೇಶದ್ರೋಹಿ ಸಂಘಟನೆಗಳ ಬ್ಯಾನ್‌ಗೆ ಒತ್ತಾಯ..!
ಈ ಕೊಲೆಯನ್ನು ಖಂಡಿಸಿ ರಾಜೀನಾಮೆ ನೀಡುತ್ತಿರುವ ಪಕ್ಷದ ಪದಾಧಿಕಾರಿಗಳ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಗೋವಿಂದ ಕಾರಜೋಳ, ಅವರು ರಾಜೀನಾಮೆ ನೀಡುತ್ತಿರುವುದು ಸರಕಾರದ ವಿರುದ್ದ ಅಥವಾ ಪಕ್ಷದ ವಿರುದ್ಧ ಅಲ್ಲ, ದೇಶದ್ರೋಹಿ ಸಂಘಟನೆಗಳನ್ನು ಬ್ಯಾನ್ ಮಾಡಬೇಕೆಂದು ಒತ್ತಾಯಿಸಿ ರಾಜೀನಾಮೆ ನೀಡುತ್ತಿದ್ದಾರೆ. ದೇಶದ್ರೋಹಿಗಳ ವಿರುದ್ಧ ಸರಕಾರ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು.
ಸಿದ್ದರಾಮಯ್ಯ ಅಮೃತಮಹೋತ್ಸವಕ್ಕೆ ಆಹ್ವಾನಿಸಿಲ್ಲ..!
ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವಕ್ಕೆ ನನಗೆ ಆಹ್ವಾನ ನೀಡಿಲ್ಲ. ಹೀಗಾಗಿ ಆ ಕಾರ್ಯಕ್ರಮಕ್ಕೆ ಹೋಗುವ ಪ್ರಮೇಯವೇ ಇಲ್ಲ ಎಂದು ಕಾರಜೋಳ ಸ್ಪಷ್ಟಪಡಿಸಿದರು. ಪಕ್ಷದ ವಿಚಾರವೇ ಬೇರೆ, ಅದನ್ನು ಹೊರತುಪಡಿಸಿ ಇರುವ ಗೆಳೆತನವೇ ಬೇರೆ ಎಂದು ಹಾಸ್ಯ ಚಟಾಕಿ ಹಾರಿಸಿದರು.