ಮಂದಗತಿಯಲ್ಲಿ ವಿಜಯನಗರದ ಕಾಲುವೆ ಆಧುನೀಕರಣ ಕಾಮಗಾರಿ, ಹೊಸ ಸರ್ಕಾರದ ಮೇಲೆ ನಿರೀಕ್ಷೆ
ವಿಜಯನಗರ ಆಳರಸರ ಕಾಲದ ಕಾಲುವೆಗಳ ಆಧುನೀಕರಣ ಕಾಮಗಾರಿಗೆ ಆಮೆವೇಗದಲ್ಲಿ ಸಾಗಿದ್ದು, ಐದು ವರ್ಷ ಕಳೆದರೂ ಶೇ. 60ರಷ್ಟುಕಾಮಗಾರಿ ಮುಗಿದಿದೆ. ಈಗ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಹೊಸ ಸರ್ಕಾರ ಕಾಮಗಾರಿ ಪೂರ್ಣಗೊಳಿಸಲಿದೆಯೇ ಎಂದು ರೈತರು ಎದುರು ನೋಡುತ್ತಿದ್ದಾರೆ.
ಕೃಷ್ಣ ಎನ್. ಲಮಾಣಿ
ಹೊಸಪೇಟೆ (ಮೇ.21) : ವಿಜಯನಗರ ಆಳರಸರ ಕಾಲದ ಕಾಲುವೆಗಳ ಆಧುನೀಕರಣ ಕಾಮಗಾರಿಗೆ ಆಮೆವೇಗದಲ್ಲಿ ಸಾಗಿದ್ದು, ಐದು ವರ್ಷ ಕಳೆದರೂ ಶೇ. 60ರಷ್ಟುಕಾಮಗಾರಿ ಮುಗಿದಿದೆ. ಈಗ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಹೊಸ ಸರ್ಕಾರ ಕಾಮಗಾರಿ ಪೂರ್ಣಗೊಳಿಸಲಿದೆಯೇ ಎಂದು ರೈತರು ಎದುರು ನೋಡುತ್ತಿದ್ದಾರೆ.
ವಿಜಯನಗರ, ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಯ ಜೀವನಾಡಿ ತುಂಗಭದ್ರಾ ನದಿಯ ಎರಡೂ ಬದಿಯಲ್ಲಿ ಕಾಲುವೆಗಳ ಆಧುನೀಕರಣ ಕಾಮಗಾರಿ ನಡೆದಿದೆ. ಕಾಮಗಾರಿ ಆರಂಭದಿಂದಲೂ ನೂರೆಂಟು ವಿಘ್ನಗಳು ಎದುರಾಗಿವೆ. ವಿಜಯನಗರ ಆಳರಸರ ಕಾಲದಲ್ಲಿ 12 ಅಣೆಕಟ್ಟುಗಳು, 16 ಕಾಲುವೆಗಳನ್ನು ನಿರ್ಮಿಸಲಾಗಿತ್ತು. ಈ ಕಾಲುವೆಗಳ ಆಧುನೀಕರಣಕ್ಕೆ ಇಲಾಖೆಯಿಂದ 2019ರ ಮಾಚ್‌ರ್‍ನಲ್ಲಿ .371.9 ಕೋಟಿ ವೆಚ್ಚದಲ್ಲಿ 30 ತಿಂಗಳ ಕಾಲವಧಿಗೆ ಕಾಮಗಾರಿ ಆರಂಭವಾಗಿದೆ. 2021ರಲ್ಲಿ ಶೇ. 30ರಷ್ಟುಕಾಮಗಾರಿ ನಡೆದರೆ, ಇಲ್ಲಿಯ ವರೆಗೆ ಶೇ. 30ರಷ್ಟುಕಾಮಗಾರಿ ನಡೆದಿದೆ. ಒಟ್ಟು ಐದು ವರ್ಷದಲ್ಲಿ ಕೇವಲ ಶೇ. 60ರಷ್ಟುಮಾತ್ರ ಕಾಮಗಾರಿ ನಡೆದಿದೆ.
ಕೊಪ್ಪಳ: ನೀರು ಬಾರದ ಕಾಲುವೆಗೆ ಕೋಟ್ಯಂತರ ರು. ವೆಚ್ಚ!
ಅಧಿಕಾರಿಗಳ ಸಮಜಾಯಿಷಿ:
ತುಂಗಭದ್ರಾ ಜಲಾಶಯ ಕೆಲವು ವರ್ಷಗಳಿಂದ ಸತತವಾಗಿ ಭರ್ತಿಯಾಗುತ್ತಿದೆ. ಆದರೆ ದುರಸ್ತಿಯಲ್ಲಿದ್ದ ಕಾಲುವೆಗಳ ಆಧುನೀಕರಣಕ್ಕೆ ಯೋಜನೆ ರೂಪಿಸಲಾಗಿದೆ. ಒಟ್ಟು 30 ತಿಂಗಳ ಕಾಲಾವಕಾಶ ನೀಡಲಾಗಿತ್ತು. ಆದರೆ ರೈತರ ಬೆಳೆಗಳಿಗೆ ಹಾನಿಯಾಗದಂತೇ ಮುತುವರ್ಜಿ ವಹಿಸಲಾಗುತ್ತಿದೆ. ಮೇ ಮತ್ತು ಜೂನ್‌ನಲ್ಲಿ 45 ದಿನ ಕಾಲುವೆಗೆ ನೀರು ಸ್ಥಗಿತಗೊಳಿಸುತ್ತಾರೆ. ಈ ವೇಳೆ ಮಳೆಯಿಂದ ಕಾಮಗಾರಿ ವಿಳಂಬವಾದರೆ, ಇನ್ನೊಂದೆಡೆ ಕಾಲುವೆ ಒತ್ತುವರಿಯಿಂದ ಸಮಸ್ಯೆಯಾಗಿದೆ. ಕಾಮಗಾರಿ ಪೂರ್ಣಗೊಳ್ಳಬೇಕೆಂದರೆ ಇನ್ನಷ್ಟುಸಮಯ ತೆಗೆದುಕೊಳ್ಳುತ್ತದೆ ಎಂಬುದು ಅಧಿಕಾರಿಗಳ ಸಮಜಾಯಿಷಿ ಆಗಿದೆ.
ಈಗ ಕಾಲುವೆ ಆಧುನೀಕರಣ ಗುತ್ತಿಗೆದಾರರಿಗೆ ಕಾಲಾವಕಾಶ ಇದ್ದಾಗ ಹೆಚ್ಚಿನ ಕಾರ್ಮಿಕರನ್ನು ಹಾಗೂ ಯಂತ್ರಗಳನ್ನು ಬಳಸಿ, ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ರೈತರ ಆರೋಪ:
ಕಾಲುವೆಗಳ ಆಧುನೀಕರಣ ಕಾಮಗಾರಿ ಆರಂಭವಾಗುವ ಮುನ್ನ ರೈತರ ಸಭೆ ಕರೆದು ಕಾಮಗಾರಿ ಪೂರ್ಣ ಮಾಡಲು ಒಂದು ವರ್ಷ ಕಾಲಾವಕಾಶ ಬೇಕು ಎಂದು ಅಧಿಕಾರಿಗಳು ಕೇಳಿದರು. ಅದಕ್ಕೆ ಒಪ್ಪದ ರೈತರು ವರ್ಷಕ್ಕೆ ಎರಡು ತಿಂಗಳು ಬೇಸಿಗೆಯಲ್ಲಿ ಕಾಮಗಾರಿ ನಡೆಸಲು ಒಪ್ಪಿದ್ದರು. ವರ್ಷಕ್ಕೆ ಎರಡ್ಮೂರು ತಿಂಗಳು ಕಾಮಗಾರಿ ನಡೆಸಿ ಮೂರು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎಂದಿದ್ದ ಅಧಿಕಾರಿಗಳು ಐದು ವರ್ಷ ಕಳೆದರೂ ಪೂರ್ಣಗೊಳಿಸಿಲ್ಲ. 2019ರ ಮಾಚ್‌ರ್‍ನಲ್ಲಿ ಆರಂಭವಾದ ಕಾಮಗಾರಿ ಇನ್ನೂ ಮುಗಿದಿಲ್ಲ ಎಂದು ರೈತರು ದೂರುತ್ತಾರೆ.
16 ಕಾಲುವೆಗಳ ಆಧುನೀಕರಣ:
ವಿಜಯನಗರ ಅರಸರ ಕಾಲದ 16 ಕಾಲುವೆ ಪೈಕಿ ಬಲದಂಡೆಗೆ ವಿಜಯನಗರ ಜಿಲ್ಲೆಯಲ್ಲಿ ಬರುವುದು ಬೆಲ್ಲ, ತುರ್ತಾ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ರಾಮಸಾಗರ, ಕಂಪ್ಲಿ ದೇಶನೂರು ಹಾಗೂ ಸಿರುಗುಪ್ಪ ಕಾಲುವೆಗಳು. ಕೊಪ್ಪಳ ಜಿಲ್ಲೆಯಲ್ಲಿ ಶಿವಪುರ, ಆನೆಗುಂದಿ, ಅಪ್ಪ ಗಂಗಾವತಿ, ರಾಯಚೂರು ಜಿಲ್ಲೆಯಲ್ಲೂ ಕಾಲುವೆಗಳಿವೆ. 27,561 ಎಕರೆ ಪ್ರದೇಶವಿದೆ. ಎಲ್ಲ ಕಾಲುವೆಗಳ ಅಚ್ಚುಕಟ್ಟು ಒಟ್ಟು 216 ಕಿ.ಮೀ. ಉದ್ದವಿದೆ.
ಒತ್ತುವರಿ ಕಿರಿಕಿರಿ:
ರಾಯ, ಬಸವ ಕಾಲುವೆಗಳು ಹೊಸಪೇಟೆ ನಗರಸಭೆ ವ್ಯಾಪ್ತಿಗೆ ಬರುತ್ತದೆ. ಇಲ್ಲಿ ಕಾಲುವೆ ಮೇಲೆ ಬಹುತೇಕರು ಮನೆ ಕಟ್ಟಿಕೊಂಡಿದ್ದಾರೆ. ಹೊಸಪೇಟೆ ನಗರಸಭೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಒತ್ತುವರಿ ತೆರವುಗೊಳಿಸುವಂತೆ ಹಲವು ಬಾರಿ ಪತ್ರ ವ್ಯವಹಾರ ನಡೆಸಿದರೂ ಪ್ರಯೋಜನವಾಗುತ್ತಿಲ್ಲ. ಹೊಸಪೇಟೆ ಮಾತ್ರವಲ್ಲದೇ ಇತರ ಕಾಲುವೆಗಳು ಒತ್ತುವರಿಯಾಗಿವೆ ಎಂಬುದು ಅಧಿಕಾರಿಗಳ ಆರೋಪವಾಗಿದೆ.
2025ಕ್ಕೆ ಕಾಮಗಾರಿ ಪೂರ್ಣ!:
ತುಂಗಭದ್ರಾ ಜಲಾಶಯದ 16 ಕಾಲುವೆಗಳ ಪೈಕಿ ತುಂಗಭದ್ರಾ ನದಿಯ ಎಡಭಾಗದಲ್ಲಿ ಶಿವಪುರ ಕಾಲವೆ ಪೂರ್ಣಗೊಂಡಿದೆ. ಇನ್ನೂ ಸಿರುಗುಪ್ಪ ಹಾಗೂ ದೇಶನೂರು ಕಾಲುವೆಗಳು 2021ರಲ್ಲಿ ಶೇ. 90ರಷ್ಟುಕಾಮಗಾರಿ ಪೂರ್ಣಗೊಂಡಿತ್ತು. ಉಳಿದ ಶೇ. 10ರಷ್ಟುಕಾಮಗಾರಿ ನಡೆಯುತ್ತಲೇ ಇದೆ. ಇನ್ನೂ ಉಳಿದ ಕಾಲುವೆಗಳು ಶೇ. 50ರಷ್ಟುಕಾಮಗಾರಿ ಮುಗಿದಿದ್ದು, ಇನ್ನೂ ಶೇ. 50ರಷ್ಟುಕಾಮಗಾರಿ 2025ರ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.
ತುಂಗಭದ್ರಾ ಜಲಾಶಯಿಂದ ಬಳ್ಳಾರಿಗೆ ನೀರಿಲ್ಲ, ಆಡಳಿತ ಮಂಡಳಿ ನಡೆಯಿಂದ ರೈತರು ಕಂಗಾಲು
ವಿಜಯನಗರದ ಕಾಲದ ಕಾಲುವೆಗಳನ್ನು ಆಧುನೀಕರಣ ಕಾಮಗಾರಿ ತಾಂತ್ರಿಕ ಸಮಸ್ಯೆಯಿಂದ ವಿಳಂಬವಾಗಿದೆ. ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಲಾಗುವುದು.
ಶಿವಶಂಕರ, ನೀರಾವರಿ ಇಲಾಖೆ, ಅಧಿಕಾರಿ ಮುನಿರಾಬಾದ್, ಕೊಪ್ಪಳ
ರೈತರಿಗೆ ತೊಂದರೆಯಾಗದಂತೆ ಕಾಮಗಾರಿ ಪೂರ್ಣಗೊಳಿಸಬೇಕು. ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ಸರ್ಕಾರದ ಹಣ ಪೋಲಾಗದಂತೆ ಕಾಲುವೆಗಳ ಆಧುನೀಕರಣ ಕಾಮಗಾರಿ ಪೂರ್ಣಗೊಳಿಸಬೇಕು.
ಸಿ.ಎ. ಗಾಳೆಪ್ಪ, ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷರು, ವಿಜಯನಗರ